ನಿಶ್ಚಿತವಾಗಿಯೂ ಬಿಜೆಪಿ ಕಡೆಯೇ ಇದೆ. ಯುವ ಸಮುದಾಯ, ಅದರಲ್ಲೂ ಹೊಸ ಮತದಾರರು ಸಂಪೂರ್ಣ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆರಾಧಿಸುತ್ತಿದ್ದಾರೆ. ರಾಜ್ಯ ಸರ್ಕಾರದ ಜನಪರ ಯೋಜನೆಗಳಿಂದಾಗಿ ದಿನದಿಂದ ದಿನಕ್ಕೆ ಬಿಜೆಪಿಯೆಡೆಗಿನ ಮತದಾರರ ಒಲವು ಹೆಚ್ಚುತ್ತಿದೆ: ಸಿಎಂ ಬೊಮ್ಮಾಯಿ
ಮಲ್ಲಿಕಾರ್ಜುನ ಸಿದ್ದಣ್ಣವರ
ಹುಬ್ಬಳ್ಳಿ(ಮೇ.07): ಆಡಳಿತಾರೂಢ ಬಿಜೆಪಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ವಿಧಾನಸಭಾ ಚುನಾವಣೆ ಎದುರಿಸುತ್ತಿದೆ. ಚುನಾವಣೆ ಘೋಷಣೆಯಾದ ಬಳಿಕ ಸತತವಾಗಿ ರಾಜ್ಯವನ್ನು ಸುತ್ತುತ್ತಿರುವ ಬೊಮ್ಮಾಯಿ ಅವರು ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷರೂ ಹೌದು. ಹೀಗಾಗಿಯೇ ಸಹಜವಾಗಿ ಪಕ್ಷ ಅಧಿಕಾರಕ್ಕೆ ಬಂದರೆ ಅವರೇ ಮುಂದಿನ ಮುಖ್ಯಮಂತ್ರಿಯೂ ಹೌದು ಎನ್ನಲಾಗುತ್ತಿದೆ. ಹಾಗಂತ ಖುದ್ದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೇ ಹೇಳಿದ್ದಾರೆ. ಆ ಹೇಳಿಕೆ ಬೆನ್ನಲ್ಲೇ ಬೊಮ್ಮಾಯಿ ಅವರು ಮತ್ತಷ್ಟು ಉತ್ಸಾಹದಿಂದ ಚುನಾವಣೆಯ ಪ್ರಚಾರದಲ್ಲಿ ನಿರತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ‘ಕನ್ನಡಪ್ರಭ’ದೊಂದಿಗೆ ‘ಮುಖಾಮುಖಿ’ಯಾಗಿದ್ದು ಹೀಗೆ..
*ಇನ್ನೇನು ಮತದಾನ ಹತ್ತಿರ ಬಂತು. ರಾಜ್ಯದ ಜನತೆಯ ಒಲವು ಯಾವ ಕಡೆ ಇದೆ ಅನಿಸುತ್ತಿದೆ?
-ನಿಶ್ಚಿತವಾಗಿಯೂ ಬಿಜೆಪಿ ಕಡೆಯೇ ಇದೆ. ಯುವ ಸಮುದಾಯ, ಅದರಲ್ಲೂ ಹೊಸ ಮತದಾರರು ಸಂಪೂರ್ಣ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆರಾಧಿಸುತ್ತಿದ್ದಾರೆ. ರಾಜ್ಯ ಸರ್ಕಾರದ ಜನಪರ ಯೋಜನೆಗಳಿಂದಾಗಿ ದಿನದಿಂದ ದಿನಕ್ಕೆ ಬಿಜೆಪಿಯೆಡೆಗಿನ ಮತದಾರರ ಒಲವು ಹೆಚ್ಚುತ್ತಿದೆ.
ಸಿದ್ಧಗಂಗಾ ಶ್ರೀಗಳು ಕೊಟ್ಟ ವಾಚ್ ಧರಿಸಿ ಸಿಎಂ ಬೊಮ್ಮಾಯಿ ಪ್ರಚಾರ
*ಈ ಟ್ರೆಂಡ್ ಬಿಜೆಪಿಯನ್ನು ಅಧಿಕಾರದ ಗದ್ದುಗೆಯವರೆಗೆ ಕೊಂಡೊಯ್ಯಬಹುದೇ?
-ಖಂಡಿತ ಈ ಟ್ರೆಂಡ್ ಮುಂದುವರೆಯುತ್ತೆ. ಅದರಲ್ಲಿ ಯಾವುದೇ ಸಂಶಯ ಬೇಡ. ರಾಜ್ಯದ ಜನತೆ ಈಗ ಜಾಗೃತರಾಗಿದ್ದು, ತಮಗೆ ಎಂಥ ಸರ್ಕಾರ ಬೇಕು ಎನ್ನುವುದನ್ನು ನಿರ್ಧರಿಸಿದ್ದಾರೆ. ಅವರ ಆಯ್ಕೆ ಬಿಜೆಪಿ ಸರ್ಕಾರವಾಗಲಿದೆ.
*ಕಳೆದ ಬಾರಿಯಂತೆ ಈ ಸಲ ಯಾವ ಅಲೆಯೂ ಇಲ್ಲ. ಆದಾಗ್ಯೂ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎನ್ನುತ್ತಿದ್ದೀರಿ. ತಮ್ಮ ಲೆಕ್ಕಾಚಾರವೇನು?
-ಕಳೆದ ಬಾರಿ ಆಡಳಿತ ವಿರೋಧಿ ಅಲೆ ಇತ್ತು. ಈ ಬಾರಿ ಆಡಳಿತ ಪರವಾದ ಅಲೆ ಇದೆ. ಅದು ಅಂಡರ್ ಕರೆಂಟ್ ರೀತಿ ಕೆಲಸ ಮಾಡುತ್ತಿದೆ. ಮೇಲ್ಮಟ್ಟದಲ್ಲಿ ಕಾಣುತ್ತಿಲ್ಲ ಅಷ್ಟೇ. ಕೋವಿಡ್ ಸಮರ್ಥ ನಿರ್ವಹಣೆ, ಸಾಕಷ್ಟುಅಭಿವೃದ್ಧಿಗಳಾಗಿವೆ. ಪ್ರತಿಯೊಂದು ಕ್ಷೇತ್ರದಲ್ಲೂ ಇನ್ನೂರಿಂದ ಒಂದು ಸಾವಿರ ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಗಳು ಅನುಷ್ಠಾನವಾಗಿವೆ. ಜನತೆ ಈ ಯೋಜನೆಗಳ ಫಲಾನುಭವಿ ಆಗಿದ್ದರಿಂದ ನಮ್ಮ ಸರ್ಕಾರದ ಬಗ್ಗೆ ಬಹಳಷ್ಟುಗುಡ್‌ವಿಲ್ ಇದೆ. ಹಾಗಾಗಿ ಅದು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.
*40 ಪರ್ಸೆಂಟೇಜ್, ಪಿಎಸ್‌ಐ ಹಗರಣ, ಶಾಸಕ ಮಾಡಾಳ್ ಪ್ರಕರಣ ಇವೆಲ್ಲವನ್ನೂ ಮತದಾರ ಕ್ಷಮಿಸಿದ್ದಾನೆ ಅನಿಸುತ್ತಾ?
-ಕ್ಷಮಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಈ ಆರೋಪದಲ್ಲಿ ಹುರುಳಿಲ್ಲ ಎನ್ನುವುದು ಜನತೆಗೆ ಗೊತ್ತಿದೆ. ಯಾವುದೇ ಕ್ಷೇತ್ರಕ್ಕೆ ಹೋದರೂ ಈ ಪ್ರಶ್ನೆಗಳೇ ಉದ್ಭವಿಸುತ್ತಿಲ್ಲ. ಯಾಕೆಂದರೆ, ಏನು ಹೇಳುತ್ತಿದ್ದಾರೆ ಎನ್ನುವುದಕ್ಕಿಂತ ಯಾರು ಹೇಳುತ್ತಿದ್ದಾರೆ ಎನ್ನುವ ಕ್ರೆಡಿಬಿಲಿಟಿ ಮುಖ್ಯವಾಗಿರುತ್ತದೆ. ಎರಡನೆಯದಾಗಿ, ಈ ಆರೋಪಕ್ಕೆ ಸಂಬಂಧಿಸಿದಂತೆ ಒಂದೂ ಪುರಾವೆ ಕೊಡಲು ಆರೋಪಿಸುವವರಿಗೆ ಈವರೆಗೆ ಆಗಿಲ್ಲ. ಇದು ಕಾಂಗ್ರೆಸ್ಸಿನ ಚುನಾವಣಾ ತಂತ್ರ ಎನ್ನುವುದು ಜನತೆಗೆ ಸಂಪೂರ್ಣ ಅರ್ಥವಾಗಿದೆ. ಮತ್ತು ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಮಾಡಿದ ಹಗರಣಗಳು ಜನತೆಯ ನೆನಪಿನಲ್ಲಿವೆ.
* ‘ಬೇರೆಯವರು ಭ್ರಷ್ಟರಾಗಿದ್ದಾರೆ. ಹಗರಣ ಮುಚ್ಚಿ ಹಾಕಿದ್ದಾರೆ. ಅವರಂತೆ ನಾವೂ ಮಾಡುವುದರಲ್ಲಿ ಯಾವ ತಪ್ಪೂ ಇಲ್ಲ’ ಎನ್ನುವುದು ನಿಮ್ಮ ಭಾವನೆಯೇ?
- ಹಾಗೇನಿಲ್ಲ, ಆರೋಪಿಸುವವರು ಪುರಾವೆಗಳನ್ನು ಕೊಡದೇ ಮಾತನಾಡಿದರೆ ಹೇಗೆ? ಅಷ್ಟೇ ಅಲ್ಲ ಆರೋಪ ಮಾಡಿದ ಗುತ್ತಿಗೆದಾರರ ಸಂಘದವರನ್ನು ಕರೆದು ನಿಮ್ಮ ಆರೋಪದ ಬಗ್ಗೆ ಸೂಕ್ತ ದಾಖಲೆæ ಕೊಡಿ ತನಿಖೆ ಮಾಡಿಸುತ್ತೇನೆ ಎಂದು ಕೇಳಿದೆ. ಆಗ ಅವರು ಆ ಇಲಾಖೆಯಲ್ಲಿ ಹೀಗೆ, ಈ ಇಲಾಖೆಯಲ್ಲಿ ಹಾಗೆ ಎನ್ನುವ ಹಾರಿಕೆ ಉತ್ತರ ನೀಡಿದರೇ ಹೊರತು, ಇಂದಿಗೂ ದಾಖಲೆ ನೀಡಿಲ್ಲ. ಎರಡನೆಯದಾಗಿ ನಾನು ಮುಖ್ಯಮಂತ್ರಿಯಾದ ತಕ್ಷಣ ಯೋಜನೆ ಜಾರಿ ಮತ್ತು ಟೆಂಡರ್ ನೀಡಿಕೆ ಪಾರದರ್ಶಕವಾಗಿ ಇರಲಿ ಎನ್ನುವ ಕಾರಣಕ್ಕೆ ಹೈಕೋರ್ಟಿನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ‘ಟೆಂಡರ್ ಎಸ್ಟಿಮೇಟ್ಸ್ ಆ್ಯಂಡ್ ಟೆಂಡರ್ ಕಂಡೀಶನ್ಸ್ ಕಮಿಟಿ’ ರಚಿಸಿದ್ದೇನೆ. ಹಣ ಪಾವತಿ ವ್ಯವಸ್ಥೆಗೂ ಒಂದು ಶಿಸ್ತು ತಂದಿದ್ದೇನೆ. ಎಲ್ಲೆಲ್ಲಿ ಅವಕಾಶವಿದೆಯೋ ಅಲ್ಲಿ ಪ್ಲೆಡ್ಜ್ ಮಾಡಿಸಿರುವೆ. ಮೂರನೆಯದಾಗಿ ಗುತ್ತಿಗೆದಾರರ ಮನವಿಯಂತೆ ಸಣ್ಣ ಸಣ್ಣ ಪ್ಯಾಕೇಜ್ ಟೆಂಡರ್ ನೀಡಲಾಗಿದೆ. ಪ್ರೀಮಿಯಂ ಮೊತ್ತ ಶೇ.5ಕ್ಕಿಂತ ಹೆಚ್ಚದಂತೆ ಕಡ್ಡಾಯಗೊಳಿಸಲಾಗಿದೆ. ಕಾಂಗ್ರೆಸ್ ಕಾಲದಲ್ಲಿ ಶೇ.67ರಷ್ಟುಪ್ರೀಮಿಯಂಗೆ ಟೆಂಡರ್ ಮಂಜೂರು ಮಾಡಿದ್ದಾರೆ.
* ಕೆ.ಎಸ್.ಈಶ್ವರಪ್ಪ, ರಮೇಶ್ ಜಾರಕಿಹೊಳಿ ವಿರುದ್ಧದ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ನ್ಯಾಯ ಸಿಗಲಿಲ್ಲವಲ್ಲ?
- ಈಶ್ವರಪ್ಪನವರ ಪ್ರಕರಣದಲ್ಲಿ ಅವರ ಪಾತ್ರವೇ ಇರಲಿಲ್ಲ ಎನ್ನುವುದು ತನಿಖಾ ವರದಿಯಲ್ಲಿ ಖಚಿತವಾಗಿದೆ. ಇನ್ನು ರಮೇಶ್ ಜಾರಕಿಹೊಳಿ ಪ್ರಕರಣದಲ್ಲಿ ‘ಹನಿಟ್ರ್ಯಾಪ್’ ಎನ್ನುವುದು ಸ್ಪಷ್ಟವಾಗಿದೆ. ಹಾಗಾಗಿ ಸಂತ್ರಸ್ತರಿಗೆ ನ್ಯಾಯ ಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇನ್‌ಫ್ಯಾಕ್ಟ್ ಈಶ್ವರಪ್ಪನವರಿಗೇ ದೊಡ್ಡ ಅನ್ಯಾಯವಾಯಿತು. ಸಂಬಂಧ ಇರದಿದ್ದೂ ಅವರಿಗೆ ಕೇಸು ಕೊಡಲಾಯಿತು. ಅದರಿಂದ ಅವರು ಮಂತ್ರಿಸ್ಥಾನ ತ್ಯಾಗಮಾಡಬೇಕಾಯಿತು.
*ತಮ್ಮ ಡಬಲ್ ಎಂಜಿನ್ ಸರ್ಕಾರದಲ್ಲಿ ಬೆಲೆಗಳು ಗಗನಕ್ಕೇರಿ ಜನಸಾಮಾನ್ಯರು, ರೈತರು ಹೈರಾಣಾಗಿದ್ದಾರೆ. ಯಾವ ನಿರೀಕ್ಷೆಯಿಂದ ಅವರು ಈಗ ಬಿಜೆಪಿಗೆ ಮತ ಹಾಕಬೇಕು?
- ನೋಡಿ, ಇನ್‌ಫ್ಲೇಶನ್ ಅರೌಂಡ್ ಫೋರ್ ಪರ್ಸೆಂಟ್. ಯಾವುವು ಅಂತರಾಷ್ಟ್ರೀಯ ಮಾರುಕಟ್ಟೆಬೆಲೆಯ ನಿಯಂತ್ರಣಕ್ಕೆ ಒಳಪಡುತ್ತವೆಯೋ ಆಯಾ ವಸ್ತುಗಳ ಬೆಲೆ ಏರಿವೆ. ಆದಾಗ್ಯೂ ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರ ಶಕ್ತ್ಯಾನುಸಾರ ಸಬ್ಸಿಡಿ, ತೆರಿಗೆ ಕಡಿತ ಇತ್ಯಾದಿ ಮಾಡುವ ಮೂಲಕ ಜನಸಾಮಾನ್ಯರಿಗೆ ಹೊರೆಯಾಗದಂತೆ ಹಲವು ಕ್ರಮಗಳನ್ನು ತೆಗೆದುಕೊಂಡಿವೆ.
*ಅನಿರೀಕ್ಷಿತವಾಗಿ ತಾವು ಸಿಎಂ ಆದವರು, ಈ ಚುನಾವಣೆ ತಮಗೆ ಬಹುದೊಡ್ಡ ಟಾಸ್‌್ಕ ಅನಿಸಿದೆಯೇ?
- ಟಾಸ್ಕ್ ಎಂದು ಭಾವಿಸಿ ಹಾರ್ಡವರ್ಕ್ ಮಾಡಿದಾಲೇ ನಿರೀಕ್ಷಿತ ಗೆಲುವು ಸಾಧಿಸಲು ಸಾಧ್ಯ. ಈಗ ನಾವೆಲ್ಲ ಸೇರಿ ಮಾಡುತ್ತಿರುವುದು ಅದನ್ನೇ. ನಾವು ಗೆಲ್ಲಲೇಬೇಕಿದೆ, ಗೆಲ್ಲುತ್ತೇವೆ.
* ರಾಜ್ಯ ಮುಖಂಡರಿಗೆ ಹೇಳಿಕೊಳ್ಳಲು ಏನೂ ಇಲ್ಲ, ಹಾಗಾಗಿ ಮೋದಿ ಹೆಸರು ಹೇಳಿ ಮತ ಕೇಳುತ್ತಿದ್ದಾರೆ ಎನ್ನುವುದು ಕಾಂಗ್ರೆಸ್ ಆರೋಪ?
- ಪ್ರತಿಪಕ್ಷವಾಗಿ ಕಾಂಗ್ರೆಸ್ ಆರೋಪ ಸಹಜ. ನಮ್ಮ ಡಬಲ್ ಎಂಜಿನ್ ಸರ್ಕಾರ ಸಾಧನೆಗಳು, ಜನೋಪಯೋಗಿ ಯೋಜನೆಗಳು ಜನತೆಗೆ ತಲುಪಿವೆ. ನಮ್ಮ ಕಾರ್ಯಕರ್ತರು ಮನೆ ಮನೆಗೆ ಹೋಗಿ ತಿಳಿಸಿದ್ದಾರೆ. ಜನತೆ ತಮಗೆ ಮತ್ತೊಂದು ಬಾರಿ ಈ ಡಬಲ್ ಎಂಜಿನ್ ಸರ್ಕಾರವೇ ಬೇಕು ಎಂದು ತೀರ್ಮಾನಿಸಿದ್ದಾರೆ.
*ಈವರೆಗೆ ಬಿಜೆಪಿ ಮುಂದಿನ ಸಿಎಂ ಯಾರು? ಎನ್ನುವ ವಿಷಯವನ್ನು ಮುನ್ನಲೆಗೆ ತಂದಿರಲಿಲ್ಲ. ಈಗ ಇದ್ದಕ್ಕಿದ್ದಂತೆ ಜೆ.ಪಿ.ನಡ್ಡಾ ಮತ್ತು ಧಮೇಂದ್ರ ಪ್ರಧಾನ್ ಅವರು ಮುಂದಿನ ಅವಧಿಗೂ ಬಸವರಾಜ ಬೊಮ್ಮಾಯಿ ಅವರೇ ಸಿಎಂ ಎಂದಿದ್ದಾರಲ್ಲ?
- ಇಬ್ಬರೂ ವರಿಷ್ಠರ ಮಾತಿನ ಅರ್ಥ ಇಷ್ಟೆ, ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಆಯಾ ಮುಖ್ಯಮಂತ್ರಿಗಳ ನೇತೃತ್ವದಲ್ಲೇ ಚುನಾವಣೆ ನಡೆಯುತ್ತದೆ. ಹಾಗಾಗಿ ಅಲ್ಲಿ ಬಹುಮತದ ಸರ್ಕಾರ ರಚನೆಯಾದರೆ ಸಹಜವಾಗಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ಅದನ್ನೇ ಅವರು ಈಗ ಇಲ್ಲಿ ಹೇಳಿದ್ದಾರೆ. ಆದಾಗ್ಯೂ ಶಾಸಕಾಂಗ ಸಭೆಯ ಒಮ್ಮತದ ಅಭಿಪ್ರಾಯಗಳ ಅವಲೋಕಿಸಿ ಹೈಕಮಾಂಡ್ ಅಳೆದು ತೂಗಿ ಸೂಕ್ತ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡುತ್ತದೆ.
*ಒಂದು ವೇಳೆ ಅತಂತ್ರತೆ ಸೃಷ್ಟಿಯಾದರೆ, ಜೆಡಿಎಸ್‌ನೊಂದಿಗೆ ತಾವು ಕೈಗೂಡಿಸಲು ಸಿದ್ಧರಿದ್ದೀರಾ?
- ಅದರ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಬಿಜೆಪಿ ಮತ್ತೊಮ್ಮೆ ಕರ್ನಾಟಕದಲ್ಲಿ ಬಹುಮತದ ಸರ್ಕಾರ ರಚಿಸುತ್ತದೆ.
* ಇತ್ತೀಚೆಗೆ ತಾವು ಜೆಡಿಎಸ್ ಕುರಿತಂತೆ ಸಾಫ್‌್ಟಆದಂತೆ ಅನಿಸುತ್ತಿದೆ. ಆ ಪಕ್ಷ ಮತ್ತು ಆ ಪಕ್ಷದ ಮುಖಂಡರ ಬಗ್ಗೆ ಎಲ್ಲೂ ಮಾತನಾಡುತ್ತಿಲ್ಲವಲ್ಲ?
- ಇವತ್ತಿನ ರಾಜಕಾರಣದಲ್ಲಿ ಜೆಡಿಎಸ್ ಒಂದು ಶಕ್ತಿ ಇದ್ದ ಪಕ್ಷ ಎಂದು ನನಗೆ ಅನಿಸಿಲ್ಲ. ಹಾಗಾಗಿ ಯಾಕೆ ಮಾತಾಡಬೇಕು ಹೇಳಿ.
* ಶೆಟ್ಟರ್ ಅವರನ್ನು ಸೋಲಿಸಲು ಬಿಜೆಪಿ ಎಷ್ಟೊಂದು ಶ್ರಮ ಹಾಕುತ್ತಿದೆಯಲ್ಲ. ಅಷ್ಟೊಂದು ಭಯವಿದೆಯೇ?
- ಶ್ರಮ, ಶಕ್ತಿ, ಭಯದ ಪ್ರಶ್ನೆಯೇ ಬರುವುದಿಲ್ಲ. ಅವರೊಬ್ಬರು ಮಾಜಿ ಮುಖ್ಯಮಂತ್ರಿ. ಇಂದು ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ. ಅವರ ಎದುರು ಬಿಜೆಪಿಯ ಸಾಮಾನ್ಯ ಕಾರ್ಯಕರ್ತನನ್ನು ನಾವು ಕಣಕ್ಕಿಳಿಸಿದ್ದೇವೆ. ನಮ್ಮ ಅಭ್ಯರ್ಥಿಗೆ ಎಲ್ಲರ ಬೆಂಬಲವಿದೆ ಎನ್ನುವುದು ಆ ಕ್ಷೇತ್ರದ ಜನತೆಗೆ ಗೊತ್ತಾಗಬೇಕು ಎನ್ನುವ ಕಾರಣಕ್ಕೆ ಎಲ್ಲರೂ ಸೇರಿ ಪ್ರಚಾರ ನಡೆಸಿದ್ದೇವೆ ಅಷ್ಟೇ. ಅಂತಿಮವಾಗಿ ಅಲ್ಲಿನ ಮತದಾರರು ತೀರ್ಮಾನ ಮಾಡುತ್ತಾರೆ.
*ಹು-ಧಾ ಸೆಂಟ್ರಲ್ ಕ್ಷೇತ್ರದಲ್ಲಿ ಜಗದೀಶ ಶೆಟ್ಟರ್ ವರ್ಸಸ್ ಪ್ರಹ್ಲಾದ ಜೋಶಿ ಎನ್ನುವ ಮಾತು ಕೇಳಿಬರುತ್ತಿದೆಯಲ್ಲ?
-ಜಗದೀಶ ಶೆಟ್ಟರ್ ಈಗ ಕಾಂಗ್ರೆಸ್ ಅಭ್ಯರ್ಥಿ. ಬಿಜೆಪಿ ಅಲ್ಲಿ ಮಹೇಶ ಟೆಂಗಿನಕಾಯಿ ಅವರಲ್ಲಿ ನಿಲ್ಲಿಸಿದೆ. ಸಹಜವಾಗಿ ಅದು ಬಿಜೆಪಿ ವರ್ಸಸ್ ಕಾಂಗ್ರೆಸ್ ಆಗಿರುತ್ತದೆ. ಅದಕ್ಕಿಂತ ಬೇರೆ ಅರ್ಥಗಳಿಲ್ಲ.
*ಶೆಟ್ಟರ್ ಮತ್ತು ಸವದಿ ನಿರ್ಗಮನದ ಬಳಿಕ ಲಿಂಗಾಯತ ಮತ ಬ್ಯಾಂಕ್ ಛಿದ್ರವಾಗಿದೆæ ಎನ್ನುವ ಮಾತು ಕೇಳಿ ಬರುತ್ತಿದೆಯಲ್ಲ?
- ಹಾಗೇನಿಲ್ಲ, ಕೆಲವರು ತಮ್ಮ ಮೂಗಿನ ನೇರಕ್ಕೆ ವಿಶ್ಲೇಷಣೆ ಮಾಡುತ್ತಿದ್ದಾರೆ. ಈ ಚುನಾವಣೆಯ ಫಲಿತಾಂಶ ಇದಕ್ಕೆಲ್ಲ ಉತ್ತರ ನೀಡಲಿದೆ.
*ರಾಜಕೀಯ ಹೊರತಾಗಿ ಶೆಟ್ಟರ್ ಜತೆ ತಮ್ಮ ಸಂಬಂಧ ಹೇಗಿದೆ?
- ತುಂಬ ಗೌರವಯುತವಾದ ಸಂಬಂಧವಿದೆ. ಅಷ್ಟೇ ಅಲ್ಲ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೂ ಉತ್ತಮ ಸಂಬಂಧ ಹೊಂದಿದ್ದೇನೆ. ರಾಜಕೀಯವೇ ಬೇರೆ, ವೈಯಕ್ತಿಕ ಸಂಬಂಧಗಳೇ ಬೇರೆ.
*ಪಂಚಮಸಾಲಿ ಸಮುದಾಯಕ್ಕೆ ನೀಡಿರುವ 2ಡಿ ಬಗ್ಗೆ ಆ ಸಮುದಾಯದ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರಲ್ಲ?
- ರಾಜಕೀಯಕ್ಕಾಗಿ ಕೆಲವರು ಅಸಮಾಧಾನ, ಅಪಸ್ವರ ಎತ್ತುತ್ತಿದ್ದಾರೆ. ಪಂಚಮಸಾಲಿ ಸಮುದಾಯವನ್ನು ಹಿಂದುಳಿದ ಪಟ್ಟಿಯಲ್ಲಿ ಸೇರಿಸಿದ್ದೇ ಬಿಜೆಪಿ. 2009ರಲ್ಲಿ ಸಿ.ಎಂ. ಉದಾಸಿ ಅವರ ನೇತೃತ್ವದ ಕ್ಯಾಬಿನೆಟ್ ಸಬ್ ಕಮಿಟಿಗೆ ನಾನು ಸದಸ್ಯನಿದ್ದೆ. ಯಡಿಯೂರಪ್ಪನವರ ನಿರ್ದೇಶನದಂತೆ ಈ ನಿರ್ಧಾರ ಕೈಕೊಂಡೆವು. ಮೀಸಲಾತಿ ಪ್ರಮಾಣ ಶೇ.5 ಇದ್ದುದ್ದನ್ನು ಶೇ.7ಕ್ಕೆ ಏರಿಸಿದ್ದೇವೆ. ಹಿಂದೆ ಸಿದ್ದರಾಮಯ್ಯ ಸರ್ಕಾರ ಈ ಪ್ರಸ್ತಾವಣೆಯನ್ನು ತಿರಸ್ಕರಿಸಿತ್ತು, ನಾವು ಪುರಸ್ಕರಿಸಿದ್ದೇವೆ. ಆ ಸಮುದಾಯದ ಎಲ್ಲರಿಗೂ ನಮ್ಮ ನಿಲುವು ತೃಪ್ತಿ ತಂದಿದೆ. ಹೋರಾಟದ ಮುಂಚೂಣಿಯಲ್ಲಿದ್ದ ಸ್ವಾಮೀಜಿಯವರೂ ಒಪ್ಪಿದ್ದಾರೆ. ಕೆಲವರು ರಾಜಕೀಯಕ್ಕಾಗಿ ವಿರೋಧಿಸುತ್ತಾರೆ. ಸತ್ಯ ಏನು ಎನ್ನುವುದು ಆ ಸಮುದಾಯಕ್ಕೆ ಗೊತ್ತಿದೆ.
* ಒಳಮೀಸಲಾತಿ ನೀಡಿಕೆಯಲ್ಲಿ ನ್ಯಾ.ಸದಾಶಿವ ವರದಿ ನಿರ್ಲಕ್ಷಿಸಿದಂತೆ ತೋರುತ್ತಿದೆ?
- ನಾವು ಯಾವುದೇ ಆಯೋಗದ ವರದಿಯನ್ನು ನಿರ್ಲಕ್ಷಿಸಿಲ್ಲ. ಇಲ್ಲಿ ಒಳಮೀಸಲು ಕಂಟೆಂಟ್ ಮುಖ್ಯ. ಹಾಗಾಗಿ ಸದಾಶಿವ ಆಯೋಗದ ವರದಿ, ನಮ್ಮ ಕ್ಯಾಬಿನೆಟ್ ಸಬ್ ಕಮಿಟಿ ವರದಿಯ ಕಂಟೆಂಟ್ ಒಂದೇ ರೀತಿ ಇರುವುದರಿಂದ 2011ರ ಜನಗಣತಿ ಆಧಾರವಾಗಿ ಇಟ್ಟುಕೊಂಡು ಪರಿಶಿಷ್ಟರಲ್ಲಿನ ಯಾವುದೇ ಸಮುದಾಯಕ್ಕೆ ಅನ್ಯಾಯವಾಗದ ರೀತಿಯಲ್ಲಿ ಒಳಮೀಸಲು ಹಂಚಿಕೆ ಮಾಡಿದ್ದೇವೆ. ಇದನ್ನು ಒಳಮೀಸಲಿಗೆ ಮೂರ್ನಾಲ್ಕು ದಶಕದಿಂದ ಹೋರಾಡುತ್ತ ಬಂದವರು, ಒಳಮೀಸಲಿನ ಫಲಾನುಭವಿಗಳು ನಮ್ಮ ಸರ್ಕಾರದ ನಿಲುವನ್ನು ಸ್ವಾಗತಿಸಿ, ಅಭಿನಂದಿಸಿದ್ದಾರೆ.
ರಾಮ-ಹನುಮನಂತೆ ಬಜರಂಗಿ, ಬಜರಂಗ ದಳ ಸಂಬಂಧ: ಸಿಎಂ ಬೊಮ್ಮಾಯಿ
* ನೀತಿಸಂಹಿತೆ ಜಾರಿಯಾಗುವ ಮುನ್ನಾದಿನ ಒಳಮೀಸಲಾತಿ ಘೋಷಿಸಿರುವುದು ಚುನಾವಣಾ ಗಿಮಿಕ್ ಅಷ್ಟೇ ಅಂತಿದ್ದಾರಲ್ಲ?
- ಹಾಗೇನಿಲ್ಲ, ಹಿಂದಿನ ಚುನಾವಣೆಯಲ್ಲೇ ನಾವು ಅಧಿಕಾರಕ್ಕೆ ಬಂದರೆ ಒಳಮೀಸಲು ಜಾರಿಗೆ ತರುವುದಾಗಿ ಭರವಸೆ ನೀಡಿದ್ದೆವು. ಅದರಂತೆ ಈಗ ನಡೆದುಕೊಂಡಿದ್ದೇವೆ. ಆದರೆ ಕ್ಯಾಬಿನೆಟ್ ಸಬ್ ಕಮಿಟಿ ವರದಿ ಸಿದ್ಧವಾಗಲು ಸುಮಾರು ಕಾಲ ಹಿಡಿಯಿತು. ವರದಿ ಬಂದ ತಕ್ಷಣವೇ ಘೋಷಣೆ ಮಾಡಿದ್ದೇನೆ. ತಾವು ಅಧಿಕಾರದಲ್ಲಿ ಇದ್ದಾಗ ಒಳಮೀಸಲು ಜಾರಿ ಸಾಧ್ಯವೇ ಇಲ್ಲ ಎನ್ನುತ್ತಿದ್ದ ಕಾಂಗ್ರೆಸ್ ಈಗ ಜನತೆಯನ್ನು ತಪ್ಪುದಾರಿಗೆ ಎಳೆಯುತ್ತಿದೆ ಅಷ್ಟೇ. ಎಸ್ಸಿ, ಎಸ್ಟಿಮೀಸಲು ಹೆಚ್ಚಳ ಮತ್ತು ಒಳಮೀಸಲು ಜಾರಿಯನ್ನು ಶೆಡ್ಯೂಲ್ 9ಗೆ ಸೇರಿಸಲು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದೇವೆ. ನಮ್ಮ ಬದ್ಧತೆಗೆ ಇನ್ನೇನು ಬೇಕು?