ಮುನಿಸು ಮರೆತು ಒಂದಾದ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಮತ್ತು ಡಾ.ಕೆ.ಸುಧಾಕರ್‌

By Kannadaprabha NewsFirst Published Apr 4, 2024, 10:32 AM IST
Highlights

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್‌ ಅವರ ಬಗ್ಗೆ ಯಲಹಂಕ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಅವರಿಗಿದ್ದ ಮುನಿಸು ಶಮನವಾಗಿದೆ. 

ಬೆಂಗಳೂರು (ಏ.04): ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್‌ ಅವರ ಬಗ್ಗೆ ಯಲಹಂಕ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಅವರಿಗಿದ್ದ ಮುನಿಸು ಶಮನವಾಗಿದೆ. ನಿರೀಕ್ಷೆಯಂತೆ ಹಿರಿಯ ನಾಯಕರ ಸಮ್ಮುಖದಲ್ಲಿ ನಡೆದ ಸಂಧಾನ ಸಭೆಯಲ್ಲಿ ಇಬ್ಬರ ನಡುವಿನ ಮುಸುಕಿನ ಗುದ್ದಾಟ ಅಂತ್ಯಗೊಂಡಿದ್ದು, ಬುಧವಾರ ಬೆಳಗ್ಗೆ ವಿಶ್ವನಾಥ್‌ ಅವರ ಮನೆಗೆ ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾ ಮೋಹನ್‌ದಾಸ್‌ ಅಗರ್‌ವಾಲ್‌ ಅವರೊಂದಿಗೆ ಸುಧಾಕರ್‌ ಭೇಟಿ ನೀಡಿ ಮುಖಾಮುಖಿ ಸಮಾಲೋಚನೆ ನಡೆಸಿದರು.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಸೂಚನೆಯ ಮೇರೆಗೆ ವಿಶ್ವನಾಥ್‌ ಅವರು ಸುಧಾಕರ್‌ ಅವರನ್ನು ಉಪಹಾರಕ್ಕೆ ಆಹ್ವಾನಿಸಿದ್ದರು. ಸುಧಾಕರ್‌ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್‌, ಅಮಿತ್‌ ಶಾ ಅವರನ್ನು ಭೇಟಿ ಮಾಡಿ ಮಾತನಾಡಿದ್ದೇನೆ. ನಾನು ಏನು ಹೇಳಬೇಕೆಂದಿದ್ದೆನೋ ಅದನ್ನು ಹೇಳಿದ್ದೇನೆ. ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಸೂಚಿಸಿದ್ದಾರೆ. ನಮ್ಮ ಕ್ಷೇತ್ರದಲ್ಲಿ ಸುಧಾಕರ್‌ ಅವರಿಗೆ ಬಹುಮತ ಕೊಡುತ್ತೇವೆ. ನಾಮಪತ್ರ ಸಲ್ಲಿಕೆಗೆ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಗುರುವಾರ ಚಿಕ್ಕಬಳ್ಳಾಪುರಕ್ಕೆ ತೆರಳಲಾಗುವುದು ಎಂದು ತಿಳಿಸಿದರು.

ಸುಧಾಕರ್‌ ಮಾತನಾಡಿ, ನಾನು ವಿಶ್ವನಾಥ್‌ ಅವರಿಗೆ ಆಭಾರಿಯಾಗಿದ್ದೇನೆ. ತಮ್ಮ ಚುನಾವಣೆ ಹೇಗೆ ಮಾಡುತ್ತಾರೋ ಅದೇ ರೀತಿ ಈ ಚುನಾವಣೆ ಮಾಡುವುದಾಗಿ ತಿಳಿಸಿದ್ದು, ಹೆಚ್ಚಿನ ಲೀಡ್‌ನಿಂದ ಗೆಲ್ಲಿಸುವುದಾಗಿ ಭರವಸೆ ನೀಡಿದ್ದಾರೆ. ಅವರ ಆಪ್ತರು ಮತ್ತು ಬೆಂಬಲಿಗರನ್ನು ಪ್ರೀತಿ ವಿಶ್ವಾಸದಿಂದ ನಡೆಸಿಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ವಿಶ್ವನಾಥ್‌ ಅವರು ಈ ಚುನಾವಣೆಯಲ್ಲಿ ಮೋದಿ ಅವರನ್ನು ಗೆಲ್ಲಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಾರೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ವಿಶ್ವನಾಥ್‌ ಬೆಂಬಲದಿಂದ ಆನೆಬಲ ಬಂದಂತಾಗಿದೆ ಎಂದು ಹೇಳಿದರು.

ನನ್ನನ್ನು ರಾಷ್ಟ್ರಪತಿ, ಪ್ರಧಾನಿ ಮಾಡ್ತೀನಿ ಅಂದ್ರೂ ಬಿಜೆಪಿ ಕಡೆ ತಲೆ ಹಾಕಲ್ಲ: ಸಿಎಂ ಸಿದ್ದರಾಮಯ್ಯ

ಟಿಕೆಟ್ ಆಕಾಂಕ್ಷಿಯಾಗಿದ್ದ ಅಲೋಕ್‌ ವಿಶ್ವನಾಥ್‌ ಮಾತನಾಡಿ, ನಾನು ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದೆ. ಆದರೆ ಟಿಕೆಟ್‌ ಕೈತಪ್ಪಿದ್ದರಿಂದ ಸಹಜವಾಗಿ ಕಾರ್ಯಕರ್ತರಿಗೆ ಬೇಸರವಾಗಿದೆ. ಪಕ್ಷದ ಮೇಲೆ ನನಗೆ ಯಾವುದೇ ಅಸಮಾಧಾನವಿಲ್ಲ. ಸದ್ಯಕ್ಕೆ ನಮಗೆ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿ ಕಾಣಬೇಕಾಗಿರುವುದರಿಂದ ನಾವೆಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸ ಬೇಕಾಗಿದೆ. ಮುಂದೆ ಅವಕಾಶಗಳು ಬರುತ್ತವೆ. ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಸುಧಾಕರ್‌ಗೆ ಒಳ್ಳೆಯ ಲೀಡ್‌ ನೀಡಲಾಗುವುದು ಎಂದರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಕಟ್ಟಾ ಸುಬ್ರಮಣ್ಯ ನಾಯ್ಡು, ಶಾಸಕ ಎಸ್‌.ಮುನಿರಾಜು, ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ ಮತ್ತಿತರರು ಉಪಸ್ಥಿತರಿದ್ದರು.

click me!