
ಹಾವೇರಿ (ಏ.16): ಪ್ರಮುಖ ಸಮೀಕ್ಷೆಗಳು ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ 100 ಸ್ಥಾನ ಗೆಲ್ಲಲಿದೆ ಎಂದು ಹೇಳುತ್ತಿವೆ. ಮೇ 10ರ ವೇಳೆಗೆ ಅದು 130 ದಾಟಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು. ಸವಣೂರಿನಲ್ಲಿ ಶನಿವಾರ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನನಗೆ ರಾಜ್ಯ ಸುತ್ತುವ ಜವಾಬ್ದಾರಿಯಿದೆ. ಅದಕ್ಕಾಗಿ ಈ ಬಾರಿಯ ಚುನಾವಣೆ ಜವಾಬ್ದಾರಿಯನ್ನು ನಿಮ್ಮ ಮೇಲೆ ಇಡುತ್ತಿದ್ದೇನೆ. ಕ್ಷೇತ್ರದ ಹಾಗೂ ರಾಜ್ಯದ ಅಭಿವೃದ್ಧಿಗಾಗಿ ಮುಖ್ಯಮಂತ್ರಿಯಾದ ದಿನದಿಂದ ದಿನದ 16 ತಾಸು ಕೆಲಸ ಮಾಡಿದ್ದೇನೆ.
ಎಲ್ಲ ವರ್ಗದ ಬೇಡಿಕೆ ಈಡೇರಿಸುವ ಮೂಲಕ ಅವರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ್ದೇನೆ. ಎಸ್ಸಿ-ಎಸ್ಟಿಸಮುದಾಯದ ಮೀಸಲಾತಿ ಹೆಚ್ಚಿಸಿ ನ್ಯಾಯ ಒದಗಿಸಿದ್ದೇನೆ. ಒಕ್ಕಲಿಗರು, ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ, ಮಸೀದಿ, ಬಸದಿಗಳ ಅಭಿವೃದ್ಧಿ ಮಾಡ್ದಿದೇನೆ. ನಾನು ರಿಪೋರ್ಚ್ ಕಾರ್ಡ್ ಕೊಟ್ಟು ಮತ ಕೇಳುತ್ತೇನೆ ಎಂದು ಹೇಳಿದರು. ಯಡಿಯೂರಪ್ಪ ಅವರು ಸಿಎಂ ಸ್ಥಾನ ಬಿಟ್ಟುಕೊಡುವ ತೀರ್ಮಾನ ಮಾಡಿದರು. ಆಗ ಮುಖ್ಯಮಂತ್ರಿ ಸ್ಥಾನಕ್ಕೆ ನಾನು ಪ್ರಯತ್ನ ಮಾಡಲಿಲ್ಲ, ಆ ಮಹತ್ವಾಕಾಂಕ್ಷೆಯೂ ನನಗಿರಲಿಲ್ಲ. ಎಲ್ಲರ ಆಶೀರ್ವಾದದಿಂದ ಆ ಸೌಭಾಗ್ಯ ಒದಗಿಬಂತು.
ಕೊಟ್ಟ ಮಾತಿನಂತೆ ನಡೆದುಕೊಂಡು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ: ಸಚಿವ ಬಿ.ಸಿ.ಪಾಟೀಲ್
ಅಂದಿನಿಂದ ಇಲ್ಲಿಯವರೆಗೆ ದಿನಕ್ಕೆ 5 ತಾಸು ನಿದ್ರೆಯನ್ನೂ ಮಾಡದೇ ಪ್ರವಾಹ ಇತ್ಯಾದಿ ಜನರು ಸಂಕಷ್ಟದಲ್ಲಿದ್ದಾಗ ಸ್ಪಂದಿಸುವ ಕೆಲಸ ಮಾಡಿದ್ದೇನೆ ಎಂದು ಹೇಳಿದರು. ಬೊಮ್ಮಾಯಿ ಸಿಎಂ ಆಗಿ ಏನು ಮಾಡಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು. ರೈತರ ಮಕ್ಕಳಿಗೆ ವಿದ್ಯಾನಿಧಿ ಕೊಟ್ಟಿದ್ದೇನೆ. 3ರಿಂದ 5 ಲಕ್ಷ ವರೆಗೆ ಬಡ್ಡಿ ರಹಿತ ಸಾಲ, ಪದವಿವರೆಗೂ ಉಚಿತ ಶಿಕ್ಷಣ ಕೊಡುವ ಕೆಲಸ ಮಾಡಿದ್ದೇವೆ. ಕ್ಷೇತ್ರದಲ್ಲಿ 100ಕ್ಕೂ ಹೆಚ್ಚಿನ ಕೆರೆ ತುಂಬಿಸಿದ್ದೇವೆ. ಸವಣೂರು, ಶಿಗ್ಗಾವಿ ತಾಲೂಕಿನ ಸಮಗ್ರ ಅಭಿವೃದ್ಧಿ ಮಾಡಿದ್ದೇನೆ. ಆದರೆ, ವಿಪಕ್ಷಗಳು ಟೀಕಿಸುತ್ತಿವೆ.
ನನ್ನ ಮತ್ತು ಕ್ಷೇತ್ರದ ಜನರ ನಡುವಿನ ಅನ್ಯೋನ್ಯ ಸಂಬಂಧವನ್ನು ವಿರೋಧ ಪಕ್ಷದ ಶಕ್ತಿಗಳಿಂದ ಕೆಡಿಸಲು ಸಾಧ್ಯವಿಲ್ಲ. ಬರುವ ದಿನಗಳು ಸಮೃದ್ಧವಾಗಿರಲಿವೆ. ಹೊರಗಿನ ಇಲ್ಲಿಗೆ ರಾಜಕಾರಣ ಮಾಡಲು ಬರುತ್ತಾರೆ. ಅದಕ್ಕೆ ಸೊಪ್ಪು ಹಾಕಬೇಡಿ. ನಮ್ಮ ಸಂಬಂಧಕ್ಕೆ ಉಪ್ಪು ಹಾಕಲು ಬರುತ್ತಾರೆ, ಅದಕ್ಕೆ ಕಿವಿಗೊಡಬೇಡಿ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ನಿಂದ ನೂರಾರು ಮುಖಂಡರು ಬಿಜೆಪಿ ಸೇರ್ಪಡೆಯಾದರು.
ಕೊಡಗಿನಲ್ಲಿ ಚಿತ್ರ ಬಿಡಿಸಿ ಮತದಾನ ಜಾಗೃತಿ ಮೂಡಿಸಿದ ವಿದ್ಯಾರ್ಥಿಗಳು, ವಯಸ್ಕರು
ಏ. 19ರಂದು ನಡ್ಡಾ ಆಗಮನ: ಏ. 19ರಂದು ನಾನು ಶಿಗ್ಗಾಂವಿಯಲ್ಲಿ ನಾಮಪತ್ರ ಸಲ್ಲಿಸುತ್ತಿದ್ದೇನೆ. ಅಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಬರಲಿದ್ದಾರೆ. ಅಂದು ದೊಡ್ಡ ಸಂಖ್ಯೆಯಲ್ಲಿ ಕ್ಷೇತ್ರದ ಜನತೆ ಬರಬೇಕು. ಬಿಜೆಪಿ ಶಕ್ತಿ ಏನಿದೆ ಎಂಬುದನ್ನು ತೋರಿಸಬೇಕು ಎಂದು ಬಸವರಾಜ ಬೊಮ್ಮಾಯಿ ಹೇಳಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.