ರಾಜ್ಯ ಕಾಂಗ್ರೆಸ್‌ಗೆ ಪ್ರತ್ಯೇಕ ರೂಲ್, ಉಗ್ರಪ್ಪಗೆ ಹೊಣೆ: ಡಿಕೆಶಿ

By Kannadaprabha NewsFirst Published Sep 1, 2021, 8:05 AM IST
Highlights
  • ರಾಜ್ಯ ಕಾಂಗ್ರೆಸ್‌ಗೆ ಪ್ರತ್ಯೇಕ ಸಂವಿಧಾನ ರಚಿಸಲು ಮುಂದಾಗಿದ್ದು, ಇದರ ಹೊಣೆಯನ್ನು ಹಿರಿಯ ಮುಖಂಡ ವಿ.ಎಸ್‌. ಉಗ್ರಪ್ಪಗೆ
  • ಸಿದ್ಧವಾದ ನಂತರ ಕಾಂಗ್ರೆಸ್‌ ಕಾರ್ಯಕರ್ತರು ಅದರಂತೆ ನಡೆದುಕೊಳ್ಳಬೇಕು

ಬೆಂಗಳೂರು (ಸೆ.01):  ರಾಜ್ಯ ಕಾಂಗ್ರೆಸ್‌ಗೆ ಪ್ರತ್ಯೇಕ ಸಂವಿಧಾನ ರಚಿಸಲು ಮುಂದಾಗಿದ್ದು, ಇದರ ಹೊಣೆಯನ್ನು ಹಿರಿಯ ಮುಖಂಡ ವಿ.ಎಸ್‌. ಉಗ್ರಪ್ಪ ಅವರಿಗೆ ನೀಡಲಾಗಿದೆ. ಅದು ಸಿದ್ಧವಾದ ನಂತರ ಕಾಂಗ್ರೆಸ್‌ ಕಾರ್ಯಕರ್ತರು ಅದರಂತೆ ನಡೆದುಕೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಮಂಗಳವಾರ ರೇಸ್‌ಕೋರ್ಸ್‌ ರಸ್ತೆಯಲ್ಲಿರುವ ಕಾಂಗ್ರೆಸ್‌ ಭವನದಲ್ಲಿ ಆಯೋಜಿಸಲಾಗಿದ್ದ ಎನ್‌ಎಸ್‌ಯುಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್‌ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜ್ಯ ಕಾಂಗ್ರೆಸ್‌ ಸಂವಿಧಾನ ಯಾವ ರೀತಿ ಇರಬೇಕೆಂದು ಉಗ್ರಪ್ಪ ಅವರಲ್ಲಿ ನಾನು ಬರೆಸುತ್ತಿದ್ದೇನೆ. ಪಕ್ಷದ ಪೋಸ್ಟರ್‌ಗಳಲ್ಲಿ ಯಾರ ಫೋಟೋ ಇರಬೇಕು, ಇರಬಾರದು ಎಂಬ ನಿಯಮ ಸಿದ್ಧಪಡಿಸುತ್ತಿದ್ದೇವೆ. ಇದು ಸಿದ್ಧವಾದ ನಂತರ ಪಕ್ಷದ ಕಾರ್ಯಕರ್ತರಿಗೆ ಒಂದು ನೀತಿ ಸಂಹಿತೆ ಲಭ್ಯವಾಗುತ್ತದೆ. ಅದರಂತೆ ಎಲ್ಲರೂ ನಡೆದುಕೊಳ್ಳಬೇಕಾಗುತ್ತದೆ ಎಂದರು.

ಎನ್‌ಎಸ್‌ಯುಐಗೆ ಶಕ್ತಿ ತುಂಬಿದ್ದು ಮಾಜಿ ಪ್ರಧಾನಿ ಇಂದಿರಾ ಗಾಂಧಿ. ಯುವಕರಿಗೆ ಆದ್ಯತೆ ಕೊಟ್ಟಿದ್ದು ರಾಜೀವ್‌ ಗಾಂಧಿ. ಇವರಿಬ್ಬರಿಲ್ಲದೆ ಎನ್‌ಎಸ್‌ಯುಐ ಬ್ಯಾನರ್‌ ಇರಬಾರದು ಎಂದೂ ಈ ವೇಳೆ ಎಚ್ಚರಿಕೆ ನೀಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಂಚಾಯಿತಿಯಿಂದ ಸಂಸತ್‌ವರೆಗೂ ಯಾರು ಏನು ಬೇಕಾದರೂ ಆಗಬಹುದು. ಇಲ್ಲಿ ನಾಯಕತ್ವ ಬೆಳೆಸಿಕೊಳ್ಳಲು ಅವಕಾಶವಿದೆ. ಮೊದಲು ಸದಸ್ಯತ್ವ ಮಾಡಬೇಕು. ಕಾಂಗ್ರೆಸ್‌ ಪಕ್ಷಕ್ಕೆ ಕೊಡುಗೆ ನೀಡಬೇಕು ಎಂಬ ಇಚ್ಛೆ ಇದ್ದವರು ನಾಯಕರಾಗಬೇಕಾದರೆ ಸದಸ್ಯತ್ವ ಮಾಡಿಸಬೇಕು. ಸದಸ್ಯತ್ವ ಮಾಡಿಸಿದರೆ ನೀವು ನಾಯಕರಾಗಿ ಬೆಳೆಯಲು ಸಾಧ್ಯ. ಸದಸ್ಯತ್ವ ಮಾಡಿಸಿ ನಾಯಕರಾಗಿ ಎಂದು ಸಲಹೆ ನೀಡಿದರು.

ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ(ಕೆಪಿಸಿಸಿ) ನೂರು ವರ್ಷಗಳ ಹಿಂದೆ ಇರಲಿಲ್ಲ. ನಾಗ್ಪುರ ಅಧಿವೇಶನದಲ್ಲಿ ಕರ್ನಾಟಕ ಪ್ರಾವೀನ್ಷಿಯಲ್‌ ಕಾಂಗ್ರೆಸ್‌ ಸಮಿತಿ ಎಂದು ಘೋಷಿಸಿದ್ದರು. ಕನ್ನಡ ಮಾತನಾಡುವವರನ್ನು ಸೇರಿಸಿ ಈ ಸಮಿತಿ ರಚಿಸಲಾಗಿತ್ತು. ಅದಕ್ಕೀಗ ನೂರು ವರ್ಷವಾಗಿದ್ದು ಈ ವರ್ಷ ಕಾರ್ಯಕ್ರಮ ಮಾಡಬೇಕೆಂದು ಯೋಜಿಸಿದ್ದೇವೆ ಎಂದು ತಿಳಿಸಿದರು.

ಪದಾಧಿಕಾರಿಗಳ ಸಭೆಯಲ್ಲಿ ಡಿಕೆ ಶಿವಕುಮಾರ್ ಗರಂ

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಆಗಿದ್ದು, ಈ ವರ್ಷ ಎನ್‌ಎಸ್‌ಯುಐಗೆ 75 ಸಾವಿರ ನೂತನ ಸದಸ್ಯತ್ವ ಮಾಡಿಸಬೇಕು. ತಲಾ ಒಂದು ಸಾವಿರ ಸದಸ್ಯತ್ವ ಮಾಡಿಸಲಿಲ್ಲ ಎಂದರೆ ನೀವು ನಾಯಕರಾಗಲು ಅರ್ಹರಲ್ಲ. ಒಬ್ಬೊಬ್ಬರು ಒಂದೊಂದು ಕಾಲೇಜು ಉಸ್ತುವಾರಿ ವಹಿಸಿಕೊಳ್ಳಬೇಕು. ಎನ್‌ಎಸ್‌ಯುಐ ನಮ್ಮ ಬೇರು. ಮುಂದೆ ಫಲ ಅನುಭವಿಸಬೇಕು ಎಂದರೆ ನಮ್ಮ ಬೇರನ್ನು ಗಟ್ಟಿಗೊಳಿಸಬೇಕು. ಈ ದೇಶದಲ್ಲಿ ಬದಲಾವಣೆ ಆಗಬೇಕೆಂದರೆ ವಿದ್ಯಾರ್ಥಿಗಳು, ಮಹಿಳೆಯರು, ಯುವಕರಿಂದ ಮಾತ್ರ ಸಾಧ್ಯ. ನೂತನ ಸದಸ್ಯತ್ವದ ಶುಲ್ಕ 10 ರು. ಮಾತ್ರ. ಸದಸ್ಯರಾಗುವವರಿಂದಲೇ ಶುಲ್ಕ ಪಡೆದು ನೋಂದಣಿ ಮಾಡಿಕೊಳ್ಳಬೇಕು. ಅದನ್ನು ಬಿಟ್ಟು ತಾವೇ ಹಣ ಪಾವತಿಸಿ ಸದಸ್ಯತ್ವ ಮಾಡಬಾರದು. ಒಂದು ಲಕ್ಷ ಸದಸ್ಯತ್ವ ಪಡೆದರೆ ಅವರಿಗೆ ಕೊಡುಗೆಯಾಗಿ ಸ್ಥಾನಮಾನ ನೀಡುತ್ತೇನೆ ಎಂಬ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ಎನ್‌ಎಸ್‌ಯುಐ ಅಧ್ಯಕ್ಷ ಮೀರಜ್‌ ಕುಂದನ್‌, ರಾಷ್ಟ್ರೀಯ ಯುವ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ.ಶ್ರೀನಿವಾಸ್‌, ಎಚ್‌.ಎಸ್‌. ಮಂಜುನಾಥ್‌ಗೌಡ, ಎನ್‌ಎಸ್‌ಯುಐ ನೂತನ ಅಧ್ಯಕ್ಷ ಕೀರ್ತಿ ಗಣೇಶ್‌ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಘೋಷಣೆ ಕೂಗಿದವರಿಗೆ ಡಿಕೆಶಿ ಕ್ಲಾಸ್‌

ಎನ್‌ಎಸ್‌ಯುಐ ರಾಜ್ಯಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷ ಕೀರ್ತಿ ಗಣೇಶ್‌ ಮತ್ತು ಉಪಾಧ್ಯಕ್ಷ ಜೈಯೆಂದರ್‌ ಬೆಂಬಲಿಗರ ನಡುವೆ ಜೈಕಾರ ಹಾಕಲು ಪೈಪೋಟಿ ಏರ್ಪಟಿತ್ತು. ಈ ಸಂದರ್ಭದಲ್ಲಿ ಎನ್‌ಎಸ್‌ಯುಐ ಪದಾಧಿಕಾರಿಗಳ ನಡವಳಿಕೆಗೆ ಸಿಟ್ಟುಕೊಂಡ ಡಿ.ಕೆ.ಶಿವಕುಮಾರ್‌ ಅವರು, ‘ಬರೀ ಬೋರ್ಡ್‌ ತೋರಿಸಿ ಡಿಕೆ.. ಡಿಕೆ... ಜೈಜೈ ಎಂದರೆ ನಾನು ಒಪ್ಪುವುದಿಲ್ಲ. ನೀವು ನೂರು ಸಾವಿರ ಸದಸ್ಯತ್ವ ಮಾಡಿಕೊಂಡು ಬನ್ನಿ ನಾನು ನಿಮ್ಮನ್ನು ಹೆಗಲ ಮೇಲೆ ಹೊತ್ತುಕೊಂಡು ನಾಯಕನನ್ನಾಗಿ ಮಾಡಿಸುತ್ತೇನೆ’ ಎಂದರು.

ಜತೆಗೆ, ಬ್ಯಾನರ್‌ಗಳಿಂದ ನಿಮ್ಮ ಫೋಟೋಗಳನ್ನು ಮೊದಲು ತೆಗೆಯಿರಿ. ಪಕ್ಷದ ಫೋಟೋ ಮತ್ತು ತ್ರಿವರ್ಣದ ಬಾವುಟ ಮಾತ್ರ ಇರಬೇಕು. ನಿಮಗೆ ಉತ್ಸಾಹ ಇದೆ. ಆದರೆ, ಶಿಸ್ತು ಇಲ್ಲ. ಶಿಸ್ತು ಇಲ್ಲದಿದ್ದರೆ ನೀವು ಏನನ್ನೂ ಸಾಧಿಸಲು ಸಾಧ್ಯವಿಲ್ಲ . ನಿಮ್ಮ ಭಿನ್ನಾಭಿಪ್ರಾಯಗಳನ್ನು ಬಿಟ್ಟು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.

click me!