ಬಿಜೆಪಿ ಸರ್ಕಾರ ಇದ್ದಾಗ ವಿಧಾನ ಪರಿಷತ್‌ಗೆ ನಾಮನಿರ್ದೇಶನಗೊಂಡು ನಂತರ ಕಾಂಗ್ರೆಸ್ ಪರ ವಾಲಿದ್ದ ಎಚ್.ವಿಶ್ವನಾಥ್ ಅವರೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಡೆಸಿದ ಸಂಧಾನ ಯಶಸ್ವಿಯಾಗಿದೆ.
ಮೈಸೂರು (ಏ.04): ಬಿಜೆಪಿ ಸರ್ಕಾರ ಇದ್ದಾಗ ವಿಧಾನ ಪರಿಷತ್‌ಗೆ ನಾಮನಿರ್ದೇಶನಗೊಂಡು ನಂತರ ಕಾಂಗ್ರೆಸ್ ಪರ ವಾಲಿದ್ದ ಎಚ್. ವಿಶ್ವನಾಥ್ ಅವರೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಡೆಸಿದ ಸಂಧಾನ ಯಶಸ್ವಿಯಾಗಿದೆ. ಇದರ ಬೆನ್ನಲ್ಲೇ ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಬೆಂಬಲ ಘೋಷಿಸಿದ್ದಾರೆ.
ಬಿಜೆಪಿಯಿಂದ ಸಾಹಿತ್ಯ ಕೋಟಾದಲ್ಲಿ ಮೇಲ್ಮನೆಗೆ ನಾಮನಿರ್ದೇಶನಗೊಂಡಿದ್ದ ವಿಶ್ವನಾಥ್, ನಂತರದ ದಿನಗಳಲ್ಲಿ ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸಭೆ, ಸಮಾರಂಭಗಳಲ್ಲಿ ಕಾಣಿಸಿಕೊಂಡಿದ್ದರು. ಆ ಪಕ್ಷದ ಟಿಕೆಟ್ ಕೂಡ ಕೇಳಿದ್ದರು. ಆದರೆ, ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿರಲಿಲ್ಲ.
ಪಕ್ಷದಲ್ಲಿಯೇ ಇರದಿದ್ದ ಎಸ್.ಪಿ.ಮುದ್ದಹನುಮೇಗೌಡ, ಜಯಪ್ರಕಾಶ್ ಹೆಗ್ಡೆ ಅವರನ್ನು ಕರೆ ತಂದು ಟಿಕೆಟ್ ನೀಡಲಾಗಿದೆ. ನಾನು ಟಿಕೆಟ್ ಕೇಳಿದರೂ ಸಿದ್ದರಾಮಯ್ಯ ಅವರು ಪರಿಗಣಿಸಲಿಲ್ಲ ಎಂಬುದು ವಿಶ್ವನಾಥ್ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ವಿಜಯೇಂದ್ರ ಅವರು ಯದುವೀರ್ ಜೊತೆ ವಿಶ್ವನಾಥ್ ಅವರ ನಿವಾಸಕ್ಕೆ ಭೇಟಿ ನೀಡಿ, ಸಂಧಾನ ನಡೆಸಿದರು. ಈ ವೇಳೆ, ಜಿಪಂ ಮಾಜಿ ಸದಸ್ಯ, ವಿಶ್ವನಾಥ್ ಪುತ್ರ ಅಮಿತ್ ವಿ.ದೇವರಹಟ್ಟಿ, ನಗರಾಧ್ಯಕ್ಷ ಎಲ್. ನಾಗೇಂದ್ರ, ಶಾಸಕ ಟಿ.ಎಸ್. ಶ್ರೀವತ್ಸ, ಮಾಜಿ ಶಾಸಕ ಡಿ. ಮಾದೇಗೌಡ, ಮುಖಂಡ ವಿ.ಕವೀಶ್ ಗೌಡ, ರಾಜ್ಯ ಉಪಾಧ್ಯಕ್ಷ ಎಂ.ರಾಜೇಂದ್ರ, ಒಬಿಸಿ ರಾಜ್ಯಾಧ್ಯಕ್ಷ ರಘು ಕೌಟಿಲ್ಯ ಕೂಡ ಹಾಜರಿದ್ದರು.
ಮುನಿಸು ಮರೆತು ಒಂದಾದ ಶಾಸಕ ಎಸ್.ಆರ್.ವಿಶ್ವನಾಥ್ ಮತ್ತು ಡಾ.ಕೆ.ಸುಧಾಕರ್
ಈ ಸಂದರ್ಭದಲ್ಲಿ ವಿಶ್ವನಾಥ್ ಮಾತನಾಡಿ, ಮೈಸೂರು ರಾಜ್ಯಕ್ಕೆ ಯದುವಂಶಸ್ಥರು ನೀಡಿರುವ ಕೊಡುಗೆಯನ್ನು ಸ್ಮರಿಸಿ, ಯದುವೀರ್ ಅವರನ್ನು ಪಕ್ಷಾತೀತವಾಗಿ ಬೆಂಬಲಿಸಿ, ಅವಿರೋಧವಾಗಿ ಆಯ್ಕೆ ಮಾಡಬೇಕು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಈ ಬಗ್ಗೆ ಗಮನ ಹರಿಸಬೇಕು ಎಂದರು. ನಂತರ ಯದುವೀರ್ ಅವರಿಗೆ ಕಂಬಳಿ, ಶಾಲು, ಹಾರ, ಫಲಪುಷ್ಪ ನೀಡಿ ಅಭಿನಂದಿಸಿದರು. ವಿಜಯೇಂದ್ರ ಅವರನ್ನು ಕೂಡ ಸನ್ಮಾನಿಸಿದರು. ಇಬ್ಬರಿಗೂ ಸಿಹಿಯನ್ನು ತಿನ್ನಿಸಿದರು.