ಕಾಂಗ್ರೆಸ್‌ ವಿರುದ್ಧ ಜೆಡಿಎಸ್‌ ಜತೆ ಬಿಜೆಪಿ ಸ್ನೇಹ?

Published : May 19, 2023, 07:00 AM ISTUpdated : May 19, 2023, 07:11 AM IST
ಕಾಂಗ್ರೆಸ್‌ ವಿರುದ್ಧ ಜೆಡಿಎಸ್‌ ಜತೆ ಬಿಜೆಪಿ ಸ್ನೇಹ?

ಸಾರಾಂಶ

ಹಂಗಾಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಜಿ ಸಚಿವರಾದ ಗೋವಿಂದ ಕಾರಜೋಳ ಮತ್ತು ಆರ್‌.ಅಶೋಕ್‌ ಅವರೊಂದಿಗೆ ದೇವೇಗೌಡರ ನಿವಾಸಕ್ಕೆ ತೆರಳಿ ಹುಟ್ಟುಹಬ್ಬದ ಶುಭ ಕೋರಿ ಕೆಲಕಾಲ ಮಾತುಕತೆ ನಡೆಸಿದರು. ಈ ಮಾತುಕತೆಯಲ್ಲಿ ನೇರವಾದ ಮಹತ್ವದ ರಾಜಕೀಯ ಚರ್ಚೆಯೇನೂ ನಡೆದಿಲ್ಲವಾದರೂ ಪರೋಕ್ಷ ಸಂದೇಶ ನೀಡುವ ಪ್ರಯತ್ನವಂತೂ ಆಗಿದೆ.

ಬೆಂಗಳೂರು(ಮೇ.19):  ವಿಧಾನಸಭಾ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಬಿಜೆಪಿಯು ದಾಖಲೆ ಪ್ರಮಾಣದ ಸ್ಥಾನಗಳನ್ನು ಪಡೆದು ಸರ್ಕಾರ ರಚಿಸುತ್ತಿರುವ ಕಾಂಗ್ರೆಸ್‌ ಪಕ್ಷವನ್ನು ಎದುರಿಸುವ ಸಂಬಂಧ ಜೆಡಿಎಸ್‌ ಜತೆ ಸ್ನೇಹ ಹಸ್ತ ಚಾಚುವ ಪ್ರಯತ್ನ ನಡೆಸಿದೆ. ಇದಕ್ಕೆ ವೇದಿಕೆ ಒದಗಿಸಿದ್ದು ಜೆಡಿಎಸ್‌ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರ 91ನೇ ಹುಟ್ಟುಹಬ್ಬ.

ಗುರುವಾರ ಸಂಜೆ ಹಂಗಾಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಜಿ ಸಚಿವರಾದ ಗೋವಿಂದ ಕಾರಜೋಳ ಮತ್ತು ಆರ್‌.ಅಶೋಕ್‌ ಅವರೊಂದಿಗೆ ದೇವೇಗೌಡರ ನಿವಾಸಕ್ಕೆ ತೆರಳಿ ಹುಟ್ಟುಹಬ್ಬದ ಶುಭ ಕೋರಿ ಕೆಲಕಾಲ ಮಾತುಕತೆ ನಡೆಸಿದರು. ಈ ಮಾತುಕತೆಯಲ್ಲಿ ನೇರವಾದ ಮಹತ್ವದ ರಾಜಕೀಯ ಚರ್ಚೆಯೇನೂ ನಡೆದಿಲ್ಲವಾದರೂ ಪರೋಕ್ಷ ಸಂದೇಶ ನೀಡುವ ಪ್ರಯತ್ನವಂತೂ ಆಗಿದೆ.

ಒಳಒಪ್ಪಂದವೆಂಬ ಬಿಜೆಪಿ ಆರೋ​ಪ​ ಸತ್ಯಕ್ಕೆ ದೂರ: ಜೆಡಿ​ಎಸ್‌ ಶಾಸಕಿ ಶಾರದಾ ಪೂರ್ಯನಾಯ್ಕ್

ಕಾಂಗ್ರೆಸ್‌ ಈ ಮಟ್ಟದ ದೊಡ್ಡ ಪಕ್ಷವಾಗಿ ಸರ್ಕಾರ ರಚಿಸುವ ಬಗ್ಗೆ ಬಿಜೆಪಿ ಹಾಗೂ ಜೆಡಿಎಸ್‌ ನಾಯಕರೂ ಊಹೆಯನ್ನೂ ಮಾಡಿರಲಿಲ್ಲ. ಎರಡೂ ಪಕ್ಷಗಳಿಗೆ ಹೀನಾಯ ಸೋಲುಣಿಸಿ ಕಾಂಗ್ರೆಸ್‌ ಈಗ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಅಧಿಕೃತ ವಿರೋಧ ಪಕ್ಷವಾಗಿ ಬಿಜೆಪಿಗೆ ತನ್ನ ದುಪ್ಪಟ್ಟು ಸಂಖ್ಯೆಯ ಶಾಸಕರನ್ನು ಹೊಂದಿದ ಆಡಳಿತಾರೂಢ ಕಾಂಗ್ರೆಸ್‌ ಪಕ್ಷವನ್ನು ಎದುರಿಸುವುದು ಸುಲಭವಲ್ಲ. ಮೇಲಾಗಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಸರ್ಕಾರ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿನ ಹಗರಣಗಳನ್ನು ತನಿಖೆಗೆ ವಹಿಸುವ ಆತಂಕವೂ ಬಿಜೆಪಿ ನಾಯಕರಿಗಿದೆ. ಹೀಗಾಗಿ, ಯಾವುದಕ್ಕೂ ಜೆಡಿಎಸ್‌ ಜತೆಗೆ ಸ್ನೇಹ ಹಸ್ತ ಚಾಚುವುದೇ ಸೂಕ್ತ ಎಂಬ ನಿಲವಿಗೆ ಬಂದಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಮೇಲಾಗಿ ಕಳೆದ 2018ರ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಬಿಜೆಪಿಯು ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್‌ ಜತೆಗೆ ತೆರೆಮರೆಯಲ್ಲಿಯೂ ಯಾವುದೇ ರೀತಿಯ ಸ್ಥಾನ ಹೊಂದಾಣಿಕೆ ಮಾಡಿಕೊಂಡಿರಲಿಲ್ಲ. ಸ್ಥಾನ ಹೊಂದಾಣಿಕೆ ಮಾಡಿಕೊಳ್ಳುವಂತಿಲ್ಲ ಎಂದು ಪಕ್ಷದ ಪ್ರಭಾವಿ ನಾಯಕ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಆರಂಭಲ್ಲೇ ಫರ್ಮಾನು ಹೊರಡಿಸಿದ್ದರು. ಹಳೆ ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನ ಗಳಿಸಬೇಕು ಎಂಬ ಉದ್ದೇಶದಿಂದ ಬಿಜೆಪಿಯು ಅನೇಕ ಕ್ಷೇತ್ರಗಳಲ್ಲಿ ಸ್ವಲ್ಪ ಪ್ರಬಲ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿತ್ತು. ಪರಿಣಾಮ ತ್ರಿಕೋನ ಸ್ಪರ್ಧೆ ಉಂಟಾಗಿ ಬಿಜೆಪಿಗೆ ಹೆಚ್ಚಿನ ಲಾಭವಾಗದಿದ್ದರೂ ಕಾಂಗ್ರೆಸ್‌ ಪಕ್ಷಕ್ಕೆ ಹೆಚ್ಚು ಲಾಭವಾಯಿತು. ಸಹಜವಾಗಿ ಜೆಡಿಎಸ್‌ಗೆ ದೊಡ್ಡ ನಷ್ಟಉಂಟಾಯಿತು. ಇದು ಜೆಡಿಎಸ್‌ ನಾಯಕರಿಗೆ ಕೋಪವನ್ನೂ ತರಿಸಿದೆ. ಈ ಭೇಟಿಯ ಹಿಂದೆ ಆ ಕೋಪವನ್ನು ಶಮನಗೊಳಿಸುವ ಆಶಯವೂ ಇದೆ ಎನ್ನಲಾಗಿದೆ.

ಮೇಲಾಗಿ ಇನ್ನು ಮುಂದೆ ವಿಧಾನಸಭೆ ಮತ್ತು ವಿಧಾನಪರಿಷತ್ತಿನಲ್ಲಿ ಜೆಡಿಎಸ್‌ ಜತೆ ವಿಷಯಾಧಾರಿತ ಸಮನ್ವಯತೆ ಸಾಧಿಸಿ ಕಾಂಗ್ರೆಸ್‌ ವಿರುದ್ಧ ಹೋರಾಟ ಮಾಡಲು ಬಿಜೆಪಿ ನಾಯಕರು ಚಿಂತನೆ ನಡೆಸಿದ್ದಾರೆ. ಹೀಗಾಗಿಯೇ ದೇವೇಗೌಡರ ಹುಟ್ಟುಹಬ್ಬವನ್ನು ನೆಪವಾಗಿಸಿಕೊಂಡು ಬಿಜೆಪಿ ನಾಯಕರು ಖುದ್ದಾಗಿ ಅವರ ಮನೆಗೆ ತೆರಳಿ ಶುಭ ಕೋರುವ ಮೂಲಕ ಪರೋಕ್ಷ ಪ್ರಸ್ತಾಪ ಇರಿಸಿದ್ದಾರೆ ಎಂದು ತಿಳಿದು ಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ