ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ತವರು ರಾಜ್ಯವಾದ ಗುಜರಾತ್ ಚುನಾವಣೆಲ್ಲಿ ಮೂವರು ಮಾಜಿ ಮುಖ್ಯಮಂತ್ರಿಗಳು ಸೇರಿ 38 ಶಾಸಕರಿಗೆ ಟಿಕೆಟ್ ನೀಡದೇ ಹೊಸಬರಿಗೆ ಟಿಕೆಟ್ ನೀಡಲಾಗಿದೆ. ಅದೇ ಮಾದರಿಯನ್ನು ಕರ್ನಾಟಕದಲ್ಲಿ ಜಾರಿಗೊಳಿಸುವ ಬಗ್ಗೆ ಬಿ.ಎಲ್. ಸಂತೋಷ್ ಸೂಕ್ಷ್ಮವಾಗಿ ತಿಳಿಸಿದ್ದಾರೆ ಎಂಬ ಮಾಹಿತಿ ಕೇಳಿಬರುತ್ತಿದೆ. ಕರ್ನಾಟಕದ ಚುನಾವಣೆಯಲ್ಲಿ ಬಿಜೆಪಿ ಲೆಕ್ಕಾಚಾರ ಹೇಗಿದೆ? ಯಾರಿಗೆ ಟಿಕೆಟ್ ಸಿಗಲಿದೆ? ಯಾರ ಕೈಯಿಂದ ಟಿಕೆಟ್ ತಪ್ಪಲಿದೆ ಪೂರ್ಣ ಮಾಹಿತಿಗೆ ಇಲ್ಲಿದೆ ಡಿಟೇಲ್ಸ್.
ವರದಿ- ರವಿ ಶಿವರಾಮ್, ರಾಜಕೀಯ ವರದಿಗಾರ, ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು (ಡಿ. 3) : ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗಿನಿಂದ ಅವರು ಪ್ರಧಾನಿ ಅಭ್ಯರ್ಥಿ ಆಗುವವರೆಗೂ ಮೋದಿ ಪ್ರಚಲಿತಕ್ಕೆ ಬಂದಿದ್ದೆ ಗುಜರಾತ್ ಮಾಡಲ್ ಎನ್ನುವ ನಾಮಫಲಕದೊಂದಿಗೆ. ಗುಜರಾತ್ ರಾಜ್ಯವನ್ನು ಮೋದಿ ಅಭಿವೃದ್ಧಿ ಮಾಡಿದ್ದರ ಫಲವಾಗಿಯೆ ಅವರು ಸೋಲದೆ ಮೂರು ಅವಧಿಗೆ ಮುಖ್ಯಮಂತ್ರಿ ಆಗಿ ಕೆಲಸ ಮಾಡಿದ್ದರು. ಹೀಗಾಗಿ, ಅವರ ವರ್ಚಸ್ಸಿನ ಮೇಲೆ ಪ್ರಧಾನಮಂತ್ರಿ ಅಭ್ಯರ್ಥಿ ಮಾಡಬೇಕು ಎನ್ನುವ ಚರ್ಚೆ ಆಯಿತು. ಮಾತ್ರವಲ್ಲ ಪಾರ್ಟಿಯಲ್ಲಿ ಅನೇಕರ ವಿರೋಧದ ನಡುವೆ ಅಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಆಗಿದ್ದ ರಾಜನಾಥ್ ಸಿಂಗ್ ಮೋದಿ ಹೆಸರು ಘೋಷಣೆ ಮಾಡಿದ್ದರು. ಮುಂದೆ ಆಗಿದ್ದೆಲ್ಲಾ ಇತಿಹಾಸ. ಅಲ್ಲಿಂದ ಬಿಜೆಪಿಯೊಳಗೆ ಬಹುತೇಕ ಯಾವುದೇ ಚರ್ಚೆಗಳು ನಡೆದರೂ ಗುಜರಾತ್ ಮಾಡೆಲ್ ಎನ್ನುವ ಒಂದು ಲೈನ್ ಮುನ್ನಲೆಗೆ ಬರುತ್ತದೆ.
ಈಗ ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಮೂರ್ನಾಲ್ಕು ತಿಂಗಳು ಬಾಕಿ ಇರುವಾಗ ದೂರದ ಗುಜರಾತ್ ಮಾಡಲ್ ಚರ್ಚೆ ಆಗುತ್ತಿದೆ. ಕಾರಣ ಗುಜರಾತ್ ನಲ್ಲಿ ಐವರು ಕ್ಯಾಬಿನೆಟ್ ಮಿನಿಸ್ಟರ್ ಸೇರಿ 38 ಹಾಲಿ ಶಾಸಕರಿಗೆ ಟಿಕೆಟ್ ತಪ್ಪಿಸಲಾಗಿದೆ. ಹೀಗಾಗಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲೂ ಅಂತದೊಂದು ಚರ್ಚೆ ಶುರುವಾಗಿದೆ. ಇದಕ್ಕೆ ಕಾರಣ ಮೊನ್ನೆ ಮೊನ್ನೆ ಶಿವಮೊಗ್ಗದಲ್ಲಿ ನಡೆದಿದ್ದ ಪಕ್ಷದ ಪ್ರಶಿಕ್ಷಣ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಆಡಿದ ಮಾತುಗಳು. 'ಗುಜರಾತ್ ಮಾದರಿಯನ್ನು ರಾಜ್ಯದಲ್ಲೂ ಅಳವಡಿಸಬೇಕು ಎಂದೇನಿಲ್ಲ. ಆದರೆ ಅಳವಡಿಸೋದು ಕಷ್ಟ ಅಲ್ಲ' ಎನ್ನುವ ಮಾತು ರಾಜ್ಯ ಬಿಜೆಪಿ ಶಾಸಕರ ತಲೆ ಚಕ್ಕರ್ ತರಿಸಿದೆ.
Assembly election: ಬಂಡಾಯದ ನೆಲದಲ್ಲಿ ಬಿಸಿಯೇರಿದ ಟಿಕೆಟ್ ದಂಗಲ್
ಬಿಎಲ್ ಸಂತೋಷ್ ಹೇಳಿದ್ದೇನು?
ಶಿವಮೊಗ್ಗದಲ್ಲಿ ನಡೆದ ಪ್ರಶಿಕ್ಷಣ ವರ್ಗದ ಸಭೆಯಲ್ಲಿ ಬಿಎಲ್ ಸಂತೋಷ್ ಆಡಿದ ಮಾತು ರಾಜ್ಯ ಬಿಜೆಪಿ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದೆ. ರಾಜ್ಯದಲ್ಲಿ ಇನ್ನೇನು 3-4 ತಿಂಗಳಲ್ಲಿ ಚುನಾವಣೆ ಎದುರಾಗುತ್ತಿದೆ. ಪಕ್ಷ ಸಂಘಟನೆ ಪ್ರವಾಸ ಜನಸಂಕಲ್ಪ ಯಾತ್ರೆ ಮೂಲಕ ಪಕ್ಷದ ಸಂಘಟನೆಯನ್ನು ಬಿಗಿಗೊಳಿಸುವ ಕಾರ್ಯದಲ್ಲಿ ಸ್ವತಃ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವ ವಹಿಸಿದ್ದಾರೆ. ಈ ಸಂದರ್ಭದಲ್ಲಿ ಟಿಕೆಟ್ ನೀಡುವ ವಿಚಾರದಲ್ಲಿ ಪಾರ್ಟಿ ತೀರ್ಮಾನ ಹೇಗಿರಲಿದೆ ಮತ್ತು ಪಕ್ಷ ಹೇಗೆ ಯೋಚಿಸಲಿದೆ ಎನ್ನುವ ಬಗ್ಗೆ ಬಿಎಲ್ ಸಂತೋಷ್ ಆಡಿದ ಮಾತು ಅನೇಕ ಹಿರಿಯ ಶಾಸಕರಿಗೆ, ಹಾಲಿ ಸಚಿವರಿಗರ ಆತಂಕ ಮೂಡಿಸಿದಂತಿದೆ. ಅಷ್ಟಕ್ಕೂ ಬಿಎಲ್ ಸಂತೋಷ್ ಹೇಳಿದ್ದೇನು?" ಗುಜರಾತ್ ನಲ್ಲಿ ಅನೇಕರು ಟಿಕೆಟ್ ನಿರಾಕರಿಸುವ ಮೂಲಕ ಮೇಲ್ ಪಂಕ್ತಿ ಹಾಕಿದ್ದಾರೆ. ಅಂತಹ ಮೇಲ್ ಪಂಕ್ತಿ ಪಾರ್ಟಿಗೆ ಬೇಕಿದೆ. ಗುಜರಾತ್ ಮಾಡೆಲ್ ಅನ್ನು ಕರ್ನಾಟಕದಲ್ಲಿಯೂ ಅಳವಡಿಸುತ್ತೇವೆ ಎಂದು ಅರ್ಥ ಅಲ್ಲ. ಆದರೆ ಹಾಗೆ ಮಾಡಬೇಕು ಎಂದು ನಿರ್ಧರಿಸಿದರೆ ಪಕ್ಷಕ್ಕೆ ಅದು ದೊಡ್ಡ ಸಂಗತಿ ಅಲ್ಲ". ಇನ್ನು ಹಿರಿಯರು ತ್ಯಾಗಕ್ಕೆ ಸಿದ್ಧವಾಗಬೇಕು. ಜನಸಂಘದಿಂದ ಅನೇಕ ಕಾರ್ಯಕರ್ತರು ಪಕ್ಷಕ್ಕೆ ದುಡಿದಿದ್ದಾರೆ, ತ್ಯಾಗ ಮಾಡಿದ್ದಾರೆ. ಹೀಗಾಗಿ ತಾವು ಕೂಡ ತ್ಯಾಗಕ್ಕೆ ಸಿದ್ಧವಾಗಿರಬೇಕು." ಹೀಗಂತ ಬಿಎಲ್ ಸಂತೋಷ್ ತಮ್ಮ ಭಾಷಣದಲ್ಲಿ ಉಲ್ಲೇಖ ಮಾಡಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.
ಹಿರಿಯರು ಟಿಕೆಟ್ ನಿರಾಕರಿಸುವುದು ಒಳಿತು:
ಬಿಎಲ್ ಸಂತೋಷ್ ಅವರ ಮಾತನ್ನು ಸೂಕ್ಷ್ಮವಾಗಿ ಗಮನಿಸಿದರೆ ಮಾತಿನ ಒಳ ಅರ್ಥವನ್ನು ಅರಿತರೆ ಅದು ಅವರು ನುಡಿದ ಪ್ರತಿ ಶಬ್ದದ ಹಿಂದೆ ಕರ್ನಾಟಕ ರಾಜಕಾರಣದ ಮುಂದಿನ ಭವಿಷ್ಯದ ಒಳಸುಳಿ ಇದೆ. ಗುಜರಾತ್ ಮಾಡೆಲ್ ಇಲ್ಲಿ ಮಾಡುತ್ತೇವೆ ಎಂದಲ್ಲ. ಆದರೆ ಆ ಮಾದರಿ ಅಳವಡಿಸೋದು ಕಷ್ಟ ಅಲ್ಲ ಎನ್ನುವ ಮಾತಿನ ಅರ್ಥ ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಯಾವೊಬ್ಬ ವ್ಯಕ್ತಿಯ ಮೇಲೆ ನಿಂತಿಲ್ಲ. ಸಂಘಟನೆಯಿಂದ ಬೆಳೆದು ನಿಂತಿದೆ ಎನ್ನುವ ಮಾತನ್ನು ಸಂತೋಷ್ ಮಾರ್ಮಿಕವಾಗಿ ಹೇಳಿದ್ದಾರೆ ಎನ್ನೋದು ಭಾವಾರ್ಥ. ಇನ್ನು ಗುಜರಾತ್ ನಲ್ಲಿ ಹಿರಿಯರಿಗೆ ಟಿಕೆಟ್ ನಿರಾಕರಿಸುವ ಮೂಲಕ ಮೇಲ್ ಪಂಕ್ತಿ ಹಾಕಿದ್ದಾರೆ. ಅಂತಹ ಮೇಲ್ ಪಂಕ್ತಿ ಪಕ್ಷದಲ್ಲಿ ಬೇಕು ಎನ್ನುವ ಮಾತನ್ನು ಕರ್ನಾಟಕಕ್ಕೆ ಬಂದು ಸಂತೋಷ್ ಪ್ರಸ್ತಾಪ ಮಾಡುತ್ತಾರೆ. ಇನ್ನೇನು 3-4 ತಿಂಗಳಲ್ಲಿ ವಿಧಾನಸಭೆ ಚುನಾವಣೆ ಎದುರಾಗುತ್ತಿದೆ. ರಾಜ್ಯದಲ್ಲಿನ ಹಿರಿಯ ಶಾಸಕರು ತಾವಾಗಿಯೆ ಟಿಕೆಟ್ ನಿರಾಕರಿಸುವ ಮೂಲಕ ಪಕ್ಷಕ್ಕೆ ಆಗುವ ಮುಜುಗರ ತಪ್ಪಿಸಬಹುದು. ಮತ್ತು ಹಿರಿಯರನ್ನು ಪಕ್ಷ ಕಡೆಗಣಿಸಿತು ಎನ್ನುವ ಆರೋಪದಿಂದ ಪಕ್ಷ ಮುಕ್ತವಾಗಬಹುದು ಎನ್ನುವ ಲೆಕ್ಕಾಚಾರದ ನಾರುಗಳನ್ನು ಸಂತೋಷ್ ಸೂಕ್ಷ್ಮವಾಗಿ ಪ್ರಸ್ತಾಪ ಮಾಡಿದಂತಿದೆ.
ಗುಜರಾತ್ ಚುನಾವಣೆ ಗೆಲ್ತಾರಾ ಮೋದಿ ಅಮಿತ್ ಶಾ? ಒಂದೇ ದಿನ 16 ಕ್ಷೇತ್ರ ಸುತ್ತಾಟ!
ಗುಜರಾತ್'ನಲ್ಲಿ 38 ಶಾಸಕರಿಗೆ ಟಿಕೆಟ್ ಮಿಸ್! ಕರ್ನಾಟಕದಲ್ಲಿ ಎಷ್ಟು? : ನಿರಂತರವಾಗಿ 25 ವರ್ಷಗಳಿಂದ ಅಧಿಕಾರದಲ್ಲಿ ಇರುವ ಗುಜರಾತ್ ನಲ್ಲಿ ಈ ಬಾರಿಯೂ ಬಿಜೆಪಿ ಅಧಿಕಾರಕ್ಕೆ ಏರಲಿದೆ ಎಂದು ಸಮೀಕ್ಷಾ ವರದಿ ಹೇಳುತ್ತಿದೆ. ಕಳೆದ ಬಾರಿ 99 ಸ್ಥಾನ ಪಡೆದು ಕೂದಲೆಳೆ ಅಂತರದಲ್ಲಿ ಸೋಲಿನಿಂದ ಪಾರಾಗಿದ್ದ ಗುಜರಾತ್ ಬಿಜೆಪಿ ಈ ಬಾರಿ ಸುಮಾರು 130 ಸೀಟ್ ಗೆಲ್ಲಲಿದೆ ಎನ್ನುವ ಮಾಹಿತಿಯನ್ನು ಸಮೀಕ್ಷೆಗಳು ನೀಡಿವೆ. ಆದರೆ ಬಿಜೆಪಿ ಆಂತರಿಕವಾಗಿ ನಡೆಸಿದ ವರ್ಕ್ ಔಟ್ ಅಷ್ಟಿಷ್ಟಲ್ಲ. ಗುಜರಾತ್ ಸಿಎಂ ಬದಲಾವಣೆ ಮಾಡಿತ್ತು. ಐವರು ಮಂತ್ರಿಗಳು ಸೇರಿದಂತೆ 38 ಶಾಸಕರಿಗೆ ಟಿಕೆಟ್ ತಪ್ಪಿಸಿ ಹೊಸ ಮುಖಗಳಿಗೆ ಮಣೆ ಹಾಕಿತು. ಮಾಜಿ ಸಿಎಂ ವಿಜಯ್ ರೂಪಾನಿ ಅಂಥವರೂ ಮಾಧ್ಯಮದ ಮುಂದೆ ಬಂದು ನಾವು ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡುತ್ತಿಲ್ಲ ಎಂದು ಹೇಳಿದ್ದಾರೆಂದರೆ, ಪಕ್ಷದಿಂದ ಮೊದಲೇ ಟಿಕೆಟ್ ನೀಡೊದಿಲ್ಲ ಎನ್ನುವ ಸೂಚನೆ ನೀಡಿದ್ದರ ಫಲವಾಗಿ ಎನ್ನುವುದು ತಿಳಿದುಬರುತ್ತದೆ. ರೂಪಾನಿ ಅಂತವರು ವಯಕ್ತಿಕವಾಗಿ ತನಗೆ ಆಗಬಹುದಾದ ಮುಜುಗರ ಮತ್ತು ಪಕ್ಷಕ್ಕೆ ಆಗಬಹುದಾದ ಹಾನಿಯನ್ನು ತಪ್ಪಿಸಲು ಮಾಧ್ಯಮದ ಮುಂದೆ ಬಂದು ಹಾಗೆ ಹೇಳಿದರು ಎನ್ನುವುದು ರಾಜಕೀಯ ಸತ್ಯವಾಗಿದೆ. ಹಾಗಾದರೆ ಕರ್ನಾಟಕದಲ್ಲೂ ಹಿರಿಯರಿಗೆ ಟಿಕೆಟ್ ಸಿಗೋದಿಲ್ವಾ? ಯಾವೆಲ್ಲಾ ನಾಯಕರು ಈ ಬಾರಿ ಟಿಕೆಟ್ ವಂಚಿತರಾಗುತ್ತಾರೆ ಎನ್ನುವ ಚರ್ಚೆ ಶುರು ಆಗಿದೆ. ಹಾಗಾದರೆ ಯಾವ ಮಾದರಿಯಲ್ಲಿ ಕರ್ನಾಟಕದಲ್ಲಿ ಟಿಕೆಟ್ ನೀಡಲು ಬಿಜೆಪಿ ಪ್ಲನ್ ಹಾಕಿದೆ?.
ಗೆಲುವೊಂದೆ ಮಾನದಂಡ, ಯಾರ -ಯಾರ ತಲೆದಂಡ?: ಹಿರಿಯರು, ಕಿರಿಯರು ಎನ್ನುವ ಭೇದವಿಲ್ಲದೆ ರಾಜ್ಯ ಬಿಜೆಪಿ ಟಿಕೆಟ್ ನೀಡುವಾಗ ಪಕ್ಕಾ ಪ್ಲಾನ್ ಮಾಡಿಕೊಂಡಿದೆ. ಸಮೀಕ್ಷೆ ನೀಡುವ ವರದಿ ಪ್ರಕಾರವೇ ಟಿಕೆಟ್ ನೀಡಲು ಪಕ್ಷ ತೀರ್ಮಾನ ಮಾಡಿದೆ ಎನ್ನಲಾಗಿದೆ. ಅಂದರೆ ಯಾವ ಶಾಸಕ /ಸಚಿವ ಕ್ಷೇತ್ರದಲ್ಲಿ ವರ್ಚಸ್ಸು ಕಳೆದುಕೊಂಡಿದ್ದಾರೆ. ಯಾರಿಗೆ ಜನ ವಿರೋಧ ಇದೆ. ಯಾರು ಪಕ್ಷ ಸಂಘಟನೆ ಮತ್ತು ಜನರ ಸಂಪರ್ಕದಲ್ಲಿ ಇಲ್ಲ ಅಂತವರಿಗೆ ಟಿಕೆಟ್ ನೀಡಬಾರದು ಎನ್ನುವ ಚರ್ಚೆ ರಾಜ್ಯ ಬಿಜೆಪಿಯಲ್ಲಿ ಚರ್ಚೆ ಆಗಿದೆ. ಹೈಕಮಾಂಡ್ ಕೂಡ ಅದಕ್ಕೆ ಅಸ್ತು ಎನ್ನುವ ಸಾಧ್ಯತೆ ಹೆಚ್ಚಿದೆ. ಕಾರಣ ಒಂದು ಪಕ್ಷ ಅಧಿಕಾರದಲ್ಲಿ ಇರುವಾಗ ಸರ್ಕಾರದ ಮೇಲೆ ಆಡಳಿತ ವಿರೋಧಿ ಅಲೆ ಇರೋದು ಸಹಜ ಪ್ರಕ್ರಿಯೆ. ಹಾಗಿರುವಾಗ ಮರಳಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದಾಗ ಇರುವ ಪ್ಲಾನ್ ಸೋಲುವ ಗೆರೆಯಲ್ಲಿ ನಿಂತಿರುವ ಶಾಸಕರಿಗೆ ಟಿಕೆಟ್ ನೀಡದೆ ಹೊಸಬರಿಗೆ ಅವಕಾಶ ಮಾಡೋದು. ಮತ್ತು ಅತಿ ಹಿರಿ ತಲೆಗಳು ಅನ್ನಿಸಿಕೊಂಡು ಪದೇ ಪದೇ ಸಚಿವರಾದವರು ಕಾರ್ಯಕರ್ತರ ಕೈಗೆ ಸಿಗದವರು ಇಂತಹ ಪ್ರಮುಖರಿಗೆ ಈ ಬಾರಿ ಟಿಕೆಟ್ ಸಿಗುವ ಸಾಧ್ಯತೆಗಳು ಕಡಿಮೆ. ಮಾಹಿತಿಯ ಪ್ರಕಾರ ಸದ್ಯ ಬಿಜೆಪಿಯಲ್ಲಿ ಸೋಲು ಗೆಲುವಿನ ದಡದಲ್ಲಿ ನಿಂತವರಿಗೆ ಮತ್ತೊಂದು ಅವಕಾಶ ಸಿಗಬಹುದು. ಆದರೆ ಯಾರು ಎಷ್ಟೇ ಪ್ರಯತ್ನ ಮಾಡಿದರೂ ಗೆಲ್ಲೊದೆ ಇಲ್ಲ ಎನ್ನುವ ವರದಿ ಇದೆ ಅಂತವರು ಹಾಲಿ ಶಾಸಕರೆ ಆಗಿದ್ದರು ಕೂಡ ಅವರಿಗೆ ಟಿಕೆಟ್ ನೀಡಬಾರದು ಎನ್ನುವ ಗಂಭೀರ ಚರ್ಚೆ ಪಕ್ಷದಲ್ಲಿ ಆಗಿದೆ. ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ಏನೆ ಮಾಡಿದ್ರೂ ಈ ಬಾರಿ ಗೆಲ್ಲೋದೆ ಇಲ್ಲ ಎನ್ನುವ ಶಾಸಕರ ಸಂಖ್ಯೆ ಹತ್ತಿರ ಹತ್ತಿರ 15 ರಷ್ಟು ಇದೆಯಂತೆ!
Assembly election: ಬಂಡಾಯದ ನೆಲದಲ್ಲಿ ಬಿಸಿಯೇರಿದ ಟಿಕೆಟ್ ದಂಗಲ್
ಡಿ.10ರ ಬಳಿಕ ರಾಜ್ಯಕ್ಕೆ ಅಮಿತ್ ಶಾ ಟೀಮ್ ಆಗಮನ: ಯಾವುದೇ ರಾಜ್ಯದಲ್ಲಿ ಚುನಾವಣೆ ನಡೆಯಲಿ. ಅಲ್ಲಿಗೆ ಅಮಿತ್ ಶಾ ಟೀಮ್ ಸೈನಿಕರಂತೆ ಬಂದು ಇಡಿ ರಾಜ್ಯ ಬಿಜೆಪಿಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆ. ಆ ತಂಡ ನೀಡುವ ಸಲಹೆ ಸೂಚನೆ ಪಾಲನೆ ಮಾಡೋದಷ್ಟೆ ರಾಜ್ಯ ಬಿಜೆಪಿಯ ಕೆಲಸ. ಈಗಾಗಲೇ ಅಮಿತ್ ಶಾರ 'ಬಿ' ಟೀಮ್ ಬೆಂಗಳೂರಿಗೆ ಬಂದು ಎರಡು ತಿಂಗಳುಗಳೆ ಕಳೆದು ಹೋಗಿದೆ. ಗುಜರಾತ್ ಚುನಾವಣೆ ಬಳಿಕ ಕೋರ್ ಟೀಮ್ ಅಂತ ಕರೆಸಿಕೊಳ್ಳುವ ಪ್ರಮುಖ ತಂಡ ಡಿಸೆಂಬರ್ ಹತ್ತರ ಬಳಿಕ ರಾಜ್ಯದಲ್ಲಿ ಟಿಕಾಣಿ ಹೂಡಲಿದೆ. ಆ ಟೀಮ್ ಒಂದು ರೀತಿ ಡಾರ್ಕ್ ವೆಬ್ ಇದ್ದ ಹಾಗೆ. ಅವರು ಏನು ಮಾಡುತ್ತಾರೆ. ಯಾವ ಸಲಹೆ ಕೊಡುತ್ತಾರೆ ಎನ್ನುವುದು ಹೊರ ಜಗತ್ತಿಗೆ ಅಷ್ಟು ಸುಲಭವಾಗಿ ಗೊತ್ತಾಗೋದಿಲ್ಲ. ಶಾಸಕರ ಮತ್ತು ಸಚಿವರ ಜೊತೆ ಸಮಾಲೋಚನೆ ಮಾಡುತ್ತಾರೆ. 24*7 ವಾರ್ ರೂಮ್ ಓಪನ್ ಮಾಡಿ ಪ್ರತಿ ವಿಧಾನಸಭೆ ಕ್ಷೇತ್ರದ ಆಗು-ಹೋಗು, ಪರ-ವಿರೋಧ, ಪಕ್ಷ-ವಿಪಕ್ಷಗಳ ನಾಯಕರ ನಡೆ ಚರ್ಚೆ ಎಲ್ಲದರ ಮೇಲೆ ಹದ್ದಿನ ಕಣ್ಣು ಇಟ್ಟಿರುತ್ತದೆ. ಸ್ವತಃ ಪಕ್ಷದ ಶಾಸಕರ ನಡೆಯನ್ನು ಗ್ರಹಿಸಿ ತಕ್ಷಣದ ವರದಿಯನ್ನು ಕೇಂದ್ರ ನಾಯಕರಿಗೆ ತಲುಪಿಸುತ್ತಾರೆ. ಅವರು ನೀಡುವ ಫೀಡ್ ಬ್ಯಾಕ್ ಮೇಲೆ ಕೇಂದ್ರ ನಾಯಕರು ಕಣ್ಣಾಡಿಸಿ, ಟಿಕೆಟ್ ಹಂಚಿಕೆ ಮಾಡಲಾಗುತ್ತದೆ. ಕೇಂದ್ರ ನಾಯಕರು ತಮ್ಮ ಗುಪ್ತ ತಂಡ ನೀಡುವ ವರದಿ ಮೇಲೆ ಚರ್ಚೆ ಮಾಡಿ ಟಿಕೆಟ್ ಫೈನಲ್ ಮಾಡುತ್ತಾರೆ. ಹೀಗಾಗಿ ಡಿಸೆಂಬರ್ ಹತ್ತರ ಬಳಿಕ ರಾಜ್ಯ ರಾಜಕಾರಣದ ನಿಜವಾದ ಗೇಮ್ ಶುರುವಾಗಲಿದೆ.