ತಿಪಟೂರು (ಸೆ.19) : ನೋಟ್ ಅಮಾನೀಕರಣ, ಕಪ್ಪು ಹಣ ರದ್ದು, ಜಿಎಸ್‌ಟಿ ಜಾರಿಗೆ ತಂದು ತೆರಿಗೆ ಸಂಗ್ರಹಿಸಿ ಯಾರು ಮಾಡದ ಅಭಿವೃದ್ಧಿಯನ್ನು ದೇಶದಲ್ಲಿ ನಾವು ಸಾಧಿಸುತ್ತೇವೆ ಎಂದು ಪ್ರಚಾರ ಪಡೆಯುತ್ತ ಜನಸಾಮಾನ್ಯರ ಬದುಕಿನ ಜೊತೆ ಚೆಲ್ಲಾಟವಾಡುವುದೇ ಬಿಜೆಪಿ ಸರ್ಕಾರದ ಸಾಧನೆಯಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಆಕ್ರೋಶ ವ್ಯಕ್ತಪಡಿಸಿದರು. ನಗರದ ಠಾಗೂರ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಜಿಲ್ಲಾ ಸಿಐಟಿಯು ಹಮ್ಮಿಕೊಂಡಿದ್ದ ಸಿಐಟಿಯು 7ನೇ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಬಿಜೆಪಿ ಸರ್ಕಾರದ ಭ್ರಷ್ಟಚಾರ ಹಗರಣ; 224 ಕ್ಷೇತ್ರದ ಜನರಿಗೂ ತಿಳಿಸಲಾಗುವುದು: ಡಿ.ಕೆ.ಶಿವಕುಮಾರ್
ಜನಸ್ಪಂದನ ಟ್ರಸ್ಟ್ ಅಧ್ಯಕ್ಷ ಸಿ.ಬಿ.ಶಶಿಧರ್ ಮಾತನಾಡಿ, ಸಂಘಟನೆಗಳ ಹೋರಾಟ, ಆರ್ಥಿಕ ಬೇಡಿಕೆಗಳಿಗೆ ಸೀಮಿತಗೊಳಿಸದೆ ಪ್ರತಿ ಅನ್ಯಾಯದ ವಿರುದ್ಧ ಪ್ರಬಲ ಹಾಗೂ ಸಾರ್ವಜನಿಕ ಗಮನ ಸೆಳೆಯುವಂತೆ ಚಳವಳಿ ಕಟ್ಟುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.
ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಡಾ. ಅನಿಲ್ ಮಾತನಾಡಿ, ಹಿಂದಿನ ಚಳವಳಿಗಾರರು ರೈತ ಕಾರ್ಮಿಕರ ಸಖ್ಯತೆಗೆ ಆದ್ಯತೆ ನೀಡುತ್ತಿದ್ದರು. ಇಂದು ಮುಖಂಡರಿಗೆ ಐಕ್ಯತೆ ಮತ್ತು ತಿಳುವಳಿಕೆ ಮಂತ್ರವಾಗಬೇಕೆಂದರು. ಜಿಲ್ಲಾ ಕಾರ್ಯದರ್ಶಿ ಜಿ. ಕಮಲ ಮಾತನಾಡಿ, ಸಮ್ಮೇಳನ ಬೆಲೆ ಏರಿಕೆ, ರೈತ ಕಾರ್ಮಿಕರ ವಿರೋಧಿ ಕಾನೂನುಗಳು, ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆ, ಉದ್ಯೋಗ ಸೃಷ್ಟಿ, ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಆಗ್ರಹಿಸಿ ಕೋಮು ಸಾಮರಸ್ಯಕ್ಕೆ ಒತ್ತಾಯಿಸಿ ನಡೆಯುತ್ತಿದೆ ಎಂದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೈಯದ್ ಮುಜೀಬ್ ಮಾತನಾಡಿ, ದೇಶದಲ್ಲಿ ರೈತರ, ಕಾರ್ಮಿಕರ ಸಖ್ಯತೆಗೆ ಕರೆ ನೀಡದೆ ದುಡಿಯುವ ವರ್ಗದ ರೈತರು, ಕಾರ್ಮಿಕರು ಸಂಕಷ್ಟಕ್ಕೆ ಸ್ಪಂದಿಸುವ ಬದಲು ಮಕ್ಕಳು, ಮಹಿಳೆಯರು, ದಲಿತರ ಮೇಲೆ ಲೈಂಗಿಕ, ಜಾತಿ ದೌರ್ಜನ್ಯ ತಡೆಯವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಪದಾಧಿಕಾರಿಗಳಾದ ಎಂ. ಲೋಕೇಶ್, ಬಿ. ಉಮೇಶ್, ಎಸ್.ಡಿ.ಪಾರ್ವತಮ್ಮ, ಅನುಸೂಯ ಗುಬ್ಬಿ, ಪ್ರಗತಿಪರ ಸಂಘಟನೆಗಳ ಅಲ್ಲಾಬಕ್ಷಿ ವಿವಿಧ ಸಂಘಟನೆಗಳ ಎನ್.ಕೆ. ಸುಬ್ರಮಣ್ಯ, ಮಂಜುಳಾ, ಬಿ.ಎಸ್. ಅನುಸೂಯ ಮತ್ತಿತರರಿದ್ದರು.
ಬಿಜೆಪಿ 40% ಕಮೀಷನ್ ವಿರುದ್ಧ ಕಾಂಗ್ರೆಸ್ ಅಭಿಯಾನ; ಹಾಡು, ನೋಟು ಬಿಡುಗಡೆ
ಜನತೆ ಪ್ರಶ್ನಿಸಲೇಬೇಕಾದ ಸಂದರ್ಭ ಬಂದಿದೆ:
ಜನಸಾಮಾನ್ಯರು ಅನುಭವಿಸುತ್ತಿರುವ ಸಮಸ್ಯೆಗಳು ಮುನ್ನೆಲೆಗೆ ಬಂದು ಪರಿಹಾರ ಕಾಣದಂತೆ ದೃಶ್ಯ ಮಾಧ್ಯಮಗಳ ಮೂಲಕ ತಡೆಯಲಾಗುತ್ತಿದೆ. ಸರ್ಕಾರ ಸುಳ್ಳು ಸಾಧನೆಗಳ ಬಗ್ಗೆ ಸುಖಾಸುಮ್ಮನೆ ನೀಡುತ್ತಿರುವ ಜಾಹೀರಾತನ್ನು ಪ್ರಶ್ನಿಸಿದರೂ ದೇಶದ್ರೋಹಿಗಳ ಪಟ್ಟಕಟ್ಟಲಾಗುತ್ತಿದೆ. ದೇಶ ರಕ್ಷಿಸುವ ಸೈನ್ಯದ ನೇಮಕಾತಿಯನ್ನೇ ಗುತ್ತಿಗೆ ಆಧಾರದಲ್ಲಿ ಅಗ್ನಿಪಥ್ ಪ್ರಾರಂಭಿಸಿರುವುದನ್ನು ನೋಡಿದರೆ ಇನ್ನು ಮುಂದೆ ಯಾವ ಕಾರ್ಖಾನೆಯಲ್ಲಿ ಕಾಯಂ ಉದ್ಯೋಗ ಸಿಗುತ್ತಾ ಎನ್ನುವ ಅನುಮಾನ ಮೂಡುತ್ತಿದೆ. ಜನತೆ ಸೂಕ್ಷ್ಮವಾಗಿ ಗಮನಿಸಬೇಕಾದ ಹಾಗೂ ಪ್ರಶ್ನಿಸಲೇಬೇಕಾದ ಸಂದರ್ಭ ಬಂದಿದ್ದು ಮೌನವಾಗಿರಬಾರದು. ದೇಶದಲ್ಲಿ ತೆರಿಗೆ ಸಂಗ್ರಹ ಹೆಚ್ಚಿದ್ದರೂ ಜನರ ಪರಿಶ್ರಮದಿಂದ ಕಟ್ಟಿರುವ ಸರ್ಕಾರಿ ಆಸ್ತಿಗಳನ್ನು ಮಾರಿ ನಗದೀಕರಣ ಮಾಡುತ್ತಿರುವುದು ನೋಡಿದರೆ ಪ್ರಧಾನಿ ತನ್ನ ಸ್ನೇಹಿತನನ್ನು ವಿಶ್ವದ ಎರಡನೇ ಶ್ರೀಮಂತನನ್ನಾಗಿಸಲೇ ಎಂದು ಅನಿಸುತ್ತಿದೆ ಎಂದು ಮೀನಾಕ್ಷಿ ಸುಂದರಂ ಟೀಕಿಸಿದರು.