ಕ್ಷೇತ್ರದಲ್ಲಿ ಒಟ್ಟು 1,95,371 ಮತದಾರರಿದ್ದು, ಆ ಪೈಕಿ, ಸಾಧು ಲಿಂಗಾಯತರೇ ಅಧಿಕವಾಗಿದ್ದಾರೆ. ಕುರುಬರು, ದಲಿತ ಮತಗಳು ಕೂಡ ಗಣನೀಯ ಸಂಖ್ಯೆಯಲ್ಲಿವೆ. ಅಲ್ಪಸಂಖ್ಯಾತರು ಕೂಡ ಸಾಕಷ್ಟುಸಂಖ್ಯೆಯಲ್ಲಿದ್ದಾರೆ. ಆದರೆ, ಸಾಧು ಲಿಂಗಾಯತರು ಬೆಂಬಲಿಸಿದ ಅಭ್ಯರ್ಥಿ ಗೆಲ್ಲುವುದು ಖಚಿತ.-ಬಿವೈ ವಿಜಯೇಂದ್ರ
ಶಿಕಾರಿಪುರದ ಶಿಕಾರಿ
ಗೋಪಾಲ್ ಯಡಗೆರೆ
ಶಿವಮೊಗ್ಗ (ಮಾ.1) : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಇಡೀ ರಾಜ್ಯದ ಗಮನ ಸೆಳೆಯುತ್ತಿರುವ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಶಿಕಾರಿಪುರ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರ ಕರ್ಮಭೂಮಿ. ಸತತ 40 ವರ್ಷಗಳ ಚುನಾವಣಾ ರಾಜಕಾರಣದಲ್ಲಿ ಪಳಗಿ, ಬೆಳೆದು, ಮುಖ್ಯಮಂತ್ರಿ ಗಾದಿಯೇರಲು ಅವರಿಗೆ ಅವಕಾಶ ಮಾಡಿಕೊಟ್ಟಕ್ಷೇತ್ರವಿದು. ಇದೀಗ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದು, ಅವರಿಂದ ತೆರವಾದ ಈ ಕ್ಷೇತ್ರದಲ್ಲೀಗ ಅವರ ಪುತ್ರ ಬಿ.ವೈ.ವಿಜಯೇಂದ್ರ ಪ್ರಥಮ ಬಾರಿಗೆ ಅದೃಷ್ಟಪರೀಕ್ಷೆಗೆ ಇಳಿಯುವುದು ಬಹುತೇಕ ಖಚಿತವಾಗಿದೆ.
ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ ಬಳಿಕ, ಯಡಿಯೂರಪ್ಪ(BS Yadiyurappa)ನವರು ಎದುರಿಸುತ್ತಿರುವ ಮೊದಲ ಚುನಾವಣೆ ಇದು. 1999ರ ವಿಧಾನಸಭಾ ಚುನಾವಣೆ(Assembly election)ಯ ಹೊರತಾಗಿ 1983ರಿಂದ ಇಲ್ಲಿಯವರೆಗೆ ಯಡಿಯೂರಪ್ಪ ಅವರ ಕೈ ಹಿಡಿದಿದೆ ಈ ಕ್ಷೇತ್ರ. ಯಡಿಯೂರಪ್ಪನವರು ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿಯಾದಾಗ ಶಿಕಾರಿಪುರಕ್ಕೆ ಭರಪೂರ ಕಾಮಗಾರಿ, ಯೋಜನೆಗಳನ್ನು ತಂದಿದ್ದು, ಇದನ್ನು ಈ ಕ್ಷೇತ್ರದ ಜನತೆ ಮರೆಯುವಂತಿಲ್ಲ. ಪಕ್ಷ ಸಂಘಟನೆ ವಿಚಾರದಲ್ಲಿ ಬಿಜೆಪಿ, ನಾಲ್ಕು ದಶಕಗಳ ಕಾಲ ಕ್ಷೇತ್ರದಲ್ಲಿ ತಳಮಟ್ಟದಲ್ಲಿ ಬಲಗೊಂಡಿದೆ.
BS Yadiyurappa: ರಾಜಕೀಯ ನಿವೃತ್ತಿ ಪಡೆದಿಲ್ಲ, ಮನೆಯಲ್ಲಿ ಕೂರಲ್ಲ: ಬಿಎಸ್‌ವೈ
1983ರಲ್ಲಿ ಮೊದಲ ಬಾರಿಗೆ ಬಿಜೆಪಿಯಿಂದ ಸ್ಪರ್ಧಿಸಿದ ಯಡಿಯೂರಪ್ಪ, ಪ್ರಬಲ ಪ್ರತಿಸ್ಪರ್ಧಿ, ಆಗಿನ ಸಚಿವ ಕೆ.ವೆಂಕಟಪ್ಪ ವಿರುದ್ಧ ಜಯಭೇರಿ ಬಾರಿಸಿ, ಅಚ್ಚರಿ ಮೂಡಿಸಿದ್ದರು. ಮತ್ತೆ ಅವರು ಹಿಂದಿರುಗಿ ನೋಡಲಿಲ್ಲ. ಸತತವಾಗಿ ಗೆಲುವು ಸಾಧಿಸುತ್ತಾ ಬಂದರು. ಆದರೆ, 1999ರಲ್ಲಿ ಜಿಲ್ಲೆಯಲ್ಲಿ ಎದ್ದಿದ್ದ ಎಸ್.ಬಂಗಾರಪ್ಪ ಪ್ರಭಾವದ ಪ್ರವಾಹಕ್ಕೆ ಸಿಲುಕಿ, ಸೋತರು.
2013ರಲ್ಲಿ ಬಿಜೆಪಿಯಿಂದ ಹೊರ ಬಂದು, ತಮ್ಮದೇ ಪಕ್ಷ ಕೆಜೆಪಿ ಕಟ್ಟಿಸ್ಪರ್ಧಿಸಿದಾಗಲೂ, ಅವರನ್ನು ಕ್ಷೇತ್ರ ಕೈಬಿಡಲಿಲ್ಲ. 2014ರಲ್ಲಿ ಬಿಜೆಪಿಗೆ ಮರಳಿ, ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ವಿಧಾನಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದರು. ನಂತರ ನಡೆದ ಉಪ ಚುನಾವಣೆಯಲ್ಲಿ ಬಿ.ವೈ.ರಾಘವೇಂದ್ರ ಅವರು ಬಿಜೆಪಿಯಿಂದ ಸ್ಪರ್ಧಿಸಿ, ಗೆಲುವು ಸಾಧಿಸಿದರು. 2018ರಲ್ಲಿ ಮತ್ತೆ ಬಿಎಸ್‌ವೈ ವಿಧಾನಸಭೆಗೆ ನಿಂತು, ಆಯ್ಕೆಯಾಗಿ ಬಂದರು.
ಬಿಜೆಪಿಯಿಂದ ಈಗಾಗಲೇ ವಿಜಯೇಂದ್ರ ಹೆಸರು ಮುಂಚೂಣಿಯಲ್ಲಿದ್ದು, ಬದಲಿಯಾಗಿ ಯಾರ ಹೆಸರೂ ಇಲ್ಲ. ಸ್ವತ: ಯಡಿಯೂರಪ್ಪನವರೇ ತಮ್ಮ ಉತ್ತರಾಧಿಕಾರಿಯಾಗಿ ವಿಜಯೇಂದ್ರ ಹೆಸರು ಘೋಷಿಸಿದ್ದಾರೆ. ಜೆಡಿಎಸ್‌ನಿಂದ ಕಳೆದ ಎರಡು ಚುನಾವಣೆಯಲ್ಲಿ ಸ್ಪರ್ಧಿಸಿ, ಒಂದಿಷ್ಟುಮತ ಸೆಳೆಯುತ್ತಿದ್ದ ಎಚ್.ಟಿ.ಬಳಿಗಾರ್ ಇದೀಗ ಬಿಜೆಪಿ ಸೇರಿದ್ದಾರೆ.
ಕಾಂಗ್ರೆಸ್‌ನಿಂದ ಗೋಣಿ ಮಾಲತೇಶ್, ಎಸ್.ಪಿ.ನಾಗರಾಜ ಗೌಡ, ಪುಷ್ಪಾ ಶಿವಕುಮಾರ್ ಹೆಸರುಗಳು ಮುಖ್ಯವಾಗಿ ಕೇಳಿ ಬರುತ್ತಿವೆ. ಜೊತೆಗೆ, ಮಾಜಿ ಶಾಸಕ ಮಹಾಲಿಂಗಪ್ಪ, ನಿರ್ಮಲಾ ಪಾಟೀಲ್, ರಘುನಾಯಕ್, ಉಳ್ಳಿ ದರ್ಶನ್ ಕೂಡ ಟಿಕೆಟ್ ಆಕಾಂಕ್ಷಿಗಳು. ಕುರುಬ ಸಮಾಜದ ಮುಖಂಡ ಗೋಣಿ ಮಾಲತೇಶ್ ಈ ಹಿಂದೆ ಯಡಿಯೂರಪ್ಪ ವಿರುದ್ಧ ಸ್ಪರ್ಧಿಸಿ, ಸುಮಾರು 51,586 ಮತ ಪಡೆದಿದ್ದರು. ಸಾಧು ಲಿಂಗಾಯಿತ ಸಮಾಜದ ಪುಷ್ಪಾ ಶಿವಕುಮಾರ್, ದಾವಣಗೆರೆಯ ಶ್ಯಾಮನೂರು ಕುಟುಂಬದ ಸಂಬಂಧಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಹತ್ತಿರದವರು. ಈ ಮಧ್ಯೆ, ವಿಜಯೇಂದ್ರರನ್ನು ಮಣಿಸುವ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್ ಕಸರತ್ತು ನಡೆಸಿದೆ.
ಕ್ಷೇತ್ರ ಹಿನ್ನೆಲೆ:
1962 ರಿಂದ 1978ರವರೆಗಿನ ನಾಲ್ಕು ವಿಧಾನಸಭಾ ಚುನಾವಣೆಯಲ್ಲಿ ಮೂರು ಬಾರಿ ಕಾಂಗ್ರೆಸ್, ಒಂದು ಬಾರಿ ಸಂಯುಕ್ತ ಸಮಾಜವಾದಿ ಪಕ್ಷದ ಅಭ್ಯರ್ಥಿಗಳು ಇಲ್ಲಿ ಗೆದ್ದಿದ್ದರು. 1962ರಲ್ಲಿ ಸೊರಬ ಕ್ಷೇತ್ರವನ್ನು ಇದು ಒಳಗೊಂಡಿತ್ತು. 1967ರಲ್ಲಿ ಸೊರಬ ಪ್ರತ್ಯೇಕ ಕ್ಷೇತ್ರವಾಗಿದ್ದು, ಆಗ ಶಿಕಾರಿಪುರದಲ್ಲಿ ಸಂಯುಕ್ತ ಸಮಾಜವಾದಿ ಪಾರ್ಟಿಯಿಂದ ಜಿ.ಬಸವಣ್ಯಪ್ಪನವರು ಸ್ಪರ್ಧಿಸಿ ಗೆದ್ದಿದ್ದರು. 1983ರಲ್ಲಿ ಬಿಜೆಪಿಯಿಂದ ಯಡಿಯೂರಪ್ಪ ಸ್ಪರ್ಧಿಸಿ ಗೆಲುವು ಸಾಧಿಸಿದ ಬಳಿಕ ಹಿಂತಿರುಗಿ ನೋಡಿದ್ದೇ ಇಲ್ಲ, 1999ರಲ್ಲಿ ಮಾತ್ರ ಕಾಂಗ್ರೆಸ್‌ನ ಮಹಾಲಿಂಗಪ್ಪ ವಿರುದ್ಧ ಸೋಲು ಅನುಭವಿಸಿದರು. ಈಗಿದು ಬಿಜೆಪಿಯ ಭದ್ರಕೋಟೆ.
Assembly election: ಬಿಎಸ್‌ವೈ ಬಗ್ಗೆ ನಮ್ರತೆ ಇದ್ರೆ ಮತ್ತೆ ಸಿಎಂ ಮಾಡಿ: ಡಿಕೆಶಿ
ಜಾತಿ ಲೆಕ್ಕಾಚಾರ:
ಕ್ಷೇತ್ರದಲ್ಲಿ ಒಟ್ಟು 1,95,371 ಮತದಾರರಿದ್ದು, ಆ ಪೈಕಿ, ಸಾಧು ಲಿಂಗಾಯತರೇ ಅಧಿಕವಾಗಿದ್ದಾರೆ. ಕುರುಬರು, ದಲಿತ ಮತಗಳು ಕೂಡ ಗಣನೀಯ ಸಂಖ್ಯೆಯಲ್ಲಿವೆ. ಅಲ್ಪಸಂಖ್ಯಾತರು ಕೂಡ ಸಾಕಷ್ಟುಸಂಖ್ಯೆಯಲ್ಲಿದ್ದಾರೆ. ಆದರೆ, ಸಾಧು ಲಿಂಗಾಯತರು ಬೆಂಬಲಿಸಿದ ಅಭ್ಯರ್ಥಿ ಗೆಲ್ಲುವುದು ಖಚಿತ.
ಬಿ. ವೈ. ವಿಜಯೇಂದ್ರ,ಬಿಜೆಪಿ ಅಭ್ಯರ್ಥಿ