ಜೆಡಿಯು ಒಡೆಯುವ ಆತಂಕ, ಬಿಜೆಪಿ ಮೈತ್ರಿಗೆ ಅಂತ್ಯಹಾಡಲು ಮುಂದಾದ ನಿತೀಶ್ ಕುಮಾರ್?

By Suvarna News  |  First Published Aug 9, 2022, 9:23 AM IST

ಶಿವಸೇನೆಯನ್ನು ಒಡೆದು ಚೂರು ಮಾಡಿದ ರೀತಿಯ ಬಿಹಾರದಲ್ಲಿ ಬಿಜೆಪಿ ಜೆಡಿಯು ಪಕ್ಷವನ್ನೇ ಒಡೆಯುವ ಆತಂಕ ಇದೀಗ ನಿತೀಶ್ ಕುಮಾರ್‌ಗೆ ಎದುರಾಗಿದೆ. ಇದರಿಂದ ಬಿಜೆಪಿ ಜೊತೆಗಿನ ಮೈತ್ರಿ ಕಡಿದುಕೊಳ್ಳುವ ಕುರಿತು ಇಂದು ಮಹತ್ವದ ಸಭೆ ಕರೆದಿದ್ದಾರೆ.


ಪಟನಾ(ಆ.09): ಬಿಹಾರದಲ್ಲಿ ಜೆಡಿಯು-ಬಿಜೆಪಿ ನಡುವಿನ ಕಂದಕ ಮತ್ತಷ್ಟುವಿಸ್ತರಿಸಿದ್ದು, ಬಹುಶಃ ಇದು ಮೈತ್ರಿ ಸರ್ಕಾರದ ಪತನದ ಅಂಚಿಗೆ ದೂಡಬಹುದು ಎಂದು ಹೇಳಲಾಗುತ್ತಿದೆ. ಸರ್ಕಾರವನ್ನು ‘ರಿಮೋಟ್‌ ಕಂಟ್ರೋಲ್‌’ ಮಾಡಿಕೊಂಡು ದಿಲ್ಲಿಯಿಂದಲೇ ಆಡಳಿತ ನಿಯಂತ್ರಿಸುವ ಬಿಜೆಪಿ ನಾಯಕರ ಧೋರಣೆಗೆ ಮುಖ್ಯಮಂತ್ರಿ ಹಾಗೂ ಜೆಡಿಯು ಹಿರಿಯ ನೇತಾರ ನಿತೀಶ್‌ ಕುಮಾರ್‌ ಬೇಸತ್ತಿದ್ದಾರೆ. ಅವರು ಶೀಘ್ರದಲ್ಲೇ ರಾಜೀನಾಮೆ ನೀಡಿ ತೇಜಸ್ವಿ ಯಾದವ್‌ ಅವರ ಆರ್‌ಜೆಡಿ ಜತೆ ಕೈಜೋಡಿಸಬಹುದು ಎಂಬ ಮಾತು ಕೇಳಿಬರುತ್ತಿವೆ. ಈ ಸಂಬಂಧ ಮಂಗಳವಾರ ತಮ್ಮ ಸಂಸದ/ಶಾಸಕರ ಸಭೆಯನ್ನು ಕೂಡ ನಿತೀಶ್‌ ಆಯೋಜಿಸಿದ್ದಾರೆ. ಈ ವೇಳೆ ಸ್ಪಷ್ಟಚಿತ್ರಣ ಹೊರಬರುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ. ಈ ನಡುವೆ ಸೋಮವಾರ ನಿತೀಶ್‌ ಅವರು ಉಪಮುಖ್ಯಮಂತ್ರಿಯಾದ ಬಿಜೆಪಿ ಮುಖಂಡ ತಾರಕೇಶ್ವರ ಪ್ರಸಾದ್‌ ಅವರನ್ನು ಭೇಟಿ ಮಾಡಿ ಪ್ರಸಕ್ತ ವಿದ್ಯಮಾನದ ಬಗ್ಗೆ ಚರ್ಚಿಸಿದ್ದಾರೆ. ಆದರೆ, ‘ಮೈತ್ರಿಕೂಟ ಮುರಿಯುವ ಸ್ಥಿತಿ ಇಲ್ಲ. ಇದು ಕೇವಲ ಮಾಧ್ಯಮ ಊಹಾಪೋಹವಷ್ಟೇ’ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಆದಾಗ್ಯೂ ನಿತೀಶ್‌ ಅವರ ಇತ್ತೀಚಿನ ನಡೆಗಳನ್ನು ನೋಡಿದರೆ ಅವರು ಬಿಜೆಪಿ ಸಂಗ ತೊರೆವ ಸಾಧ್ಯತೆ ಇದೆ ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿ ಮೈತ್ರಿ ತೊರೆದರೆ ಜೆಡಿಯು ಜತೆ ಮೈತ್ರಿಗೆ ಸಿದ್ಧ ಎಂದು ಆರ್‌ಜೆಡಿ ಹೇಳಿದೆ.

Tap to resize

Latest Videos

ಬಿಜೆಪಿ ಜೆಡಿಯು ಮೈತ್ರಿಯಲ್ಲಿ ಬಿರುಕು? ಮಹತ್ವದ ಸಭೆ ಕರೆದ ಬಿಹಾರ ಸಿಎಂ ನಿತೀಶ್ ಕುಮಾರ್!

ನಿತೀಶ್‌ ಆತಂಕವೇನು?:
ಮಹಾರಾಷ್ಟ್ರದಲ್ಲಿ ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನೆಯನ್ನು ಹೇಗೆ ಬಿಜೆಪಿ ಒಡೆದು ಹೋಳು ಮಾಡಿತೋ ಅದೇ ರೀತಿ ಬಿಹಾರದಲ್ಲಿ ಜೆಡಿಯುವನ್ನು ಹೋಳು ಮಾಡಬಹುದು ಎಂಬುದು ನಿತೀಶ್‌ ಆತಂಕ. ಅದಕ್ಕೆಂದೇ ಮೊನ್ನೆಯವರೆಗೂ ತಮ್ಮ ಪಕ್ಷದಲ್ಲೇ ಇದ್ದು ವಜಾಗೊಂಡ ಮಾಜಿ ಕೇಂದ್ರ ಸಚಿವ ಆರ್‌ಸಿಪಿ ಸಿಂಗ್‌ ಅವರನ್ನು ತಮ್ಮ ವಿರುದ್ಧ ಬಿಜೆಪಿ ಎತ್ತಿಕಟ್ಟಿದೆ ಎಂಬುದು ನಿತೀಶ್‌ ಆಕ್ರೋಶಕ್ಕೆ ಕಾರಣ ಎನ್ನಲಾಗಿದೆ. ಇನ್ನೊಂದೆಡೆ ಕೇಂದ್ರ ಸಚಿವ ಅಮಿತ್‌ ಶಾ ಅವರು ದಿಲ್ಲಿಯಿಂದಲೇ ತಮ್ಮ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿ ರಿಮೋಟ್‌ ಕಂಟ್ರೋಲ್‌ ಮಾಡಲು ಯತ್ನಿಸುತ್ತಿದ್ದಾರೆ ಎಂಬುದು ನಿತೀಶ್‌ ಅವರ ಇನ್ನೊಂದು ಅಸಮಾಧಾನ. ಇದೇ ಕಾರಣಕ್ಕೆ ನಿತೀಶ್‌ ಇತ್ತೀಚೆಗೆ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಕರೆದ ಅನೇಕ ಸಭೆಗಳಿಗೆ ಗೈರು ಹಾಜರಾಗಿದ್ದರು ಎಂದು ಮೂಲಗಳು ಹೇಳಿವೆ.

ಅಧಿಕಾರದಲ್ಲಿರುವ ಬಿಜೆಪಿ ಹಾಗೂ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಜೆಡಿಯು ಪಕ್ಷಗಳ ಜಟಾಪಟಿ ಮುಂದುವರೆದಿದೆ ಎಂದು ಚುನಾವಣಾ ತಂತ್ರಗಾರ ಪ್ರಶಾಂತ್‌ ಕಿಶೋರ್‌ ಆಕ್ರೋಶ ವ್ಯಕ್ತಪಡಿಸಿದ್ದರು.‘ಅಗ್ನಿಪಥವನ್ನು ವಿರೋಧಿಸಿ ಆಂದೋಲನವಾಗಬೇಕೆ ಹೊರತು ಹಿಂಸೆ ಅಥವಾ ವಿಧ್ವಂಸಕ ಕೃತ್ಯಗಳು ನಡೆಸಬಾರದು. ಬಿಜೆಪಿ ಹಾಗೂ ಜೆಡಿಯು ನಡುವಿನ ಜಟಾಪಟಿಯ ಬೆಂಕಿಯಿಂದಾಗಿ ಬಿಹಾರದ ಜನರು ಉರಿಯುತ್ತಿದ್ದಾರೆ. ಬಿಹಾರ ಉರಿಯುತ್ತಿರುವಾಗಲೂ ಸಮಸ್ಯೆಯನ್ನು ಪರಿಹಾರ ಮಾಡುವ ಬದಲು ಎರಡೂ ಪಕ್ಷಗಳ ನಾಯಕರು ಪರಸ್ಪರ ವಾಗ್ದಾಳಿ ನಡೆಸುವಲ್ಲಿ ನಿರತರಾಗಿದ್ದಾರೆ’ ಎಂದು ಕಿಶೋರ್‌ ಜೂನ್ ತಿಂಗಳಲ್ಲಿ ಟ್ವೀಟ್‌ ಮಾಡಿದ್ದರು. 

ಬಿಜೆಪಿಗೆ ಕೈಕೊಟ್ಟ ನಿತೀಶ್‌, ಆಗಸ್ಟ್ 11ಕ್ಕೆ ಬಿಹಾರದಲ್ಲಿ ಜೆಡಿಯು-ಆರ್‌ಜೆಡಿ ಸರ್ಕಾರ?

ಅಗ್ನಿಪಥ ಪ್ರತಿಭಟನಾಕಾರರು ಬಿಹಾರದ ಬಿಜೆಪಿ ಮುಖ್ಯಸ್ಥನ ಮನೆ ಮೇಲೆ ದಾಳಿ ಮಾಡಿದ್ದರು. ಉಪ ಮುಖ್ಯಮಂತ್ರಿ ರೇಣು ದೇವಿಯವರ ಮನೆ ಸೇರಿದಂತೆ ಹಲವಾರು ಬಿಜೆಪಿ ಕಚೇರಿ ಮೇಲೆ ದಾಳಿ ನಡೆದಿದ್ದವು. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ನಿತೀಶ್‌ ಕುಮಾರ್‌ ಸರ್ಕಾರ ಹಿಂಸಾತ್ಮಕ ಪ್ರತಿಭಟನೆ ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಲು ವಿಫಲವಾಗಿದೆ ಎಂದು ಕಿಡಿಕಾರಿದ್ದರು. ಇದಕ್ಕೆ ಜೆಡಿಯು ಸಚಿವ ರಾಜೀವ್‌ ರಂಜನ್‌, ‘ಬಿಜೆಪಿ ಮೊದಲು ಯುವಕರ ಸಮಸ್ಯೆ ಬಗ್ಗೆ ಅರಿಯುವ ಕಾಳಜಿ ತೋರಲಿ’ ಎಂದು ತಿರುಗೇಟು ನೀಡಿದ್ದರು.

click me!