
ಮಂಡ್ಯ/ಬೆಂಗಳೂರು(ಮಾ.19): ಟಿಪ್ಪು ಸುಲ್ತಾನ್‌ನನ್ನು ಕೊಂದಿದ್ದಾರೆ ಎಂದು ಬಿಂಬಿಸಲಾಗುತ್ತಿರುವ ಉರಿಗೌಡ, ದೊಡ್ಡನಂಜೇಗೌಡರ ಕುರಿತು ಸುವರ್ಣ ಮಂಡ್ಯ ಪುಸ್ತಕದಲ್ಲಿ ಉಲ್ಲೇಖವಾಗಿರುವುದು ಬೆಳಕಿಗೆ ಬಂದಿದೆ. ಮಂಡ್ಯ ಜಿಲ್ಲೆ ಸುವರ್ಣ ಮಹೋತ್ಸವದ ಪ್ರಯುಕ್ತ ದೇ.ಜವರೇಗೌಡ ಅವರ ಸಂಪಾದಕತ್ವದಲ್ಲಿ ಹೊರ ತಂದಿರುವ ಸುವರ್ಣ ಮಂಡ್ಯ ಪುಸ್ತಕದಲ್ಲಿ ಈ ಬಗ್ಗೆ ಉಲ್ಲೇಖವಿದೆ. 2006ರಲ್ಲಿ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹೊರತಂದಿರುವ ಪುಸ್ತಕವಿದು.
ಸಾಹಿತಿ ಹ.ಕ.ರಾಜೇಗೌಡ ಅವರು ಬರೆದಿರುವ ಲೇಖನದಲ್ಲಿ ಟಿಪ್ಪುವಿನ ಕಾಲದಲ್ಲಿ ಉರಿಗೌಡ ಮತ್ತು ದೊಡ್ಡ ನಂಜೇಗೌಡ ಸೇರಿದಂತೆ ಹಲವರು ಹೈದರಾಲಿ ಮತ್ತು ಟಿಪ್ಪುವಿನ ವಿರುದ್ಧ ಸೆಟೆದು ನಿಂತಿದ್ದರು. ಟಿಪ್ಪು ಆಡಳಿತದಲ್ಲಿ ಮುಸಲ್ಮಾನರನ್ನೇ ನೇಮಿಸಿದ್ದು, ಪರ್ಷಿಯನ್ ಭಾಷೆಯನ್ನು ಆಡಳಿತ ಭಾಷೆಯಾಗಿ ಘೋಷಣೆ ಮಾಡಿದ್ದು ಇವರಿಗೆ ಸಿಟ್ಟು ತರಿಸಿತ್ತು. ಟಿಪ್ಪುವಿನ ಧಾರ್ಮಿಕ ಮತ್ತು ಭಾಷಾ ನೀತಿಯ ಕಾರಣದಿಂದ ಇಬ್ಬರು ಆತನ ವಿರುದ್ಧ ಸೆಟೆದು ನಿಂತಿದ್ದರು ಎಂದು ಉಲ್ಲೇಖಿಸಿದ್ದಾರೆ.
‘ಉರಿಗೌಡ, ನಂಜೇಗೌಡ’ ಸಿನಿಮಾಕ್ಕೆ ಕುಮಾರಸ್ವಾಮಿ ಕೆಂಡ..!
ಈ ಅಂಶವನ್ನು ಹೊರತುಪಡಿಸಿದಂತೆ ಉರಿಗೌಡ ಮತ್ತು ದೊಡ್ಡನಂಜೇಗೌಡ ಅವರು ಟಿಪ್ಪುವನ್ನು ಹತ್ಯೆ ಮಾಡಿದರು ಎಂಬ ಬಗ್ಗೆ ಎಲ್ಲಿಯೂ ಉಲ್ಲೇಖ ಇಲ್ಲ. ಜೊತೆಗೆ, ಟಿಪ್ಪುವಿನ ಪತನದ ನಂತರ ಇದೇ ಗೌಡರು ಬ್ರಿಟಿಷರ ವಿರುದ್ಧವೂ ಕೆಲಸ ಮಾಡಿದ್ದು ಕಂಡು ಬಂದಿದೆ.
ಪುಸ್ತಕದಲ್ಲಿ ದಾಖಲಾಗಿರುವ ಉಲ್ಲೇಖ ಕುರಿತಂತೆ ಪ್ರತಿಕ್ರಿಯಿಸಿರುವ ಸಾಹಿತಿ ಜಗದೀಶ್ ಕೊಪ್ಪ ಅವರು, ಹ.ಕ.ರಾಜೇಗೌಡ ಅವರು ನನ್ನ ಗುರುಗಳು. ಸುವರ್ಣ ಮಂಡ್ಯ ಪುಸ್ತಕದಲ್ಲಿ ಉರಿಗೌಡ ಮತ್ತು ದೊಡ್ಡ ನಂಜೇಗೌಡ ಕುರಿತು ದಾಖಲಿಸಿರುವ ಅಂಶದ ಬಗ್ಗೆ ನಾನು ಅವರಿಗೆ ಮನವರಿಕೆ ಮಾಡಿ ಕೊಟ್ಟಿದ್ದೇನೆ. ಪುಸ್ತಕದಲ್ಲಿ ತಪ್ಪಾಗಿರುವುದನ್ನು ಅವರು ತಮ್ಮ ಕೊನೆಯ ದಿನಗಳಲ್ಲಿ ಒಪ್ಪಿಕೊಂಡಿದ್ದರು ಎಂದು ತಿಳಿಸಿದರು.
ಮೇ 18ಕ್ಕೆ ಸಿನಿಮಾ ಮುಹೂರ್ತ!
ಬೆಂಗಳೂರು: ರಾಜಕೀಯವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ‘ಉರಿಗೌಡ, ನಂಜೇಗೌಡ’ ಎಂಬ ಶೀರ್ಷಿಕೆಯ ಸಿನಿಮಾ ಮುಹೂರ್ತವು ಮೇ 18ರಂದು ನೆರವೇರಲಿದೆ ಎಂದು ಚಿತ್ರ ನಿರ್ಮಿಸುತ್ತಿರುವ ಸಚಿವ ಮುನಿರತ್ನ ಹೇಳಿದ್ದಾರೆ. ಈ ಇಬ್ಬರೂ ಟಿಪ್ಪು ಸುಲ್ತಾನ್ ಅವರನ್ನು ಹತ್ಯೆ ಮಾಡಿದರು ಎಂದು ಹೇಳಲಾಗಿರುವ ಹಿನ್ನೆಲೆಯಲ್ಲಿ ಈ ಚಿತ್ರವು ಮಹತ್ವ ಪಡೆದುಕೊಂಡಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ‘ನಮ್ಮ ವೃಷಭಾದ್ರಿ ಪ್ರೊಡಕ್ಷನ್ ನಿರ್ಮಾಣದ ಐತಿಹಾಸಿಕ ಸತ್ಯ ಘಟನೆಗಳ ಆಧಾರಿತ ‘ಉರಿಗೌಡ, ನಂಜೇಗೌಡ’ ಚಿತ್ರದ ಮುಹೂರ್ತ ಮೇ.18ರಂದು ಕಂಠೀರವ ಸ್ಟುಡಿಯೋದಲ್ಲಿ ನಡೆಯಲಿದೆ. ಕಂದಾಯ ಸಚಿವ ಆರ್.ಅಶೋಕ್ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅರ್ಪಿಸುವ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರ ಚಿತ್ರಕಥೆ ಇರುವ ಈ ಚಿತ್ರಕ್ಕೆ ಆರ್.ಎಸ್.ಗೌಡ ನಿರ್ದೇಶನ ಮಾಡುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.