ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೇಂದ್ರ ಸಚಿವೆ ಶೋಭಾ ಕರದ್ಲಾಂಜೆ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಬಸವನಗೌಡ ಪಾಟೀಲ ಯತ್ನಾಳ್ ಅವರನ್ನು ನೇಮಕ ಮಾಡುವುದಕ್ಕೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿರೋಧವಿದೆ ಎಂಬುದು ಊಹಾಪೋಹ ಎಂದು ರಾಜ್ಯ ಉಪಾಧ್ಯಕ್ಷರೂ ಆದ ಶಿಕಾರಿಪುರ ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.
ಮೈಸೂರು (ಅ.26): ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೇಂದ್ರ ಸಚಿವೆ ಶೋಭಾ ಕರದ್ಲಾಂಜೆ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಬಸವನಗೌಡ ಪಾಟೀಲ ಯತ್ನಾಳ್ ಅವರನ್ನು ನೇಮಕ ಮಾಡುವುದಕ್ಕೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿರೋಧವಿದೆ ಎಂಬುದು ಊಹಾಪೋಹ ಎಂದು ರಾಜ್ಯ ಉಪಾಧ್ಯಕ್ಷರೂ ಆದ ಶಿಕಾರಿಪುರ ಶಾಸಕ ಬಿ.ವೈ. ವಿಜಯೇಂದ್ರ ಹೇಳಿದರು. ಮೈಸೂರಿನ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ನನ್ನನ್ನು ಒಂದು ವೇಳೆ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿದರೂ ಅದು ಯಡಿಯೂರಪ್ಪನವರ ಮಗ ವಿಜಯೇಂದ್ರ ಎಂಬ ಕಾರಣಕ್ಕೆ ಅಲ್ಲ.
ಯಾರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಬೇಕು ಎಂಬುದನ್ನು ಪಕ್ಷದ ಹೈಕಮಾಂಡ್ ತೀರ್ಮಾನಿಸುತ್ತದೆ. ಯಡಿಯೂರಪ್ಪ ತಮ್ಮ ಮಗನ ಪರ ಲಾಭಿ ಮಾಡುತ್ತಿದ್ದಾರೆ ಎಂಬುದೆಲ್ಲಾ ಸುಳ್ಳು ಎಂದರು. ಲಾಭಿ ಮಾಡುವಂತಹ ಯಾವುದೇ ಬೆಳವಣಿಗೆಯೂ ನಡೆದಿಲ್ಲ. ಯಾರನ್ನೇ ಅಧ್ಯಕ್ಷರನ್ನಾಗಿ ಮಾಡಲಿ. ಯಾರನ್ನೇ ವಿಪಕ್ಷ ನಾಯಕ ಮಾಡಲಿ. ಅದನ್ನು ಎಲ್ಲರೂ ಒಪ್ಪಿಕೊಂಡೇ ಕೆಲಸ ಮಾಡುತ್ತಾರೆ. ನಾನು ಇಂದು ಸುತ್ತೂರು ಮಠಕ್ಕೆ ಭೇಟಿ ನೀಡಿರುವುದಕ್ಕೂ, ರಾಜ್ಯಾಧ್ಯಕ್ಷ ಸ್ಥಾನಕ್ಕೂ ಸಂಬಂಧವಿಲ್ಲ ಎಂದು ಅವರು ಹೇಳಿದರು. ರಾಮನಗರವನ್ನು ಬೆಂಗಳೂರು ಜಿಲ್ಲೆಗೆ ಸೇರಿಸುವ ವಿಷಯಕ್ಕೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್ ಮಾಡಿದ್ದಕ್ಕೆಲ್ಲಾ ಯಾಕೆ ವಿರೋಧ ಮಾಡುತ್ತಾರೆ ಎಂದು ಟಾಂಗ್ ನೀಡಿದರು.
ಕಾಂಗ್ರೆಸ್ ಶಾಸಕರಲ್ಲೇ ಅಸಮಾಧಾನ ಭುಗಿಲೆದ್ದಿದೆ: ಶಾಸಕ ಬಿ.ವೈ.ವಿಜಯೇಂದ್ರ
ಅವರ ರಿಯಲ್ ಎಸ್ಟೇಟ್ ಉದ್ಯಮ ವಿಸ್ತರಣೆ ಆಗಬೇಕು. ಅದಕ್ಕೆ ಪಾಪ ಅವರು ರಾಮನಗರ ಬದಲಾಯಿಸುತ್ತಿದ್ದಾರೆ. ಅದಕ್ಕೆ ಏಕೆ ನಿಮ್ಮ ವಿರೋಧ ಎಂದು ಅವರು ನಗು ನುಗತ್ತಲೇ ಟಾಂಗ್ ನೀಡಿದರು. ಕಳೆದ ಚುನಾವಣೆ ಸೋಲಿನಿಂದ ನಾವು ಹತಾಶರಾಗಿಲ್ಲ. ಬಿಜೆಪಿಗೆ ಸೋಲು ಹೊಸದಲ್ಲ ಎಂದು ಅವರು ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡಿದರು. ಸರ್ಕಾರದ ಅಕ್ರಮದ ಬಗ್ಗೆ ನಾವು ಮಾತನಾಡುತ್ತಿದ್ದೇವೆ. ಇದನ್ನೇ ಹತಾಶೆ ಎಂದರೆ ಹೇಗೆ? ಪಂಚ ರಾಜ್ಯ ಚುನಾವಣೆಗಾಗಿ ರಾಜ್ಯ ಸರ್ಕಾರ ಹಣ ವಸೂಲಿ ಮಾಡುತ್ತಿದೆ. ಗುತ್ತಿಗೆದಾರ ಮನೆಯಲ್ಲಿ ಸಿಕ್ಕ ಹಣ ಯಾರದ್ದು. ಈಗ ಇಡೀ ರಾಜ್ಯದ ಜನರ ಮುಂದೆ ಕಾಂಗ್ರೆಸ್ ಬೆತ್ತಲಾಗಿದೆ ಎಂದು ಅವರು ಕಟುವಾಗಿ ಟೀಕಿಸಿದರು.
ದೆಹಲಿ ಕಾಂಗ್ರೆಸ್ ‘ಆರ್‌ಬಿಐ’, ಡಿಕೆಶಿ ‘ಎಸ್‌ಬಿಐ’: ಬಿ.ವೈ.ವಿಜಯೇಂದ್ರ ಲೇವಡಿ
ಸರ್ಕಾರದ ಐದು ಗ್ಯಾರಂಟಿ ಯೋಜನೆಗೆ ಕೊಡಲು ಹಣವೇ ಇಲ್ಲ. ಅದಕ್ಕಾಗಿ ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆಗೆ ಎರೆಡು ತಿಂಗಳಿಂದ ಹಣವೇ ಬಂದಿಲ್ಲ. ರಾಜ್ಯದ ಬೊಕ್ಕಸ ಖಾಲಿ ಆಗುತ್ತಿದೆ. ಈಗ ಬಿಜೆಪಿ ಮೇಲೆ ಗೂಬೆ ಕುರಿಸುವ ಕೆಲಸ ಆರಂಭವಾಗಿದೆ. ಬರದಿಂದ ರೈತರು ಸಂಕಷ್ಟ ಎದುರಿಸುತ್ತಿದ್ದು, ಕೂಡಲೇ ಸರ್ಕಾರ ಬರ ಪರಿಹಾರ ಕಾಮಗಾರಿ ಕೈಗೊಳ್ಳಬೇಕು. ಕೇಂದ್ರದ ಹಣ ಬರುತ್ತದೆ. ಮೊದಲು ಇವರ ಹಣವನ್ನು ತಲುಪಿಸಲಿ. ಅದನ್ನ ಬಿಟ್ಟು ಕೇಂದ್ರದ ಮೇಲೆ ಬೆರಳು ತೋರಿಸುವ ಕೆಲಸ ಮಾಡಬಾರದು ಎಂದು ಅವರು ತಿಳಿಸಿದರು.