ಇವಿಎಂನಿಂದ ಗೆದ್ದ 136 ಸ್ಥಾನ ತ್ಯಜಿಸಿ ಎಲೆಕ್ಷನ್‌ಗೆ ಬನ್ನಿ : ಬಿಜೆಪಿ

Kannadaprabha News   | Kannada Prabha
Published : Sep 06, 2025, 04:41 AM IST
Siddaramaiah Vijayendra

ಸಾರಾಂಶ

ಇವಿಎಂ(ಮತಯಂತ್ರ) ಮುಖಾಂತರವೇ ಚುನಾಯಿತವಾದ ರಾಜ್ಯದ ಕಾಂಗ್ರೆಸ್‌ ಸರ್ಕಾರಕ್ಕೆಇದೀಗ ಅದೇ ಇವಿಎಂ ಬಗ್ಗೆ ಸಂಶಯ ಇದ್ದಲ್ಲಿ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗಲಿ ಎಂದು ಪ್ರತಿಪಕ್ಷ ಬಿಜೆಪಿ ಸವಾಲು ಎಸೆದಿದೆ.

ಬೆಂಗಳೂರು : ಇವಿಎಂ(ಮತಯಂತ್ರ) ಮುಖಾಂತರವೇ ಚುನಾಯಿತವಾದ ರಾಜ್ಯದ ಕಾಂಗ್ರೆಸ್‌ ಸರ್ಕಾರಕ್ಕೆಇದೀಗ ಅದೇ ಇವಿಎಂ ಬಗ್ಗೆ ಸಂಶಯ ಇದ್ದಲ್ಲಿ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗಲಿ ಎಂದು ಪ್ರತಿಪಕ್ಷ ಬಿಜೆಪಿ ಸವಾಲು ಎಸೆದಿದೆ. ಕೃತಕ ಬುದ್ಧಿಮತ್ತೆಯ ಈ ಕಾಲದಲ್ಲೂ ಕೃತಕ ಅಜ್ಞಾನದಿಂದ ಕೂಡಿದ ನಿರ್ಧಾರಗಳನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರದ ಕ್ಯಾಬಿನೆಟ್‌ ಕೈಗೊಂಡಿದೆ ಎಂದು ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಎಸ್‌.ಸುರೇಶ್‌ಕುಮಾರ್‌, ವಿಧಾನಪರಿಷತ್ತಿನ ಪ್ರತಿಪಕ್ಷದ ಮುಖ್ಯ ಸಚೇತಕ ಎನ್‌.ರವಿಕುಮಾರ್‌ ಅವರು, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಇವಿಎಂ ಯಂತ್ರ ಬದಿಗಿಟ್ಟು ಮತ ಪತ್ರ ಬಳಸುವ ಸಂಬಂಧ ಸಚಿವ ಸಂಪುಟ ಸಭೆ ಕೈಗೊಂಡ ನಿರ್ಣಯವನ್ನು ಬಲವಾಗಿ ಖಂಡಿಸಿದ್ದಾರೆ.

ಈ ಕುರಿತು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಇವಿಎಂ ಯಂತ್ರ ಬದಿಗಿಟ್ಟು ಮತ ಪತ್ರ ಬಳಕೆಗೆ ರಾಜ್ಯ ಕಾಂಗ್ರೆಸ್‌ ಸರ್ಕಾರದ ಸಚಿವ ಸಂಪುಟ ಕೈಗೊಂಡಿರುವ ತೀರ್ಮಾನವು ತಾವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವುದೇ ಮತಗಳ್ಳತನದಿಂದ ಎಂದು ಸ್ವಯಂ ಪ್ರಮಾಣೀಕರಿಸಿದಂತಿದೆ ಎಂದು ವ್ಯಂಗ್ಯವಾಡಿದರು.

ಇವಿಎಂ ಮೂಲಕ 2023ರ ಅಸೆಂಬ್ಲಿ ಚುನಾವಣೆಯಲ್ಲಿ ಆರಿಸಿ ಬಂದಿರುವ 136 ಕಾಂಗ್ರೆಸ್‌ ಶಾಸಕರಿಂದ ಮೊದಲು ಅವರು ರಾಜೀನಾಮೆ ಕೊಡಿಸಲಿ. ಅದೇ ರೀತಿ ರಾಜ್ಯದಿಂದ ಆಯ್ಕೆಯಾದ 9 ಕಾಂಗ್ರೆಸ್ ಸಂಸದರಿಂದಲೂ ರಾಜೀನಾಮೆ ಕೊಡಿಸಲಿ. ಮತಪತ್ರ ಬಳಸಿ ಮತ್ತೆ ಚುನಾವಣೆಯಿಂದ ಗೆದ್ದು ಬರಲಿ, ಇಲ್ಲದಿದ್ದರೆ ಮತಗಳ್ಳತನದಿಂದ ನಾವು ಆಯ್ಕೆಯಾಗಿ ಅಧಿಕಾರಕ್ಕೆ ಬಂದಿದ್ದೇವೆಂದು ಒಪ್ಪಿಕೊಳ್ಳಲಿ ಎಂದು ಸವಾಲು ಹಾಕಿದರು.

ಮತಪತ್ರಗಳ ಬಳಕೆಯಿಂದ ಚುನಾವಣಾ ಅಕ್ರಮ ಎಸಗಬಹುದು, ಮತಗಟ್ಟೆಗಳಲ್ಲಿ ದೌರ್ಜನ್ಯ ಮೆರೆಯಬಹುದು, ಎಗ್ಗಿಲ್ಲದೆ ಕಳ್ಳ ಮತದಾನವನ್ನೂ ಮಾಡಬಹುದು ಎಂಬ ಏಕೈಕ ಕಾರಣಕ್ಕಾಗಿ ಕಾಂಗ್ರೆಸ್ ಮತ ಪತ್ರ ಆಧರಿಸಿದ ಚುನಾವಣೆಯನ್ನು ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಬೆಂಬಲಿಸುತ್ತಿದೆ. ಅದನ್ನು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಲು ಮೊದಲ ಹೆಜ್ಜೆ ಇಡಲು ಹೊರಟಿದೆ ಎಂದು ಹೇಳಿದರು.

ಸಿಎಂ ಸ್ಥಾನಕ್ಕೆ ಸಿದ್ದು ರಾಜಿನಾಮೆ ನೀಡಲಿ-ಬೊಮ್ಮಾಯಿ

ಇವಿಎಂ ಬಳಸುವ ಮೂಲಕ ನಡೆದ ಚುನಾವಣೆಯಲ್ಲಿ ಗೆದ್ದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ಬ್ಯಾಲೆಟ್ ಪೇಪರ್ ಬೇಕು ಎಂದು ಸಂಪುಟದಲ್ಲಿ ನಿರ್ಧಾರ ಮಾಡಿರುವುದು ಅತ್ಯಂತ ವಿಪರ್ಯಾಸ. ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಬ್ಯಾಲೆಟ್ ಮೂಲಕ ಚುನಾವಣೆ ಎದುರಿಸಿ ಆರಿಸಿ ಬರಲಿ ಎಂದು ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.

ಕೇವಲ ರಾಹುಲ್ ಗಾಂಧಿ ಮೆಚ್ಚಿಸಲು ಮತ್ತು ಇಡೀ ದೇಶದಲ್ಲಿ ರಾಹುಲ್ ಗಾಂಧಿಯ ಸೋಲು ಮುಚ್ಚಿ ಹಾಕಲು ಈಗ ಇಂಥದ್ದೊಂದು ಪ್ರಯತ್ನಕ್ಕೆ ಕೈಹಾಕಿದ್ದಾರೆ. ಇದಕ್ಕೆ ರಾಜ್ಯ ಚುನಾವಣಾ ಆಯೋಗ ಇದಕ್ಕೆ ಸ್ಪಂದನೆ ಮಾಡಿರುವುದು ಕಾನೂನು ಬಾಹಿರ. ಕೇಂದ್ರ ಚುನಾವಣಾ ಆಯೋಗ ರಾಜ್ಯ ಚುನಾವಣಾ ಆಯೋಗಕ್ಕೆ ಈ ಕುರಿತು ಸ್ಪಷ್ಟವಾದ ನಿರ್ದೇಶನ ಕೊಡಬೇಕು ಎಂದು ಅವರು ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.

ರಾಜ್ಯಕ್ಕೆ ಮಾರಕ ನಿರ್ಧಾರ-ಸುರೇಶ್‌ಕುಮಾರ್‌

ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಎಸ್.ಸುರೇಶ್‌ ಕುಮಾರ್, ರಾಜ್ಯದ ದೃಷ್ಟಿಯಿಂದ ಸಂಪುಟ ಸಭೆ ಅತ್ಯಂತ ಮಾರಕ ನಿರ್ಧಾರಗಳನ್ನು ಕೈಗೊಂಡಿದೆ. ಬಹುಮತ ಇದೆ ಎಂದ ತಕ್ಷಣ ನಾವು ಮಾಡಿದ್ದೇ ಸರಿ ಎಂಬ ಅಹಂಕಾರ, ಠೇಂಕಾರವು ಸರ್ಕಾರದ ಅಧಃಪತನಕ್ಕೆ ದಾರಿ ಮಾಡಿಕೊಡುತ್ತದೆ. ರಾಜ್ಯದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ಮತಯಂತ್ರದ (ಇವಿಎಂ) ಬದಲಿಗೆ ಮತಪತ್ರ (ಬ್ಯಾಲೆಟ್ ಪೇಪರ್) ಜಾರಿ ಮಾಡುವುದಾಗಿ ಹೇಳಿದ್ದಾರೆ. ಬೆಂಗಳೂರು ಭಾರತದ ಸಿಲಿಕಾನ್ ಸಿಟಿ ಎಂದೇ ಗುರುತಿಸಿಕೊಂಡಿದೆ. ಸಿಲಿಕಾನ್ ಸಿಟಿ ಎಂಬ ಹೆಸರಿಗೇ ಇವರು ತೋರಿಸುವ ದೊಡ್ಡ ತಿರಸ್ಕಾರ ಇದು ಎಂದು ಕಿಡಿಕಾರಿದರು.

ಇವಿಎಂ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ವಿಚಾರವನ್ನು ಸುಪ್ರೀಂ ಕೋರ್ಟ್ ಕೂಡ ಎತ್ತಿ ಹಿಡಿದಿದೆ. ಬೇರೆ ದೇಶಗಳೂ ಭಾರತದ ಚುನಾವಣಾ ಪದ್ಧತಿ ಮೆಚ್ಚಿಗೊಂಡಿವೆ. ಅದನ್ನು ಅನುಸರಿಸುತ್ತಾ ಇವೆ. ಆದರೆ, ತಮ್ಮ ನಾಯಕನನ್ನು ಮೆಚ್ಚಿಸಲು, ಆ ತಾಳಕ್ಕೆ ಕುಣಿಯಲು ಇವಿಎಂ ಬಳಸುವುದಿಲ್ಲ ಎಂಬ ನಿರ್ಧಾರ ಪ್ರಕಟಿಸಿದ್ದಾರೆ ಎಂದು ಟೀಕಿಸಿದರು.

ಮತ್ತೆ ಪುರಾತನ ಯುಗಕ್ಕೆ-ರವಿಕುಮಾರ್‌

ಎನ್‌.ರವಿಕುಮಾರ್‌ ಮಾತನಾಡಿ, ಇವಿಎಂ ಯಂತ್ರಗಳನ್ನು ಬದಿಗಿಟ್ಟು ಮತಪತ್ರದೊಂದಿಗೆ ಚುನಾವಣೆ ನಡೆಸಲು ಈ ಸರ್ಕಾರ ಮುಂದಾಗಿದ್ದು, ಮತ್ತೆ ಪುರಾತನ ಯುಗಕ್ಕೆ ಹೋಗುತ್ತಿದೆ ಎಂದು ಆಕ್ಷೇಪಿಸಿದರು.ಮತಪತ್ರ ಬಳಸಿದರೆ 2-3 ದಿನ ಮತ ಎಣಿಕೆ ಮಾಡಬೇಕಾಗುತ್ತದೆ. ರಾಹುಲ್ ಗಾಂಧಿಯವರು ಹೇಳಿದರೆಂಬ ಕಾರಣಕ್ಕಾಗಿ ಇವಿಎಂ ಬದಿಗಿಟ್ಟು, ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ಮಾಡುವುದನ್ನು ಬಿಜೆಪಿ ಒಪ್ಪುವುದಿಲ್ಲ. ಈ ವಿಷಯವನ್ನು ನಾವು ಜನರ ಬಳಿ ಒಯ್ಯುತ್ತೇವೆ ಎಂದು ಹೇಳಿದರು.

ಕಳ್ಳನ ಮನಸ್ಸು ಹುಳ್ಳಗೆ ರೀತಿ ಬಿಜೆಪಿಗರ ವರ್ತನೆ: ಸರ್ಕಾರ

ಬೆಂಗಳೂರು : ಬ್ಯಾಲೆಟ್‌ ಪೇಪರ್ ಮೂಲಕ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಪ್ರತಿಪಕ್ಷ ಬಿಜೆಪಿಯಿಂದ ತೀವ್ರ ವಿರೋಧ ವ್ಯಕ್ತವಾಗಿರುವ ನಡುವೆಯೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ನಮ್ಮ ಅನುಭವದ ಆಧಾರದ ಮೇಲೆ ಈ ತೀರ್ಮಾನ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರೆ, ಬ್ಯಾಲೆಟ್‌ ಪೇಪರ್‌ ಚುನಾವಣೆಗೆ ಬಿಜೆಪಿ ಯಾಕೆ ಗಾಬರಿಯಾಗಬೇಕು? ಬಿಜೆಪಿ ನಾಯಕರು ಕಳ್ಳನ ಮನಸ್ಸು ಹುಳ್ಳಗೆ ಎನ್ನುವಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್‌ ಟಾಂಗ್‌ ನೀಡಿದ್ದಾರೆ.ಈ ಕುರಿತು ಶುಕ್ರವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಇವಿಎಂ(ಮತಯಂತ್ರ) ಬದಲಿಗೆ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ಮಾಡಬೇಕೆನ್ನುವುದು ನಮ್ಮ ಉದ್ದೇಶ. ನಮ್ಮ ಅನುಭವದ ಆಧಾರದ ಮೇಲೆ ಈ ತೀರ್ಮಾನ ಮಾಡಲಾಗಿದೆ. ಅನೇಕ ದೇಶಗಳು ಇವಿಎಂ ಬಳಸಿದ ಬಳಿಕ ವಾಪಸ್ ಬ್ಯಾಲೆಟ್ ಪೇಪರ್‌ಗೆ ಮರಳಿರುವ ನಿದರ್ಶನಗಳಿವೆ ಎಂದು ಸಮರ್ಥನೆ ನೀಡಿದ್ದಾರೆ.

ಬಿಜೆಪಿಗೇಕೆ ಗಾಬರಿ?-ಡಿಕೆಶಿ: ರಾಜ್ಯ ಸರ್ಕಾರವು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮಾತ್ರ ಮತಪತ್ರ ಬಳಸಲು ತೀರ್ಮಾನಿಸಿದ್ದು, ಅದಕ್ಕೆ ಬಿಜೆಪಿ ಯಾಕೆ ಗಾಬರಿಯಾಗಬೇಕು? ಬಿಜೆಪಿ ನಾಯಕರು ಕಳ್ಳನ ಮನಸ್ಸು ಹುಳ್ಳಗೆ ಎನ್ನುವಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಇದೇ ವೇಳೆ ಡಿ.ಕೆ.ಶಿವಕುಮಾರ್‌ ಟಾಂಗ್‌ ನೀಡಿದರು.

ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ರಾಜ್ಯ ಸರ್ಕಾರಕ್ಕೆ ಅವಕಾಶವಿದೆ. ಅದಕ್ಕಾಗಿ ಈ ಚುನಾವಣೆಯನ್ನು ಮತಪತ್ರದ ಮೂಲಕ ನಡೆಸಲು ಸರ್ಕಾರ ತೀರ್ಮಾನಿಸಿದೆ. ಇದಕ್ಕೆ ಬಿಜೆಪಿ ಆತಂಕ ಪಡುತ್ತಿರುವುದೇಕೆ? ಬಿಜೆಪಿ ಸರ್ಕಾರದ ಅವಧಿಯಲ್ಲೇ ಇದಕ್ಕೆ ಅವಕಾಶ ನೀಡಿ ಕಾನೂನು ಮಾಡಲಾಗಿದೆ. ಅದನ್ನು ಬಳಸಿಯೇ ಈ ತೀರ್ಮಾನ ಕೈಗೊಳ್ಳಲಾಗಿದೆ. ಬಿಜೆಪಿಗರು ಕಳ್ಳನ ಮನಸ್ಸು ಹುಳ್ಳಗೆ ಎಂಬಂತೆ ವರ್ತಿಸುತ್ತಿದ್ದಾರೆ ಎಂದರು.ನಾವು ಲೋಕಸಭೆ ಚುನಾವಣೆಗಳನ್ನು ಪರಿಶೀಲಿಸಿದ್ದೇವೆ. ಹೀಗಾಗಿ ಸಹಕಾರಿ ಸಂಘಗಳ ಚುನಾವಣೆ ನಡೆಸುವಂತೆಯೇ ಸ್ಥಳೀಯ ಸಂಸ್ಥೆ ಚುನಾವಣೆ ಮಾಡುತ್ತಿದ್ದೇವೆ. ಆದರೆ, ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯನ್ನು ಕೇಂದ್ರ ಚುನಾವಣಾ ಆಯೋಗವೇ ತೀರ್ಮಾನಿಸಲಿದೆ ಎಂದು ಅವರು ಇದೇ ವೇಳೆ ಸ್ಪಷ್ಟನೆ ನೀಡಿದರು.

ಎಲ್ಲರ ಪ್ರಕರಣ ರದ್ದು:ಕಾಂಗ್ರೆಸ್‌ ಕಾರ್ಯಕರ್ತರ ಪ್ರಕರಣ ರದ್ದಿನ ಕುರಿತಂತೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್‌, ನಮ್ಮ ಕಾರ್ಯಕರ್ತರದ್ದಷ್ಟೇ ಅಲ್ಲ, ಬಿಜೆಪಿ ಕಾರ್ಯಕರ್ತರ ಪ್ರಕರಣಗಳನ್ನೂ ಹಿಂಪಡೆಯಲಾಗಿದೆ. ಬಿಜೆಪಿ ಸರ್ಕಾರವಿದ್ದಾಗ ನಮ್ಮ ಕಾರ್ಯಕರ್ತರು, ಬೆಂಬಲಿಗರ ಮೇಲೆ ಬಲವಂತವಾಗಿ ಪ್ರಕರಣ ದಾಖಲಿಸಲಾಗಿತ್ತು. ಅದನ್ನು ರದ್ದು ಮಾಡಲಾಗಿದೆ. ಕೋವಿಡ್‌ ಸಮಯದಲ್ಲಿ ನನ್ನ ಮತ್ತು ಮುಖ್ಯಮಂತ್ರಿ ವಿರುದ್ಧವೂ ಪ್ರಕರಣ ಹಾಕಿದ್ದರು. ರಾಜ್ಯ, ರೈತರು, ಭಾಷೆಗಾಗಿ ಹೋರಾಟ ಮಾಡಿದವರ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನೂ ಹಿಂಪಡೆದಿದ್ದೇವೆ ಎಂದರು.

ನಾನು ಈ ಹಿಂದೆ ಬಂಧನಕ್ಕೊಳಗಾಗಿದ್ದ ಜಾರಿ ನಿರ್ದೇಶನಾಲಯ(ಇ.ಡಿ.)ದ ಪ್ರಕರಣ ವಜಾಗೊಂಡಿದೆ. ನನಗೆ ಆಗಿರುವ ಅನ್ಯಾಯ ಸರಿಪಡಿಸುವವರು ಯಾರು? ನಾನು ಜೈಲಿಂದ ಬಿಡುಗಡೆಯಾದಾಗ ಕಾರ್ಯಕರ್ತರು ಸ್ವಾಗತಿಸಿದ್ದನ್ನು ದೊಡ್ಡ ಚಿಂತಕರು, ಭಾಷಣಕಾರರು ಟೀಕಿಸಿದ್ದರು. ಅದೇ ನನ್ನ ಮೇಲಿನ ಪ್ರಕರಣ ವಜಾಗೊಂಡ ನಂತರ ಏಕೆ ಅಭಿನಂದಿಸಲಿಲ್ಲ. ಈ ಬಗ್ಗೆ ಚರ್ಚಿಸುವ ಅವಶ್ಯಕತೆಯಿಲ್ಲ. ರೈತ ಸಂಘ, ಬಿಜೆಪಿ, ಚಳವಳಿಗಾರರ ಮನವಿ ಸ್ವೀಕರಿಸಿ ಪರಿಶೀಲನೆ ನಡೆಸಿ ಪ್ರಕರಣಗಳನ್ನು ರದ್ದು ಮಾಡಿದ್ದೇವೆ ಎಂದು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

'ನಿಮಗೆ ಧಮ್ ಇದ್ರೆ..; ದ್ವೇಷ ಭಾಷಣ ಮಸೂದೆ ಜಾರಿಗೆ ಮುಂದಾಗಿರೋ ಕಾಂಗ್ರೆಸ್ ಸರ್ಕಾರಕ್ಕೆ ಸಿಟಿ ರವಿ ನೇರ ಸವಾಲು!
ಸಿಎಂ ಸಿದ್ದರಾಮಯ್ಯನವರೇ ಮತಿಗೇಡಿಗಳಾಗಿ, ಆದ್ರೆ ಅಧಿಕಾರಕ್ಕಾಗಿ ಲಜ್ಜೆಗೇಡಿಗಳಾಗಬೇಡಿ-ಆರ್. ಅಶೋಕ್ ಟೀಕೆ