CWC Meeting:  ಸೋನಿಯಾ ಪದತ್ಯಾಗ ಇಂಗಿತ, ಕಾಂಗ್ರೆಸ್ ಮುಂದಿನ ನಡೆ ಏನು!?

Published : Mar 14, 2022, 02:29 AM ISTUpdated : Mar 14, 2022, 06:05 AM IST
CWC Meeting:  ಸೋನಿಯಾ ಪದತ್ಯಾಗ ಇಂಗಿತ, ಕಾಂಗ್ರೆಸ್ ಮುಂದಿನ ನಡೆ ಏನು!?

ಸಾರಾಂಶ

*  ಸೋನಿಯಾ ಗಾಂಧಿ ಪದತ್ಯಾಗ ಇಂಗಿತ * ಪಂಚರಾಜ್ಯ ಸೋಲಿನಿಂದ  ಕಾಂಗ್ರೆಸ್ ನಲ್ಲಿ ಮಹತ್ವದ ಬದಲಾವಣೆ * ಅಧಿಕೃತ ಮಾಹಿತಿ ಇಲ್ಲ * ಪಂಚ ರಾಜ್ಯ ಸೋಲಿನ ಪರಾಮರ್ಶೆ 

ನವದೆಹಲಿ (ಮೇ 14) ಸತತ ಚುನಾವಣಾ ಸೋಲು ಮತ್ತು ಇತ್ತೀಚಿನ ಪಂಚರಾಜ್ಯ (5 State Results) ಚುನಾವಣೆಯ ಮುಖಭಂಗದ ಹೊಣೆ ಹೊತ್ತು ಕಾಂಗ್ರೆಸ್‌ (Congress) ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ರಾಜೀನಾಮೆಗೆ ಮುಂದಾದ ಘಟನೆಗೆ ಭಾನುವಾರ ಇಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆ ಸಾಕ್ಷಿಯಾಗಿದೆ. ಸೋನಿಯಾ ಜೊತೆಯಲ್ಲಿ ಉತ್ತರ ಪ್ರದೇಶದಲ್ಲಿ ಪಕ್ಷದ ಉಸ್ತುವಾರಿಯಾಗಿದ್ದ ಪ್ರಿಯಾಂಕಾ ಗಾಂಧಿ ಮತ್ತು ಪಕ್ಷದ ಹಿರಿಯ ನಾಯಕ ರಾಹುಲ್‌ ಗಾಂಧಿ (Rahul Gandhi) ಕೂಡಾ ಪಕ್ಷದಲ್ಲಿನ ಎಲ್ಲಾ ಹೊಣೆಯಿಂದ ದೂರ ಸರಿಯುವ ಪ್ರಸ್ತಾಪ ಮುಂದಿಟ್ಟರು ಎನ್ನಲಾಗಿದೆ.

ಆದರೆ ಈ ಪ್ರಸ್ತಾಪಗಳನ್ನು ಸಾರಾಸಗಟಾಗಿ ತಿರಸ್ಕರಿಸಿದ ಸಿಡಬ್ಲ್ಯುಸಿ ಸಭೆ, ಸೋನಿಯಾ ಅಧ್ಯಕ್ಷತೆಯಲ್ಲಿ ವಿಶ್ವಾಸ ಪುನರುಚ್ಚರಿಸುವ ಜೊತೆಗೆ, ಸಾಂಸ್ಥಿಕ ಚುನಾವಣೆ ನಡೆದು ಹೊಸ ಅಧ್ಯಕ್ಷರ ಆಯ್ಕೆಯವರೆಗೂ ಪಕ್ಷವನ್ನು ಮುನ್ನಡೆಸುವಂತೆ ಕೋರಿತು. ಅಲ್ಲದೆ ಮುಂಬರುವ ಚುನಾವಣೆಗಳಿಗೂ ಮುನ್ನ ಎದುರಾಗಲಿರುವ ಸವಾಲುಗಳನ್ನು ಮೆಟ್ಟಿನಿಲ್ಲಲು ಪಕ್ಷವನ್ನು ಬಲಪಡಿಸುವುದಕ್ಕೆ ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳುವಂತೆಯೂ ಸೋನಿಯಾಗೆ ಮನವಿ ಮಾಡಿತು.

ಮತ್ತೊಂದೆಡೆ ಸಭೆಯಲ್ಲಿ ಹಾಜರಿದ್ದ ಕೆಲ ನಾಯಕರು ರಾಹುಲ್‌ ಗಾಂಧಿ ಅವರೇ ಪಕ್ಷದ ಅಧ್ಯಕ್ಷರಾಗಬೇಕೆಂಬ ಬೇಡಿಕೆ ಮುಂದಿಟ್ಟರಾದರೂ, ಈಗಾಗಲೇ ಪಕ್ಷದ ಸಾಂಸ್ಥಿಕ ಚುನಾವಣೆಗಳು ನಡೆಯುತ್ತಿವೆ. ಆ ವ್ಯವಸ್ಥೆ ಮೂಲಕವೇ ಹೊಸ ಅಧ್ಯಕ್ಷರ ಆಯ್ಕೆ ನಡೆಯಲಿದೆ ಎಂದು ಹಿರಿಯ ನಾಯಕರು ಸ್ಪಷ್ಟಪಡಿಸಿದರು ಎನ್ನಲಾಗಿದೆ.

Interesting facts about UP elections: ಠೇವಣಿ ಕಳೆದುಕೊಂಡ 'ಕೈ'ಗಳೆಷ್ಟು

ಸೋಲಿನ ಬಗ್ಗೆ ಪರಾಮರ್ಶೆ; ಇತ್ತೀಚಿನ ಪಂಚರಾಜ್ಯಗಳ ಚುನಾವಣೆ ಸೋಲಿನ ಕುರಿತು ಚರ್ಚಿಸಲು ಭಾನುವಾರ ಸಿಡಬ್ಲ್ಯುಸಿ ಸಭೆ ಕರೆಯಲಾಗಿತ್ತು. 5 ಗಂಟೆಗಳ ಕಾಲ ನಡೆದ ಸುದೀರ್ಘ ಸಭೆಯ ಆರಂಭದಲ್ಲೇ ‘ಪಕ್ಷದ ಹಿತಕ್ಕಾಗಿ ಯಾವುದೇ ಮತ್ತು ಎಲ್ಲಾ ರೀತಿಯ ತ್ಯಾಗಕ್ಕೆ ಸಿದ್ಧರಿರುವುದಾಗಿ’ ಹೇಳುವ ಮೂಲಕ ಸೋನಿಯಾ ಗಾಂಧಿ ಪಕ್ಷದ ನಾಯಕರಿಗೆ ದಿಢೀರ್‌ ಶಾಕ್‌ ನೀಡಿದರು. ಅದರ ಬೆನ್ನಲ್ಲೇ ರಾಹುಲ್‌ ಮತ್ತು ಪ್ರಿಯಾಂಕಾ ಕೂಡಾ ರಾಜೀನಾಮೆಗೆ ಮುಂದಾದರು ಎನ್ನಲಾಗಿದೆ.

ಆದರೆ ಮೂವರೂ ನಾಯಕರ ರಾಜೀನಾಮೆ ಪ್ರಸ್ತಾಪ ತಿರಸ್ಕರಿಸಿದ ಸಭೆ, ಆ.21 ಮತ್ತು ಸೆ.20ರ ನಡುವೆ ಪಕ್ಷದ ನೂತನ ಅಧ್ಯಕ್ಷರ ಆಯ್ಕೆ ನಡೆಯಲಿದೆ. ಅಲ್ಲಿಯವರೆಗೂ ಪಕ್ಷವನ್ನು ನೀವೇ ಮುನ್ನಡೆಸಬೇಕು. ಗಾಂಧಿ ಕುಟುಂಬದ ಕುರಿತ ಬಿಜೆಪಿ-ಆರ್‌ಎಸ್‌ಎಸ್‌ ನಾಯಕರ ದಾಳಿಯು ಕೇವಲ ಕಾಂಗ್ರೆಸ್‌ ಪಕ್ಷವನ್ನು ದುರ್ಬಲಗೊಳಿಸುವ ತಂತ್ರವಾಗಿದೆ. ಹೀಗಾಗಿ ಈ ಹಂತದಲ್ಲಿ ರಾಜೀನಾಮೆ ಸರಿಯಲ್ಲ ಎಂದು ಸೋನಿಯಾಗೆ ಮನವರಿಕೆ ಮಾಡಿತು ಎಂದು ಮೂಲಗಳು ತಿಳಿಸಿವೆ.

ಪಕ್ಷ ಬಲಪಡಿಸಲು ಕ್ರಮ-ಸೋನಿಯಾ: ಸಭೆಯಲ್ಲಿ ಭಾಗಿಯಾಗಿದ್ದ ಎಲ್ಲಾ ನಾಯಕರ ಮಾತುಗಳನ್ನು ಆಲಿಸಿದ ಸೋನಿಯಾ ಗಾಂಧಿ, ಪಕ್ಷವನ್ನು ಬಲಪಡಿಸಲು ಅಗತ್ಯವಾದ ಎಲ್ಲಾ ಕ್ರಮಗಳನ್ನು ತಕ್ಷಣವೇ ಕೈಗೊಳ್ಳಲು ಬದ್ಧ ಎಂಬ ಭರವಸೆಯನ್ನು ನೀಡಿದರು ಎಂದು ಸಭೆಯಲ್ಲಿ ಭಾಗಿಯಾಗಿದ್ದ ನಾಯಕರು ತಿಳಿಸಿದ್ದಾರೆ.

ರಾಜಸ್ಥಾನದಲ್ಲಿ ಚಿಂತನ ಶಿಬಿರ: ಪಕ್ಷದಲ್ಲಿ ಮುಂದೆ ಆಗಬೇಕಿರುವ ಬದಲಾವಣೆ, ಸುಧಾರಣೆ ಮೊದಲಾದ ವಿಷಯಗಳ ಕುರಿತು ಸಮಗ್ರವಾಗಿ ಚರ್ಚಿಸಲು, ಸಂಸತ್ತಿನ ಬಜೆಟ್‌ ಅಧಿವೇಶನ ಮುಗಿದ ಕೂಡಲೇ ರಾಜಸ್ಥಾನದಲ್ಲಿ ಚಿಂತನ ಶಿಬಿರ ನಡೆಸಲು ಸಭೆ ನಿರ್ಧರಿಸಿದೆ. ಅಲ್ಲದೆ ಈ ಶಿಬಿರಕ್ಕೂ ಮುನ್ನ ಮತ್ತೊಮ್ಮೆ ಸಭೆ ಸೇರಲು ಸಿಡಬ್ಲ್ಯುಸಿ ನಿರ್ಧರಿಸಿದೆ ಎಂದು ಸಭೆಯ ಬಳಿಕ ಮಾತನಾಡಿದ ಪಕ್ಷದ ವಕ್ತಾರ ರಣದೀಪ್‌ ಸುರ್ಜೇವಾಲಾ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್‌ ಮಾಹಿತಿ ನೀಡಿದರು.

ಭಾನುವಾರದ ಸಭೆಯಲ್ಲಿ ಪಕ್ಷದ ಅಧ್ಯಕ್ಷ ಸ್ಥಾನದ ಚುನಾವಣಾ ದಿನಾಂಕವನ್ನು ಹಿಂದೂಡಿ ಮೂರು ತಿಂಗಳ ಮೊದಲೇ ನಡೆಸುವ ಬಗ್ಗೆ ಘೋಷಣೆ ಮಾಡಲಾಗುವುದು ಎಂಬ ವದಂತಿ ಇತ್ತಾದರೂ, ಅಂಥ ಯಾವುದೇ ನಿರ್ಧಾರ ಹೊರಬಿದ್ದಿಲ್ಲ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್
ಒಂದೇ ಕಾರಲ್ಲಿ ಪ್ರಯಾಣಿಸಿದ ಖರ್ಗೆ, ಡಿಕೆಶಿ: ತೀವ್ರ ರಾಜಕೀಯ ಕುತೂಹಲ