ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ನಾಯಕರೇ ತಮ್ಮ ಅಭ್ಯರ್ಥಿಯನ್ನು ಸೋಲಿಸ್ತಾರೆ: ಹರಿಪ್ರಸಾದ್
ಶಿರಸಿ(ಜು.22): ಇಡಿ ಬಿಜೆಪಿಯ ಕೈಗೊಂಬೆಯಾಗಿದ್ದು, ಚುನಾವಣೆ ಸಮೀಪಿಸಿದಾಗ ಇಡಿ ಬಿಜೆಪಿಗೆ ಎಲೆಕ್ಷನ್ ಡಿಪಾರ್ಟ್‌ಮೆಂಟ್ ಆಗುತ್ತದೆ. ಭ್ರಷ್ಟಾಚಾರ ಮಾಡಿ ಬಿಜೆಪಿಗೆ ಹೋದಲ್ಲಿ ಇಡಿ ವಾಶಿಂಗ್ ಮಶಿನ್ ನಂತೆ ಕೆಲಸ ಮಾಡುತ್ತದೆ. ಇಡಿಯಿಂದ ಭ್ರಷ್ಟರಿಗೆ ಕ್ಲೀನ್ ಚೀಟ್ ನೀಡಲಾಗುತ್ತದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ವ್ಯಂಗ್ಯವಾಡಿದ್ದಾರೆ.
ಇಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದಲ್ಲಿ ಇಡಿ ದಾಳಿ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿದ ಬಳಿಕ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹರಿಪ್ರಸಾದ್, 2012ರಲ್ಲಿ ಸುಬ್ರಹ್ಮಣ್ಯ ಸ್ವಾಮಿ ಅವರು ನ್ಯಾಶನಲ್ ಹೆರಾಲ್ಡ್ ವಿರುದ್ಧ ಖಾಸಗಿ ದೂರು ದಾಖಲಿಸಿದ್ದರು. 90 ಕೋಟಿ ರೂ. ಅಕ್ರಮ ಹಣ ವರ್ಗಾವಣೆಯಾಗಿದೆ ಎಂದು ಆರೋಪಿಸಲಾಗಿದ್ದು, 2017ರಲ್ಲಿ ಅವರ ವಾದ ತಿರಸ್ಕಾರವಾಗಿತ್ತು. ಆದರೆ, ಈಗ ಪುನಃ ರಾಜಕೀಯ ಕಾರಣಕ್ಕಾಗಿ ಅದನ್ನು ಕೈಗೆತ್ತಿಕೊಂಡು ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರನ್ನು ವಿಚಾರಣೆ ಮಾಡಲಾಗುತ್ತಿದ್ದು, ನಾವು ಅದನ್ನು ಪ್ರತಿಭಟನೆಯ ಮೂಲಕ ವಿರೋಧಿಸುತ್ತಿದ್ದೇವೆ ಎಂದು ಹೇಳಿದರು.
ಪುತ್ರನಿಗೆ ಬಿಎಸ್‌ವೈ ಕ್ಷೇತ್ರ ತ್ಯಾಗ: ಇದು ಬಿಜೆಪಿ ನಿರ್ಧಾರ ಅಲ್ಲ, ಅಚ್ಚರಿ ಹೇಳಿಕೆ ನೀಡಿದ ಸಚಿವ
ಬಿಜೆಪಿಯವರು ಸಾರ್ವಜನಿಕ ಉದ್ಯಮಗಳನ್ನು ಮಾರಿ ಸರ್ಕಾರ ನಡೆಸಲು ಪ್ರಯತ್ನಿಸುತ್ತಿದ್ದಾರೆ. ಇಡಿ ಯವರು ಮೊಟ್ಟ ಮೊದಲು ಅಮಿತ್ ಶಾ ಪುತ್ರ ಜೈ ಶಾ ಮೇಲೆ ತನಿಖೆ ಮಾಡಬೇಕು. ಜೈ ಶಾ ಬಿಸಿಸಿಐ ಪ್ರಧಾನ ಕಾರ್ಯದರ್ಶಿಯಾಗಿದ್ದು, ಈಗ ಐಪಿಎಲ್ ನಲ್ಲಿ 45 ಸಾವಿರ ಕೋಟಿ ರೂ. ಆದಾಯ ಬರುತ್ತಿದೆ. ಜೈ ಶಾ ಅವರದ್ದು 2015ರಲ್ಲಿ 50 ಲಕ್ಷ ರೂ. ಆಸ್ತಿ ಇತ್ತು. ಈಗ ಅವರ ಆಸ್ತಿ ಲೆಕ್ಕಾಚಾರ ಮಾಡಿ ತನಿಖೆ ನಡೆಸಲಿ ಎಂದು ವಾಗ್ದಾಳಿ ನಡೆಸಿದರು.
ಭಾರತೀಯ ಜನತಾ ಪಾರ್ಟಿ ಇವತ್ತಲ್ಲ ನಾಳೆ ಸೋಲಲಿದೆ. ಅವರೇನು 500 ವರ್ಷ ಅಧಿಕಾರದಲ್ಲಿ ಇರವುದಿಲ್ಲ. ಒಂದು ದಿನ ಬಿಜೆಪಿ ಸೋತಾಗ ಏನಾಗುತ್ತದೆ ಎಂದು ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಎಚ್ಚರಿಸಿದ ಅವರು, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ನಾಯಕರೇ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುತ್ತಾರೆ ಎಂದರು.
ಸೋನಿಯಾ ವಿಚಾರಣೆಗೆ ಕಾಂಗ್ರೆಸಿಗರು ಕೆಂಡ: ರಾಜಭವನ ಮುತ್ತಿಗೆ ಯತ್ನ
ಪಕ್ಷದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಕಾರ್ಯಕರ್ತರು ಈ ಬಾರಿ ಕಾಂಗ್ರೆಸನ್ನು ಗೆಲ್ಲಿಸಲೇಬೇಕೆಂದು ನಿರ್ಧರಿಸಿದ್ದಾರೆ. ಈ ಕಾರಣದಿಂದ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಬಿಜೆಪಿಯವರು ಲೋಕಪಾಲ್ ಬಗ್ಗೆ ಮಾತನಾಡುತ್ತಿದ್ದರು. ಆದರೆ, ಈಗ ಲೋಕ್ ಪಾಲ್ ಎಲ್ಲಿದೆ ? ಇದೆಲ್ಲಾ ಅವರ ರಾಜಕೀಯ ನಾಟಕ. ಬಿಜೆಪಿಯವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಈಶ್ವರಪ್ಪನವರು ಅತ್ಯಂತ ಭ್ರಷ್ಟ ಮಂತ್ರಿ ಆಗಿದ್ದರು. ಈಗ ಕ್ರಿಮಿನಲ್ ಆಗಿದಾರೆ ಎಂದು ಬಿ.ಕೆ.ಹರಿಪ್ರಸಾದ್ ಟೀಕಿಸಿದರು.
ಇನ್ನು ಕಸ್ತೂರಿ ರಂಗನ್ ವರದಿಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಸ್ತೂರಿ ರಂಗನ್ ಸ್ಯಾಟಲೈಟ್ ಸಮೀಕ್ಷೆ ಮಾಡಿದ್ದು, ಅದರಿಂದ ಅದರಿಂದ ಎಲ್ಲಾ ಕಾಡು ಎಂದು ತೋರಿಸಿದ್ದಾರೆ. ಕೈಗಾ, ಸೀಬರ್ಡ್ ನಿಂದ ಜನರಿಗೆ ಸಾಕಷ್ಟು ಸಮಸ್ಯೆ ಆಗಿದೆ. ಜಿಲ್ಲೆಯಲ್ಲಿ ಅವೈಜ್ಞಾನಿಕ ಸಮೀಕ್ಷೆ ನಿಲ್ಲಿಸಬೇಕು. ಜನರ ಹೊಟ್ಟೆಗೆ ಕಲ್ಲು ಹಾಕಬಾರದು. ತಿನ್ನೋ ಅನ್ನಕ್ಕೆ ಕಲ್ಲು ಹಾಕುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದು ಬಿ.ಕೆ.ಹರಿಪ್ರಸಾದ್ ಆರೋಪಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಭೀಮಣ್ಣ ನಾಯ್ಕ, ಅಬ್ಬಾಸ್ ತೋನ್ಸೆ, ಎಸ್.ಕೆ.ಭಾಗ್ವತ್, ಜಗದೀಶ ಗೌಡ ಮುಂತಾದವರು ಉಪಸ್ಥಿತರಿದ್ದರು.