
ಬೆಂಗಳೂರು(ಜೂ.25): ಚುನಾವಣೆಗೂ ಮುನ್ನ ನೀಡಿದ ಗ್ಯಾರಂಟಿಗಳನ್ನು ಕಾಂಗ್ರೆಸ್ ಸರ್ಕಾರ ವಿಧಾನಮಂಡಲ ಅಧಿವೇಶನಕ್ಕೂ ಮುನ್ನ ಈಡೇರಿಸದಿದ್ದರೆ, ರಾಜ್ಯಪಾಲರ ಭಾಷಣ ಮುಗಿದ ಮರು ದಿನ (ಜು.4) ನಗರದ ಗಾಂಧಿ ಪ್ರತಿಮೆ ಎದುರು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.
ಶನಿವಾರ ಬೆಂಗಳೂರಿನ ದಕ್ಷಿಣ ಜಿಲ್ಲೆ ವ್ಯಾಪ್ತಿ ಪುಟ್ಟೇನಹಳ್ಳಿಯಲ್ಲಿ ಕೇಂದ್ರ ಸರ್ಕಾರ ಒಂಭತ್ತು ವರ್ಷದ ಪೂರೈಸಿದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನೀಡಿದ ಉಚಿತ ಗ್ಯಾರಂಟಿಗಳಿಂದಾಗಿ ಬಿಜೆಪಿಗೆ ಹಿನ್ನಡೆಯಾಗಿದೆ. ಕಾಂಗ್ರೆಸ್ ನೀಡಿರುವ ಪೊಳ್ಳು ಭರವಸೆ ಮೇಲೆ ಹೋರಾಟ ಮಾಡಬೇಕಿದೆ. ಚುನಾವಣೆಗೂ ಮೊದಲು ನೀಡಿದ ಭರವಸೆಗಳನ್ನು ಅಧಿವೇಶನಕ್ಕೂ ಮೊದಲೇ ಜಾರಿಗೊಳಿಸಬೇಕು. ಒಂದು ವೇಳೆ ಅಧಿವೇಶನಕ್ಕೂ ಮೊದಲೇ ಅನುಷ್ಠಾನಗೊಳಿಸದಿದ್ದರೆ ರಾಜ್ಯಪಾಲರ ಭಾಷಣ ಮುಗಿದ ಮರುದಿನ ಗಾಂಧಿ ಪ್ರತಿಮೆ ಎದುರು ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಹೇಳಿದರು.
ಕೇಂದ್ರಕ್ಕೆ ಯಡಿಯೂರಪ್ಪ ಪತ್ರ ಬರೆದು ಅಕ್ಕಿ ಕೊಡಿಸಲಿ: ಸಚಿವ ಪ್ರಿಯಾಂಕ್ ಖರ್ಗೆ
ಗ್ಯಾರಂಟಿ ಎಫೆಕ್ಟ್:
ಕಾಂಗ್ರೆಸ್ ಸರ್ಕಾರದ ಸುಳ್ಳು ಭರವಸೆಗಳ ವಿರುದ್ಧ ಪಕ್ಷದ ಶಾಸಕರು ಸದನದೊಳಗೆ ಹೋರಾಟ ನಡೆಸಿದರೆ, ಪಕ್ಷದ ಕಾರ್ಯಕರ್ತರು ಸದನದ ಹೊರಗೆ ಪ್ರತಿಭಟನೆ ನಡೆಸಲಿದ್ದಾರೆ. ಚುನಾವಣೆಯಲ್ಲಿ ಬಿಜೆಪಿ ಸೋಲಾಗಿರಬಹುದು. ಆದರೆ ಪಕ್ಷದ ಕಾರ್ಯಕರ್ತರು ಎದೆಗುಂದ ಬೇಕಾಗಿಲ್ಲ. ಗ್ಯಾರಂಟಿ ಕಾರ್ಡನ್ನು ಮನೆಮನೆಗೆ ಹಂಚಿದ್ದರಿಂದ ಬಿಜೆಪಿಗೆ ಸ್ಪಷ್ಟಬಹುಮತ ಸಿಗಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಹಿ ಮಾಡಿ ಗ್ಯಾರಂಟಿ ಕಾರ್ಡ್ ಕೊಟ್ಟಿದ್ದರಿಂದ ಬಿಜೆಪಿ ಹೆಚ್ಚಿನ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ ಎಂದರು.
ಮತ್ತೆ ರಾಜ್ಯ ಪ್ರವಾಸ:
ಇದೇ ವೇಳೆ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಇಡೀ ರಾಜ್ಯ ಪ್ರವಾಸ ಕೈಗೊಳ್ಳುತ್ತೇನೆ. ನಾನು 81 ವರ್ಷ ತಲುಪಿದ್ದರೂ ಸುಮ್ಮನೆ ಕೂರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
15 ಕೆಜಿ ಅಕ್ಕಿ ನೀಡಿ:
ಸಿದ್ದರಾಮಯ್ಯ ಉಚಿತವಾಗಿ 10 ಕೆಜಿ ಅಕ್ಕಿ ನೀಡುವುದಾಗಿ ಹೇಳಿದ್ದಾರೆ. ಕೇಂದ್ರ ಸರ್ಕಾರವು ಉಚಿತವಾಗಿ ಐದು ಕೆಜಿ ನೀಡುತ್ತಿದ್ದು, ಅದನ್ನು ಸೇರಿಸಿ 10 ಕೆಜಿ ಅಕ್ಕಿ ನೀಡುವುದಲ್ಲ, ಕೇಂದ್ರದ ಐದು ಕೆಜಿ ಅಕ್ಕಿ ಹೊರತುಪಡಿಸಿ 10 ಕೆಜಿ ಪ್ರತ್ಯೇಕವಾಗಿ ನೀಡಬೇಕು. ಒಟ್ಟು 15 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಬೇಕು ಎಂದು ಆಗ್ರಹಿಸಿದರು.
ಚುನಾವಣೆಗೆ ಸಜ್ಜಾಗಿ:
ಮುಂದಿನ ದಿನದಲ್ಲಿ ಬಿಬಿಎಂಪಿ ಚುನಾವಣೆ, ಲೋಕಸಭೆ ಚುನಾವಣೆ ಬರಲಿದೆ. ಆ ಚುನಾವಣೆಯಲ್ಲಿ ಪಕ್ಷವು ಸ್ಪಷ್ಟಬಹುಮತ ಪಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಕಾರ್ಯಕರ್ತರು, ನಾಯಕರು ಕೆಲಸ ಮಾಡಬೇಕಿದೆ. ಅಲ್ಲದೇ, ಕೇಂದ್ರ ಸರ್ಕಾರದ ಸಾಧನೆಗಳನ್ನು ಜನತೆಗೆ ತಿಳಿಸುವ ಕೆಲಸ ಮಾಡಬೇಕು. ಪ್ರತಿಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಚರ್ಚೆ ಮಾಡುತ್ತಿದ್ದಾರೆ. ಆದರೆ, ಅದು ಸಾಧ್ಯವಿಲ್ಲ. ಪ್ರಧಾನಿಗಳು ವಿಶ್ವದ ಖ್ಯಾತಿ ಪಡೆದಿದ್ದಾರೆ. ಅಮೆರಿಕದ ಸಂಸತ್‌ನಲ್ಲಿ ಭಾಷಣ ಮಾಡಿದ್ದಾರೆ. ಪ್ರತಿಪಕ್ಷಗಳು ಎಷ್ಟೇ ತಂತ್ರಗಳನ್ನು ಮಾಡಿದರೂ ಇಡೀ ದೇಶದಲ್ಲಿ 300 ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿ ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡುತ್ತೇವೆ ಎಂದು ತಿಳಿಸಿದರು.
ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ತುಂಬಾ ದಿನ ಉಳಿಯಲ್ಲ: ಯಡಿಯೂರಪ್ಪ
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಗೋವಿಂದ ಕಾರಜೋಳ, ಸಂಸದ ತೇಜಸ್ವಿ ಸೂರ್ಯ, ವಿಧಾನಪರಿಷತ್ ಸದಸ್ಯ ರವಿಕುಮಾರ್, ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಅಧ್ಯಕ್ಷ ಎನ್.ಆರ್.ರಮೇಶ್ ಇತರರು ಉಪಸ್ಥಿತರಿದ್ದರು.
ಗ್ಯಾರಂಟಿಯಿಂದಾಗಿ ಹಿನ್ನಡೆ
ಕಾಂಗ್ರೆಸ್ ನೀಡಿದ ಉಚಿತ ಗ್ಯಾರಂಟಿಗಳಿಂದಾಗಿ ಬಿಜೆಪಿಗೆ ಹಿನ್ನಡೆಯಾಗಿದೆ. ಕಾಂಗ್ರೆಸ್ ನೀಡಿರುವ ಪೊಳ್ಳು ಭರವಸೆ ಮೇಲೆ ಹೋರಾಟ ಮಾಡಬೇಕಿದೆ. ಚುನಾವಣೆಗೂ ಮೊದಲು ನೀಡಿದ ಭರವಸೆಗಳನ್ನು ಅಧಿವೇಶನಕ್ಕೂ ಮೊದಲೇ ಜಾರಿಗೊಳಿಸಬೇಕು ಅಂತ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.