ರಾಜ್ಯದಲ್ಲಿ ಭೀಕರ ಬರಗಾಲ ಬಂದಿರುವುದರಿಂದ ಎಲ್ಲಾ ಶಾಸಕರಿಗೂ ಬಿಪಿ, ಶುಗರ್ ಜಾಸ್ತಿಯಾಗಿದೆ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.
ಹೊನ್ನಾಳಿ (ಅ.21): ರಾಜ್ಯದಲ್ಲಿ ಭೀಕರ ಬರಗಾಲ ಬಂದಿರುವುದರಿಂದ ಎಲ್ಲಾ ಶಾಸಕರಿಗೂ ಬಿಪಿ, ಶುಗರ್ ಜಾಸ್ತಿಯಾಗಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಕಸಾಪ ವತಿಯಿಂದ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ 125ಕ್ಕೆ 125 ಅಂಕಗಳನ್ನು ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನಲ್ಲಿ 44 ಮತ್ತು ನ್ಯಾಮತಿ ತಾಲೂಕಿನಲ್ಲಿ 32 ಸೇರಿ ಒಟ್ಟು 76 ವಿದ್ಯಾರ್ಥಿಗಳು ಕನ್ನಡ ಭಾಷೆಯಲ್ಲಿ 125 ಅಂಕಗಳನ್ನು ಪಡೆದು ಕೀರ್ತಿ ತಂದಿರುವುದು ಹೆಮ್ಮೆಯಾಗಿದೆ ಎಂದರು.
ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಸಾಧನೆ ಎಂಬುವುದು ಸಾಧಕರ ಸ್ವತ್ತೇ ವಿನಃ ಸೋಮಾರಿಗಳ ಸೊತ್ತಲ್ಲ ಎಂದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಉತ್ತಮ ಕೆಲಸ ಮಾಡುತ್ತಿದೆ ಎಂದ ಅವರು, ಶಿಕ್ಷಣ ಎಂಬ ಮೂರಕ್ಷರ ವಿದ್ಯಾರ್ಥಿಗಳ ಜೀವನದಲ್ಲಿ ಅತ್ಯಮೂಲ್ಯವಾದದ್ದು. ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು, ಶಿಕ್ಷಣದ ಕಡೆ ಹೆಚ್ಚಿನ ಒತ್ತು ನೀಡಬೇಕೆಂದು ಹೇಳಿದರು. ಆಸ್ತಿ, ಅಂತಸ್ತು ಗಳಿಸಿದರೆ ಅದು ಒಂದಲ್ಲ ಒಂದು ದಿನ ಕಳೆದುಹೋಗಬಹುದು, ಆದರೆ ಶಿಕ್ಷಣದಿಂದ ಸಂಪಾದಿಸಿದ ಜ್ಞಾನವನ್ನು ಯಾರೂ ಸಹ ಕದಿಯಲು ಬರುವುದಿಲ್ಲ ಎಂದರು. ಶಿಕ್ಷಣದಿಂದ ಜ್ಞಾನ ಸಂಪಾದಿಸಿದವರು ಅದನ್ನು ಮತ್ತೊಬ್ಬರಿಗೆ ದಾರೆ ಎರೆಯುವ ಕೆಲಸ ಮಾಡಬೇಕು ಎಂದರು.
ಕಲಾವಿದರಿಂದಲೇ ರಂಗ ಚಳುವಳಿ ಬೆಳೆಸುವ ಕೆಲಸವಾಗಬೇಕು: ನಟ ಮಂಡ್ಯ ರಮೇಶ್
ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಬಿ. ವಾಮದೇವಪ್ಪ ಮಾತನಾಡಿ, ಸಂಸ್ಕೃತ ಭಾಷೆಯಲ್ಲಿ ಸುಲಭವಾಗಿ ಅಂಕಗಳಿಸುತ್ತಾರೆ, ಆದರೆ ಕನ್ನಡದಲ್ಲಿ ಈ ಬಾರಿ ಇಷ್ಟೊಂದು ಜನ ವಿದ್ಯಾರ್ಥಿಗಳು 125ಕ್ಕೆ 125 ಅಂಕ ಪಡೆದುಕೊಂಡಿರುವುದು ಹೆಮ್ಮೆ. ಅವರನ್ನು ಅಭಿನಂದಿಸುವ ಕೆಲಸವನ್ನು ಹೊನ್ನಾಳಿ ಕಸಾಪ ಘಟಕ ಮಾಡುತ್ತಿರುವುದು ಶ್ಲಾಘನೀಯ ಎಂದರು. ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ. ಧನಂಜಯ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಶಾಸನಬದ್ಧ ಸಂಸ್ಥೆಯಾಗಿದ್ದು, ಇಡೀ ದೇಶಕ್ಕೆ ಮಾದರಿಯಾಗಿದೆ ಎಂದರು. ಪ್ರತಿಭಾ ಪುರಸ್ಕಾರ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಮಾಡುತ್ತದೆ. ದತ್ತಿ ಕಾರ್ಯಕ್ರಮ, ಸಮ್ಮೇಳನಗಳಿಗಿಂತ ಈ ಕಾರ್ಯಕ್ರಮ ಮಾದರಿ ಎಂದರು.
ಬಿಇಒ ನಂಜರಾಜ, ಕಸಾಪ ತಾಲೂಕು ಘಟಕದ ಅಧ್ಯಕ್ಷ ಜಿ. ಮುರಿಗೆಪ್ಪಗೌಡ ಅವರು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಸಮಾರಂಭದಲ್ಲಿ ಜಿಲ್ಲಾ ಕಸಾಪ ಪದಾಧಿಕಾರಿಗಳಾದ ರೇವಣಸಿದ್ದಪ್ಪ ಅಂಗಡಿ, ಜಿಗಳಿ ಪ್ರಕಾಶ್, ಪ್ರೊ. ದೇವರಾಜ್ ಸಿ. ಪಾಟೀಲ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಆರ್. ಪಾಟೀಲ್, ಎನ್.ಎಚ್. ಗೋವಿಂದಪ್ಪ, ಕೆ.ಪಿ. ಜಗನ್ನಾಥ್, ಬಸವರಾಜಪ್ಪ ಉಪಸ್ಥಿತರಿದ್ದರು. ಕಸಾಪ ನಿರ್ದೇಶಕರಾದ ಎನ್.ಕೆ. ಆಂಜನೇಯ, ಎ.ಕೆ. ಚನ್ನೇಶ್ವರ್, ಕೆ. ಶೇಖರಪ್ಪ, ಕಸಾಪ ಖಜಾಂಚಿ ನಿಜಲಿಂಗಪ್ಪ ,ಶಾರದ ಕಣಗೊಟಗಿ ಕಾರ್ಯಕ್ರಮ ನಿರ್ವಹಣೆ ಮಾಡಿದರು.
ರಾಜ್ಯದ ಹಳ್ಳಿಗಳಿಂದ ಮಣ್ಣು ಸಂಗ್ರಹಿಸಿ ದಿಲ್ಲಿ ಕರ್ತವ್ಯ ಪಥ್‍ನಲ್ಲಿ ಉದ್ಯಾನವನ: ಸಂಸದ ರಾಘವೇಂದ್ರ
ಸರ್ಕಾರಿ ಶಾಲೆಗಳಲ್ಲಿ ಫಲಿತಾಂಶ ಕುಂಠಿತ ಏಕೆ?: ರಾಜ್ಯದ ಬಹುತೇಕ ಎಲ್ಲಾ ಖಾಸಗಿ ಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಈ ಫಲಿತಾಂಶ ಏಕೆ ಕುಂಠಿತವಾಗುತ್ತಿದೆ ಎಂಬ ಬಗ್ಗೆ ಸರ್ಕಾರಿ ಶಾಲಾ ಶಿಕ್ಷಕರು ಮತ್ತು ಅಧಿಕಾರಿಗಳು ಚಿಂತನೆ ನಡೆಸಬೇಕು. ಉತ್ತಮ ಫಲಿತಾಂಶ ತರುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಶಾಂತನಗೌಡ ಸೂಚಿಸಿದರು. ಇದೇ ಸಂದರ್ಭದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಅನುದಾನ ತರುವ ನಿಟ್ಟಿನಲ್ಲಿ ಪ್ರಯತ್ನಪಡುವುದಾಗಿಯೂ ಹೇಳಿದರು.