
ನವದೆಹಲಿ: 2019ರ ಲೋಕಸಭಾ ಚುನಾವಣೆಯಲ್ಲಿ ಗಳಿಸಿದ ಸೀಟುಗಳಿಗಿಂತ ಹೆಚ್ಚು ಸೀಟುಗಳನ್ನು ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ. ಅಲ್ಲದೇ ಈ ಬಾರಿಯ ಚುನಾವಣೆಯಲ್ಲಿ 350 ಸೀಟುಗಳನ್ನು ಬಿಜೆಪಿ ತನ್ನ ಸ್ವಂತ ಬಲದಿಂದ ಗೆಲ್ಲಲಿದೆ ಎಂದು ಹಿರಿಯ ಆರ್ಥಿಕ ತಜ್ಞ, ಚುನಾವಣಾ ವಿಶ್ಲೇಷಕ ಸುರ್ಜಿತ್ ಭಲ್ಲಾ, ಭವಿಷ್ಯ ನುಡಿದಿದ್ದಾರೆ. ಅಂಗ್ಲ ಮಾಧ್ಯಮ ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು ಬಿಜೆಪಿ ಈ ಬಾರಿ 330 ರಿಂದ 350 ಸೀಟುಗಳನ್ನು ಗೆಲ್ಲಬಹುದು ಎಂದು ಹೇಳಿದ್ದಾರೆ.
ಲೆಕ್ಕಾಚಾರದ ಸಾಧ್ಯತೆಯ ಆಧಾರದ ಮೇಲೆ, ಬಿಜೆಪಿ ಸ್ವಂತವಾಗಿ 330 ರಿಂದ 350 ಸ್ಥಾನಗಳನ್ನು ಪಡೆಯಬೇಕು. ಇದು ಕೇವಲ ಬಿಜೆಪಿ ಗಳಿಸಬಹುದಾದ ಸೀಟಾಗಿದ್ದು, ಅದರ ಮೈತ್ರಿ ಪಕ್ಷಗಳ ಪಾಲು ಇಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಪ್ರಚಾರ ರೀತಿಯಿಂದಾಗಿ 2019ರ ಫಲಿತಾಂಶಕ್ಕೆ ಹೋಲಿಸಿದರೆ ಗೆಲ್ಲುವ ಸ್ಥಾನಗಳಲ್ಲಿ 5 ರಿಂದ 7 ರಷ್ಟು ಏರಿಕೆ ಆಗಲಿದೆ. ಪ್ರತಿ ಚುನಾವಣೆಯಲ್ಲೂ ಒಂದು ವಿಚಾರದ ಅಲೆ ಇರುತ್ತದೆ. ಈ ಚುನಾವಣೆಯೂ ಒಂದು ಅಲೆಯಾಗಿರಬಹುದು, ಅಥವಾ ಆಗದೇ ಇರಬಹುದು ಎಂದು ನಾಲ್ಕು ದಶಕಗಳಿಂದ ಭಾರತದಲ್ಲಿ ಚುನಾವಣೆಗಳ ವಿಶ್ಲೇಷಣೆ ಮಾಡುತ್ತಿರುವ ಅರ್ಥಶಾಸ್ತ್ರಜ್ಞ ಸುರ್ಜಿತ್ ಭಲ್ಲಾ ಹೇಳಿದ್ದಾರೆ.
ಹಾಗೆಯೇ ವಿರೋಧ ಪಕ್ಷ 44 ಸೀಟುಗಳನ್ನು ಗೆಲ್ಲಬಹುದು. ಅಥವಾ 2014ರ ಚುನಾವಣೆಯಲ್ಲಿ ಗಳಿಸಿದ್ದಕ್ಕಿಂತ 2 ರಷ್ಟು ಸ್ಥಾನ ಕಡಿಮೆ ಗಳಿಸಬಹುದು. ವಿರೋಧ ಪಕ್ಷಗಳಲ್ಲಿ ನಾಯಕತ್ವದ ಸಮಸ್ಯೆ ಇದೆ. ಇದರ ಜೊತೆ 2ನೇಯದಾಗಿ ಆರ್ಥಿಕತೆಯೂ ಪ್ರಮುಖ ಪಾತ್ರವಹಿಸುತ್ತದೆ. ವಿರೋಧ ಪಕ್ಷವೂ ಮಾಸ್ ಲೀಡರ್ ಅನ್ನು ತನ್ನ ನಾಯಕನನ್ನಾಗಿ ಆಯ್ಕೆ ಮಾಡಿದರೆ ಅಥವಾ ಪ್ರಧಾನಿ ಮೋದಿಯ ಅರ್ಧದಷ್ಟಾದರೂ ಸವಾಲು ಒಡ್ಡುವ ನಾಯಕನ್ನು ಆಯ್ಕೆ ಮಾಡಿದರೆ ಆಗ ಪರಸ್ಪರ ಸ್ಪರ್ಧೆಯಾಗಬಹುದು ಎಂದು ಭಲ್ಲಾ ವಿಶ್ಲೇಷಿಸಿದ್ದಾರೆ.
ಹಾಗೆಯೇ ಸಾಂಪ್ರದಾಯಿಕವಾಗಿ ದುರ್ಬಲವಾಗಿರುವ ತಮಿಳುನಾಡಿನಲ್ಲಿ ಬಿಜೆಪಿ ಕನಿಷ್ಠ ಐದು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ತಮಿಳುನಾಡಿನಲ್ಲಿ ಬಿಜೆಪಿ ಐದು ಸ್ಥಾನಗಳನ್ನು ಗಳಿಸಿದರೆ ನನಗೆ ಆಶ್ಚರ್ಯವಾಗುವುದಿಲ್ಲ. ಆದರೆ ಕೇರಳದಲ್ಲಿ, ಬಹುಶಃ ಒಂದು ಅಥವಾ ಎರಡು ಸ್ಥಾನ ಗೆಲ್ಲಬಹುದು ಎಂದು ಅವರು ಭವಿಷ್ಯ ನುಡಿದಿದ್ದಾರೆ.
ಅಲ್ಲದೇ ಇತ್ತೀಚೆಗೆ ಜನರು ಬುದ್ಧಿವಂತರಾಗಿದ್ದು, ವೋಟು ಹಾಕುವ ವೇಳೆ ತಮ್ಮ ಜೀವನದಲ್ಲಿ ಎಷ್ಟು ಸುಧಾರಣೆಯಾಗಿದೆ ಎಂಬುದರ ಆಧಾರದ ಮೇಲೆ ಭಾರತದ ಜನ ಮತ ಚಲಾಯಿಸುತ್ತಾರೆ. ಜಾತಿ ಲಿಂಗ ನೋಡಿ ಜನ ಮತ ಚಲಾಯಿಸುವುದಿಲ್ಲ , ಇದನ್ನೇ 1992ರಲ್ಲಿ ಅಮೆರಿಕಾದ ಅಧ್ಯಕ್ಷರಾಗಿದ್ದ ಬಿಲ್ ಕ್ಲಿಂಟನ್ ಹೇಳಿದ್ದರು ಎಂದು ಭಲ್ಲಾ ಹೇಳಿದ್ದಾರೆ.
ಹಿಂದಿನ ಬಡತನದ ವ್ಯಾಖ್ಯಾನದಂತೆ 14 ಮಿಲಿಯನ್ ಜನ ಅಥವಾ ಶೇ.1 ರಷ್ಟು ಜನ ಬಡವರಾಗಿದ್ದಾರೆ. ನಾವು ಅಭಿವೃದ್ಧಿಯಾಗಿದ್ದೇವೆ, ತಲಾ ಆದಾಯ ಹೆಚ್ಚಳವಾಗಿದೆ, ಜೀವನ ಶೈಲಿ ಸುಧಾರಿಸಿದೆ. ಹೀಗಿರುವಾಗ ಬಡತನ ರೇಖೆಯನ್ನು ಏರಿಸಬೇಕಿದೆ ಕೆಲ ಅರ್ಥದಲ್ಲಿ ಜನಸಂಖ್ಯೆಯ ಕಾಲುಭಾಗ ಬಡವರಾಗಿದ್ದಾರೆ. ಆದರೆ ಬಡತನವೂ ಸಾಪೇಕ್ಷವಾಗಿದ್ದೂ ಇನ್ನು ಮುಂದೆ ಸಂಪೂರ್ಣವಾಗಿ ಅಲ್ಲ ಎಂದು ಅವರು ಹೇಳಿದ್ದಾರೆ.
ಬಡವರು ಯಾವಾಗಲೂ ನಮ್ಮೊಂದಿಗಿರುತ್ತಾರೆ. ಶ್ರೀಮಂತರು ಯಾವಾಗಲೂ ನಮ್ಮೊಂದಿಗೆ ಇರುತ್ತಾರೆ. ಇದು ಬಡವರು ಯಾರು ಎಂಬುದನ್ನು ನೀವು ಹೇಗೆ ವ್ಯಾಖ್ಯಾನಿಸುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಮತ್ತು ನಾವು ಪ್ರತಿ ವ್ಯಕ್ತಿಗೆ ದಿನಕ್ಕೆ 1.9 ಡಾಲರ್ ಎಂಬ ವಿಶ್ವಬ್ಯಾಂಕ್ ವ್ಯಾಖ್ಯಾನವನ್ನು ಬಳಸುತ್ತೇವೆ. ಆದರೆ ಜೀವನ ಮತ್ತು ಆರ್ಥಿಕತೆಯ ಸುಧಾರಣೆಯಾಗಿರುವುದರಿಂದ ನಾವು ಅದನ್ನು ದ್ವಿಗುಣಗೊಳಿಸಬೇಕು ಎಂದು ಹೇಳುತ್ತಿದ್ದೇವೆ ಎಂದು ಭಲ್ಲಾ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.