ಸಿದ್ದರಾಮೋತ್ಸವ ಅಲ್ಲ, ಅಮೃತ ಮಹೋತ್ಸವ: ರಾಯರೆಡ್ಡಿ

Published : Jul 22, 2022, 09:33 PM IST
ಸಿದ್ದರಾಮೋತ್ಸವ ಅಲ್ಲ, ಅಮೃತ ಮಹೋತ್ಸವ: ರಾಯರೆಡ್ಡಿ

ಸಾರಾಂಶ

ಸಿದ್ದರಾಮಯ್ಯ ಒಬ್ಬ ಜನಪರ ವ್ಯಕ್ತಿಯಾಗಿದ್ದು, ಭ್ರಷ್ಟಾಚಾರ ರಹಿತ 5 ವರ್ಷಗಳ ಜನಪರ ಆಡಳಿತ ನೀಡಿದ್ದಾರೆ. 

ಮುಂಡರಗಿ(ಜು.22): ದಾವಣಗೆರೆ ಕಾರ್ಯಕ್ರಮಕ್ಕೆ ಅನೇಕರು ಬೇರೆ ಬೇರೆ ಬಣ್ಣ ಬಳಿಯುತ್ತಿದ್ದಾರೆ ಅದು ಸಿದ್ದರಾಮೋತ್ಸವ ಅಲ್ಲ, ಸಿದ್ದರಾಮಯ್ಯನವರ 75ನೇ ಜನ್ಮದಿನ ಅಮೃತಮಹೋತ್ಸವ ಕಾರ್ಯಕ್ರಮ ಎಂದು ಕಾರ್ಯಕ್ರಮದ ಸಮಿತಿ ಮಹಾಪ್ರಧಾನ ಕಾರ್ಯದರ್ಶಿ, ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಸ್ಪಷ್ಟಪಡಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಒಂದು ಸಂಸ್ಕೃತಿ, ಸಂಸ್ಕಾರ ಇದೆ. 25 ವರ್ಷಕ್ಕೆ ರಜತ ಮಹೋತ್ಸವ, 50 ವರ್ಷಕ್ಕೆ ಸುವರ್ಣ ಮಹೋತ್ಸವ, 75 ವರ್ಷಕ್ಕೆ ಅಮೃತ ಮಹೋತ್ಸವ, 100 ವರ್ಷಕ್ಕೆ ಶತಮಾನೋತ್ಸವ ಆಚರಿಸುತ್ತಾ ಬಂದಿರುವ ಪದ್ಧತಿ ಇದೆ. ಅದರಂತೆ ಇದೀಗ ಸಿದ್ದರಾಮಯ್ಯನವರಿಗೆ 75 ವರ್ಷಗಳಾಗಿರುವುದರಿಂದ ಆರ್‌.ವಿ.ದೇಶಪಾಂಡೆ, ರಾಜಣ್ಣ, ಶಾಮನೂರು ಶಿವಶಂಕರಪ್ಪ, ತಾವು ಹಾಗೂ ಎಚ್‌.ಸಿ. ಮಹದೇವಪ್ಪ, ಡಿ.ಕೆ. ಸುರೇಶ ಸೇರಿದಂತೆ ಎಲ್ಲ ವರ್ಗಗಳ ಅವರ ಅಭಿಮಾನಿಗಳು ಸೇರಿಕೊಂಡು ‘ಸಿದ್ದರಾಮಯ್ಯ -75 ಅಮೃತ ಮಹೋತ್ಸವ ಸಮಿತಿ’ ಮಾಡಿಕೊಂಡು ಸರಳ ಹಾಗೂ ಅಚ್ಚುಕಟ್ಟಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.

ಬದುಕಿದ್ದಾಗ ಉತ್ಸವ ಆಚರಣೆ ಎಷ್ಟು ಸರಿ?: ಸಿದ್ದರಾಮೋತ್ಸವದ ಬಗ್ಗೆ ಸಚಿವ ಪಾಟೀಲ ಟಾಂಗ್‌

ಕಾರ್ಯಕ್ರಮಕ್ಕೆ ಕಾಂಗ್ರೆಸ್‌ ರಾಷ್ಟ್ರೀಯ ನಾಯಕರಾಗಿರುವ ರಾಹುಲ್‌ ಗಾಂಧಿ, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಸುರ್ಜೇವಾಲ್, ವೇಣುಗೋಪಾಲ್‌, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ಹರಿಪ್ರಸಾದ್‌, ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೋಯ್ಲಿ, ಮಾಜಿ ಸಚಿವರಾದ ಜಿ. ಪರಮೇಶ್ವರ, ಎಚ್‌.ಕೆ. ಪಾಟೀಲ ಸೇರಿದಂತೆ ಮೊದಲಾದವರನ್ನು ಅತಿಥಿಗಳನ್ನಾಗಿ ಆಹ್ವಾನಿಸಲಾಗಿದೆ. ಇದು ಕಾಂಗ್ರೆಸ್‌ ಕಾರ್ಯಕ್ರಮವಲ್ಲ, ಕಾಂಗ್ರೆಸ್‌ ಬ್ಯಾನರಿನಲ್ಲಿ ಈ ಕಾರ್ಯಕ್ರಮ ಮಾಡುತ್ತಿಲ್ಲ. ಆದರೆ ಪಕ್ಷದ ನಾಯಕರು, ಅಭಿಮಾನಿಗಳು, ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಒಟ್ಟು 5 ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದ್ದು, ಬಂದು ಹೋಗುವವರಿಗೆ ಅನುಕೂಲವಾಗುವ ಉದ್ದೇಶದಿಂದ ಇದನ್ನು ದಾವಣಗೆರೆಯಲ್ಲಿ ಆಯೋಜಿಸಿದ್ದು, ಸುಮಾರು 110 ಎಕರೆ ಪ್ರದೇಶದಲ್ಲಿ ಕಾರ್ಯಕ್ರಮಕ್ಕೆ ವ್ಯವಸ್ಥೆ ಮಾಡಲಾಗಿದೆ. ಒಟ್ಟಾರೆ ಅಚ್ಚುಕಟ್ಟಾದ ಸರಳ ಕಾರ್ಯಕ್ರಮ ಮಾಡಲು ನಿರ್ಧರಿಸಲಾಗಿದೆ. ಎಲ್ಲೆಡೆ ಸಿದ್ದರಾಮಯ್ಯನವರ ಜನಪರ ಆಡಳಿತ ನೋಡಿ, ಇಂದಿನ ಬಿಜೆಪಿ ದುರಾಡಳಿತವನ್ನು ರಾಜ್ಯದ ಜನತೆ ಅಳೆದು ತೂಗಿ ನೋಡಿದ್ದು, ಸಿದ್ದರಾಮಯ್ಯ ಒಬ್ಬ ಜನಪರ ವ್ಯಕ್ತಿಯಾಗಿದ್ದು, ಭ್ರಷ್ಟಾಚಾರ ರಹಿತ 5 ವರ್ಷಗಳ ಜನಪರ ಆಡಳಿತ ನೀಡಿದ್ದಾರೆ. ಕರ್ನಾಟಕದ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ನೀಡಿದ್ದಾರೆ ಎಂದು ಎಲ್ಲ ಸಮಾಜದ ಜನತೆ ಸ್ವಯಂ ಪ್ರೇರಣೆಯಿಂದ ದಾವಣಗೆರೆಗೆ ಬರಲಿದ್ದಾರೆ ಎಂದರು.

ಅದ್ಧೂ​ರಿ ಜನ್ಮದಿನ ಆಚರಿಸುವ ಸಿದ್ದರಾಮಯ್ಯ ಯಾವ ಸಮಾಜವಾದಿ: ಈಶ್ವರಪ್ಪ

ನ್ಯಾಶನಲ್‌ ಹೆರಾಲ್ಡ್‌ ಕೇಸು ಭ್ರಷ್ಟಾಚಾರದ ಕೇಸಲ್ಲ. ಇದರ ಕುರಿತು ವಿಚಾರಣೆ ಮಾಡುತ್ತಿರುವುದು ತಪ್ಪಲ್ಲ, ಆದರೆ ಇದನ್ನು ಬೇರೆ ರೀತಿ ಬಿಂಬಿಸುತ್ತಿರುವುದು ಖಂಡನೀಯ. ವಿಚಾರಣೆಗೆ ಸೋನಿಯಾ ಗಾಂಧಿಯವರನ್ನು ಕರೆಸುತ್ತಿರುವುದು ಸರಿಯಲ್ಲ. ಇದನ್ನು ಖಂಡಿಸಿ ಬೆಂಗಳೂರಿನಲ್ಲಿ ಕಾಂಗ್ರೆಸ್‌ ಹೋರಾಟ ಮಾಡಿದ್ದು, ಶುಕ್ರವಾರ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಪ್ರತಿಭಟನೆಗಳು ಜರುಗಲಿವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಎಪಿಎಂಸಿ ಮಾಜಿ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ, ಭರತ್‌ ನಾಯಕ, ಹೇಮಂತಗೌಡ ಪಾಟೀಲ, ಮಂಜುನಾಥ ಮುಂಡವಾಡ, ಕೊಟ್ರೇಶ ಅಂಗಡಿ, ಮಂಜುನಾಥ ಗೌಡರ, ರುದ್ರಗೌಡ ಪಾಟೀಲ, ಡಿ.ಡಿ. ಮೊರನಾಳ, ಶೇಖರ ಜುಟ್ಲಣ್ಣವರ, ಬಸವರಾಜ ಉಳ್ಳಾಗಡ್ಡಿ, ರಾಘವೇಂದ್ರ ಕುರಿಯವರ, ಯಲ್ಲಪ್ಪ ಹೂಲಗೇರಿ, ಶರಣಯ್ಯ ಹಿರೇಮಠ ಇದ್ದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್