* ನಮ್ಮದು ವಿಶ್ವದ ಅತಿ ದೊಡ್ಡ ಪಕ್ಷ, ಯಾರೊಂದಿಗೂ ಮೈತ್ರಿ ಇಲ್ಲ
* ಪಕ್ಷಸಂಘಟನೆಗೆ ಬಿಎಸ್‌ವೈ ಅನುಭವ ಬಳಕೆ
* ಚಾಮುಂಡಿಬೆಟ್ಟದಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಅರುಣ್ ಸಿಂಗ್
ಮೈಸೂರು(ಸೆ.01): ಮುಳುಗುತ್ತಿರುವ ಜೆಡಿಎಸ್ ಜೊತೆ ಬಿಜೆಪಿ ಹೊಂದಾಣಿಕೆ ಮಾಡಿಕೊಳ್ಳಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಮಂಗಳವಾರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕೃತವಾಗಿ ಅಥವಾ ಅನಧಿಕೃತವಾಗಿ ಯಾವುದೇ ಪಕ್ಷದೊಂದಿಗೆ ಬಿಜೆಪಿ ಹೊಂದಾಣಿಕೆ ಇಲ್ಲ. ಜೆಡಿಎಸ್ ಮುಳುಗುತ್ತಿದ್ದರೆ, ಬಿಜೆಪಿ ಬೆಳೆಯುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಹಿಡಿಯಲು ನಮ್ಮ ಸಂಕಲ್ಪ. ಜೆಡಿಎಸ್, ಕಾಂಗ್ರೆಸ್ ಎರಡೂ ಸರ್ಕಾರಗಳನ್ನ ಜನ ನೋಡಿದ್ದಾರೆ. ನಾವು ಯಾರೊಂದಿಗೂ ಮೈತ್ರಿ ಇಲ್ಲ. ನಮ್ಮದು ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷ ಎಂದು ಅವರು ಹೇಳಿದ್ದಾರೆ.
ಬಿಎಸ್‌ವೈ, ವಿಜಯೇಂದ್ರ ಬಗ್ಗೆ ದಿಲ್ಲಿಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಮಾತು
ಪಕ್ಷ ಸಂಘಟನೆಗೆ ಬಿಎಸ್‌ವೈ ಅನುಭವ ಬಳಕೆ:
ಬಿ.ಎಸ್.ಯಡಿಯೂರಪ್ಪ ಅವರ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಯಡಿಯೂರಪ್ಪ ಒಬ್ಬ ದೊಡ್ಡ ನಾಯಕ. ಅವರಿಗೆ ಸಂಘಟನೆ ಬಗ್ಗೆ ಅನುಭವ ಇದ್ದು ಆ ಅನುಭವವನ್ನು ಪಕ್ಷ ಸಂಘಟನೆಗೆ ಬಳಸಿಕೊಳ್ಳುತ್ತೇವೆ ಎಂದು ಅವರು ತಿಳಿಸಿದರು. ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ ಉತ್ತಮ ಆಡಳಿತ ನೀಡುತ್ತಿದ್ದು ರಾಜ್ಯದ ಹಿತದೃಷ್ಟಿಯಿಂದ ಪರಿಪೂರ್ಣ ಕೆಲಸ ಮಾಡುತ್ತಿದೆ. ಹಳೇ ಮೈಸೂರು ಭಾಗದಲ್ಲಿ ದಿನದಿನಕ್ಕೂ ಸಂಘಟನೆ ಗಟ್ಟಿಯಾಗುತ್ತಿದ್ದು ಈ ಭಾಗದಲ್ಲೂ ಅತಿ ಹೆಚ್ಚು ಸ್ಥಾನಗಳನ್ನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸಚಿವ ಸಂಪುಟದಲ್ಲಿ ಯಾವುದೇ ಗೊಂದಲ ಇಲ್ಲ. ಇಬ್ಬರು ಸಚಿವರು ಖಾತೆಯನ್ನ ಸ್ವೀಕಾರ ಮಾಡಿದ್ದಾರೆ. ಖಾತೆ ಹಂಚಿಕೆ ಮುಖ್ಯಮಂತ್ರಿ ಪರಮಾಧಿಕಾರ, ಅದರಲ್ಲಿ ನಮ್ಮ ಪಾತ್ರ ಇರುವುದಿಲ್ಲ. ಖಾತೆಗಳು ಹಂಚಿಕೆಯಾಗಿ ಎಲ್ಲಾ ಸಚಿವರು ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಯಾವುದೇ ಒತ್ತಡ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.