Assembly election: ಬಿಜೆಪಿ ರೌಡಿ ಮೋರ್ಚಾ ವೆಬ್ ಸೈಟ್ ಆರಂಭಿಸಿದ ಕಾಂಗ್ರೆಸ್‌ : ವಿನೂತನ ಅಪಪ್ರಚಾರ

By Sathish Kumar KHFirst Published Dec 3, 2022, 5:45 PM IST
Highlights

ಬಿಜೆಪಿಯ ವಿರುದ್ಧ ಅಪಪ್ರಚಾರಕ್ಕಾಗಿ ಬಿಜೆಪಿ ರೌಡಿ ಮೋರ್ಚಾ ಆರಂಭಿಸಿದ ಕಾಂಗ್ರೆಸ್
ಆರು ರೌಡಿಶೀಟರ್‍‌ಗಳನ್ನು ಬಿಜೆಪಿ ಅಭ್ಯರ್ಥಿಗಳು ಎಂದು ಪಟ್ಟಿ ಬಿಡುಗಡೆ
ಅಪರಾಧ ಮಾಡಿರುವ ಅತ್ತುತ್ತಮ ಟ್ರಾಕ್‌ ರೆಕಾರ್ಡ ಹೊಂದಿದವರಿಗೆ ಟಿಕೆಟ್ ಅರ್ಹತೆ

ಬೆಂಗಳೂರು (ಡಿ.3): ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ತಪ್ಪುಗಳನ್ನು ಮುನ್ನೆಲೆಗೆ ತಂದು ಕೆಸರೆರಚಾಟ ಮಾಡುತ್ತಿರುವ  ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ, ಬೆಂಗಳೂರು ನಗರದ ರೌಡಿ ಶೀಟರ್ ಗಳ ರಾಜಕೀಯ ಪ್ರವೇಶ ಕುರಿತ ವಿಚಾರ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈಗ ರೌಡಿಶೀಟರ್‍‌ಗಳನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ವಿಚಾರವಾಗಿ ಭಾರಿ ವಾದ, ವಿವಾದ ನಡೆಸುತ್ತಿವೆ. ಕಾಂಗ್ರೆಸ್‌ ನಾಯಕರು ಮಾತಿನ ಮೂಲಕ ಆರೋಪ ಮಾಡುವುದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಸಮಾಜಿಕ ಜಾಲತಾಣದ ಮೂಲಕ ಟೀಕೆ ಮಾಡುತ್ತಿತ್ತು. ಈಗ ತಂತ್ರಜ್ಞಾನವನ್ನು ಹೆಚ್ಚಾಗಿ ಬಳಕೆ ಮಾಡಿಕೊಂಡಿರುವ ಕಾಂಗ್ರೆಸ್‌, ಬಿಜೆಪಿಗೆ ಠಕ್ಕರ್ ನೀಡಲು 'ಬಿಜೆಪಿ ರೌಡಿ ಮೋರ್ಚಾ' ಎಂಬ ವೆಬ್‌ಸೈಟ್‌ ಆರಂಭಿಸಿ ವಿನೂತನವಾದ ಪ್ರಚಾರ ಪಡೆಯಲು ಮುಂದಾಗಿದೆ.

ಇತ್ತೀಚೆಗೆ ಮಂಡ್ಯದ ಫೈಟರ್ ರವಿ ಬಿಜೆಪಿ ಸೇರ್ಪಡೆ ಆಗಿದ್ದರು.ಮತ್ತೊಂದೆಡೆ ರೌಡಿಶೀಟರ್ ಸೈಲೆಂಟ್‌ ಸುನೀಲನ ಕಾರ್ಯಕ್ರಮದಲ್ಲಿ ಸಂಸದರು ಭಾಗಿಯಾಗಿರುವುದು ಕಾಂಗ್ರೆಸ್‌ಗೆ ದೊಡ್ಡ ಟೀಕಾಸ್ತ್ರ ಸಿಕ್ಕಂತಾಗಿತ್ತು. ಇತ್ತೀಚೆಗೆ ವಿಲ್ಸನ್‌ ಗಾರ್ಡನ್‌ ನಾಗ, ನಾರ್ವೆ ಸೋಮಶೇಖರ್, ಬೆತ್ತನಗೆರೆ ಶಂಕರ, ರೌಡಿಶೀಟರ್‍‌ ಉಪ್ಪಿ ಸೇರಿ ಹಲವು ಬಿಜೆಪಿ ಪಕ್ಷದ ಅಭ್ಯರ್ಥಿಗಳು ಎಂದು ಪಟ್ಟಿಯನ್ನು ಕಾಂಗ್ರೆಸ್‌ನಿಂದ ಬಿಡುಗಡೆ ಮಾಡಲಾಗಿದೆ. ಪ್ರತಿನಿತ್ಯ ಬಿಜೆಪಿಗೆ ಹೊಸ ಹೊಸ ರೌಡಿಗಳು ಸೇರ್ಪಡೆ ಆಗುತ್ತಿದ್ದಾರೆ.  2023ರ ಚುನಾವಣೆಯಲ್ಲಿ ಈ ಎಲ್ಲ ರೌಡಿಗಳು ಬಿಜೆಪಿಯಿಂದ ಅಭ್ಯರ್ಥಿಗಳು ಆಗಲಿದ್ದಾರೆ. ಈಗ ಬಿಜೆಪಿಯ ಅಭ್ಯರ್ಥಿಗಳ ಪಟ್ಟಿ ಸೋರಿಕೆಯಾಗಿದ್ದು, ಅದನ್ನು ಜಾಲತಾಣದ ಮೂಲ ವೀಕ್ಷಣೆ ಮಾಡುವಂತೆಯೂ ತಿಳಿಸಲಾಗಿದೆ. ಬಿಜೆಪಿಗೆ ರೌಡಿಶೀಟರ್‍‌ ವಿಚಾರದಲ್ಲಿ ಟೀಕೆ ಮಾಡುವ ಉದ್ದೇಶಕ್ಕಾಗಿಯೇ ವೆಬ್‌ಸೈಟ್‌  https://www.bjprowdymorcha.com/ ತೆರೆದು ಅದರಲ್ಲಿ ರೌಡಿಶೀಟರ್‍‌ಗಳ ಪಟ್ಟಿಯನ್ನು ಬಿಜೆಪಿ ಅಭ್ಯರ್ಥಿಗಳು ಎಂದು ತೋರಿಸಲಾಗಿದೆ. ಜೊತೆಗೆ, ಕೆಲವು ಅಪರಾಧ ಕುರಿತ ಅರ್ಹತೆಗಳನ್ನು ಬಿಜೆಪಿ ಟಿಕೆಟ್‌ ಅಭ್ಯರ್ಥಿಗಳ ಮಾನದಂಡ ಎಂದು ವೆಬ್‌ಸೈಟ್‌ನಲ್ಲಿ ಬಿಂಬಿಸಲಾಗಿದೆ.

ಬಿಜೆಪಿ ಸೇರಿದ ರೌಡಿ ಶೀಟರ್‌ ಪರ ಸಿ.ಟಿ. ರವಿ ಬ್ಯಾಟಿಂಗ್; ರೌಡಿಗಳಿಗೆ ಕ್ಲೀನ್‌ ಸರ್ಟಿಫಿಕೇಟ್‌!

ಸಚಿವ ಸೋಮಣ್ಣ ಭೇಟಿಯಾದ ವಿಲ್ಸನ್‌ ಗಾರ್ಡನ್‌ ನಾಗ: ರೌಡಿ ಶೀಟರ್ ಗಳಾದ ಸೈಲೆಂಟ್ ಸುನೀಲ, ಫೈಟರ್ ರವಿ, ಬೆತ್ತನಗೆರೆ ಶಂಕರ ಬಿಜೆಪಿ ಜೊತೆಗೆ ಗುರುತಿಸಿಕೊಂಡ ನಂತರ, ವಿಲ್ಸನ್ ಗೌರ್ಡನ್ ನಾಗ ವಸತಿ ಮತ್ತು ಮೂಲಸೌಕರ್ಯಗಳ ಸಚಿವ ವಿ. ಸೋಮಣ್ಣ ಅವರ ಮನೆಗೆ ಭೇಟಿ ನೀಡಿದ್ದಾರೆ ಎಂದು ಕಾಂಗ್ರೆಸ್‌ ಬಿಂಬಿಸಿತ್ತು. ಈ ಕುರಿತು ಕಾಂಗ್ರೆಸ್ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಪ್ರಶ್ನಿಸಿ, ರೌಡಿಗಳಿಗೂ ಬಿಜೆಪಿ ನಾಯಕರಿಗೂ ಏನು ಸಂಬಂಧ? ಏನು ವ್ಯವಹಾರ? ಯಾವ ನಂಟು? ವಿಲ್ಸನ್ ಗಾರ್ಡನ್ ನಾಗ ಎಂಬ ರೌಡಿ ಶೀಟರ್ ಸಚಿವ ವಿ.ಸೋಮಣ್ಣ ಅವರ ಮನೆಗೆ ಬಂದಿದ್ದೇಕೆ? ಆತನೂ ಬಿಜೆಪಿ ರೌಡಿ ಮೋರ್ಚಾ ಸೇರುವ ಸಂಭವವಿದೆಯೇ ಎಂದು ಪ್ರಶ್ನಿಸಿತ್ತು. ಆದರೆ, ಮನೆಗೆ ರೌಡಿಶೀಟರ್‍‌ ವಿಲ್ಸನ್‌ ಗಾರ್ಡನ್‌ ನಾಗ ಹೋಗಿದ್ದನ್ನು ಯಾವ ರೀತಿ ಮಾಹಿತಿ ಪಡೆದು ವಿಡಿಯೋ ಲೀಕ್‌ ಮಾಡಿತ್ತು ಎಂಬುದರ ಹಿಂದೆ ಹಲವು ಅನುಮಾನಗಳು ಕಾಡುತ್ತಿದೆ.

Mysuru: ನಾನೂ ರೌಡಿ ನನಗೆ ಬಿಜೆಪಿಯಲ್ಲಿ ಸ್ಥಾನ ಕೊಡಿ- ಕೋರ್ಟ್ ಬಳಿ ರೌಡಿಶೀಟರ್ ಪ್ರತಿಭಟನೆ

ಮೈಸೂರಿನಲ್ಲಿ ರೌಡಿಯ ಪ್ರತಿಭಟನೆ: ರಾಜ್ಯ ರಾಜಕಾರಣದಲ್ಲಿ ರೌಡಿಶೀಟರ್‍‌ಗಳನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ವಿಚಾರವಾಗಿ ಆಡಳಿತ ಮತ್ತು ವಿಪಕ್ಷಗಳಿಂದ ಭಾರಿ ವಾದ ವಿವಾದ ನಡೆಯುತ್ತಿದೆ. ಆದರೆ, ಮೈಸೂರಿನಲ್ಲಿ ರೌಡಿಶೀಟರ್ ಒಬ್ಬ ಜಿಲ್ಲಾ ನ್ಯಾಯಾಲಯದ ಮುಂದೆ ಬಿಜೆಪಿ ಪಕ್ಷದಲ್ಲಿ ಸ್ಥಾನ ಕೊಡುವಂತೆ ಆಗ್ರಹಿಸಿ ಪ್ರತಿಭಟನೆ ಮಾಡಿದ ಅಚ್ಚರಿಯ ಘಟನೆ ನಡೆದಿದೆ. ಮೈಸೂರಿನ ನ್ಯಾಯಾಲಯದ ಮುಂದೆ ಗಾಂಧಿ ಪ್ರತಿಮೆ ಬಳಿ ಏಕಾಂಗಿ ಪ್ರತಿಭಟನೆ ಮಾಡುತ್ತಿರುವ ರೌಡಿಶೀಟರ್ ಮಂಜು ಅಲಿಯಾಸ್ 'ಪಾನಿಪುರಿ ಮಂಜು' ಆಗಿದ್ದಾನೆ. ನಾನೂ ರೌಡಿ, ನಿಮ್ಮ ಪಕ್ಷದಲ್ಲಿ ನನಗೂ ಸ್ಥಾನ ಕೊಡುವಿರಾ? ಎಂದು ಬಿಜೆಪಿ ವಿರುದ್ಧ ಪ್ರೊಟೆಸ್ಟ್ ಮಾಡಿದ್ದಾನೆ. ಕೂಡಲೇ ಕೆಆರ್.ಠಾಣೆ ಪೊಲೀಸ್‌ ಅಧಿಕಾರಿಗಳು ರೌಡಿಶೀಟರ್ ಪಾನಿಪುರಿ ಮಂಜನನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಈ ರೌಡಿಶೀಟರ್ ಮಂಜು ಮೈಸೂರಿನ ಗಣೇಶ್ ನಗರ ನಿವಾಸಿಯಾಗಿದ್ದಾನೆ. 2013ರಲ್ಲಿ 307ಕೇಸ್‌ನಲ್ಲಿ ಜೈಲು ವಾಸ ಅನುಭವಿಸಿದ್ದಾನೆ. ಹೀಗಾಗಿ, ಅವನ ವಿರುದ್ಧ ಉದಯಗಿರಿ ಪೊಲೀಸರು 2013ರಲ್ಲಿ ರೌಡಿ ಶೀಟರ್ ತೆರೆದಿದ್ದರು. ಹೆಚ್ಚಿನ‌ ವಿಚಾರಣೆಗಾಗಿ ಉದಯಗಿರಿ ಪೊಲೀಸರಿಗೆ ರೌಡಿಶೀಟರ್‍‌ನನ್ನು ಹಸ್ತಾಂತರ ಮಾಡಲಾಗಿದೆ. ಆದರೆ, ಈವರೆಗೆ ಯಾವುದಾದರೂ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದಾನೆಯೇ ಎಂದು ಮಾಹಿತಿ ಕಲೆ ಹಾಕಲಾಗುತ್ತಿದೆ.

ಬಿಜೆಪಿ ಅಭ್ಯರ್ಥಿಗಳೆಂದು ರೌಡಿ ಶೀಟರ್ ಪಟ್ಟಿ ಪ್ರಕಟ:
ವಿಲ್ಸನ್‌ಗಾರ್ಡನ್‌ ನಾಗ: ಕೊಲೆ ಪ್ರಕರಣಗಳು ಸೇರಿ ಹಲವು ಗ್ಯಾಂಗ್‌ ವಾರ್ ಗಳು
ಸೈಲೆಂಟ್‌ ಸುನೀಲ: ಪೋಲಿಸ್‌ ಪೇದೆ ಮರ್ಡರ್ ಸೇರಿ 17 ಕೊಲೆ ಕೇಸ್‌ ಮತ್ತು ದರೋಡೆಗಳು
ಬೆತ್ತನಗೆರೆ ಶಂಕರ : ವಕೀಲರ ಡಬಲ್‌ ಮರ್ಡರ್ ಕೇಸ್, ಕಿಡ್ನಾಪ್‌, ಸುಲಿಗೆ
ಫೈಟರ್‍‌ ರವಿ: ಬೆಟ್ಟಿಂಗ್‌ ದಂಧೆ, ರೌಡಿಶೀಟರ್‍‌ ಪರೇಡ್‌ನಲ್ಲಿ ಭಾಗಿ
ನಾರ್ವೆ ಸೋಮಶೇಖರ್: ಕೊಲೆ ಮತ್ತು ದರೋಡೆ ಪ್ರಕರಣ, ಆಪರೇಷನ್ ಕಮಲಕ್ಕಾಗಿ ಹವಾಲಾ ದಂಧೆ
ರೌಡಿಶೀಟರ್ ಉಪ್ಪಿ: ಕೊಲೆ ಮತ್ತು ಸುಲಿಗೆ ಕೇಸ್‌ಗಳು
 

click me!