Ticket fight: ಸಚಿವ ಹಾಲಪ್ಪ ಆಚಾರ್‌ಗೆ ಅಡ್ಡಗಾಲದ ಗುಳಗಣ್ಣವರ್!

By Kannadaprabha NewsFirst Published Apr 8, 2023, 3:35 PM IST
Highlights

ರಾಜ್ಯಾದ್ಯಂತ ಬಿಜೆಪಿ ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳ ಪಟ್ಟಿಇನ್ನೂ ಬಿಡುಗಡೆ ಆಗದ ಹಿನ್ನೆಲೆ ಯಲಬುರ್ಗಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ ಯಾರಿಗೆಂದು ಚರ್ಚೆ ಜೋರಿದೆ. ಕಮಲದ ಹೂವು ಯಾರಿಗೆ ಎಂಬುದು ಕುತೂಹಲ ಮೂಡಿಸಿದೆ. ದಿನೇ ದಿನೆ ನಾನಾ ಹೆಸರು ತೇಲಾಡುತ್ತಿದ್ದು, ನಾನಾ ಚರ್ಚೆಗೆ ಇಂಬು ಮಾಡಿಕೊಟ್ಟಿದೆ.

ಅಮರೇಶ್ವರಸ್ವಾಮಿ ಕಂದಗಲ್ಲಮಠ

 ಕುಕನೂರು (ಏ.8) : ರಾಜ್ಯಾದ್ಯಂತ ಬಿಜೆಪಿ ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳ ಪಟ್ಟಿಇನ್ನೂ ಬಿಡುಗಡೆ ಆಗದ ಹಿನ್ನೆಲೆ ಯಲಬುರ್ಗಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ ಯಾರಿಗೆಂದು ಚರ್ಚೆ ಜೋರಿದೆ. ಕಮಲದ ಹೂವು ಯಾರಿಗೆ ಎಂಬುದು ಕುತೂಹಲ ಮೂಡಿಸಿದೆ. ದಿನೇ ದಿನೆ ನಾನಾ ಹೆಸರು ತೇಲಾಡುತ್ತಿದ್ದು, ನಾನಾ ಚರ್ಚೆಗೆ ಇಂಬು ಮಾಡಿಕೊಟ್ಟಿದೆ.

ಸಚಿವ ಹಾಲಪ್ಪ ಆಚಾರ(Minister halappa achar) ಅವರಿಗೆ ಮತ್ತೆ ಟಿಕೆಟ್‌ ಫೈನಲ್‌ ಆಗಿದೆ ಎಂದು ಕೆಲವು ಕಾರ್ಯಕರ್ತರು ಹೇಳುತ್ತಿದ್ದಾರೆ.ಈ ಸಲ ಬಿಜೆಪಿ ಹೊಸಬರಿಗೆ ಮಣೆ ಹಾಕುತ್ತದೆ ಎಂದು ವದಂತಿಯೂ ಜೋರಾಗಿದೆ. ರಾಜ್ಯಾದ್ಯಂತ ಉತ್ತರ ಪ್ರದೇಶದ ಮಾದರಿ ರೀತಿಯಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡುತ್ತದೆ ಎಂಬ ಮಾತು ಸಹ ಕ್ಷೇತ್ರದಲ್ಲಿ ಸಂಚಲನ ಮೂಡಿಸಿವೆ. ಪಕ್ಷ ಅವಕಾಶ ನೀಡಿದರೆ ಸ್ಪರ್ಧೆಗೆ ಸಿದ್ಧ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ನವೀನ ಗುಳಗಣ್ಣವರ್‌(Naveen gulagannavar) ಹೇಳಿದ್ದಾರೆ. ಇದರ ಮಧ್ಯೆ ನೌಕರಿಗೆ ಗುಡ್‌ ಬೈ ಹೇಳಿ ಸ್ಪರ್ಧೆಗಿಳಿಯಲು ಶರಣಪ್ಪ ಗುಂಗಾಡಿ(Sharanappa gungadi) ಕಾಯುತ್ತಿದ್ದಾರೆ. ಪಂಚಮಸಾಲಿ ಸಮಾಜದ ಪ್ರಬಲ ನಾಯಕರಾಗಿರುವ ಬಸಲಿಂಗಪ್ಪ ಭೂತೆ ಟಿಕೆಟ್‌ ತನಗೆ ನೀಡಬೇಕು ಎಂದು ಬಿಜೆಪಿ ಮುಖಂಡರ ಬೆನ್ನುಬಿದ್ದಿದ್ದಾರೆ. ಅಲ್ಲದೆ ಅಥಣಿ ಕ್ಷೇತ್ರದಲ್ಲಿ ಲಕ್ಷ್ಮಣ ಸವದಿ ಅವರಿಗೆ ಟಿಕೆಟ್‌ ಗೊಂದಲ ಮಧ್ಯೆ ಅವರ ಯಲಬುರ್ಗಾ ರಾಜಕಾರಣದತ್ತ ಬರುತ್ತಾರೆ ಎಂಬ ವದಂತಿ ಸಹ ಹಬ್ಬಿದೆ.

ಹಣಕ್ಕೆ ಮತ ಮಾರಿಕೊಳ್ಳದಿರಿ: ಮತದದಾರರಿಗೆ ಕಿವಿಮಾತು ಹೇಳಿದ ಮಾಜಿ ಸಚಿವ ರಾಯರೆಡ್ಡಿ

ಸಂಘಟನಾತ್ಮಕ ಸಭೆ ರದ್ದು, ಸಂಚಲನ:

ಕ್ಷೇತ್ರದಾದ್ಯಂತ ಈಗಾಗಲೇ ಸಚಿವ ಹಾಲಪ್ಪ ಆಚಾರ್‌ ಅವರು ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.ದಿನವೀಡಿ ಹಳ್ಳಿ ,ಹಳ್ಳಿ ಸುತ್ತಿ ಮತಯಾಚನೆ ಮಾಡುತ್ತಿದ್ದಾರೆ. ಪಕ್ಷ ಟಿಕೆಟ್‌ ಘೋಷಣೆ ಮಾಡದೆ ಇದ್ದರೂ ಸಿಕ್ಕೇಸಿಗುತ್ತದೆ ಎನ್ನುವ ವಿಶ್ವಾಸದಲ್ಲಿ ಮತಯಾಚನೆ ಮಾಡುತ್ತಿದ್ದಾರೆ.

ಈ ನಡುವೆ ಸಚಿವ ಹಾಲಪ್ಪ ಆಚಾರ ಅವರು ಕಳೆದ ಮೂರ್ನಾಲ್ಕು ದಿನಗಳಿಂದ ಬಿಜೆಪಿ ಯಲಬುರ್ಗಾ ಮಂಡಲದಿಂದ ಜಿಲ್ಲಾ ಪಂಚಾಯತಿ ವಾರು ಬಿಜೆಪಿ ಸಂಘಟನಾತ್ಮಕ ಸಭೆ ಹಮ್ಮಿಕೊಂಡಿದ್ದರು.ಶುಕ್ರವಾರವೂ (ಮಾ.7 ರಂದು) ಸಹ ತಾಲೂಕಿನ ಮಂಗಳೂರು ಜಿಪಂ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಸಂಘಟನಾತ್ಮಕ ಸಭೆ ನಿಗದಿಯಾಗಿತ್ತು.ಆದರೆ, ಏಕಾಏಕಿ ಸಭೆಗಳನ್ನು ರದ್ದು ಮಾಡಿದ್ದು, ನಾನಾ ವದಂತಿಗಳಿಗೆ ರೆಕ್ಕೆಪುಕ್ಕ ಬರುವಂತೆ ಮಾಡಿತು. ಈ ವರೆಗೆ ಟಿಕೆಟ್‌ ಆಕಾಂಕ್ಷಿಗಳು ಬೆಂಗಳೂರಿನಲ್ಲಿಯೇ ಬಿಡಾರ ಹೂಡಿದ್ದರೂ ಸಚಿವ ಹಾಲಪ್ಪ ಆಚಾರ್‌ ಅವರು ತಲೆ ಕೆಡಿಸಿಕೊಳ್ಳದೆ ಪ್ರಚಾರ ನಡೆಸುತ್ತಿದ್ದರು.ತಮಗೆ ಟಿಕೆಟ್‌ ಫೈನಲ್‌ ಆಗಿದೆ ಎನ್ನುವಂತೆ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದ ಸಚಿವ ಹಾಲಪ್ಪ ಆಚಾರ್‌ ದಿಢೀರ್‌ ಪ್ರಚಾರ ರದ್ಧು ಮಾಡುತ್ತಿದ್ದಂತೆ ಬೆಂಗಳೂರಿಗೆ ತೆರಳಿದ್ದಾರೆ ಎನ್ನುವ ವದಂತಿಯೂ ಹರಡಿತು. ಆದರೆ, ಸಚಿವ ಹಾಲಪ್ಪ ಆಚಾರ್‌ ಅವರು ಬೆಂಗಳೂರಿಗೆ ಹೋಗಿರಲಿಲ್ಲ. ಬದಲಾಗಿ ಹುಬ್ಬಳ್ಳಿಯಲ್ಲಿ ಸಿ.ಎಂ.ಬಸವರಾಜ ಬೊಮ್ಮಾಯಿ ಹಾಗೂ ಸಚಿವ ಗೋವಿಂದ ಕಾರಜೋಳ ಅವರನ್ನು ಭೇಟಿಯಾಗಿ ಮತ್ತೆ ಸಂಜೆಯ ವೇಳೆಗೆ ವಾಪಸ್ಸಾದರು.ಆದರೂ ನಾನು ಪುಕಾರಗಳಂತೂ ಹರಡಿರುವೆ.ಆದರೆ,ಹಾಲಪ್ಪ ಆಚಾರ್‌ ಅವರು ಮಾತ್ರ ವಿಶ್ವಾಸದಿಂದಲೇ ಇದ್ದಾರೆ.

ಹುಲಿಗೆಮ್ಮ ದೇವಿಗೆ ಸಚಿವ ಆಚಾರ ಪೂಜೆ:

ಮೂರು ದಿನಗಳ ಹಿಂದೆ ಸಚಿವ ಹಾಲಪ್ಪ ಆಚಾರ ಅವರು ಹುಲಗಿಯ ಹುಲಿಗೆಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿರುವ ಫೋಟೋ ಸಹ ವೈರಲ್‌ ಆಗಿದೆ. ಸಚಿವ ಹಾಲಪ್ಪ ಆಚಾರ ಅವರು ಟಿಕೆಟ್‌ಗಾಗಿ ದೇವರ ಮೊರೆ ಹೋದರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಟಕ್ಕರ್‌ ಕೊಡುತ್ತಿರುವ ನವೀನ್‌

ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕ ಈಶಣ್ಣ ಗುಳಗಣ್ಣವರ ಅವರ ಪುತ್ರ ನವೀನ್‌ ಗುಳಗಣ್ಣವರ ಸಚಿವ ಹಾಲಪ್ಪ ಆಚಾರ್‌ ಅವರಿಗೆ ಟಿಕೆಟ್‌ ನೀಡುವ ವಿಷಯದಲ್ಲಿ ಭರ್ಜರಿಯಾಗಿಯೇ ಟಕ್ಕರ್‌ ನೀಡುತ್ತಿದ್ದಾರೆ. ಹಾಲಪ್ಪ ಆಚಾರ್‌ ಅವರ ಹೆಸರನ್ನು ಮೀರಿಯೂ ಇವರ ಹೆಸರು ಈಗ ಚರ್ಚೆಯಾಗುವಂತೆ ಆಗಿದೆ. ಅದರಲ್ಲೂ ಸಂಸದ ಸಂಗಣ್ಣ ಕರಡಿ ಅವರ ಜತೆಗೂಡಿ ವರಿಷ್ಠರನ್ನು ಭೇಟಿಯಾಗಿರುವುದು ಕುತೂಹಲಕ್ಕೆ ದಾರಿ ಮಾಡಿಕೊಟ್ಟಿದೆ ಮತ್ತು ನಾನಾ ಚರ್ಚೆಗಳಿಗೆ ಇಂಬು ನೀಡಿದೆ.

ಕೊಪ್ಪಳದಲ್ಲಿ ಬಿಜೆಪಿ ಪ್ರಚಾರ ಶುರುವಾಗೋದು ಯಾವಾಗ?

ಸಚಿವ ಹಾಲಪ್ಪ ಆಚಾರ ಅವರಿಗೆ ಬಹುತೇಕವಾಗಿ ಟಿಕೆಟ್‌ ಫೈನಲ್‌ ಆಗಿದೆ. ಪಕ್ಷದ ವರಿಷ್ಠರ ಕರೆ ಮೇಲೆ ಪಕ್ಷದ ಕಾರ್ಯ ನಿಮಿತ್ತ ಹುಬ್ಬಳ್ಳಿಗೆ ಹೋದ ಕಾರಣ ಸಂಘಟನಾತ್ಮಕ ಸಭೆಗಳು ರದ್ದಾಗಿವೆ. ಬಸಲಿಂಗಪ್ಪ ಭೂತೆ ಅವರು ಟಿಕೆಟ್‌ಗಾಗಿ ಬೆಂಗಳೂರಿನಲ್ಲಿಯೇ ಉಳಿದಿದ್ದಾರೆ. ಆದರೆ ಸಚಿವ ಹಾಲಪ್ಪ ಆಚಾರ ಅವರಿಗೆ ಟಿಕೆಟ್‌ ಲಭಿಸಲಿದೆ. ಮೊದಲ ಪಟ್ಟಿಯಲ್ಲಿಯೇ ಅವರ ಹೆಸರು ಬರುತ್ತದೆ.

ವಿಶ್ವನಾಥ ಮರಿಬಸಪ್ಪನವರ್‌,ಯಲಬುರ್ಗಾ ಬಿಜೆಪಿ ಮಂಡಲ ಅಧ್ಯಕ್ಷ, ಮಂಗಳೂರು

click me!