ಪರಪ್ಪನ ಅಗ್ರಹಾರದ ಮೇಲೆ ಪೊಲೀಸ್ ದಾಳಿ, ಗುತ್ತಿಗೆದಾರ ಚೆಲುವರಾಜು ಅವರಿಂದ ಶಾಸಕ ಮುನಿರತ್ನ ಅವರ ಮತ್ತೊಂದು ಆಡಿಯೋ ಬಿಡುಗಡೆ ಬಗ್ಗೆ ಕೇಳಿದಾಗ ನಾನು ಅಮೆರಿಕದಲ್ಲಿದ್ದ ಕಾರಣಕ್ಕೆ ಯಾವ ವಿಚಾರಗಳ ಬಗ್ಗೆಯೂ ಮಾಹಿತಿ ಇಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಕಲಬುರಗಿ (ಸೆ.18): ಎಲ್ಲರ ಮೇಲೂ ಸದಾ ಆರೋಪ ಮಾಡುವುದೇ ಬಿಜೆಪಿ ಕೆಲಸ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ಕಲಬುರಗಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ನಾಗಮಂಗಲ, ಮಂಗಳೂರು ಸೇರಿದಂತೆ ಒಂದಷ್ಟು ಕಡೆ ಗಣಪತಿ ವಿಸರ್ಜನೆ ಗಲಾಟೆಗಳಲ್ಲಿ ಪಿಎಫ್‌ಐ, ಬಾಂಗ್ಲಾ ವಲಸಿಗರ ಕೈವಾಡವಿದೆ ಎನ್ನುವ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, ಗಣಪತಿ ವಿಸರ್ಜನೆ ವೇಳೆ ಉಂಟಾಗಿರುವ ಗಲಭೆಗಳ ವಿರುದ್ಧ ನಮ್ಮ ಸರ್ಕಾರ ಕೂಡಲೇ ಕ್ರಮ ತೆಗೆದುಕೊಂಡಿದೆ. ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಕೆಲಸ ಸರ್ಕಾರ ಮಾಡುತ್ತದೆ. ಪೊಲೀಸ್ ಇಲಾಖೆ ಯಾವ ಕ್ರಮ ತೆಗೆದುಕೊಳ್ಳಬೇಕು ಅದನ್ನು ತೆಗೆದುಕೊಳ್ಳುತ್ತದೆ. ಈ ವಿಚಾರದಲ್ಲಿ ರಾಜಕಾರಣ ಮಾತನಾಡುವವರು ಮಾತನಾಡಲಿ ಎಂದರು.
ಪರಪ್ಪನ ಅಗ್ರಹಾರದ ಮೇಲೆ ಪೊಲೀಸ್ ದಾಳಿ, ಗುತ್ತಿಗೆದಾರ ಚೆಲುವರಾಜು ಅವರಿಂದ ಶಾಸಕ ಮುನಿರತ್ನ ಅವರ ಮತ್ತೊಂದು ಆಡಿಯೋ ಬಿಡುಗಡೆ ಬಗ್ಗೆ ಕೇಳಿದಾಗ ನಾನು ಅಮೆರಿಕದಲ್ಲಿದ್ದ ಕಾರಣಕ್ಕೆ ಯಾವ ವಿಚಾರಗಳ ಬಗ್ಗೆಯೂ ಮಾಹಿತಿ ಇಲ್ಲ. ಎಲ್ಲದರ ಬಗ್ಗೆ ತಿಳಿದು ಮಾತನಾಡುತ್ತೇನೆ ಎಂದರು. ಅಮೆರಿಕ ಪ್ರವಾಸದ ಬಗ್ಗೆ ಕೇಳಿದಾಗ ಅಮೆರಿಕದ ಚುನಾವಣಾ ಪದ್ಧತಿ, ಅಲ್ಲಿನ ಯುವಕರ ಉತ್ಸಾಹ, ಆಸಕ್ತಿ ಸೇರಿದಂತೆ ಅನೇಕ ವಿಚಾರಗಳನ್ನು ನಾವು ಕಲಿಯಬೇಕಿದೆ. ಅಮೆರಿಕಗೆ ಕುಟುಂಬ ಸಮೇತ ಖಾಸಗಿ ಪ್ರವಾಸಕ್ಕೆ ಹೋಗಿದ್ದೆ ಎಂದು ಹೇಳಿದರು. ಅಮೆರಿಕ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿ ಕಮಲ ಹ್ಯಾರಿಸ್ ಸೇರಿದಂತೆ ನಾನು ಯಾರನ್ನೂ ಭೇಟಿಯಾಗಿಲ್ಲ. ಇದೆಲ್ಲವೂ ಸುಳ್ಳು ಸುದ್ದಿ. ನಾನು ಹೋದ ಸಮಯದಲ್ಲೇ ಚುನಾವಣಾ ರ್‍ಯಾಲಿ ನಡೆಯುತ್ತಿತ್ತು. ಅದು ಹೇಗೆ ನಡೆಯುತ್ತದೆ ಎಂದು ವೀಕ್ಷಿಸಿದೆ ಎಂದರು.
ಯಾರ ಪರ್ಮಿಷನ್ ಕೇಳಬೇಕು: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ನಮ್ಮ ಪಕ್ಷದ ನಾಯಕರು. ಅವರನ್ನು ಭೇಟಿಯಾಗಲು ಯಾರ ಅನುಮತಿ ಕೇಳಬೇಕು? ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ. ಅಮೆರಿಕದಲ್ಲಿ ರಾಹುಲ್ ಗಾಂಧಿ ಅವರ ಜತೆಗಿನ ಭೇಟಿ ಹಾಗೂ ಚರ್ಚೆ ಕುರಿತು ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ರಾಹುಲ್ ನಮ್ಮ ನಾಯಕ. ಅವರನ್ನು ಭೇಟಿಯಾಗಲು ಯಾರ ಅನುಮತಿ ಕೇಳಬೇಕು? ಅಲ್ಲದೆ, ರಾಹುಲ್ ಬಳಿ ಏನು ಚರ್ಚಿಸಿದೆ ಎಂಬುದನ್ನು ಬಹಿರಂಗವಾಗಿ ಹೇಳುವುದಿಲ್ಲ. ನನ್ನ ತಮ್ಮ, ಪತ್ನಿ, ಸ್ವಾಮೀಜಿಗಳ ಬಳಿ ಏನು ಚರ್ಚೆ ಮಾಡಿದೆ ಎಂಬುದನ್ನು ಮಾಧ್ಯಮಗಳಿಗೆ ಹೇಳಲಾಗುತ್ತದೆಯೇ.
ಕಾಂಗ್ರೆಸ್‌ನವರು ವಾಸ್ತವಾಂಶಕ್ಕೆ ಆದ್ಯತೆ ನೀಡಿ ಸರ್ಕಾರ ನಡೆಸಲಿ: ಸೋಮಣ್ಣ ಪ್ರಶ್ನೆ
ಹಾಗೆಯೇ, ನಮ್ಮ ನಾಯಕರೊಂದಿಗಿನ ಚರ್ಚೆಯನ್ನೂ ಹೇಳುವುದಿಲ್ಲ ಎಂದರು. ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಮುನಿರತ್ನ ಬಂಧನದ ಕುರಿತಂತೆ ಪ್ರತಿಕ್ರಿಯಿಸಿ, ಶಾಸಕ ಮುನಿರತ್ನ ಒಕ್ಕಲಿಗ ಸಮುದಾಯದ ಕುರಿತು ಅವ ಹೇಳನಕಾರಿ ಮಾತುಗಳನ್ನಾಡಿದ್ದಾರೆ. ಅದರ ಬಗ್ಗೆ ಸಮುದಾಯದ ನಾಯಕರು, ಸ್ವಾಮೀಜಿಗಳು ಮಾತನಾಡಬೇಕು. ಅದರಲ್ಲೂ ಬಿಜೆಪಿಯ ದೊಡ್ಡ ದೊಡ್ಡ ನಾಯಕರು ಪ್ರತಿಕ್ರಿಯಿಸಲಿ. ಸಾಂವಿಧಾನಿಕ ಹುದ್ದೆ ಹೊಂದಿರುವ ಆರ್. ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ - ಹಲವು ನಾಯಕರಿದ್ದಾರೆ. ಅವರು ಮುನಿರತ್ನ ನುಡಿ ಸರಿಯೋ? ತಪ್ಪೋ ಎಂಬುದನ್ನು ಜನರಿಗೆ ಹೇಳಲಿ ಎಂದು ಹೇಳಿದರು.