ರಾಜ್ಯದಲ್ಲಿ ಮುಂಬರುವ 2023 ವಿಧಾನಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿರುವ ಕಾಂಗ್ರೆಸ್ ಪ್ರಚಾರ ಕಾರ್ಯಕ್ಕೆ ಅನುಕೂಲ ಆಗುವಂತೆ ಎರಡು ಪ್ರತ್ಯೇಕ ಬಸ್‌ಗಳನ್ನು ರೂಪಿಸಿಕೊಂಡಿದೆ.
ಬೆಂಗಳೂರು (ಡಿ.12): ರಾಜ್ಯದಲ್ಲಿ ಮುಂಬರುವ 2023 ವಿಧಾನಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿರುವ ಕಾಂಗ್ರೆಸ್ ತಿಂಗಳಾಂತ್ಯಕ್ಕೆ 150ಕ್ಕೂ ಅಧಿಕ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದರೊಂದಿಗೆ ಪ್ರಚಾರ ಕಾರ್ಯಕ್ಕೆ ಅನುಕೂಲ ಆಗುವಂತೆ ಎರಡು ಪ್ರತ್ಯೇಕ ಬಸ್‌ಗಳನ್ನು ರೂಪಿಸಿಕೊಳ್ಳುತ್ತಿದೆ.
ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಚುನಾವಣಾ ಪ್ರಚಾರವಾಗಿ ಬಸ್ ಯಾತ್ರೆಯನ್ನು (Bus Travel) ಮಾಡಲು ಮುಂದಾಗಿದೆ. ಇದಕ್ಕಾಗಿ ಕಾಂಗ್ರೆಸ್ ಎರಡು ತಂಡವಾಗಿ ಬಸ್ ಯಾತ್ರೆ ಆರಂಭಿಸಲಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ಒಂದು ತಂಡ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ. ಶಿವಕುಮಾರ್ (Shivakumar) ನೇತೃತ್ವದಲ್ಲಿ ಒಂದು ತಂಡ ಬಸ್‌ನಲ್ಲಿ ಯಾತ್ರೆ ಕೈಗೊಂಡು ಪ್ರಚಾರ ಮಾಡಲಿದೆ. ಇನ್ನು ಎರಡು ತಂಡವಾಗಿ ಯಾತ್ರೆ ಮಾಡಲಿರುವ ಇಬ್ಬರೂ ನಾಯಕರು ತಮ್ಮ ತಂಡದೊಳಗೆ ಯಾರು ಇರಬೇಕು ಎಂಬುದನ್ನು ನಿರ್ಧರಿಸಲಿದ್ದಾರೆ.
ಹೈಕಮಾಂಡ್‌ನಿಂದ ಸದಸ್ಯರ ನಿರ್ಧಾರ: ಸಿದ್ದರಾಮಯ್ಯ ತಂಡದಲ್ಲಿ ಯಾರ್ಯಾರು ಇರಬೇಕು? ಹಾಗೂ ಡಿಕೆ ಶಿವಕುಮಾರ್ ತಂಡದಲ್ಲಿ ಯಾರು ಇರಬೇಕು ಎಂದು ಹೈಕಮಾಂಡ್ (High Command) ತೀರ್ಮಾನಿಸಲಿದೆ. ಇಂದು ದೆಹಲಿಯಲ್ಲಿ ನಡೆಯುತ್ತಿರುವ ಪಕ್ಷದ ಟಿಕೆಟ್ (Party Ticket) ಹಂಚಿಕೆಯ ಪಟ್ಟಿ ಅಂತಿಮಗೊಳಿಸುವ ಸಭೆಯಲ್ಲಿ ಬಸ್ ಯಾತ್ರೆಯ ನಾಯಕರ ತಂಡದಲ್ಲಿ ಯಾರು ಹೋಗಬೇಕು ಎಂಬುದನ್ನೂ ತೀರ್ಮಾನ ಕೈಗೊಳ್ಳಲಾಗುತ್ತದೆ.
ನಮ್ಮಲ್ಲಿ ಬಿರುಕು ಬರಬಾರದು: 'ಕೈ' ಪಾಳೆಯಕ್ಕೆ ಮಲ್ಲಿಕಾರ್ಜುನ ಖರ್ಗೆ ಪಾಠ
ಜ.3ರಿಂದ ಸಿದ್ದರಾಮಯ್ಯ ಯಾತ್ರೆ ಆರಂಭ: ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದ ತಂಡದಿಂದ ಜ.3ರಂದು (January 3) ಮೊದಲನೆಯದಾಗಿ ಬಸ್ ಯಾತ್ರೆ ಆರಂಭವಾಗುವ ಸಾಧ್ಯತೆಯಿದೆ. ಸಿದ್ದರಾಮಯ್ಯ ತಂಡವು ಉತ್ತರ ಕರ್ನಾಟಕ (North Karnataka) ಭಾಗದಿಂದ ಬಸ್ ಯಾತ್ರೆ ಆರಂಭಿಸಲಿದೆ. ಬೀದರ್ ನ ಬಸವಕಲ್ಯಾಣದಿಂದ ಬಸ್ ಯಾತ್ರೆ ಆರಂಭಿಸುವ ಬಗ್ಗೆ ಸಿದ್ದರಾಮಯ್ಯ ಅವರು ಹೈಕಮಾಂಡ್ ಮುಂದೆ ಪ್ರಸ್ತಾಪ ಮಾಡಲಿದ್ದಾರೆ. ಇನ್ನು ಡಿ.ಕೆ. ಶಿವಕುಮಾರ್ ನೇತೃತ್ವದ ತಂಡದ ಬಸ್ ಯಾತ್ರೆ ಬಗ್ಗೆ ಪೂರ್ಣ ಪ್ರಮಾಣದ ಮ್ಯಾಪ್ (Route Map) ನಿಗದಿಯಾಗಿಲ್ಲ. ಆದರೆ, ಇಬ್ಬರು ನಾಯಕರ ಯಾತ್ರೆಗೆ ಈಗಾಗಲೇ ಬಸ್ ರೆಡಿಯಾಗಿದೆ. ಹೈಕಮಾಂಡ್ ತಂಡ ರಚನೆ ಬಳಿಕ ಬಸ್ ಯಾತ್ರೆ ಚುನಾವಣಾ ಪ್ರಚಾರ ಶುರುವಾಗಲಿದೆ.
ಕೋಲಾರದಿಂದ ಡಿಕೆಶಿ ಬಸ್ ಯಾತ್ರೆ: ಇನ್ನು ಡಿ.ಕೆ. ಶಿವಕುಮಾರ್ ಬಸ್ ಯಾತ್ರೆಯ ಸ್ಪಷ್ಟವಾದ ದಿನಾಂಕ ನಿಗದಿ ಆಗದಿದ್ದರೂ, ಜನವರಿ ತಿಂಗಳ ಮೊದಲ ವಾರದಿಂದಲೇ ಯಾತ್ರೆ ಆರಂಭಿಸಲಾಗುತ್ತದೆ ಎಂದು ತಿಳಿದುಬಂದಿದೆ. ಇದಕ್ಕೆ ಹೈಕಮಾಂಡ್‌ನಿಂದ ಗ್ರೀನ್ ಸಿಗ್ನಲ್ ಸಿಗುವ ಸಾಧ್ಯತೆಯಿದೆ. ಡಿಕೆಶಿ ನೇತೃತ್ವದ ತಂಡವು ದಕ್ಷಿಣ ಕರ್ನಾಟಕದ ಕೋಲಾರದ ಕುರುಡುಮಲೈ ಗಣಪತಿ ದೇವಸ್ಥಾನದಿಂದ ಆರಂಭವಾಗುವ ಸಾಧ್ಯತೆಯಿದೆ. ಒಟ್ಟಾರೆ ಇಬ್ಬರೂ ನಾಯಕರ ಪ್ರವಾಸ ತಂಡ ಹಾಗೂ ವೇಳಾಪಟ್ಟಿ ಶೀಘ್ರದಲ್ಲೇ ಬಿಡುಗಡೆ ಆಗಲಿದೆ.
Assembly election: ತಿಂಗಳಾಂತ್ಯಕ್ಕೆ ಕೈ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಣೆ
ಬೂತ್ ಮಟ್ಟದಲ್ಲಿ ಭಾರತ್ ಜೋಡೋ ರೀತಿ ರ್ಯಾಲಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಚುನಾವಣೆ ಮಾಡಿ ಅನುಭವಿದೆ. ರಾಜ್ಯದ ಪ್ರತಿಕ್ಷೇತ್ರದ ನಾಯಕರು ಕೂಡ ಅವರಿಗೆ ಗೊತ್ತಿದೆ. ರಾಜ್ಯವನ್ನು ಗೆಲ್ಲಲೇಬೇಕು ಅನ್ನುವುದು ಖರ್ಗೆಯವರ ಮನದಲ್ಲಿದೆ. ಈ ಹಿನ್ನೆಲೆಯಲ್ಲಿ ನಮ್ಮನ್ನೆಲ್ಲ ಕರೆದು ಸಲಹೆ ನೀಡಲಿದ್ದಾರೆ. ಭಾರತ್ ಜೋಡೊ ರೀತಿಯಲ್ಲಿ ಪ್ರತಿ ಬೂತ್ ಮಟ್ಟದಲ್ಲಿ ರ್ಯಾಲಿ ಮಾಡುತ್ತೇವೆ. ಎಲ್ಲ ನಾಯಕರು ಒಟ್ಟಿಗೆ ಪ್ರತಿ ಬೂತ್ ನಲ್ಲೂ ಪ್ರಚಾರ ಮಾಡಲಿದ್ದಾರೆ. ಈಗಾಗಲೇ ರ್ಯಾಲಿ ನಡೆಸುವಂತೆ ಸೂಚನೆ ಎಐಸಿಸಿಯಿಂದ ಬಂದಿದೆ. ಕಾಂಗ್ರೆಸ್ ನಲ್ಲಿ ಹೆಚ್ಚು ನಾಯಕರಿದ್ದು, ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಹಿಮಾಚಲ ಪ್ರದೇಶ ಮತ್ತು ದೆಹಲಿಯಲ್ಲಿ ಮೋದಿ ಮಂತ್ರ ನಡೆಯಲಿಲ್ಲ. ಇನ್ನು ಕರ್ನಾಟಕದಲ್ಲಿಯೂ ನಡೆಯುವುದಿಲ್ಲ ಎಂದು ನವದೆಹಲಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.