
* ವಿಜಯ್ ಮಲಗಿಹಾಳ
ಬೆಂಗಳೂರು(ಮೇ 14) ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (BS Yediyurappa) ಪುತ್ರರೂ ಆಗಿರುವ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ( BY Vijayendra)ಅವರಿಗೆ ಸಚಿವ ಸ್ಥಾನ ಸಿಗಲಿದೆಯೇ ಅಥವಾ ಪಕ್ಷದ ಸಂಘಟನೆಯಲ್ಲಿ ಬಡ್ತಿ ಕೊಡುವ ಮೂಲಕ ಹೆಚ್ಚು ಜವಾಬ್ದಾರಿ ಹೊಂದಿರುವ ದೊಡ್ಡ ಸ್ಥಾನ ನೀಡಲಾಗುತ್ತದೆಯೇ ಎಂಬುದು ಕುತೂಹಲಕರವಾಗಿದೆ.
ಬರುವ ಏಪ್ರಿಲ್ ತಿಂಗಳಲ್ಲಿ ರಾಜ್ಯದ ಸರ್ಕಾರ ಮತ್ತು ಬಿಜೆಪಿ (BJP) ಸಂಘಟನೆಯ ಸ್ವರೂಪದಲ್ಲಿ ಕೆಲವು ಮಹತ್ತರ ಬದಲಾವಣೆ ಆಗುವ ಸಾಧ್ಯತೆಯಿದ್ದು, ಮುಂಬರುವ ಸಾರ್ವತ್ರಿಕ ವಿಧಾನಸಭೆ ಚುನಾವಣೆಯ ಪ್ರಚಾರಕ್ಕೆ ಯಡಿಯೂರಪ್ಪ ಅವರನ್ನೂ ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುವ ಸದುದ್ದೇಶದಿಂದ ಪುತ್ರ ವಿಜಯೇಂದ್ರ ಅವರಿಗೆ ಪ್ರಮುಖ ಸ್ಥಾನ ನೀಡುವುದು ಸೂಕ್ತ ಎಂಬ ಅಭಿಪ್ರಾಯ ಪಕ್ಷದ ವರಿಷ್ಠರಲ್ಲಿ ವ್ಯಕ್ತವಾಗಿದೆ.
ಸಚಿವ ಸ್ಥಾನ ನೀಡಿದಲ್ಲಿ ವಿಜಯೇಂದ್ರ ಅವರನ್ನು ಪಕ್ಷದ ಸಂಘಟನೆಗೆ ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳುವುದು ಸಾಧ್ಯವಾಗಲಿಕ್ಕಿಲ್ಲ. ಅದರ ಬದಲು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಥವಾ ಹೊಸದಾಗಿ ಕಾರ್ಯಾಧ್ಯಕ್ಷರಂಥ ಹುದ್ದೆಯನ್ನು ಸೃಷ್ಟಿಸಿ ಅವರ ಸಂಘಟನಾ ಶಕ್ತಿ ಬಳಸಿಕೊಳ್ಳುವ ಬಗ್ಗೆ ಗಂಭೀರ ಚರ್ಚೆ ನಡೆದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ
ಮತ್ತೊಮ್ಮೆ ಮುಖಭಂಗ ಮಾಡಿಕೊಳ್ಳುವುದಕ್ಕಿಂತ ನಿಮ್ಮ ಈ ನಿರ್ಧಾರ ಸರಿಯಾಗಿದೆ: ಸಿದ್ದು ಕಾಲೆಳೆದ ಬಿಜೆಪಿ
ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆಯಿಂದ ನಿರ್ಗಮಿಸುವ ವೇಳೆ ವಿಜಯೇಂದ್ರ ಅವರಿಗೆ ರಾಜ್ಯ ಉಪಾಧ್ಯಕ್ಷ ಸ್ಥಾನ ನೀಡಲಾಯಿತು. ಆದರೆ, ಬಿಜೆಪಿ ಸಂಘಟನಾ ಸ್ವರೂಪದಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಹೆಚ್ಚಿನ ಅಧಿಕಾರವಿಲ್ಲ. ಜವಾಬ್ದಾರಿಯೂ ಇಲ್ಲ. ಆ ವೇಳೆಯೇ ವಿಜಯೇಂದ್ರ ಅವರು ಪ್ರಧಾನ ಕಾರ್ಯದರ್ಶಿ ಸ್ಥಾನದ ಆಕಾಂಕ್ಷಿಯಾಗಿದ್ದರೂ ವರಿಷ್ಠರು ಮೊದಲು ಉಪಾಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿಕೊಳ್ಳಲಿ ಎಂಬ ಸಲಹೆ ನೀಡಿದ್ದರು.
ಈ ಹಿಂದೆಯೇ ಬಿಜೆಪಿ ಯುವಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಥಾನ ನೀಡಿದಾಗ ರಾಜ್ಯದ ವಿವಿಧ ಭಾಗಗಳಲ್ಲಿ ಸಂಚರಿಸಿ ತಮ್ಮ ಸಂಘಟನಾ ಚಾತುರ್ಯ ತೋರಿದ್ದ ವಿಜಯೇಂದ್ರ ಅವರಿಗೆ ಬಳಿಕ ರಾಜ್ಯ ಘಟಕದ ಉಪಾಧ್ಯಕ್ಷ ಸ್ಥಾನ ನೀಡಿದಾಗ ಸಂಘಟನೆಯಲ್ಲಿ ತೊಡಗಿಸಿಕೊಂಡರೂ ಅಷ್ಟಾಗಿ ಫಲ ನೀಡಲಿಲ್ಲ. ಅದಕ್ಕೆ ಕಾರಣ ಉಪಾಧ್ಯಕ್ಷ ಸ್ಥಾನಕ್ಕೆ ಹೆಚ್ಚಿನ ಅಧಿಕಾರ ಅಥವಾ ಜವಾಬ್ದಾರಿ ಇಲ್ಲದಿರುವುದು. ಹೀಗಾಗಿಯೇ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಕೂಗು ಅವರ ಬೆಂಬಲಿಗರಿಂದ ಬಲವಾಗಿ ಕೇಳಿಬಂದಿತ್ತು.
ಇದೀಗ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಮುಗಿದು ಫಲಿತಾಂಶವೂ ಹೊರಬಿದ್ದಿದೆ. ಬಿಜೆಪಿ ಭರ್ಜರಿ ಗೆಲುವನ್ನೂ ಸಾಧಿಸಿದೆ. ಇದರ ಅಲೆಯಲ್ಲೇ ಮುಂಬರುವ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುವ ತಂತ್ರ ಬಿಜೆಪಿಯಲ್ಲಿ ರೂಪುಗೊಳ್ಳುತ್ತಿದೆ. ಅದರ ಭಾಗವಾಗಿ ವಿಜಯೇಂದ್ರ ಅವರಿಗೆ ಸಚಿವ ಸ್ಥಾನ ನೀಡುವ ಬದಲು ಪಕ್ಷದಲ್ಲೇ ಪ್ರಮುಖ ಜವಾಬ್ದಾರಿ ನೀಡಿ ಸಂಘಟನೆಯ ಕೆಲಸಕ್ಕೆ ಬಳಸಿಕೊಳ್ಳಬೇಕು ಎಂಬ ಚಿಂತನೆ ನಡೆಯುತ್ತಿದೆ.
ಈ ಬಗ್ಗೆ ಕಳೆದ ವಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ವಿಜಯೇಂದ್ರ ಭೇಟಿ ಮಾಡಿದ ವೇಳೆಯೂ ಪ್ರಸ್ತಾಪವಾಗಿದೆ. ಪಕ್ಷದ ಇತರ ರಾಜ್ಯ ನಾಯಕರೊಂದಿಗೆ ಮಾತುಕತೆ ನಡೆದ ಬಳಿಕ ವರಿಷ್ಠರು ಅಂತಿಮವಾಗಿ ವಿಜಯೇಂದ್ರ ಅವರಿಗೆ ಸಚಿವ ಸ್ಥಾನ ನೀಡುವುದು ಸೂಕ್ತವೋ ಅಥವಾ ಪಕ್ಷದಲ್ಲಿ ಪ್ರಮುಖ ಜವಾಬ್ದಾರಿ ನೀಡುವುದು ಅಗತ್ಯವೋ ಎಂಬುದರ ಬಗ್ಗೆ ನಿರ್ಣಯ ಕೈಗೊಳ್ಳಲಿದ್ದಾರೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.