ಮುಡಾ ಹಗರಣದಲ್ಲಿ ಬಿಜೆಪಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರು ಕೆಡಿಸಲು ಯತ್ನಿಸುತ್ತಿದ್ದಾರೆ ಎಂದು ಶಾಸಕ ಎನ್.ಎಚ್.ಕೋನರಡ್ಡಿ ಕಿಡಿಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಆ. 29ರ ವರೆಗೆ ನ್ಯಾಯಾಧೀಶರು ಮುಡಾದ ಯಾವುದೇ ಆದೇಶ ಹೊರಡಿಸದಂತೆ ಸೂಚನೆ ನೀಡಿದೆ.
ಹುಬ್ಬಳ್ಳಿ (ಆ.22): ಮುಡಾ ಹಗರಣದಲ್ಲಿ ಬಿಜೆಪಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರು ಕೆಡಿಸಲು ಯತ್ನಿಸುತ್ತಿದ್ದಾರೆ ಎಂದು ಶಾಸಕ ಎನ್.ಎಚ್.ಕೋನರಡ್ಡಿ ಕಿಡಿಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಆ. 29ರ ವರೆಗೆ ನ್ಯಾಯಾಧೀಶರು ಮುಡಾದ ಯಾವುದೇ ಆದೇಶ ಹೊರಡಿಸದಂತೆ ಸೂಚನೆ ನೀಡಿದೆ. ಇದು ಸತ್ಯಕ್ಕೆ ಸಿಕ್ಕ ಮೊದಲ ಜಯ. ಈ ವಿಚಾರದಲ್ಲಿ ನಮಗೆ ನ್ಯಾಯ ಸಿಗುವ ಭರವಸೆಯಿದೆ ಎಂದರು. ಮುಡಾ ಹಗರಣವನ್ನು ಸಿಬಿಐಗೆ ವಹಿಸಬೇಕೆಂಬ ವಿಚಾರಕ್ಕೆ, ಬಿಜೆಪಿಯವರಿಗೆ ರಾಜ್ಯ ಪೊಲೀಸರ ಮೇಲೆಯೇ ನಂಬಿಕೆಯಿಲ್ವ? ಸಿಬಿಐ ಮೇಲೆ ಬಿಜೆಪಿಗೆ ಇಷ್ಟೊಂದು ಯಾಕೆ ಪ್ರೀತಿ?
ಈ ಹಿಂದೆ ಅವರು ಅಧಿಕಾರದಲ್ಲಿದ್ದಾಗ ಯಾಕೆ ಸಿಬಿಐ ಮೇಲೆ ನಂಬಿಕೆ ಇರಲಿಲ್ಲ. ಇದೀಗ ಅಧಿಕಾರ ಕಳೆದುಕೊಂಡ ನಂತರ ಹೆಚ್ಚಿನ ನಂಬಿಕೆ ಬಂದಿದೆ ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಈಗಾಗಲೇ ಕಾಂಗ್ರೆಸ್ ಶಾಸಕರು ಒಕ್ಕೊರಲಿನಿಂದ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದರು. ರಾಜ್ಯದಲ್ಲಿ ರಾಜ್ಯಪಾಲರ ಮೂಲಕ ರಾಷ್ಟ್ರಪತಿ ಆಳ್ವಿಕೆ ಹೇರುವ ಹುನ್ನಾರ ಬಿಜೆಪಿಯವರದ್ದು, ಹೀಗಾಗಿ ರಾಷ್ಟ್ರಪತಿ ರಾಜ್ಯಪಾಲರನ್ನು ಹಿಂದಕ್ಕೆ ಕರೆಯಿಸಿಕೊಳ್ಳಲು ಮನವಿ ಮಾಡುತ್ತೇನೆ ಎಂದರು.
undefined
ಮುನೇನಕೊಪ್ಪರ ಹೇಳಿಕೆ ಆಧಾರ ರಹಿತ: ಕ್ಷೇತ್ರದಲ್ಲಿ ಕೈಗೊಳ್ಳಲಾಗಿರುವ ಚಕ್ಕಡಿ ರಸ್ತೆಗಳ ಕುರಿತು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಆಧಾರ ರಹಿತ ಹೇಳಿಕೆ ನೀಡುತ್ತಿದ್ದಾರೆ ಎಂದು ಶಾಸಕ ಎನ್.ಎಚ್. ಕೋನರಡ್ಡಿ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿ, ನವಲಗುಂದ ವಿಧಾನಸಭಾ ಕ್ಷೇತ್ರದ ಅಣ್ಣಿಗೇರಿ, ಹುಬ್ಬಳ್ಳಿ ಹಾಗೂ ನವಲಗುಂದ ತಾಲೂಕುಗಳಲ್ಲಿ ಚಕ್ಕಡಿ ರಸ್ತೆ ಅಭಿವೃದ್ಧಿಗೊಳಿಸಲಾಗಿದೆ. ಹೆದ್ದಾರಿ ಮಾದರಿಯಲ್ಲೇ ಚಕ್ಕಡಿ ರಸ್ತೆ ನಿರ್ಮಿಸಿರುವುದಕ್ಕೆ ರೈತರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಅಭಿವೃದ್ಧಿ ಕೆಲಸಗಳನ್ನು ನೋಡಿ ಬಿಜೆಪಿಯವರಿಗೆ ಸಹಿಸದೇ ಈ ರೀತಿಯ ವಿನಾಕಾರಣ ಟೀಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಆಲಮಟ್ಟಿ ಡ್ಯಾಂ ಎತ್ತರಕ್ಕೆ ಕೇಂದ್ರ ಸರ್ಕಾರ ನೋಟಿಫಿಕೇಷನ್ ಮಾಡಿಲ್ಲ: ಸಿಎಂ ಸಿದ್ದರಾಮಯ್ಯ
ಮುನೇನಕೊಪ್ಪ ಅವರು 5 ವರ್ಷ ಶಾಸಕ, ಸಚಿವರಾಗಿ ಅಭಿವೃದ್ಧಿ ಕಾರ್ಯ ಕೈಗೊಂಡ ವೇಳೆ ನಾವು ಯಾವುದೇ ರೀತಿಯ ತಕರಾರು ಮಾಡಿರಲಿಲ್ಲ. ನಮಗೆ ಕ್ಷೇತ್ರದ ಅಭಿವೃದ್ಧಿ ಮುಖ್ಯವೇ ಹೊರತು ಯಾರನ್ನೂ ದೂರುವ ಉದ್ದೇಶವಿಲ್ಲ. ಆದರೆ, ನಾನು ಶಾಸಕನಾಗಿ ಆಯ್ಕೆಯಾದ ಕೇವಲ ಒಂದು ವರ್ಷದಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ರಸ್ತೆಗಳನ್ನು ಅಭಿವೃದ್ಧಿ ಪಡಿಸಿದ್ದೇನೆ. ಬೇಕಿದ್ದರೆ ಎಲ್ಲ ಗ್ರಾಮಗಳಲ್ಲಿನ ರೈತರೊಂದಿಗೆ ಚರ್ಚಿಸಲಿ. ಸ್ವತಃ ರೈತರೇ ಮುಂದೆ ನಿಂತು ರಸ್ತೆಗಳನ್ನು ಮಾಡಿಸಿಕೊಂಡಿದ್ದಾರೆ. 10 ಅಡಿ ಇದ್ದ ರಸ್ತೆಯನ್ನು 30 ಅಡಿ ವರೆಗೆ ಅಗಲೀಕರಣಗೊಳಿಸಿ ಅಭಿವೃದ್ಧಿ ಪಡಿಸಿದ್ದೇನೆ. ಮುಖ್ಯಮಂತ್ರಿಗಳು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಕಾನೂನು ಸಚಿವ ಎಚ್.ಕೆ. ಪಾಟೀಲ ಹಾಗೂ ಮುಂತಾದ ಶಾಸಕರು, ರೈತರು ಮೆಚ್ಚುಗೆ ವ್ಯಕ್ತಪಡಿಸಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಇನ್ನು ಮುಂದಾದರೂ ಮುನೇನಕೊಪ್ಪ ಅವರು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡದೇ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸುವಂತೆ ತಿಳಿಸಿದ್ದಾರೆ.