ಅಪ್ಪ, ಮಗ ಗೆದ್ದಿದ್ದರೂ ಹಿಂದುಳಿದ ಕರ್ನಾಟಕ ಪಟ್ಟ ಏಕೆ?: ಸಿ.ಸಿ.ಪಾಟೀಲ್

By Govindaraj SFirst Published Sep 19, 2022, 5:16 AM IST
Highlights

ಅಪ್ಪ ಬಿಟ್ಟರೆ ಮಗ, ಮಗ ಬಿಟ್ಟರೆ ಅಪ್ಪ ಆಡಳಿತ ನಡೆಸಿದರೂ ಇಂದಿಗೂ ಆ ಪ್ರದೇಶ ಹಿಂದುಳಿದ ಕರ್ನಾಟಕ ಎಂಬ ಹಣೆಪಟ್ಟಿಹೊಂದಿದೆ ಎಂದರೆ ಅದಕ್ಕೆ ಯಾರು ಹೊಣೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಹೇಳಿದರು. 

ಗದಗ (ಸೆ.19): ಅಪ್ಪ ಬಿಟ್ಟರೆ ಮಗ, ಮಗ ಬಿಟ್ಟರೆ ಅಪ್ಪ ಆಡಳಿತ ನಡೆಸಿದರೂ ಇಂದಿಗೂ ಆ ಪ್ರದೇಶ ಹಿಂದುಳಿದ ಕರ್ನಾಟಕ ಎಂಬ ಹಣೆಪಟ್ಟಿಹೊಂದಿದೆ ಎಂದರೆ ಅದಕ್ಕೆ ಯಾರು ಹೊಣೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಹೇಳಿದರು. ಭಾನುವಾರ ಗದಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ಉತ್ತರಿಸಿ ಅಪ್ಪ- ಮಕ್ಕಳು ಅಲ್ಲಿ ಮಾಡಿದ ಅಭಿವೃದ್ಧಿ ಏನು? ಬಾಯಿ ಚಪಲಕ್ಕೆ ಮಾತನಾಡಬಾರದು. 

ಸಿಎಂ ಅವರು 5000 ಕೋಟಿ ಅನುದಾನ ಬಿಡುಗಡೆ ಮಾಡುವ ವಿಚಾರ ಕೇಳಿ ಬಿಜೆಪಿ ಶಾಸಕರು ಜೊಲ್ಲು ಸುರಿಸುತ್ತಿದ್ದಾರೆ ಎನ್ನುವ ಹೇಳಿಕೆ ಅವರ ರಾಜಕೀಯ ಅನುಭವಕ್ಕೆ ತಕ್ಕದ್ದಲ್ಲ. ಅಪ್ಪ ಬಿಟ್ಟರೆ ಮಗ, ಮಗ ಬಿಟ್ಟರೆ ಅಪ್ಪ ಆಡಳಿತ ನಡೆಸಿದರೂ ಹಿಂದುಳಿದ ಕರ್ನಾಟಕ ಎಂಬ ಹಣೆ ಪಟ್ಟಿಕಟ್ಟಿಕೊಂಡಿದೆ. ಬಿಜೆಪಿ ಸರ್ಕಾರ ಕಲ್ಯಾಣ ಕರ್ನಾಟಕ ಎಂದು ಮರು ನಾಮಕರಣ ಮಾಡಿ ಅಲ್ಲಿನ ಜನರ ಘನತೆ ಹೆಚ್ಚಿಸಿದೆ ಎಂದರು. ಜೊಲ್ಲು ಸುರಿಸುವ ರೂಢಿ ಇದ್ದುದರಿಂದಲೇ ಜೊಲ್ಲು ಸುರಿಸುವ ಬಗ್ಗೆ ಮಾತನಾಡ್ತಾರೆ. ಮಾತಿನ ಮೇಲೆ ಬಿಗಿ ಇರಬೇಕು ಎಂದು ಕಿಡಿಕಾರಿದರು.

ಬಾಗಲಕೋಟೆ ಜಿಲ್ಲೆಯಲ್ಲಿ ಮಳೆ ಪ್ರವಾಹದಿಂದ ಉಂಟಾದ ಹಾನಿ ವೀಕ್ಷಿಸಿದ ಸಚಿವ ಸಿ.ಸಿ.ಪಾಟೀಲ್‌

ಜೈಲಿಗೆ ಹೋದವರ ಬಾಯಲ್ಲಿ ಭಗವದ್ಗೀತೆಯ ಮಾತು: ತಿಹಾರ್‌ ಜೈಲಿಗೆ ಹೋಗಿ ಬಂದವರ ಕೈಯಲ್ಲಿ ಭಗವದ್ಗೀತೆ ಮಾತು ಕೇಳುತ್ತಿರುವುದು ತೀರಾ ಹಾಸ್ಯಾಸ್ಪದ ಸಂಗತಿಯಾಗಿದೆ ಎಂದು ಡಿಕೆಶಿ ವಿರುದ್ಧ ಪರೋಕ್ಷವಾಗಿ ಹರಿಹಾಯ್ದ ಸಿ.ಸಿ. ಪಾಟೀಲ, ಪ್ಲೇಕಾರ್ಡ್‌ ಹಿಡಿದು ಪ್ರತಿಭಟನೆ ಮಾಡಿಸುವ ತಾಕತ್ತು ನನಗೂ ಇದೆ. ಹೈದ್ರಾಬಾದ್‌ ನಲ್ಲಿ ಸಿಎಂ ಬೊಮ್ಮಾಯಿಗೆ 40% ಕಮಿಷನ್‌ ಸರ್ಕಾರ ಎಂದು ನಾಮಫಲಕ ಪ್ರದರ್ಶಿಸಿ ಅವಮಾನ ಮಾಡುವ ಪ್ರಯತ್ನ ಮಾಡಿದ್ದಾರೆ. ಕರ್ನಾಟಕ ಕಾಂಗ್ರೆಸ್‌ ಈ ಕೃತ್ಯದ ಕರ್ತೃ. ಅವಮಾನ ಮಾಡಿದವರ ಮನೆ ಎದುರು ಪ್ರತಿಭಟನೆ ಮಾಡಿಸುವ ತಾಕತ್ತು ನನಗೂ ಇದೆ. 

ಎಷ್ಟು ಜನರನ್ನು ಪ್ರತಿಭಟನೆಗೆ ಕಳುಹಿಸಲಿ ಹೇಳಿ ಎಂದು ಖಾರವಾಗಿ ಪ್ರತಿಕ್ರಿಯಿಸಿದ ಅವರು, ಭ್ರಷ್ಟಾಚಾರ ಎಸಗಿ ತಿಹಾರ ಜೈಲಿಗೆ ಹೋಗಿ ಬಂದವರು ಈ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು. ಪಂಚಮಸಾಲಿ 2ಎ ಮೀಸಲಾತಿ ಕುರಿತು ಹೋರಾಟದ ಬಗ್ಗೆ ಪ್ರತಿಕ್ರಿಮೆ ನೀಡಿದ ಸಚಿವ ಸಿ.ಸಿ. ಪಾಟೀಲ, ಹೋರಾಟ ಮಾಡಲಿ ಅದಕ್ಕೆ ನನ್ನ ಬೆಂಬಲವಿದೆ. ಆದರೆ, ಸ್ವಾಮೀಜಿ ಅದ್ಯಾವ ಕಾರಣಕ್ಕೆ ಸಿಎಂ ಅವರನ್ನೇ ಟಾರ್ಗೆಚ್‌ ಮಾಡಿ ಹೋರಾಟ ಮಾಡುತ್ತಿದ್ದಾರೆ ತಿಳಿಯುತ್ತಿಲ್ಲ, ನಮ್ಮ ಸಮುದಾಯಕ್ಕೆ 2ಎ ಸಿಗಬೇಕು ಎನ್ನುವುದು ನನ್ನ ಬಲವಾದ ಪ್ರತಿಪಾದನೆ, ನನ್ನ ಸಮುದಾಯದಲ್ಲಿ ಸಾಕಷ್ಟುಸಂಖ್ಯೆಯ ಬಡವರಿದ್ದಾರೆ.

ಅಭಿವೃದ್ಧಿಯ ಸಾಧನೆಯೇ ಮಾತನಾಡುವಂತಾಗಲಿ; ಸಚಿವ ಸಿ.ಸಿ.ಪಾಟೀಲ್

ನಮ್ಮದು ಕೃಷಿಯನ್ನೇ ನಂಬಿದ ಸಮುದಾಯವಾಗಿದೆ. ಮೀಸಲಾತಿ ವಿಷಯದಲ್ಲಿ ಈಗಾಗಲೇ ನಮ್ಮ ಸರ್ಕಾರ ಶಾಶ್ವತ ಸಮಗ್ರ ವರದಿ ನೀಡಲು ಹಿಂದುಳಿದ ವರ್ಗಗಳ ಆಯೋಗಕ್ಕೆ ತಿಳಿಸಲಾಗಿದೆ. ಎಲ್ಲ ಸಮುದಾಯಕ್ಕೂ ಮೀಸಲಾತಿ ಸಿಗಬೇಕು. ಈ ವಿಷಯದಲ್ಲಿ ಮತ್ತೆ ಯಾವುದೇ ಗೊಂದಲ ಉಂಟಾಗದಂತೆ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ. ಆದರೆ, ಶಿಗ್ಗಾಂವಿಯಲ್ಲಿಯೇ ಯಾಕೆ ಪ್ರತಿಭಟನೆ ಮಾಡುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತಿಲ್ಲ,  ಬಸವಜಯ ಮೃತ್ಯುಂಜಯ ಸ್ವಾಮೀಜಿ ನಾಡಿನ ದೊಡ್ಡ ಸಮುದಾಯದ ಪ್ರತಿನಿಧಿಯಾಗಿದ್ದು ಹೋರಾಟ ಮತ್ತು ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ ಸಮುದಾಯದ ಎಲ್ಲ ಹಿರಿಯ ನಾಯಕರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಂಡರೆ ಸೂಕ್ತ ಎನ್ನುವುದು ನನ್ನ ಅಭಿಪ್ರಾಯ ಎಂದರು.

click me!