ಕಾಮಗಾರಿಗೆ ತಡೆ ಅಭಿವೃದ್ಧಿ ಹಿನ್ನಡೆ: ಸಿ.ಟಿ.ರವಿ ಆರೋಪ

By Kannadaprabha News  |  First Published May 29, 2023, 11:22 AM IST

ಹಿಂದಿನ ಸರ್ಕಾರದ ಎಲ್ಲಾ ಕಾಮಗಾರಿ ಮತ್ತು ಯೋಜನೆಗಳನ್ನು ತಡೆ ಹಿಡಿಯಲಾಗಿದ್ದು, ಇದರಿಂದಾಗಿ ಜಿಲ್ಲೆಯ ಅಭಿವೃದ್ಧಿಗೆ ಹಿನ್ನಡೆ ಉಂಟಾಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆರೋಪಿಸಿದ್ದಾರೆ. 


ಚಿಕ್ಕಮಗಳೂರು (ಮೇ.29): ಹಿಂದಿನ ಸರ್ಕಾರದ ಎಲ್ಲಾ ಕಾಮಗಾರಿ ಮತ್ತು ಯೋಜನೆಗಳನ್ನು ತಡೆ ಹಿಡಿಯಲಾಗಿದ್ದು, ಇದರಿಂದಾಗಿ ಜಿಲ್ಲೆಯ ಅಭಿವೃದ್ಧಿಗೆ ಹಿನ್ನಡೆ ಉಂಟಾಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆರೋಪಿಸಿದ್ದಾರೆ. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗಿದ್ದ ಅಧಿಕಾರ ಉಪಯೋಗಿಸಿಕೊಂಡು ಕಷ್ಟಪಟ್ಟು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರಕ್ಕೆ 5300 ಕೋಟಿ ರು. ಅನುದಾನ ಮಂಜೂರು ಮಾಡಿಸಲಾಗಿತ್ತು. ಆದರೆ, ಒಂದೇ ಒಂದು ಆದೇಶದಲ್ಲಿ ಎಲ್ಲಾ ಕೆಲಸಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಕೆಲವು ಕೆಲಸಗಳು ಮುಕ್ತಾಯ ಹಂತಕ್ಕೆ, ಮತ್ತೆ ಕೆಲವು ಅರ್ಧ ಆಗಿವೆ. ಇನ್ನು ಕೆಲವು ಆರಂಭವಾಗಬೇಕಾಗಿದೆ, ಪೇಮೆಂಟ್‌ ಬರುತ್ತಿಲ್ಲ. ಚಿಕ್ಕಮಗಳೂರು ಮಲೆನಾಡು ಜಿಲ್ಲೆ ಅಗಿದ್ದರಿಂದ ಮಳೆಗಾಲದಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕಷ್ಟವಾಗಲಿದೆ. ಅದ್ದರಿಂದ ಕಾಮಗಾರಿಗಳನ್ನು ಕೂಡಲೇ ಪುನಾರಂಭಿಸಬೇಕು ಎಂದರು. ನಾವು ಒಳ್ಳೆಯ ಕೆಲಸ ಮಾಡಿದರೂ ಜನರ ವಿಶ್ವಾಸಗಳಿಸುವಲ್ಲಿ ವಿಫಲರಾಗಿದ್ದೇವೆ. ಹೊಸ ಕಾಮಗಾರಿ ಮಂಜೂರು ಮಾಡಿಸುವುದು ಮತ್ತು ಹಳೆ ಕಾಮಗಾರಿ ರದ್ದಾಗದಂತೆ ನೋಡಿಕೊಳ್ಳುವ ಜವಬ್ದಾರಿ ಅವರ ಮೇಲಿದೆ. 

Tap to resize

Latest Videos

undefined

ಚುನಾವಣಾ ಭರವಸೆ ಈಡೇರಿಸಲು ಸರ್ಕಾರ ಬದ್ಧ: ಶಾಸಕ ಪ್ರದೀಪ್‌ ಈಶ್ವರ್‌

ಹಳೆ ಕಾಮಗಾರಿ ಪೂರ್ಣಗೊಳಿಸಿ, ಮುಂದಿನ 5 ವರ್ಷದಲ್ಲಿ ರಿಪೋರ್ಚ್‌ ಕಾರ್ಡ್‌ ತೋರಿಸಿ ಎಂದ ಅವರು ಇದು, ಎಚ್ಚರಿಸುವುದಲ್ಲ ನೆನಪಿಸುವುದು ಎಂದು ಹೇಳಿದರು. ಸರ್ಕಾರ ಯಾವುದೇ ಇರಲಿ, ಅದೊಂದು ಸಂವಿಧಾನದ ಆಶಯದಂತೆ ಚುನಾಯಿತ ಜನತಾ ಸರ್ಕಾರ ಆಗಿರುತ್ತದೆ. ಸರ್ಕಾರ ನಡೆಸುವವರು ಜನರ ತೆರಿಗೆ ಹಣದಲ್ಲಿ ಜನರ ಕಲ್ಯಾಣಕ್ಕಾಗಿಯೇ ಅಭಿವೃದ್ಧಿ ಕಾರ್ಯಗಳನ್ನು ಕಾನೂನಿನ ಅಡಿಯಲ್ಲಿ ನಿರ್ವಹಿಸುವುದು ಚುನಾಯಿತ ಸರ್ಕಾರದ ಕರ್ತವ್ಯ ಆಗಿರುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.

ಜಿಲ್ಲೆ ಶಾಸಕರುಗಳಿಗೆ ಬಹಿರಂಗ ಪತ್ರ: ಸರ್ಕಾರ ಬದಲಾವಣೆ ಆದರೆ ಚುನಾಯಿತ ಪ್ರತಿನಿಧಿಗಳು, ಪಕ್ಷಗಳು ಬದಲಾಗುತ್ತವೆ ಹೊರತು ಆಡಳಿತ ಪಕ್ಷದ ಮೂಗಿನ ನೇರಕ್ಕೆ ಪೂರ್ಣ ಕಾನೂನುಗಳು ಮತ್ತು ಮೂಲಭೂತ ಸೌಕರ್ಯದಡಿ ನಡೆಯುವ ಅಭಿವೃದ್ಧಿ ಕಾಮಗಾರಿಗಳು ಬದಲಾಗುವುದಿಲ್ಲ, ಬದಲಾಗಲೂಬಾರದು ಎಂದು ಬಹಿರಂಗ ಪತ್ರದಲ್ಲಿ ತಿಳಿಸಿದ್ದಾರೆ. ಮೆಡಿಕಲ್‌ ಕಾಲೇಜು ಕಟ್ಟಡ ಕಾಮಗಾರಿ ವೇಗಗತಿಯಲ್ಲಿ ನಡೆಯುತ್ತಿದ್ದು, ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕಿದೆ. ಚಿಕ್ಕಮಗಳೂರಿನಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ಕಾಮಗಾರಿ ಅತ್ಯಂತ ವೇಗಗತಿಯಲ್ಲಿ ಸಾಗುತ್ತಿದ್ದು, ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳಿಸಬೇಕಿದೆ. 

ಭದ್ರಾ ನದಿ ಗೊಂಧೀ ಯೋಜನೆಯ ಮೂಲಕ ಜಿಲ್ಲೆಯ ತರೀಕೆರೆ, ಕಡೂರು ಹಾಗೂ ಚಿಕ್ಕಮಗಳೂರು ತಾಲೂಕಿನ ಕೆರೆಗಳನ್ನು ತುಂಬಿಸುವ ಮೊದಲನೇ ಹಂತದ ಕಾಮಗಾರಿ ಪ್ರಾರಂಭವಾಗಿದ್ದು, ಎರಡನೇ ಹಂತದ ಕಾಮಗಾರಿಗೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದ್ದು ಕಾಮಗಾರಿಗಳನ್ನು ಪೂರ್ಣಗೊಳಿಸಬೇಕಿದೆ. ಚಿಕ್ಕಮಗಳೂರಿನಲ್ಲಿ ನಾನು ಶಾಸಕನಾಗಿದ್ದಾಗ ರಾಜಧರ್ಮವನ್ನು ಪಾಲಿಸಿ ಕೆಲಸವನ್ನು ಮಾಡಿದ್ದೇನೆ. ಚುನಾವಣೆಯಲ್ಲಿ ವಿಭಿನ್ನ ಕಾರಣಗಳಿಗಾಗಿ ವೈಮನಸ್ಸು ಇದ್ದರೂ, ಅದನ್ನು ಅಲ್ಲಿಗೆ ಬಿಟ್ಟು ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಕಾರ್ಯ ಮಾಡಿದ್ದೇನೆ. 

ಆದರೆ, ನಿಮ್ಮ ಪಕ್ಷದ ಕೆಲವರು ಚಿಕ್ಕಮಗಳೂರಿನಲ್ಲಿ ಸುಳ್ಳು ಮೊಕದ್ದಮೆ ದಾಖಲಿಸಿ ಅಮಾಯಕರನ್ನು ಜೈಲಿಗೆ ಕಳುಹಿಸಿ ದ್ವೇಷ ರಾಜಕಾರಣ ಮಾಡುತ್ತಿರುವುದು ವಿಪರ್ಯಾಸ. ರಾಜಧರ್ಮ ಎಲ್ಲರಲ್ಲೂ ಇರಲಿ, ದ್ವೇಷ ರಾಜಕಾರಣವನ್ನು ಬಿಟ್ಟು ಅಭಿವೃದ್ಧಿ ರಾಜಕಾರಣ ಮಾಡುವುದು ನಮ್ಮ ನಿಮ್ಮೆಲ್ಲರ ಆದ್ಯತೆಯಾಗಿರಲಿ. ಅಭಿವೃದ್ಧಿಯ ಕಡೆ ಗಮನ ನೀಡಿ, ಜಿಲ್ಲೆಯ ಅಭಿವೃದ್ಧಿಗಾಗಿ ಒಳ್ಳೆಯ ಕಾರ್ಯಕ್ಕೆ ಸದಾ ಬೆಂಬಲವಿರುತ್ತದೆ ಎಂದು ಹೇಳಿದ್ದಾರೆ.

ಕನಿಷ್ಠ 20 ಎಂಪಿ ಸೀಟು: ಸಚಿವರಿಗೆ ಸಿದ್ದರಾಮಯ್ಯ ಗುರಿ

ಪ್ರಾದೇಶಿಕ ನ್ಯಾಯ ಕೊಟ್ಟಿಲ್ಲ: ಸಚಿವ ಸಂಪುಟದ ರಚನೆಯಲ್ಲಿ ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಗೆ ರಾಜ್ಯ ಸರ್ಕಾರ ಪ್ರಾದೇಶಿಕ ನ್ಯಾಯ ಕೊಟ್ಟಿಲ್ಲ. ಹಿಂದೆ ಬಿಜೆಪಿ ಸರ್ಕಾರಕ್ಕೆ ಬಹುಮತ ಇರಲಿಲ್ಲ, ಬೇರೆಯವರಿಗೆ ಕರೆದುಕೊಂಡು ಬಂದಿದ್ದರಿಂದ ಅವರಿಗೆ ಅವಕಾಶ ನೀಡಬೇಕಾಯಿತು. ಕಾಂಗ್ರೆಸ್‌ಗೆ ಬಹುಮತ ಸರ್ಕಾರ ರಚನೆಗೆ ಅವಕಾಶ ನೀಡಿದ್ದಾರೆ. ನಮ್ಮ ಜಿಲ್ಲೆಗೆ ಸಚಿವ ಸ್ಥಾನ ಸಿಗದೆ ಇರುವುದು ನಮ್ಮ ಜಿಲ್ಲೆಯ ಜನರಿಗೆ ನಿರಾಶೆಯಾಗಿದೆ. ರಾಜ್ಯದ ಹಲವು ಜಿಲ್ಲೆಯ ಜನರಿಗೂ ನಿರಾಶೆಯಾಗಿದೆ. ಕಾಂಗ್ರೆಸ್‌ ಸರ್ಕಾರ 2013ರಲ್ಲಿ ಮೆಡಿಕಲ್‌ ಕಾಲೇಜಿಗೆ ಹಣ ಕೊಡದೆ ಅನ್ಯಾಯ ಮಾಡಿತ್ತು. ಹಾಗಾಗಿ ದೊಡ್ಡ ಮಟ್ಟದ ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದ ಅವರು, ಕಾಂಗ್ರೆಸ್‌ ಪಕ್ಷದಿಂದ ಅಭಿವೃದ್ಧಿ, ರಾಜಕೀಯವಾಗಿ ನ್ಯಾಯ ಕೊಡಲು ಆಗಿಲ್ಲ. ಇವರಿಗೆ ವೋಟ್‌ ಕೊಟ್ಟು ತಪ್ಪು ಮಾಡಿದ್ವಾ ಎಂಬುವ ಕಾಲ ದೂರ ಇಲ್ಲ ಎಂದು ಹೇಳಿದರು.

click me!