ಮೂಡಿಗೆರೆಯಲ್ಲಿ ರಾಜಕೀಯ ಹೈಡ್ರಾಮಾ, ಸ್ಪೋಟಗೊಂಡ ಬಿಜೆಪಿ ಭಿನ್ನಮತ: ವಿಜಯಸಂಕಲ್ಪ ಯಾತ್ರೆ ರದ್ದು!

By Govindaraj S  |  First Published Mar 17, 2023, 1:30 AM IST

ಮುಂಬರುವ ವಿಧಾನಸಭಾ ಚುನಾವಣಾ ಹಿನ್ನಲೆಯಲ್ಲಿ ಬಿಜೆಪಿ ಪಕ್ಷದಿಂದ ನಡೆಯುತ್ತಿರುವ ವಿಜಯಸಂಕಲ್ಪಯಾತ್ರೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಆಯೋಜನೆ ಮಾಡಲಾಗಿತ್ತು. 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಮಾ.17): ಮುಂಬರುವ ವಿಧಾನಸಭಾ ಚುನಾವಣಾ ಹಿನ್ನಲೆಯಲ್ಲಿ ಬಿಜೆಪಿ ಪಕ್ಷದಿಂದ ನಡೆಯುತ್ತಿರುವ ವಿಜಯಸಂಕಲ್ಪ ಯಾತ್ರೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಆಯೋಜನೆ ಮಾಡಲಾಗಿತ್ತು. ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಾಜಿ ಸಿಎಂ ಯಡಿಯ್ಯೂರಪ್ಪ ನೇತೃತ್ವದಲ್ಲಿ ಚಾಲನೆ ನೀಡಿದ ಬಳಿಕ ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ನಿಗದಿಯಾಗಿತ್ತು.ಮೂಡಿಗೆರೆ ಕ್ಷೇತ್ರದಲ್ಲಿ ಬಿಜೆಪಿ ವತಿಯಿಂದ ನಿಗದಿಯಾಗಿದ್ದ ವಿಜಯಸಂಕಲ್ಪ ಯಾತ್ರೆ ಬಿ.ಜೆ.ಪಿ. ಭಿನ್ನಮತ ಸ್ಪೋಟಕ್ಕೆ ವೇದಿಕೆಯಾಗಿ ಪರಿವರ್ತನೆಯಾಯಿತು. ವಿಜಯಸಂಕಲ್ಪ ಯಾತ್ರೆಗೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಕಾರ್ಯಕರ್ತರ ನಡುವಿನ ಗೊಂದಲದಲ್ಲಿ ಸಿಲುಕಿ ತಮ್ಮ ಕಾರಿನಿಂದಲೇ ಇಳಿಯದೇ ವಾಪಾಸ್ಸು ತೆರಳಿದ ನಾಟಕೀಯ ಬೆಳೆವಣಿಗೆಗೆ ಕಾರಣವಾಯಿತು.

Latest Videos

undefined

ಪರ ಮತ್ತು ವಿರುದ್ಧ ಬಣಗಳು ಶಕ್ತಿ ಪ್ರದರ್ಶನ: ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಯವರ ಪರ ಮತ್ತು ವಿರುದ್ಧ ಬಣಗಳು ಪಟ್ಟಣದಲ್ಲಿ ತಮ್ಮ ಶಕ್ತಿಪ್ರದರ್ಶನ ಮುಂದಾದರು. ಇದರಿಂದಾಗಿ ಪಟ್ಟಣದಲ್ಲಿ ಬೆಳಗ್ಗೆಯಿಂದ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು. ಪಟ್ಟಣದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಒಂದು ಹಂತದಲ್ಲಿ ಪರಿಸ್ಥಿತಿ ಹತೋಟಿ ಮೀರುವ ಸನ್ನಿವೇಶ ಸೃಷ್ಟಿಯಾಗಿತ್ತು. ಕುಮಾರಸ್ವಾಮಿ ಪರ ಮತ್ತು ವಿರೋಧಿ ಬಣಗಳ ಕಾರ್ಯಕರ್ತರು ಪಟ್ಟಣದ ಬಸ್ ಸ್ಟ್ಯಾಂಡ್ ವೃತ್ತದಲ್ಲಿ ಜಮಾಯಿಸಿ ಪರಸ್ವರ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು. ಪರಸ್ಪರ ಕೈಕೈ ಮಿಲಾಯಿಸುವ ಹಂತ ತಲುಪಿದ್ದಾಗ ಪೊಲೀಸರ ಸಕಾಲಿಕ ಮಧ್ಯಪ್ರವೇಶದಿಂದ ಘರ್ಷಣೆಯನ್ನು ಹತೋಟಿಗೆ ತರಲಾಯಿತು.

ಮೂಡಿಗೆರೆಯಲ್ಲಿ ಬಿಜೆಪಿ ಪಕ್ಷದ ವಿಜಯ ಸಂಕಲ್ಪ ಯಾತ್ರೆ: ಕಾರ್ಯಕ್ರಮದ ಮೇಲೆ ಬಂಡಾಯದ ಕಾರ್ಮೋಡ

ಶಾಸಕ ಕುಮಾರಸ್ವಾಮಿಗೆ ಟಿಕೆಟ್ ನೀಡಿದಂತೆ ಸಭೆ: ಇಂದು ಬೆಳಗ್ಗೆಯಿಂದಲೇ ಕುಮಾರಸ್ವಾಮಿಯವರಿಗೆ ಟಿಕೆಟ್ ನೀಡಬಾರದು ಎಂದು ಒತ್ತಾಯಿಸುತ್ತಿರುವ ಪಕ್ಷದ ಕಾರ್ಯಕರ್ತರು ಪಟ್ಟಣದ ಪ್ರೀತಂ ಹಾಲ್ ನಲ್ಲಿ ಸಭೆ ಸೇರಿದ್ದರು. ಸಭೆಯಲ್ಲಿ ಕ್ಷೇತ್ರದ ಪ್ರಮುಖ ಬಿ.ಜೆ.ಪಿ. ಮುಖಂಡರು ಮತ್ತು ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಕಿಕ್ಕಿರಿದು ಸೇರಿದ್ದರು. ವಿವಿಧ ಹೋಬಳಿಗಳ ಮುಖಂಡರುಗಳು ಮಾತನಾಡಿ ಶಾಸಕ ಕುಮಾರಸ್ವಾಮಿಯವರ ಕಾರ್ಯವೈಖರಿ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು. 

ನಂತರ ಕುಮಾರಸ್ವಾಮಿ ಹಠಾವೋ, ಬಿ.ಜೆ.ಪಿ. ಬಚಾವೋ ಎಂಬ ಪ್ಲೇಕಾರ್ಡ್ಗಳನ್ನು ಹಿಡಿದುಕೊಂಡು ಪಟ್ಟಣದಲ್ಲಿ ಮೆರವಣಿಗೆ ನಡೆಸಿದರು.ಮಧ್ಯಾಹ್ನ 1-30ರ ಹೊತ್ತಿಗೆ ಹೆಲಿಕಾಪ್ಟರ್ ಮೂಲಕ ಮೂಡಿಗೆರೆಗೆ ಆಗಮಿಸಿದ್ದ ಯಡಿಯೂರಪ್ಪನವರು ಮೂಡಿಗೆರೆ ಕಾಫಿ ಕೋರ್ಟ್ ನಲ್ಲಿ ಮಧ್ಯಾಹ್ನದ ಭೋಜನ ಸ್ವೀಕರಿಸಿ ವಿಜಯಸಂಕಲ್ಪ ಯಾತ್ರೆಗೆಂದು ಅಯ್ಯಪ್ಪಸ್ವಾಮಿ ದೇವಸ್ಥಾನದ ಬಳಿ ಬಂದಾಗ ಎರಡು ಬಣಗಳ ಸದಸ್ಯರು ಘೋಷಣೆಗಳನ್ನು ಕೂಗತೊಡಗಿದರು. ಈ ಸಂದರ್ಭದಲ್ಲಿ ಶಾಸಕ ಸಿ.ಟಿ.ರವಿ, ವಿಧಾನಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್ ಅವರು ಕಾರ್ಯಕರ್ತರನ್ನು ಸಮಾಧಾನಪಡಿಸಲು ನಡೆಸಿದ ಪ್ರಯತ್ನ ವಿಫಲವಾಯಿತು. ಇದರಿಂದ ಕಸಿವಿಸಿಗೊಂಡ ಯಡಿಯೂರಪ್ಪನವರು ಸಿಟ್ಟಿನಿಂದ  ವಾಪಾಸ್ಸಾದರು.

ಘಟನೆ ನೆನೆದು ಕಣ್ಣೀರಿಟ್ಟ ಕುಮಾರಸ್ವಾಮಿ: ಕುಮಾರಸ್ವಾಮಿ ಪರವಾದ ಕಾರ್ಯಕರ್ತರು ಮೂಡಿಗೆರೆ ಲಯನ್ಸ್ ವೃತ್ತದಲ್ಲಿ ಜಮಾವಣೆಗೊಂಡರು, ಅಲ್ಲಿ ಕುಮಾರಸ್ವಾಮಿ ಮತ್ತು ಅವರ ಬೆಂಬಲಿಗ ಮುಖಂಡರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.ನಂತರ ಕುಮಾರಸ್ವಾಮಿ ಪರವಾದ ಬಣದ ಕಾರ್ಯಕರ್ತರು ಪಟ್ಟಣದಲ್ಲಿ ಮೆರವಣಿಗೆ ನಡೆಸಿದರು.ಈ ಸಮಯಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಎಂ.ಪಿ ಕುಮಾರಸ್ವಾಮಿ ನಾನು ದಲಿತ ಎಂದು ಹೀಗೆಲ್ಲಾ ಮಾಡ್ತಿದ್ದಾರೆ, ಬೇರೆ ಜನರಲ್ ಶಾಸಕ ಆಗಿದ್ದರೆ ಹೀಗೆ ಮಾಡುತ್ತಿದ್ದರಾ ಎಂದು ಕಣ್ಣೀರು ಹಾಕಿದರು. ಅಲ್ಲದೆ ಮೂಡಿಗೆರೆಯಲ್ಲಿ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಅದ್ಧೂರಿಯಾಗಿ ನಡೆದಿದ್ದು ಕೆಲವರು ಬೇಕು ಎಂದೇ ಹೀಗೆ ಮಾಡಿದ್ದಾರೆ.

ಸರ್ಕಾರಿ ವೈದ್ಯೆಯ ನಿರ್ಲಕ್ಷ್ಯಕ್ಕೆ ನವಜಾತ ಶಿಶು ಸಾವು?: ವೈದ್ಯೆಯ ವಿರುದ್ಧ ಕುಟುಂಬಸ್ಥರ ಆಕ್ರೋಶ, ಪ್ರತಿಭಟನೆ

ಅವರು 2000ದ ಇಸವಿಯಿಂದ ಇದ್ದವರೆ , 2013 ರಲ್ಲಿ ನಾನು ಸ್ವಲ್ಪ ಮೈಮರೆತೆ, 1000 ಮತಗಳಿಂದ ಸೋತೆ, ಆಗ ಇದ್ದವರೂ ಇವರೆ ಎಂದು ಟೀಕಿಸಿದರು. ಬಿ.ಎಸ್ ಯಡಿಯ್ಯೂರಪ್ಪನವರು 100 ಮೀಟರ್ ದೂರಕ್ಕೆ ನನ್ನನ್ನ ಕರೆದೊಯ್ದು ಸಮಾಧಾನ ಹೇಳಿದ್ದಾರೆ.ಮೂಡಿಗೆರೆಗೆ ನೀನೆ ಅಭ್ಯರ್ಥಿ, ಗೆಲ್ಲೋದು ನೀನೆ ಎಂದಿದ್ದಾರೆ.ಪಕ್ಷಕ್ಕಾಗಿ ಹೋರಾಡುತ್ತೇನೆ, ನಾನು ಒಬ್ಬನೆ, ನನಗೆ ಹೆಂಡ್ತಿ, ಮಕ್ಕಳು ಇಲ್ಲ, ನಾನು ಏಕಾಂಗಿಯಾಗಿದ್ದು ಇಂದಿನ ಘಟನೆಗೆ ಮಾಜಿ ಸಿಎಂ ಬಿ.ಎಸ್.ವೈಗೆ ವಿಷಾದ ಕೇಳುತ್ತೇನೆ ಎಂದರು. ಒಟ್ಟಾರೆ ಇಂದಿನ ರಾಜಕೀಯ ಬೆಳವಣಿಗೆ ಮೂಡಿಗೆರೆ ಬಿ.ಜೆ.ಪಿ.ಯಲ್ಲಿ ಅನೇಕ ವರ್ಷಗಳಿಂದ ಒಳಗೊಳಗೆ ಹೊಗೆಯಾಡುತ್ತಿದ್ದ ಶಾಸಕರ ಪರ ಮತ್ತು ವಿರುದ್ಧ ಬಣಗಳ ನಡುವಿನ ಭಿನ್ನಮತ ದೊಡ್ಡಮಟ್ಟದಲ್ಲಿ ಸ್ಟೋಟಗೊಂಡು ರಾಜಕೀಯ ಹೈಡ್ರಾಮಕ್ಕೆ ಸಾಕ್ಷಿಯಾಯಿತು. .ಮೂಡಿಗೆರೆಯಲ್ಲಿ ಬಿ.ಜೆ.ಪಿ. ಒಡೆದ ಮನೆಯಂತಾಗಿದ್ದು, ಮುಂದಿನ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಆಯ್ಕೆಯನ್ನು ಕಗ್ಗಂಟಾಗಿಸಿದೆ.

click me!