ನಮ್ಮ ಪಕ್ಷಕ್ಕೆ ದ್ರೋಹ ಮಾಡಿದ ಸವದಿ ಸೋಲಬೇಕು. ಮಹೇಶ್ ಕುಮಟಳ್ಳಿ 25 ರಿಂದ 30 ಸಾವಿರ ಮತಗಳ ಅಂತರದಿಂದ ಗೆಲ್ಲಬೇಕು ಎಂದು ಮತದಾರರಲ್ಲಿ ಮನವಿ ಮಾಡಿದ ಯಡಿಯೂರಪ್ಪ
ಅಥಣಿ(ಏ.27): ಜಗದೀಶ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಬಿಜೆಪಿ ಪಕ್ಷದ ಬೆನ್ನಿಗೆ ಚೂರಿ ಹಾಕಿದವರು. ಅವರು ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಗೆಲ್ಲುವುದಿಲ್ಲ. ಲಕ್ಷ್ಮಣ ಸವದಿ ಅವರಿಗೆ ಪಕ್ಷದಲ್ಲಿ ವಿಧಾನ ಪರಿಷತ್ ಸ್ಥಾನ ಇದ್ದರೂ ಕೂಡ ಇಂದು ಅವರು ಪಕ್ಷ ದ್ರೋಹ ಮಾಡಿದ್ದಾರೆ. ಅಥಣಿ ಮತಕ್ಷೇತ್ರದ ಮತದಾನ ಬಾಂಧವರು ಮೇ.10ರಂದು ನಡೆಯುವ ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುಡುಗಿದರು.
ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಪರ ಪ್ರಚಾರಾರ್ಥ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಮತಕ್ಷೇತ್ರದ ಮನೆ ಮನೆಗೆ ತೆರಳಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಸಾಧನೆಯನ್ನು ಮತ್ತು ಮಹೇಶ್ ಕುಮಟಳ್ಳಿ ಶಾಸಕರಾದ ನಂತರ ಅಥಣಿ ಮತ ಕ್ಷೇತ್ರದಲ್ಲಿ ಹೆಚ್ಚಿನ ಅನುದಾನ ತಂದು ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಿಗೆ ತಿಳಿಸಬೇಕು. ನಮ್ಮ ಪಕ್ಷಕ್ಕೆ ದ್ರೋಹ ಮಾಡಿದ ಸವದಿ ಸೋಲಬೇಕು. ಮಹೇಶ್ ಕುಮಟಳ್ಳಿ 25 ರಿಂದ 30 ಸಾವಿರ ಮತಗಳ ಅಂತರದಿಂದ ಗೆಲ್ಲಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.
ಸಚಿವೆ ಜೊಲ್ಲೆಗೆ ನಿಮ್ಮ ಮತದಾನವೆಂದರೇ ಅಭಿವೃದ್ಧಿಗೆ ಮತದಾನ: ಸಂಸದ ಅಣ್ಣಾಸಾಹೇಬ್ ಜೊಲ್ಲೆ
ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಅಥಣಿ ಮತ್ತು ಹುಬ್ಬಳ್ಳಿ ಕ್ಷೇತ್ರಗಳ ಚರ್ಚೆ ಹೆಚ್ಚಾಗಿದೆ. 2018 ರಲ್ಲಿ ಕಾಂಗ್ರೆಸ್ ಪಕ್ಷದಿಂದ 17 ಜನ ಶಾಸಕರು ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷವನ್ನು ಸೇರಿದ್ದರಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂತು. ಈ ಸಂದರ್ಭದಲ್ಲಿ ಅಥಣಿ ಶಾಸಕ ಮಹೇಶ ಕುಮುಟಳ್ಳಿ ಅವರಿಗೂ ಮಂತ್ರಿ ಸ್ಥಾನ ನೀಡಬೇಕಾಗಿತ್ತು. ಆದರೆ, ಪಕ್ಷದ ಕೆಲ ಹಿರಿಯರು ನೀಡಿದ ಸಲಹೆ ಮೇರೆಗೆ ಅವರು ಮಂತ್ರಿ ಸ್ಥಾನವನ್ನು ತ್ಯಾಗ ಮಾಡಿದರು. ನನಗೂ ಕೂಡ ಮಂತ್ರಿಯಾಗುವ ಎಲ್ಲ ಅರ್ಹತೆ ಇದ್ದರೂ ಕೂಡ ಮಂತ್ರಿ ಸ್ಥಾನವನ್ನು ತ್ಯಾಗ ಮಾಡಿ ಮಹೇಶ ಕುಮಟಳ್ಳಿ ಮತ್ತು ನಾನು ಕ್ಷೇತ್ರದ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ತಂದು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ. ಮಹೇಶ್ ಕುಮಟಳ್ಳಿ ನನ್ನಂತೆ ಅವರು ಸ್ಟ್ರಾಂಗ್ ಮಾತನಾಡುವುದಿಲ್ಲ. ಆದರೆ, ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಕ್ಷೇತ್ರದ ಮತದಾರರು ಆಸೆ ಆಮಿಷಗಳನ್ನು ತೋರಿಸುವ ಮತ್ತು ಪಕ್ಷದ್ರೋಹಿಗಳಿಗೆ ಮತ ನೀಡದೆ ಸೌಮ್ಯ ಸ್ವಭಾವದ, ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವ ಮಹೇಶ ಕುಮಟಲ್ಲಿ ಅವರನ್ನು ಮತ್ತೊಮ್ಮೆ ಗೆಲ್ಲಿಸಬೇಕು ಎಂದು ಕೋರಿದರು.
ಪಂಚಮಸಾಲಿ ಲಿಂಗಾಯತ ಮತ್ತು ಅನೇಕ ಒಳಪಂಗಡಗಳಿಗೆ 2ಡಿ ಮೀಸಲಾತಿ ಸಿಗಬೇಕಾದರೆ ಪಂಚಮಸಾಲಿ ಸ್ವಾಮೀಜಿಗಳ ಹೋರಾಟದಿಂದ ದೊರಕಿದೆ. ಹಾಲುಮತದ ಕುರುಬರ ಸಮಾಜಕ್ಕೆ ಎಸ್ಟಿಮೀಸಲಾತಿ ಚಿಂತನೆ ಸರ್ಕಾರ ಮಟ್ಟದಲ್ಲಿ ನಡೆದಿದೆ. ಭಾರತೀಯ ಜನತಾ ಪಕ್ಷದಿಂದ ದೇಶದಲ್ಲಿ ಮತ್ತು ರಾಜ್ಯದಲ್ಲಿ ಉತ್ತಮ ಕೆಲಸಗಳಾಗುತ್ತವೆ. ಆದ್ದರಿಂದ ಮತ್ತೊಮ್ಮೆ ಪಕ್ಷವನ್ನ ಗೆಲ್ಲಿಸಬೇಕು. ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದರೇ ರಾಜ್ಯ ಸರ್ಕಾರ ಈಗ ಮಾಡಿರುವ ಮೀಸಲಾತಿ ಕಿತ್ತುಕೊಳ್ಳುವುದರ ಜೊತೆಗೆ ಅನೇಕ ಮಸೂದೆಗಳನ್ನು ಕಿತ್ತುಕೊಳ್ಳುವ ಸಾಧ್ಯತೆ ಇದೆ. ಅವರ ಗ್ಯಾರಂಟಿ ಕಾರ್ಡ್‌ಗಳನ್ನು ನಂಬಿ ಮೋಸ ಹೋಗಬಾರದು. ಮಾಜಿ ಸಿಎಂ ಸಿದ್ದರಾಮಯ್ಯ ಲಿಂಗಾಯತ ಸಮುದಾಯದವರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಲಿಂಗಾಯತ ಸಮುದಾಯ ಬಾಂಧವರು ಸ್ವಾಭಿಮಾನದಿಂದ ಬಿಜೆಪಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.
ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಅವರಿಗೆ ಬಿಜೆಪಿಯಲ್ಲಿ ಉನ್ನತ ಸ್ಥಾನಮಾನ ನೀಡಿದ್ದರೂ ಕೂಡ ಪಕ್ಷದ ಬೆನ್ನಿಗೆ ಚೂರಿ ಹಾಕಿದ್ದಾರೆ. ಲಕ್ಷ್ಮಣ ಸವದಿ ಸ್ಥಳೀಯ ಶಾಸಕ ಮಹೇಶ್ ಕುಮಟಳ್ಳಿ ಅವರನ್ನು ನಿರ್ಲಕ್ಷ್ಯ ಮಾಡಿ ಅನೇಕ ಕಾಮಗಾರಿಗಳಿಗೆ ಭೂಮಿಪೂಜೆ ಮಾಡಿದ್ದಾರೆ. ಇಂಥವರಿಗೆ ತಕ್ಕ ಪಾಠ ಕಲಿಸಬೇಕು ಎಂದರು.
ಮಾಜಿ ಸಚಿವ ರಮೇಶ ಜಾರಕಿಹೊಳಿ ಮಾತನಾಡಿ, ರಾಜ್ಯದಲ್ಲಿರುವ ಹಾಲುಮತ ಕುರುಬ ಸಮುದಾಯದ ಮತ ಬಾಂಧವರು ಒಂದು ಸತ್ಯವನ್ನು ತಿಳಿದುಕೊಳ್ಳಬೇಕು. ಲಕ್ಷ್ಮಣ ಸವದಿ ಒಬ್ಬ ಸುಳ್ಳುಗಾರ. ಅಷ್ಟೇ ಅಲ್ಲ ಒಬ್ಬ ಮೋಸಗಾರ. ಈತನ ಕಳೆದ 20 ವರ್ಷಗಳ ರಾಜಕೀಯ ಜೀವನದಲ್ಲಿ ಅನೇಕ ರಾಜಕೀಯ ನಾಯಕರಿಗೆ ಮೋಸವಾಗಿದೆ. ಯಡಿಯೂರಪ್ಪನವರಿಗೂ ಮೋಸವಾಗಿದೆ. ಮುಂದಿನ ದಿನಮಾನಗಳಲ್ಲಿ ಸಿದ್ದರಾಮಯ್ಯ ಮತ್ತು ಸತೀಶ ಜಾರಕಿಹೊಳಿಗೂ ಮೋಸವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಗಳಾಗುತ್ತಾರೆ ಎಂಬುವುದು ಕೇವಲ ಭ್ರಮೆ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಆಗಲು ಡಿಕೆಶಿ ಮತ್ತು ಲಕ್ಷ್ಮಣ ಸವದಿ ಬಿಡುವುದಿಲ್ಲ. ಇವರ ಬಣ್ಣದ ಮಾತುಗಳನ್ನು ನಂಬಬೇಡಿ. ಅಥಣಿ ಮತ ಕ್ಷೇತ್ರದಲ್ಲಿ ಕಳೆದ 5 ವರ್ಷಗಳಿಂದ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ ಮಹೇಶ್ ಕುಮಟಳ್ಳಿ ಅವರಿಗೆ ಮತ್ತೊಮ್ಮೆ ಎಲ್ಲರೂ ಆಶೀರ್ವಾದ ಮಾಡಬೇಕು ಎಂದು ಕೋರಿದರು.
ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಮಹೇಶ ಕುಮಟಳ್ಳಿ ಎಲ್ಲರನ್ನು ಸ್ವಾಗತಿಸಿ ಮಾತನಾಡಿ, ಕಳೆದ 5 ವರ್ಷಗಳಲ್ಲಿ .2,741 ಕೋಟಿ ಅನುದಾನ ತರುವ ಮೂಲಕ ಯಾವುದೇ ತಾರತಮ್ಯ ಮಾಡದೆ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ರಮೇಶ ್ಜಅರಕಿಹೊಳಿ ಅವರ ಪ್ರಯತ್ನದಿಂದ ಅಮ್ಮಾಜಿಶ್ವರಿ ಯಾತ ನೀರಾವರಿ ಯೋಜನೆ ಮಂಜೂರಾಗಿದ್ದು, ನನಗೆ ಇನ್ನೊಂದು ಅವಕಾಶವನ್ನು ನೀಡಿದರೇ ಇನ್ನುಳಿದ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸುವುದರ ಜೊತೆಗೆ ಅಥಣಿ ಮತಕ್ಷೇತ್ರವನ್ನು ಒಂದು ಮಾದರಿ ಕ್ಷೇತ್ರವನ್ನಾಗಿ ರೂಪಿಸುತ್ತೇನೆ. ತಾವೆಲ್ಲರೂ ತಮ್ಮ ಅತ್ಯಮೂಲ್ಯವಾದ ಮತವನ್ನು ಭಾರತೀಯ ಜನತಾ ಪಕ್ಷಕ್ಕೆ ನೀಡಬೇಕು ಎಂದು ಮನವಿ ಮಾಡಿದರು.
ಈ ವೇಳೆ ಇತ್ತೀಚಿಗೆ ಕಾಂಗ್ರೆಸ್ ಪಕ್ಷದಲ್ಲಿ ಲಕ್ಷ್ಮಣ ಸವದಿ ಅವರೊಂದಿಗೆ ಕಾಣಿಸಿಕೊಂಡಿದ್ದ ಪಂಚಮಸಾಲಿ ಸಮುದಾಯದ ಯುವ ನಾಯಕ ಹಾಗೂ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಧರಪ್ಪ ಠಕ್ಕಣ್ಣವರ, ಸತ್ಯಪ್ಪ ಭಾಗೆನ್ನವರ, ನಿಶಾಂತ ದಳವಾಯಿ, ತಮ್ಮಣ್ಣ ಪೂಜಾರಿ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ವಿಜಯ ಕುಮಾರ ಕಡಗಿನೂರ, ನಿಂಗಪ್ಪ ನಂದೇಶ್ವರ, ಸಿದ್ದಪ್ಪ ಮುದುಕಣ್ಣವರ ಡಾ.ರವಿ ಸಂಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಲಿಂಗಾಯತರಿಗೆ ಕಳಂಕ ತಂದ ಸಿಎಂ ಬೊಮ್ಮಾಯಿ: ಸಿದ್ದರಾಮಯ್ಯ ಕಿಡಿ
ಭಾರತೀಯ ಜನತಾ ಪಕ್ಷದ ಮಾಡಿದ ಸಾಧನೆ ಮತ್ತು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ದೂರ ದೃಷ್ಟಿಯಿಂದ ದೇಶದ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ನಡೆಸುತ್ತಿದೆ. ಇತ್ತೀಚಿಗೆ ಉತ್ತರ ಪ್ರದೇಶದಲ್ಲಿ ನಡೆದ ಚುನಾವಣೆಯಲ್ಲಿ 400 ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷ ಕೇವಲ 6 ಸ್ಥಾನಗಳನ್ನು ಗೆದ್ದಿದೆ. ರಾಹುಲ… ಗಾಂಧಿ ಪ್ರಧಾನಿ ಮೋದಿ ಅವರ ಸಮಾನ ಸ್ಥಾನ ಹೊಂದಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷ ಅದೊಂದು ಮುಳುಗುತ್ತಿರುವ ಹಡಗು. ರಾಜ್ಯ ವಿಧಾನಸಭಾ ಈ ಚುನಾವಣೆಯಲ್ಲಿ ಬಿಜೆಪಿ ಗೆಲುವು ಖಚಿತ. ರಾಜ್ಯದಲ್ಲಿ ಕನಿಷ್ಠ 130ಕ್ಕೂ ಅಧಿಕ ಸ್ಥಾನಗಳನ್ನು ಬಿಜೆಪಿ ಪಕ್ಷ ಗೆಲ್ಲುತ್ತದೆ ಅಂತ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಒಂದೇ ವೇದಿಕೆಯಲ್ಲಿ ಬಿಎಸ್‌ವೈ-ಯತ್ನಾಳ
ಒಂದೇ ಪಕ್ಷದವರಾಗಿದ್ದರು ಕೂಡ ಹಾವು ಮೂಗುಸಿಯಂತೆ ಕಚ್ಚಾಡುತ್ತಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಮತದಾರರಲ್ಲಿ ಕುತೂಹಲ ಮೂಡಿಸಿದರು.
ಸುಡುಬಿಸಿಲಿನಲ್ಲಿಯೇ ಕುಳಿತು ಭಾಷಣ ಆಲಿಸಿದ ಜನರು
ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮುಂಭಾಗದಲ್ಲಿ ಆಯೋಜಿಸಲಾಗಿದ್ದ ಪ್ರಚಾರ ಸಭೆಯಲ್ಲಿ ಸಾವಿರಾರು ಕಾರ್ಯಕರ್ತರು ಸುಡುಬಿಸಲಿನಲ್ಲಿಯೇ ಕುಳಿತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಭಾಷಣ ಆಲಿಸಿದರು.