
ಚಿತ್ರದುರ್ಗ, (ಜೂನ್.03): ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಇರುವ ಬೆನ್ನಲ್ಲೇ ಯಾವ ಕ್ಷೇತ್ರದಿಂದ ಯಾವ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ ಎನ್ನುವ ಚರ್ಚೆಗಳು ಹಳ್ಳಿಕಟ್ಟೆಯಲ್ಲಿ ಶುರುವಾಗಿವೆ. ಅದರಲ್ಲೂ ಯಡಿಯೂಪ್ಪನವರ ಪುತ್ರ ಬಿವೈ ವಿಜಯೇಂದ್ರ ಅರು ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.
ಅದ್ರಲ್ಲಂತೂ ಈ ಬಾರಿಯ ಹೊಸದುರ್ಗ ವಿಧಾನಸಭಾ ಕ್ಷೇತ್ರ ಮಾತ್ರ ಕೊಂಚ ಡಿಫರೆಂಟ್ ಆಗಿದೆ ಅಂದ್ರೆ ತಪ್ಪಾಗಲಿಕ್ಕಿಲ್ಲ. ಯಾಕಂದ್ರೆ ಮೊದಲೇ ಅದು ಸಾಮಾನ್ಯ ಕ್ಷೇತ್ರ, ಅಂತದ್ರಲ್ಲಿ ಬಿಜೆಪಿ ನಾಯಕರ ಕೃಪಾಕಟಾಕ್ಷದಿಂದ ಹಾಲಿ ಶಾಸಕರು ಹಾಗೂ ಮಾಜಿ ಮಂತ್ರಿ ಆಗಿರೋ ಗೂಳಿಹಟ್ಟಿ ಶೇಖರ್ ಅವರು MLA ಆಗಿದ್ದಾರೆ.
ಈ ಬಾರಿಯೂ ಗೂಳಿಹಟ್ಟಿ ಶೇಖರ್ ಅವರಿಗೆ ಬಿಜೆಪಿ ಪಕ್ಷ ಪಕ್ಕಾ ಟಿಕೆಟ್ ನೀಡಲಿದೆ ಎಂದು ಸ್ವತಃ ಶಾಸಕರೇ ಸುಮಾರು ಬಾರಿ ಹೇಳಿದ್ದಾರೆ. ಆದ್ರೆ ಕೊನೆಗಳಿಗೆಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಏನಾದ್ರು ಹೊಸದುರ್ಗ ಕ್ಷೇತ್ರದ ಮೇಲೆ ಕಣ್ಣಿಟ್ಟು ಈ ಕಡೆ ಮುಖ ಮಾಡ್ತಾರ ಎಂಬ ಪ್ರಶ್ನೆ ಉದ್ಭವವಾಗಿದೆ. ಈಗಾಗಲೇ ಈ ಕುರಿತು ಬಿಜೆಪಿಯ ಅನೇಕ ನಾಯಕರು ಮುಂದಿನ ಬಾರಿ ವಿಜಯೇಂದ್ರ ಅವರೇ ಕಣಕ್ಕಿಳಿಯಲಿದ್ದಾರೆ ಎಂದು ಗುಸು ಗುಸು ಶುರು ಮಾಡಿದ್ದು, ಹಾಲಿ ಶಾಸಕ ಗೂಳಿಹಟ್ಟಿ ಶೇಖರ್ ಅವರಿಗೆ ಗೊಂದಲ ಶುರುವಾಗಿದೆ.
ಟಿಕೆಟ್ ಸಿಕ್ಕರೆ ಅಸೆಂಬ್ಲಿಗೆ ಸ್ಪರ್ಧೆ: ವಿಜಯೇಂದ್ರ
ಇದಕ್ಕೆಲ್ಲಾ ಪೂರಕೆಂಬಂತೆ ಇಂದು(ಶುಕ್ರವಾರ) ವಿಜಯೇಂದ್ರ ಅವರಿಗೆ ಹೊಸದುರ್ಗ ಕ್ಷೇತ್ರದಲ್ಲಿ ಅದ್ದೂರಿ ಸ್ವಾಗತ ದೊರಕಿತು. ಖನಿಜ ನಿಗಮದ ಅಧ್ಯಕ್ಷ ಎಸ್ ಲಿಂಗಮೂರ್ತಿ ಅವರ ಕಚೇರಿ ಉದ್ಘಾಟನೆಗೆ ಆಗಮಿಸಿದ್ದ ವಿಜಯೇಂದ್ರ ಅವರಿಗೆ ಹೊಸದುರ್ಗ ಜನತೆ ಭರ್ಜರಿ ಬೈಕ್ ರ್ಯಾಲಿ ಮಾಡುವ ಮೂಲಕ ಅದ್ದೂರಿಯಾಗಿ ಬರಮಾಡಿಕೊಂಡರು.
ನಂತರ ಲಿಂಗಮೂರ್ತಿ ಅವರ ಕಚೇರಿ ಉದ್ಘಾಟನೆ ಮಾಡಿದ ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ರಾಜ್ಯಾದ್ಯಂತ ಅನೇಕ ಕ್ಷೇತ್ರಗಳಿಂದ ನೀವು ಸ್ಪರ್ಧೆ ಮಾಡಬೇಕು ಎಂದು ಜನರು ಅಪೇಕ್ಷೆ ಪಡ್ತಿದ್ದಾರೆ. ಆದರೆ ಪಕ್ಷ ಏನು ತೀರ್ಮಾನ ಕೈಗೊಳ್ಳುತ್ತೋ ಅದಕ್ಕೆ ನಾನು ಬದ್ದನಾಗಿರ್ತೇನೆ. ಈಗಾಗಲೇ ಶಿರಾ, ವರುಣ, ಹೊಸದುರ್ಗ ಹೀಗೆ ಅನೇಕ ಕ್ಷೇತ್ರದ ಮತದಾರರು ನನಗೆ ಅಹ್ವಾನ ಕೊಟ್ಟಿದ್ದಾರೆ. ಅದ್ರೆ ಅಂತಿಮ ತೀರ್ಮಾನ ಪಕ್ಷ ಹಾಗೂ ನಮ್ಮ ನಾಯಕರಿಗೆ ಬಿಟ್ಟಿದ್ದು ಎಂದರು.
ಜೊತೆಗೆ ಯುವಕರು ಬೈಕ್ ರ್ಯಾಲಿ ಮೂಲಕ ಹೊಸದುರ್ಗಕ್ಕೆ ಅದ್ಧೂರಿ ಸ್ವಾಗತ ಮಾಡಿದ್ದು, ಅವರ ಪ್ರೀತಿ, ವಿಶ್ವಾಸವನ್ನು ನಾನು ಉಳಿಸಿಕೊಳ್ಳುತ್ತೇನೆ. ರಾಜ್ಯ ಘಟಕ ನಾನು ಚುನಾವಣೆಗೆ ಬರುವುದರ ಬಗ್ಗೆ, ಸ್ಪರ್ಧೆ ಬಗ್ಗೆ ನಿರ್ಧರಿಸುತ್ತದೆ. ನಾನು ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕೆಂಬುದು ತೀರ್ಮಾನ ಆಗಿಲ್ಲ. ಪಕ್ಷ ನೀಡಿದ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ. ಲಿಂಗಮೂರ್ತಿ ಅವರ ಜನ ಸಂಪರ್ಕ ಕಚೇರಿಗೆ ಚಾಲನೆ ನೀಡಿದ್ದೇನೆ. ಹೊಸದುರ್ಗದ ಬಿಜೆಪಿ ಟಿಕೆಟ್ ಬಗ್ಗೆ ಪಕ್ಷ ತೀರ್ಮಾನಿಸುತ್ತದೆ. ಸದ್ಯ ಈ ಕಾರ್ಯಕ್ರಮಕ್ಕೆ ಗೂಳಿಹಟ್ಟಿ ಶೇಖರ್ ಗೈರಾಗಿದ್ದಕ್ಕೆ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ ಎಂದು ಸ್ಪಷ್ಟಪಡಿಸಿದರು.
ಸದ್ಯ ಖನಿಜ ನಿಗಮದ ಅಧ್ಯಕ್ಷ ಎಸ್ ಲಿಂಗಮೂರ್ತಿ ಹಾಗೂ ಹಾಲಿ ಶಾಸಕ ಗೂಳಿಹಟ್ಟಿ ಶೇಖರ್ ಮಧ್ಯೆ ಶೀತಲ ಸಮರ ಇರೋದ್ರಿಂದ ಇಬ್ಬರು ಒಂದೇ ವೇದಿಕೆಯಲ್ಲಿ ಇತ್ತೀಚೆಗೆ ಕಾಣಸಿಗುವುದು ತುಂಬಾ ಕಡಿಮೆ ಆಗಿದೆ. ಈ ಬಾರಿಯ ಚುನಾವಣೆಯಲ್ಲಿ ನಾನು ಕೂಡ ಸ್ಪರ್ಧೆ ಮಾಡ್ತೀನಿ ಎಂದು ಲಿಂಗಮೂರ್ತಿ ಅನೇಕ ಬಾರಿ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಶಾಸಕರು ಕೂಡ ನಾನು ಕೂಡ ಹೊಸದುರ್ಗ ಕ್ಷೇತ್ರದಲ್ಲೇ ಸ್ಪರ್ಧೆ ಮಾಡ್ತೀನಿ ಎಂದು ಕೌಂಟರ್ ಕೊಟ್ಟಿದ್ದರು. ಒಟ್ನಲ್ಲಿ ಪಕ್ಷ ಯಾರಿಗೆ ಟಿಕೆಟ್ ನೀಡಲಿದೆ ಯಾವ ಅಭ್ಯರ್ಥಿಯಿಂದ ಬಂಡಾಯದ ಬಿಸಿ ಆಗಲಿದೆ ಎಂಬುದನ್ನು ಕಾದುನೋಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.