ಆರೋಗ್ಯ ಇಲಾಖೆ ಖಾತೆ ಕಿತ್ತುಕೊಂಡ ಬೆನ್ನಲ್ಲೇ ಶ್ರೀರಾಮುಲುಗೆ ಮತ್ತೊಂದು ಶಾಕ್ ಕೊಟ್ಟ ಬಿಎಸ್‌ವೈ

By Suvarna NewsFirst Published Oct 12, 2020, 2:28 PM IST
Highlights

ಬಿ.ಶ್ರೀರಾಮುಲು ಅವರ ಬಳಿ ಇದ್ದ ಆರೋಗ್ಯ ಖಾತೆಯನ್ನು ಹಿಂಪಡೆದು ಸುಧಾಕರ್ ಅವರಿಗೆ ನೀಡಲಾಗಿದೆ. ಇದರ ಬೆನ್ನಲ್ಲೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ಶ್ರೀರಾಮುಲು ಅವರಿಗೆ ಮತ್ತೊಂದು ಶಾಕ್ ಕೊಟ್ಟಿದ್ದಾರೆ.

ಬೆಂಗಳೂರು, (ಅ.12): ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಂಪುಟದ ಇಬ್ಬರು ಪ್ರಮುಖ ಸಚಿವರುಗಳ ಖಾತೆಗಳನ್ನು ಮರು ಹಂಚಿಕೆ ಮಾಡಿದ್ದು, ಇದಕ್ಕೆ ಇಂದು (ಸೋಮವಾರ) ರಾಜ್ಯಪಾಲ ವಜುಭಾಯಿ ವಾಲಾ ಸರ್ಕಾರದ ಆದೇಶಕ್ಕೆ ಸಹಿ ಹಾಕಿದ್ದಾರೆ.

"

ಯಡಿಯೂರಪ್ಪ ಅವರು ಇಬ್ಬರ ಖಾತೆಯನ್ನು ದಿಢೀರ್​ ಬದಲಾವಣೆ ಮಾಡಿದ್ದಾರೆ. ಸಚಿವ ಸಂಪುಟ ಪುನರ್​ ವಿಸ್ತರಣೆಗೂ ಮುನ್ನವೇ ಬಿ.ಶ್ರೀರಾಮುಲು ಬಳಿಯಿದ್ದ ಆರೋಗ್ಯ ಖಾತೆಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್​ಗೆ ನೀಡಿದ್ದಾರೆ.

ದಿಡೀರ್ ಖಾತೆ ಬದಲಾವಣೆ, ಶ್ರೀರಾಮುಲು ಅಸಮಾಧಾನ; ಸಿಎಂ ಜೊತೆ ಮಹತ್ವದ ಚರ್ಚೆ

ಇನ್ನು ಉಪಮುಖ್ಯಮಂತ್ರಿ ಗೋವಿಂದ್ ಕಾರಜೋಳ ಅವರ ಬಳಿ ಇದ್ದ ಸಮಾಜ ಕಲ್ಯಾಣ ಇಲಾಖೆ ಖಾತೆಯನ್ನು  ಶ್ರೀರಾಮುಲು ಅವರಿಗೆ ನೀಡಲಾಗಿದೆ. 

ಶ್ರೀರಾಮುಲುಗೆ ಡಬಲ್ ಶಾಕ್

ಹೌದು...ಬಿ.ಶ್ರೀರಾಮುಲು ಕೈಯಿಂದ ಆರೋಗ್ಯ ಖಾತೆಯನ್ನಷ್ಟೇ ಹಿಂಪಡೆದು, ಅದಕ್ಕೆ ಬದಲಾಗಿ ಸಮಾಜ ಕಲ್ಯಾಣ ಖಾತೆ ಕೊಡಲಾಗುತ್ತದೆ ಎನ್ನಲಾಗಿತ್ತು. ಇದರಿಂದ ಶ್ರೀರಾಮುಲು ಅವರು ಅಸಮಾಧನ ಹೊರಹಾಕಿದ್ದರು.

ಇದೀಗ ಶ್ರೀರಾಮುಲು ಬಳಿಯಿದ್ದ ಆರೋಗ್ಯ ಖಾತೆ ಜತೆಗೆ ಹಿಂದುಳಿದ ವರ್ಗಗಳ ಇಲಾಖೆಯನ್ನು ಹಿಂಪಡೆಯುವ ಮೂಲಕ ಉಪ ಮುಖ್ಯಮಂತ್ರಿ ಸ್ಥಾನದ ನಿರೀಕ್ಷೆಯಲ್ಲಿದ್ದ ಶ್ರೀರಾಮುಲುಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಬಿಗ್ ಶಾಕ್ ನೀಡಿದ್ದಾರೆ.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಅವರಿಗೆ ಆರೋಗ್ಯ ಖಾತೆಯನ್ನು ಹೆಚ್ಚುವರಿಯಾಗಿ ನೀಡಿ ಆದೇಶ ಹೊರಡಿಸಿದ್ದಾರೆ. ಹಿಂದುಳಿದ ವರ್ಗಗಳ ಖಾತೆಯನ್ನು ಸಿಎಂ ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ.

ಲೋಕೋಪಯೋಗಿ ಹಾಗೂ ಸಮಾಜ ಕಲ್ಯಾಣ ಖಾತೆ ಸಚಿವರಾಗಿದ್ದ ಗೋವಿಂದ ಕಾರಜೋಳ ಅವರಿಂದ ಸಮಾಜ ಕಲ್ಯಾಣ ಖಾತೆ ಹಿಂಪಡೆದು ಬಿ.ಶ್ರೀರಾಮುಲು ಅವರಿಗೆ ನೀಡಿದ್ದಾರೆ. ಕಾರಜೋಳ ಅವರು ಲೋಕೋಪಯೋಗಿ ಸಚಿವರಾಗಿ ಮುಂದುವರೆಯಲಿದ್ದಾರೆ.

ಡಿಸಿಎಂ ಆಸೆಯೂ ಈಡೇರಲಿಲ್ಲ

ಉಪಮುಖ್ಯಂತ್ರಿ ಹುದ್ದೆ ಮೇಲೆ ಕಣ್ಣಿಟ್ಟದ್ದ ಶ್ರೀರಾಮುಲು ಅವರಿಗೆ ಇದೀಗ ಆರೋಗ್ಯ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಖಾತೆಯನ್ನು ಕಿತ್ತುಕೊಂಡು ಸಿಎಂ ಶಾಕ್ ಮೇಲೆ ಶಾಕ್ ಕೊಟ್ಟಿದ್ದಾರೆ. ಇತ್ತ ಡಿಸಿಎಂ ಇಲ್ಲ ಮತ್ತೊಂದೆಡೆ ಇದ್ದ ಎರಡೂ ಖಾತೆಗಳು ಸಹ ಕೈತಪ್ಪಿ ಹೋಗಿದ್ದು ಶ್ರೀರಾಮುಲು ಮುಖಭಂಗವಾಗಿದೆ. ಅದಲ್ಲೂ ವಲಸೆ ನಾಯಕರಿಗೆ ತಮ್ಮ ಖಾತೆ ನೀಡುರುವುದು ರಾಮುಲು ಕಣ್ಣು ಕೆಂಪಾಗಿಸಿದೆ.

ಶ್ರೀರಾಮುಲು ಮುಂದಿನ ನಡೆ ಕುತೂಹಲ

ಎರಡು ಪ್ರಮುಖ ಖಾತೆಗಳನ್ನ ಕಳೆದುಕೊಂಡು ರೊಚ್ಚಿಗೆದ್ದಿರುವ ಶ್ರೀರಾಮುಲು ಸಿಎಂ ಬಿಎಸ್ ಯಡಿಯೂರಪ್ಪ ಜತೆ ಮಾತುಕತೆಗೆ ಮುಂದಾಗಿದ್ದಾರೆ. ಮತ್ತೊಂದೆಡೆ ಸಮಾಜ ಕಲ್ಯಾಣ ಇಲಾಖೆ ಖಾತೆಯನ್ನು ಸ್ವೀಕರಿಸಬೇಡಿ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಅವರ ಬೆಂಬಲಿಗರು ಶ್ರೀರಾಮುಲು ಅವರಿಗೆ ಹೇಳಿದ್ದಾರೆ. ಇದರಿಂದ ರಾಮುಲು ಅವರ ಮುಂದಿನ ನಡೆ ತೀವ್ರ ಕುತೂಹಲ ಮೂಡಿಸಿದೆ.

click me!