
ಚಾಮರಾಜನಗರ(ಮಾ.01): ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ ನಾಲ್ಕು ಕಡೆಗಳಿಂದ ಆರಂಭವಾಗಲಿರುವ 8000 ಕಿ.ಮೀ. ಉದ್ದದ ಬಿಜೆಪಿ ‘ವಿಜಯ ಸಂಕಲ್ಪ ಯಾತ್ರೆ’ಯ ಮೊದಲ ರಥಕ್ಕೆ ಪಕ್ಷದ ರಾಷ್ಟಾ್ರಧ್ಯಕ್ಷ ಜೆ.ಪಿ.ನಡ್ಡಾ ಅವರು ಬುಧವಾರ ಮಲೆ ಮಹದೇಶ್ವರ ಬೆಟ್ಟದಲ್ಲಿ ಚಾಲನೆ ನೀಡಲಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಪ್ರಜಾಧ್ವನಿ ಯಾತ್ರೆಗೆ ಸಡ್ಡು ಹೊಡೆಯುವ ರೀತಿಯಲ್ಲಿ ಈ ಯಾತ್ರೆ ಆಯೋಜಿಸಲಾಗಿದೆ.
ಮೈಸೂರು ಭಾಗದಲ್ಲಿ ಸಂಚರಿಸಲಿರುವ ಈ ಯಾತ್ರೆಗೆ ಬುಧವಾರ ಮಧ್ಯಾಹ್ನ 12ಕ್ಕೆ ಚಾಲನೆ ಸಿಗಲಿದೆ. ಈ ವೇಳೆ ಸ್ಥಳೀಯ ಬೇಡಗಂಪಣ ಸಮುದಾಯದವರ ಜತೆಗೆ ನಡ್ಡಾ ಅವರು ಸಂವಾದವನ್ನೂ ನಡೆಸಲಿದ್ದಾರೆ. ಬಳಿಕ ಸಾಲೂರು ಮಠದಲ್ಲಿ ಮಧ್ಯಾಹ್ನದ ಊಟ ಮುಗಿಸಿ, ಹನೂರಿನಲ್ಲಿ ಮಧ್ಯಾಹ್ನ 2 ಗಂಟೆಗೆ ನಡೆಯಲಿರುವ ಬಹಿರಂಗ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿ ಪಕ್ಷದ ಹಲವು ಗಣ್ಯರು, ಸಚಿವರು ಉಪಸ್ಥಿತರಿರಲಿದ್ದಾರೆ.
KARNATAKA ASSEMBLY ELECTION: ವಿಜಯೇಂದ್ರ ಸ್ಪರ್ಧೆಯಿಂದ ರಂಗೇರಲಿರುವ ಶಿಕಾರಿಪುರ
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ನಡೆಯಲಿರುವ ಈ ಯಾತ್ರೆಗೆ ಸಚಿವರಾದ ವಿ.ಸೋಮಣ್ಣ, ಕೆ.ಸಿ.ನಾರಾಯಣಗೌಡ, ವಿ.ಸುನಿಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಆರಗ ಜ್ಞಾನೇಂದ್ರ, ಗೋಪಾಲಯ್ಯ, ಎಸ್.ಅಂಗಾರ, ಸಂಸದ ವಿ.ಶ್ರೀನಿವಾಸ ಪ್ರಸಾದ್, ಶಾಸಕ ಎನ್.ಮಹೇಶ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ ಸಾಥ್ ನೀಡಲಿದ್ದಾರೆ.
ನಾಳೆ ಮತ್ತೊಂದು, ನಾಡಿದ್ದು ಇನ್ನೆರಡು:
ಮಾ.2ರಂದು ಬೆಳಗಾವಿಯ ನಂದಗಡದ ಸಂಗೊಳ್ಳಿ ರಾಯಣ್ಣ ಸ್ಮಾರಕದಿಂದ ಆರಂಭಗೊಳ್ಳುವ 2ನೇ ಯಾತ್ರೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಲಿದ್ದಾರೆ. ಗೋವಿಂದ ಕಾರಜೋಳ ನೇತೃತ್ವದ ಈ ಯಾತ್ರೆಗೆ ಸಚಿವರಾದ ಸಿ.ಸಿ.ಪಾಟೀಲ, ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ, ಭೈರತಿ ಬಸವರಾಜ, ಶಿವರಾಮ ಹೆಬ್ಬಾರ್, ಮಾಜಿ ಸಚಿವರಾದ ಲಕ್ಷ್ಮಣ ಸವದಿ, ರಮೇಶ್ ಜಾರಕಿಹೊಳಿ, ಶಾಸಕ ಅನಿಲ್ ಬೆನಕೆ, ಬಿಜೆಪಿ ಮುಖಂಡ ಮಹೇಶ್ ಟೆಂಗಿನಕಾಯಿ ಸಾಥ್ ನೀಡಲಿದ್ದಾರೆ.
ಮಾ.3ರಂದು ಬೀದರ್ನ ಬಸವಕಲ್ಯಾಣದ ಅನುಭವ ಮಂಟಪದಿಂದ 3ನೇ ಯಾತ್ರೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ ನೀಡುವರು. ಜಗದೀಶ್ ಶೆಟ್ಟರ್ ನೇತೃತ್ವದ ಈ ತಂಡದಲ್ಲಿ ಸಚಿವರಾದ ಬಿ.ಶ್ರೀರಾಮುಲು, ಭಗವಂತ ಖೂಬಾ, ಪ್ರಭು ಚವ್ಹಾಣ್, ಹಾಲಪ್ಪ ಆಚಾರ್, ಆನಂದ್ ಸಿಂಗ್, ಅರವಿಂದ ಲಿಂಬಾವಳಿ, ಮುಖಂಡರಾದ ಬಾಬುರಾವ್ ಚಿಂಚನಸೂರು, ಮಾಲೀಕಯ್ಯ ಗುತ್ತೇದಾರ್, ಸಿದ್ದರಾಜು, ಛಲವಾದಿ ನಾರಾಯಣಸ್ವಾಮಿ ಮತ್ತು ಮಾರುತಿರಾವ್ ಮೂಳೆ ಇರಲಿದ್ದಾರೆ. ಇನ್ನು ಅದೇ ದಿನ ಮಧ್ಯಾಹ್ನ ಬೆಂಗಳೂರಿನ ದೇವನಹಳ್ಳಿಯ ಕೆಂಪೇಗೌಡ ಜನ್ಮಸ್ಥಳ ಆವತಿಯಲ್ಲಿ ಗೃಹ ಸಚಿವ ಅಮಿತ್ ಶಾ ಅವರೇ ನಾಲ್ಕನೇ ಯಾತ್ರೆಯನ್ನು ಉದ್ಘಾಟಿಸಲಿದ್ದಾರೆ. ಕಂದಾಯ ಸಚಿವ ಆರ್.ಅಶೋಕ್ ನೇತೃತ್ವದ ಈ ಯಾತ್ರೆಯಲ್ಲಿ ಸಚಿವರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ್, ಎಸ್.ಟಿ.ಸೋಮಶೇಖರ್, ಡಾ.ಕೆ.ಸುಧಾಕರ್, ಮುನಿರತ್ನ, ಎಂ.ಟಿ.ಬಿ.ನಾಗರಾಜ್, ಬಿ.ಸಿ. ನಾಗೇಶ್, ಜೆ.ಸಿ.ಮಾಧುಸ್ವಾಮಿ, ಎ. ನಾರಾಯಣ ಸ್ವಾಮಿ, ಶಾಸಕರಾದ ಪಿ.ಸಿ.ಮೋಹನ್, ಪೂರ್ಣಿಮಾ ಶ್ರೀನಿವಾಸ್ ಭಾಗವಹಿಸುವರು.
8 ಸಾವಿರ ಕಿ.ಮೀ. ಸಂಚಾರ:
ರಾಜ್ಯದ ನಾಲ್ಕು ದಿಕ್ಕುಗಳಿಂದ ಒಟ್ಟು 25 ದಿನ 8 ಸಾವಿರ ಕಿ.ಮೀ. ಅನ್ನು ಈ ಯಾತ್ರೆ ಕ್ರಮಿಸಲಿದೆ. ಈ ಯಾತ್ರೆಗೆಂದೇ ನಾಲ್ಕು ವಿಶೇಷ ಬಸ್ ರೀತಿಯ ವಾಹನ ಸಿದ್ಧಪಡಿಸಲಾಗಿದ್ದು, ಅದರಲ್ಲೇ ನಿಂತು ಭಾಷಣ ಮಾಡಲೂ ವ್ಯವಸ್ಥೆ ಮಾಡಲಾಗಿದೆ. ಯಾತ್ರೆ ವೇಳೆ ಸುಮಾರು 80 ರಾರಯಲಿ, 75ಕ್ಕೂ ಹೆಚ್ಚು ಸಾರ್ವಜನಿಕ ಸಭೆಗಳನ್ನು ಆಯೋಜಿಸುವ ಗುರಿ ಇದ್ದು, 150 ರೋಡ್ ಶೋಗಳನ್ನೂ ಈ ವೇಳೆ ನಡೆಸಲು ಉದ್ದೇಶಿಸಲಾಗಿದೆ.
BS Yadiyurappa: ರಾಜಕೀಯ ನಿವೃತ್ತಿ ಪಡೆದಿಲ್ಲ, ಮನೆಯಲ್ಲಿ ಕೂರಲ್ಲ: ಬಿಎಸ್‌ವೈ
25ರಂದು ಸಮಾರೋಪ:
ರಾಜ್ಯಾದ್ಯಂತ 25 ದಿನ ಸುತ್ತಾಟ ನಡೆಸಲಿರುವ ಈ ಯಾತ್ರೆ ಮಾ.25ರಂದು ದಾವಣಗೆರೆಯಲ್ಲಿ ಸಮಾಪನಗೊಳ್ಳಲಿದೆ. ಅಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು, ಪ್ರಧಾನಿ ಮೋದಿ ಸೇರಿ ಹಲವು ಗಣ್ಯರು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಮಾ.4ರಿಂದ ಜಿಲ್ಲೆಗಳಲ್ಲಿ ರಾಜ್ಯ ಸರ್ಕಾರದಿಂದ ಫಲಾನುಭವಿ ಸಮಾವೇಶ
ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳ ಪ್ರಯೋಜನ ಪಡೆದ ಎಲ್ಲಾ ಫಲಾನುಭವಿಗಳನ್ನು ಒಂದೆಡೆ ಸೇರಿಸಿ ಅವರೊಡನೆ ಸಮಾಲೋಚನೆ ನಡೆಸಿ ಮತ್ತಷ್ಟುಜನಹಿತ ಚಿಂತನೆಗಳನ್ನು ಯೋಜಿಸುವ ಉದ್ದೇಶದಿಂದ ಮಾ.4ರಿಂದ 20ರವರೆಗೆ ಜಿಲ್ಲಾವಾರು ಫಲಾನುಭವಿಗಳ ಸಮಾವೇಶವನ್ನು ರಾಜ್ಯ ಸರ್ಕಾರ ಹಮ್ಮಿಕೊಂಡಿದೆ. ಮಾಚ್‌ರ್ 4ರಂದು ಚಿತ್ರದುರ್ಗದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಫಲಾನುಭವಿಗಳ ಸಮಾವೇಶಕ್ಕೆ ಚಾಲನೆ ನೀಡಲಿದ್ದಾರೆ. ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಮಾವೇಶ ನಡೆಯಲಿದ್ದು, ಕೇಂದ್ರ ಸರ್ಕಾರದ ರಾಜ್ಯದ ಐವರು ಸಚಿವರು ವಿವಿಧ ಜಿಲ್ಲೆಗಳಲ್ಲಿ ನಡೆಯುವ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.