
ಚಾಮರಾಜನಗರ (ಅ.29): ಜಿಲ್ಲೆಯ ನಾಲ್ಕು ವಿಧಾನ ಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವ ಪೂರಕ ವಾತಾವರಣ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್ ತಿಳಿಸಿದರು. ನಗರದ ಕರಿನಂಜನಪುರ ರಸ್ತೆಯಲ್ಲಿರುವ ಕಾಡಾ ಅಧ್ಯಕ್ಷ ಜಿ. ನಿಜಗುಣರಾಜು ಅವರ ಖಾಸಗಿ ಜನಸಂಪರ್ಕ ಕೇಂದ್ರ ಉದ್ಘಾಟಿಸಿ ಮಾತನಾಡಿ, ನಿಜಗುಣರಾಜು ಕೇಂದ್ರ ಹಾಗೂ ರಾಜ್ಯ ಸರ್ಕಾರ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಜವಬ್ದಾರಿ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಪ್ರಧಾನಿ ಮೋದಿ, ಸಬ್‌ಕೇ ಸಾಥ್ ಸಬ್ ಕಾ ವಿಕಾಸ್ ಘೋಷಣೆಯಂತೆ ಎಲ್ಲರನ್ನು ಅಭಿವೃದ್ಧಿ ಪಥದತ್ತ ಕೊಂಡೊಯುತ್ತಿದ್ದಾರೆಂದು ಕಟೀಲ್ ಪ್ರಶಂಸೆ ವ್ಯಕ್ತಪಡಿಸಿದರು. ಕಾಡಾ ಅಧ್ಯಕ್ಷ ನಿಜಗುಣರಾಜು, ಈಗಾಗಲೇ ಕ್ಷೇತ್ರದಾದ್ಯಂತ ಸಂಚಾರಿ ಸೇವಾ ಕೇಂದ್ರ, ಉಚಿತ ಕುಡಿವ ನೀರು ಕಲ್ಪಿಸುವ ಕಾರ್ಯಕ್ರಮ ನಿರಂತರ ನಡೆಯುತ್ತಿದೆ.
ಮುಂದಿನ ದಿನಗಳಲ್ಲಿ ಜನಸಂಪರ್ಕ ಕೇಂದ್ರದಲ್ಲಿ ಸೇವಾ ಸಿಂಧು ಕಾರ್ಯಕ್ರಮ, ಉಚಿತ ಕುಡಿವ ನೀರು ಸೇವೆ ಪಡೆದುಕೊಳ್ಳಬಹುದಾಗಿದೆ. ಖಾಸಗಿ ಜನ ಸಂಪರ್ಕ ಕೇಂದ್ರದಲ್ಲಿ ಅಪ್ತ ಸಹಾಯಕರು, ಸಿಬ್ಬಂದಿ ಇದ್ದು, ಈ ಎಲ್ಲಾ ಸೇವೆಗಳನ್ನು ಉಚಿತವಾಗಿ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ, ರಾಜ್ಯ ಕಾರ್ಯದರ್ಶಿ ತುಳುಸಿ ಮುನಿರಾಜಗೌಡ, ಕಾಡಾ ಅಧ್ಯಕ್ಷ ಜಿ. ನಿಜಗುಣರಾಜು, ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಸುಂದರ್, ಗ್ರಾಮಾಂತರ ಮಂಡಲದ ಅಧ್ಯಕ್ಷ ಬಸವಣ್ಣ, ನಗರ ಮಂಡಲದ ಅಧ್ಯಕ್ಷ ರಾಜು, ಎಪಿಎಂಸಿ ಅಧ್ಯಕ್ಷ ಮನೋಜ್ ಪಟೇಲ್, ಸಹಕಾರ ಪ್ರಕೋಷ್ಠದ ಸಂಚಾಲಕ ಕಿಲಗೆರೆ ಬಸವರಾಜು, ಮುಖಂಡರಾದ ಚಿನ್ನಮುತ್ತು, ಕಿಲಗೆರೆ ಬೆಳ್ಳಪ್ಪ ಇದ್ದರು.
150 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದು ಮತ್ತೆ ಅಧಿಕಾರಕ್ಕೆ ಬರಲಿದೆ: ಕಟೀಲ್
ಕಾಂಗ್ರೆಸ್ ಸೋಲುತ್ತೆ, ಬಿಜೆಪಿ ಗೆಲ್ಲುತ್ತೆ: ರಾಹುಲ್‌ಗಾಂಧಿ ಕಾಲಿಟ್ಟಕಡೆಯಲ್ಲೆಲ್ಲ ಕಾಂಗ್ರೆಸ್ ಸೋತಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗುಂಡ್ಲುಪೇಟೇಲಿ ಕಾಂಗ್ರೆಸ್ ಸೋಲುತ್ತೆ, ಬಿಜೆಪಿ ಗೆಲ್ಲುತ್ತದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು. ಜನ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿ, ಗಾಂಧಿ ಕುಟುಂಬದ ಹೆಸರಿನಲ್ಲಿ ಕಾಂಗ್ರೆಸ್ ಬದುಕಿತ್ತು. ಆದರೆ, ಇದೀಗ ಪರಿವರ್ತನೆ ಯುಗ ಪ್ರಾರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಜಗತ್ತಿನ ನಾಯಕರಾಗಿದ್ದಾರೆ ಎಂದರು.
ಕಾಂಗ್ರೆಸ್‌ಗೆ ಶಾಪಗ್ರಸ್ಥ ಜಿಲ್ಲೆ: ಚಾಮರಾಜನಗರ ಜಿಲ್ಲೆ ಶಾಪಗ್ರಸ್ತ ಜಿಲ್ಲೆಯಲ್ಲ ಎಂದು ಬಿಜೆಪಿ ವಿಮೋಚನೆ ಮಾಡಿದೆ. ಕಾಂಗ್ರೆಸ್‌ಗೆ ಮಾತ್ರ ಚಾಮರಾಜನಗರ ಶಾಪಗ್ರಸ್ತ ಜಿಲ್ಲೆಯಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಟೀಕಿಸಿದರು. ಅಂಬೇಡ್ಕರ್ ಭವನದಲ್ಲಿ ನಡೆದ ಬಿಜೆಪಿ ಸಂಕಲ್ಪ ಯಾತ್ರೆಯ ಸಮಾರಂಭ ಉದ್ಘಾಟಿಸಿ, ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲ್ಲಿಸಬೇಕು ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು. ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಬೇಕು ಎಂಬುದು ಬಿಜೆಪಿಯ ಗುರಿ.
ಸೋನಿಯಾ ಕಾಲಿಗೆ ಬಿದ್ದು ಸಿಎಂ ಆದ ಸಿದ್ದು: ನಳಿನ್ ಕುಮಾರ್ ಕಟೀಲ್
ಬಿಜೆಪಿಯ ಗುರಿ ಅಧಿಕಾರ ಹಿಡಿಯುವುದಲ್ಲ, ಬದಲಾಗಿ ಬಲಿಷ್ಠ ಹಾಗೂ ಶ್ರೇಷ್ಠ ಭಾರತ ನಿರ್ಮಾಣ ಬಿಜೆಪಿ ಸಂಕಲ್ಪ ಎಂದರು. ದೇಶದಲ್ಲಿ ಕಾಂಗ್ರೆಸ್ ಮನೆ ಖಾಲಿಯಾಗಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲುವ ಮೂಲಕ ಮತ್ತೆ ಅಧಿಕಾರ ಹಿಡಿಯುತ್ತೇವೆ ಎಂದರು. ಕಾಂಗ್ರೆಸ್ ಬ್ರಹ್ಮಾಂಡ ಭ್ರಷ್ಟಚಾರದ ಪಿತಾಮಹ ಗಾಳಿ, ನೀರಿನ ಹೆಸರಿನಲ್ಲೂ ಭ್ರಷ್ಟಾಚಾರ ಮಾಡಿದೆ. ಭ್ರಷ್ಟಚಾರದ ಕಾರಣದಿಂದಲೇ ಡಿ.ಕೆ.ಶಿವಕುಮಾರ್ ಜೈಲಿಗೆ ಹೋದರು ಎಂದು ಟೀಕಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.