* ಮತ್ತೆ ಯಡಿಯೂರಪ್ಪ ಕುಟುಂಬದ ಗುಡುಗಿದ ಬಸನಗೌಡ ಪಾಟೀಲ್ ಯತ್ನಾಳ್
* ಯಡಿಯೂರಪ್ಪ ಪುತ್ರ ವಿಜಯೇಂದ್ರಗೆ ಸಚಿವ ಸ್ಥಾನ ನೀಡುವ ವಿಚಾರವಾಗಿ ಟಾಂಗ್
* ಇನ್ನು ವಿಜಯಪುರಕ್ಕೂ ಸಚಿವ ಸ್ಥಾನ ಬೇಕೆಂದು ಆಗ್ರಹ
ವಿಜಯಪುರ, (ಆ.31): ಒಂದೇ ಕುಟುಂಬಕ್ಕೆ ಎಷ್ಟು ಅಂತಾ ಅವಕಾಶ ನೀಡೋದು ಎಂದು ಪರೋಕ್ಷವಾಗಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಗೆ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪರೋಕ್ಷ ಟಾಂಗ್ ಕೊಟ್ಟಿದ್ದಾರೆ.
ಯಡಿಯೂರಪ್ಪ ಪುತ್ರ ವಿಜಯೇಂದ್ರಗೆ ಸಚಿವ ಸ್ಥಾನ ನೀಡುವ ವಿಚಾರವಾಗಿ ವಿಜಯಪುರದಲ್ಲಿ ಇಂದು (ಆ.31) ಪ್ರತಿಕ್ರಿಯಿಸಿದ ಯತ್ನಾಳ್,
ಒಂದೇ ಕುಟುಂಬದಲ್ಲಿ ಎಷ್ಟು ಜನರಿಗೆ ಅವಕಾಶ ನೀಡೋಕೆ ಆಗುತ್ತೆ..? ಒಂದೇ ಕುಟುಂಬದ ಮೂರ್ನಾಲ್ಕು ಮಂದಿಗೆ ಅವಕಾಶ ನೀಡಿದರೆ ಪಕ್ಷದ ಕಾರ್ಯಕರ್ತರು ಏನು ಮಾಡಬೇಕು..? ಯಡಿಯೂರಪ್ಪ ಇಷ್ಟು ದಿನ ಸಿಎಂ ಆಗಿದ್ದರು, ರಾಘವೇಂದ್ರ ಸಂಸದರಿದ್ದಾರೆ. ವಿಜಯೇಂದ್ರ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿದ್ದಾರೆ. ಇಷ್ಟು ಸಾಕು. ಇನ್ನೂ ಏನು ಕೊಡಬೇಕು? ಶಾಸಕ, ಸಚಿವ, ಸಿಎಂ, ಪ್ರಧಾನಿ ಹುದ್ದೆ ಎಲ್ಲವನ್ನೂ ಒಂದೇ ಕುಟುಂಬಕ್ಕೆ ನೀಡಲು ಸಾಧ್ಯವೇ ಎಂದು ಕುಟುಕಿದರು.
undefined
ವರಿಷ್ಠರು ಅನುವಂಶೀಯ ರಾಜಕಾರಣಕ್ಕೆ ಮಣೆ ಹಾಕಲ್ಲ : ಯತ್ನಾಳ್
ರಾಜ್ಯ ಸಚಿವ ಸಂಪುಟದಲ್ಲಿ ವಿಜಯಪುರ ಜಿಲ್ಲೆಗೂ ಸಚಿವ ಸ್ಥಾನ ನೀಡುವಂತಾಗಬೇಕು. ನ್ಯಾಯಯುತವಾಗಿ ಜಿಲ್ಲೆಗೂ ಸಂಪುಟದಲ್ಲಿ ಸಚಿವ ಸ್ಥಾನ ಸಿಗಬೇಕು. ಸಿಂದಗಿ ಉಪಚುನಾವಣೆಗೂ ಮುನ್ನ ಸಚಿವ ಸ್ಥಾನ ನೀಡುವ ಬಗ್ಗೆ ಸರ್ಕಾರ ನಿರ್ಧಾರ ಮಾಡಬೇಕು ಎಂದು ಆಗ್ರಹಿಸಿದರು.
ಬಾಗಲಕೋಟೆ, ಶಿವಮೊಗ್ಗ ಜಿಲ್ಲೆಗೆ 2 ಸಚಿವ ಸ್ಥಾನ ನೀಡುವ ಅವಶ್ಯಕತೆ ಏನಿತ್ತು..? ಕಲಬುರಗಿ, ಚಾಮರಾಜನಗರ, ಮೈಸೂರು ಹಾಗೂ ಯಾದಗಿರಿ ಜನತೆ ನಿಮಗೆ ಮತ ಹಾಕಿಲ್ಲವಾ..? ಎಲ್ಲಾ ಜಿಲ್ಲೆಗೂ ಒಂದೊಂದು ಸಚಿವ ಸ್ಥಾನ ನೀಡಬೇಕು. ಕೆಲವರಿಗೆ ಯತ್ನಾಳ್ ಸಚಿವ ಆಗಬಾರದು ಎಂಬ ಬಯಕೆ ಇದೆ. ಹಣೆಬರಹದಲ್ಲಿದ್ರೆ ಅದನ್ನ ತಪ್ಪಿಸೋಕೆ ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ರು.
ಇನ್ನು ಸಿಎಂ ಸ್ಥಾನದ ಮೇಲೆ ಯತ್ನಾಳ್ಗೆ ಕಣ್ಣು ಎಂಬ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಅವರು, ಕಾಲ ಕೂಡಿ ಬಂದಲ್ಲಿ ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಕಾಲ ಯಾರನ್ನೂ ಕೇಳಿ ಬರೋವಂತದ್ದಲ್ಲ. ಸಿಎಂ ರೇಸ್ನಲ್ಲಿ ಬೊಮ್ಮಾಯಿ ಹೆಸರೇ ಇರಲಿಲ್ಲ. ಆದರೂ ಅವರು ಸಿಎಂ ಆಗಲಿಲ್ಲವೇ..? ಅದೇ ರೀತಿ ನಮಗೂ ಒಳ್ಳೆಯ ಕಾಲ ಬರುತ್ತೆ ಎಂದು ನಿರೀಕ್ಷೆ ಮಾಡೋದ್ರಲ್ಲಿ ತಪ್ಪೇನಿಲ್ಲ ಎಂದು ಸಿಎಂ ಆಗುವ ಆಸೆ ವ್ಯಕ್ತಪಡಿಸಿದರು.