ಕಾಂಗ್ರೆಸ್ ಈಗ ಮುಳುಗುತ್ತಿರುವ ಹಡಗಿನಂತಿದ್ದು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳಿಪಟವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಭವಿಷ್ಯ ನುಡಿದರು.
ಮೈಸೂರು (ಅ.30): ಕಾಂಗ್ರೆಸ್ ಈಗ ಮುಳುಗುತ್ತಿರುವ ಹಡಗಿನಂತಿದ್ದು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳಿಪಟವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಭವಿಷ್ಯ ನುಡಿದರು. ನಗರದ ವಿದ್ಯಾರಣ್ಯಪುರಂನ ಬೂತಾಳೆ ಆಟದ ಮೈದಾನದಲ್ಲಿ ಶನಿವಾರ ನಡೆದ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಬೂತ್ ಅಧ್ಯಕ್ಷರು ಮತ್ತು ಬಿಎಲ್‌ಎಗಳ ಸಭೆ, ಕಾರ್ಯಕರ್ತರ ಸಂಕಲ್ಪ ಸಭೆಯನ್ನು ಶಂಖ ಊದುವ ಮೂಲಕ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು. ಕಾಂಗ್ರೆಸ್‌ನ ಧೂಳೀಪಟ ಯಾತ್ರೆ ಮೈಸೂರಿನ ಕೆ.ಆರ್. ಕ್ಷೇತ್ರದಿಂದಲೇ ಆರಂಭವಾಗುತ್ತದೆ. ತಾವೆಲ್ಲರೂ ಕಾಂಗ್ರೆಸ್ ಧೂಳಿಪಟ ಮಾಡುವುದಾಗಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿಯೇ ಪ್ರಮಾಣ ಮಾಡಿದ್ದೀರಿ. ಆದ್ದರಿಂದ ಯಾರೂ ಸುಳ್ಳು ಹೇಳಲಾಗದು.
ಕಾಂಗ್ರೆಸ್ ಮುಕ್ತ ಭಾರತದ ಸಂಕಲ್ಪವನ್ನು ಪ್ರತಿಯೊಬ್ಬರೂ ಈಡೇರಿಸಬೇಕು ಎಂದು ಅವರು ಕರೆ ನೀಡಿದರು. ಬಿಜೆಪಿ ಅಧಿಕಾರಕ್ಕೆ ಬರಬೇಕಾದರೆ ಮತ್ತು ಜಯಗಳಿಸಬೇಕಾದರೆ ಮತಗಟ್ಟೆಗಳನ್ನು ಭದ್ರವಾಗಿಡಬೇಕು. ಕೃಷ್ಣರಾಜ ಕ್ಷೇತ್ರದ ಎಲ್ಲಾ ಬೂತ್‌ಗಳನ್ನು ಬಿಜೆಪಿ ಬೂತ್ ಆಗಿ ಪರಿವರ್ತಿಸಬೇಕು. ಮತದಾರರು ಬಿಜೆಪಿ ಪರವಾಗಿ ಮತ ಚಲಾಯಿಸುವಂತೆ ನೋಡಿಕೊಳ್ಳಬೇಕು. ಎಲ್ಲಾ ಮತಗಟ್ಟೆಗಳನ್ನು ಭ್ರಷ್ಟಾಚಾರ ರಹಿತ ಮತಗಟ್ಟೆಗಳನ್ನಾಗಿ ಮಾಡಬೇಕು. ಇದರಿಂದ ಚುನಾವಣೆ ಎದುರಿಸಿ ಸುಲಭವಾಗಿ ಗೆಲ್ಲಬಹುದು ಎಂದು ಅವರು ಮನವರಿಕೆ ಮಾಡಿಕೊಟ್ಟರು.
ಕಟೀಲು ಅವರ ಮನೆ ರಿಪೇರಿ ಮಾಡಿಕೊಳ್ಳಲಿ: ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಡಿಕೆಶಿ ಗರಂ
ಕೆ.ಆರ್. ಕ್ಷೇತ್ರದಲ್ಲಿ ಹಮ್ಮಿಕೊಂಡ ಕಾರ್ಯಕ್ರಮಗಳನ್ನು ಇಡೀ ರಾಜ್ಯಕ್ಕೆ ವಿಸ್ತರಿಸಲಾಗುತ್ತಿದೆ. ಬೂತ್ ಅಧ್ಯಕ್ಷರು ಮತ್ತು ಬಿಎಲ್‌ಒಗಳ ಪಾತ್ರ ಹೇಗೆ ಇರಬೇಕು ಎಂಬುದನ್ನು ನೋಡಿ ಇತರೆ ಕಡೆಗಳಲ್ಲಿ ಅನುಸರಿಸಲಾಗಿದೆ ಎಂದು ಅವರು ಸಂಘಟನೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಕಾಂಗ್ರೆಸ್ ಈಗಾಗಲೇ ಮುಳುಗುತ್ತಿರುವ ಹಡಗಿನಂತಿದೆ. ಮುಂದೆ ಜನರಿಂದಲೇ ದೂರವಾಗಲಿದೆ. ಎರಡು ವರ್ಷಗಳ ಹಿಂದೆ ನಡೆದ ರಾಷೀಯ ಕಾರ್ಯಕಾರಿಣಿಯಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರಮೋದಿ ಅವರು, ಬಿಜೆಪಿ ಹದಿನಾರು ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಿರಬಹುದು. ಕೇಂದ್ರದಲ್ಲಿ ಬಹುಮತ ಪಡೆದು ಸರ್ಕಾರ ರಚಿಸಿರಬಹುದು. ಇದರಿಂದ ನಮಗೆಷ್ಟೇ ಸಂತೋಷವಾದರೂ ಇಡೀ ದೇಶದ ಬೂತ್‌ಗಳನ್ನು ಗೆಲ್ಲುವ ಕೆಲಸ ಮಾಡಬೇಕಿದೆ ಎಂದು ಅವರು ಹೇಳಿದರು.
ಆದ್ದರಿಂದ ಮೊದಲು ಬೂತ್ ಗೆದ್ದರೆ ಇಡೀ ದೇಶವನ್ನು ಗೆದ್ದಂತೆ. ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ದೇಶದಲ್ಲಿ ಬದಲಾವಣೆ ಪರ್ವ ಆರಂಭವಾಗಿದೆ. ಹಲವು ವರ್ಷದ ಸಮಸ್ಯೆ ಪರಿಹರಿಸಲು ಹತ್ತು ವರ್ಷ ಸಾಲುವುದಿಲ್ಲ. ಬದಲಿಗೆ ಇಪ್ಪತ್ತು ವರ್ಷವಾದರೂ ಅಧಿಕಾರದಲ್ಲಿ ಇರುವಂತೆ ಮಾಡಬೇಕಿದೆ ಎಂದು ಅವರು ತಿಳಿಸಿದರು. ಕಾಶ್ಮೀರದ ಶಾರದಾಂಬೆ, ಅಯೋಧ್ಯೆಯ ರಾಮಮಂದಿರ, ಕಾಶಿಗೆ ಕಾರಿಡಾರ್ ಯೋಜನೆ ಸೇರಿದಂತೆ ಅನೇಕ ಯೋಜನೆ ಇಷ್ಟುವರ್ಷಗಳ ಬಳಿಕ ಜಾರಿಯಾಗಿದೆ. ಭಾರತವನ್ನು ಜಗತ್ತಿನ ಎತ್ತರಕ್ಕೆ ನಿಲ್ಲಿಸಬೇಕು. ಎಲ್ಲಾ ಕ್ಷೇತ್ರದಲ್ಲಿಯೂ ಭಾರತ ಮುಂಚೂಣಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂಬುದು ನಮ್ಮ ಆಶಯ. ಆದಿವಾಸಿ ಮಹಿಳೆಯೊಬ್ಬರನ್ನು ದೇಶದ ರಾಷ್ಟ್ರಪತಿಯನ್ನಾಗಿ ಮಾಡಲಾಯಿತು. ಗುರುತಿಸದಿದ್ದವರನ್ನು ಗುರುತಿಸಿ ಅವಕಾಶ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಮಾತನಾಡಿ, ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ಜನಪರ ಯೋಜನೆಯನ್ನು ಜನರಿಗೆ ತಿಳಿಸಬೇಕು. ಮೂರು ವರ್ಷದಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕೋವಿಡ್ ಸಂದರ್ಭದಲ್ಲಿ ರಾಮದಾಸ್ ಅವರು ಜನರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ. ಮೋದಿ ಯುಗ ಉತ್ಸವ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಯನ್ನು ಜನರಿಗೆ ತಲುಪಿಸಿದ್ದಾರೆ. ಸೇವಾ ಪಾಕ್ಷಿಕ್ ಹೆಸರಿನಲ್ಲಿ ಬಡವರು, ಮಧ್ಯಮ ವರ್ಗದವರಿಗೆ ಅನುಕೂಲ ಆಗುವಂತೆ ಕಾರ್ಯಕ್ರಮ ಕೊಟ್ಟಿರುವುದರಿಂದ ಬಿಜೆಪಿ ಪರವಾದ ಅಲೆ ಇದೆ ಎಂದರು.
ಮೇಯರ್ ಶಿವಕುಮಾರ್, ಉಪ ಮೇಯರ್ ಡಾ.ಜಿ. ರೂಪಾ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಎಂ. ರಾಜೇಂದ್ರ, ಜಿಲ್ಲಾ ಉಸ್ತುವಾರಿ ತುಳಸಿ ಮುನಿರಾಜುಗೌಡ, ವಿಭಾಗೀಯ ಪ್ರಭಾರಿ ಮೈ.ವಿ. ರವಿಶಂಕರ್, ನಗರ ಬಿಜೆಪಿ ಅಧ್ಯಕ್ಷ ಟಿ.ಎಸ್. ಶ್ರೀವತ್ಸ, ಪ್ರಧಾನ ಕಾರ್ಯದರ್ಶಿಗಳಾದ ಎಚ್.ಜಿ. ಗಿರಿಧರ್, ವಿ. ಸೋಮಸುಂದರ್, ವಿಧಾನ ಪರಿಷತ್ ಮಾಜಿ ಸದಸ್ಯ ತೋಂಟದಾರ್ಯ, ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹೇಮಂತಕುಮಾರ್‌ಗೌಡ, ನಗರ ಪ್ರಭಾರಿ ಹೀರೇಂದ್ರ ಷಾ, ನಗರ ಪಾಲಿಕೆ ಸದಸ್ಯರಾದ ಸೌಮ್ಯಾ, ಶಾರದಮ್ಮ, ಗೀತಾ ಯೋಗಾನಂದ, ಕೆ.ಆರ್. ಕ್ಷೇತ್ರ ಬಿಜೆಪಿ ಅಧ್ಯಕ್ಷ ವಡಿವೇಲು, ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಬಾಬು ಇದ್ದರು.
ನಮ್ಮಪ್ಪನ ಮೇಲಾಣೆ, ಸಿದ್ದು ಸಿಎಂ ಆಗಲ್ಲ: ನಳಿನ್ ಕುಮಾರ್ ಕಟೀಲ್
ಒಂದು ಸುಳ್ಳನ್ನು ನೂರು ಬಾರಿ ಹೇಳಿ ಸತ್ಯ ಮಾಡಲು ಹೊರಟಿರುವ ಸಿದ್ದರಾಮಯ್ಯ ಅವರಿಗೆ ಜನರೇ ಪಾಠ ಕಲಿಸುತ್ತಾರೆ. ಕೆ.ಆರ್. ಕ್ಷೇತ್ರದಲ್ಲಿ ಸುಮಾರು 89 ಯೋಜನೆಗಳ ಸೌಲಭ್ಯವನ್ನು 50 ಸಾವಿರ ಜನರಿಗೆ ತಲುಪಿಸುವ ಕೆಲಸ ಮಾಡಲಾಗಿದೆ. ಪಕ್ಷದ ಕಾರ್ಯಕರ್ತರು ಮತ್ತು ಬೂತ್ ಮಟ್ಟದ ಅಧ್ಯಕ್ಷರು ಒನ್ ವೋಚ್-ಆಲ್ ಬಿಜೆಪಿ ವೋಟ್ ಎನ್ನುವಂತೆ ಕೆಲಸ ಮಾಡಬೇಕು.
-ಎಸ್.ಎ. ರಾಮದಾಸ್, ಶಾಸಕರು