
ಕಾರಟಗಿ (ಸೆ.4) ಕೊಪ್ಪಳ: \Bವಾಲ್ಮೀಕಿ ಹಗರಣದ ಸಮಗ್ರ ತನಿಖೆ ಸೇರಿದಂತೆ ರಾಜ್ಯ ಸರ್ಕಾರದ ವಿವಿಧ ಭ್ರಷ್ಟಾಚಾರದ ವಿರುದ್ಧ ತೊಡೆತಟ್ಟಿರುವ ಬಿಜೆಪಿ ನಾಯಕರು ಈಗಾಗಲೇ ಪಾದಯಾತ್ರೆಯ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಸೆ. 4ರಂದು ಜಿಲ್ಲೆಯ ಕಾರಟಗಿ ತಾಲೂಕು ಪ್ರವೇಶ ಮಾಡಲಿದ್ದಾರೆ.
ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರಿಗೆ ಅದ್ಧೂರಿ ಸ್ವಾಗತ ನೀಡಲು ಪಕ್ಷದ ಸ್ಥಳೀಯ ಮುಖಂಡರು ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದಾರೆ. ಲಿಂಗಸುಗೂರಿನಿಂದ ಬಳ್ಳಾರಿಯತ್ತ ಸಾಗುತ್ತಿರುವ ಪಾದಯಾತ್ರೆ ಚನ್ನಳ್ಳಿ ಕ್ರಾಸ್ ಮೂಲಕ ಕಾರಟಗಿ ತಾಲೂಕು ಪ್ರವೇಶಿಸಲಿದೆ. ಇಲ್ಲಿ ಕುಂಭ-ಕಳಶಗಳೊಂದಿಗೆ ಪಾದಯಾತ್ರಿಕರನ್ನು ಸ್ವಾಗತಿಸಲು ವೇದಿಕೆ ಸಜ್ಜುಗೊಂಡಿದೆ. ಬಳಿಕ ಕಾರಟಗಿ, ಸಾಲುಂಚಿಮರ, ಸಿದ್ದಾಪುರ, ಶ್ರೀರಾಮನಗರ, ಮರಳಿ ಹಾಗೂ ಕಲ್ಗುಡಿ ಗ್ರಾಮಗಳಲ್ಲಿ ಸ್ವಾಗತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಪಾದಯಾತ್ರೆ ಸಾಗುವ ಪ್ರಮುಖ ಸ್ಥಳಗಳಲ್ಲಿ ಬಿಜೆಪಿ ನಾಯಕರಿಗೆ ಜೆಸಿಬಿ ಮೂಲಕ ಪುಷ್ಪವೃಷ್ಟಿ ಮಾಡಲಾಗುವುದು. ಮಾರ್ಗದುದ್ದಕ್ಕೂ ಪಕ್ಷದ ಧ್ವಜ, ಬ್ಯಾನರ್‌ಗಳನ್ನು ಅಳವಡಿಸಲಾಗಿದ್ದು, ಪಾದಯಾತ್ರೆ ಹಿನ್ನೆಲೆಯಲ್ಲಿ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಾಗಿದೆ.
ಕ್ಷೇತ್ರದ ವಿವಿಧ ಜಿಪಂ ಕ್ಷೇತ್ರಗಳಿಂದ ಸಾವಿರಾರು ಕಾರ್ಯಕರ್ತರು ಹಾಗೂ ಸಾರ್ವಜನಿಕರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಯರಡೋಣ, ನವಲಿ ಹಾಗೂ ಚಳ್ಳೂರು ಜಿಪಂ ಕ್ಷೇತ್ರಗಳ ಜನರು ಕಾರಟಗಿಗೆ ಆಗಮಿಸಿ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಸಿದ್ದಾಪುರ, ಮರಳಿ, ಹುಲಿಹೈದರ್, ಕನಕಗಿರಿ ಹಾಗೂ ಹೇರೂರು ಜಿಪಂ ಕ್ಷೇತ್ರಗಳ ಜನರು ಸಿದ್ದಾಪುರದಲ್ಲಿ ಪಾದಯಾತ್ರೆ ಸೇರಿಕೊಂಡು ಜಂಗಮರ ಕಲ್ಗುಡಿಯ ವರೆಗೆ ಹೆಜ್ಜೆ ಹಾಕಲಿದ್ದಾರೆ.
ಕಲ್ಯಾಣ ಮಂಟಪದಲ್ಲಿ ವಸತಿ:
ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಕಾರ್ಯಕರ್ತರಿಗೆ ಪಟ್ಟಣದ ಅಮ್ಮ ಮಹೇಶ್ವರಿ ಕಲ್ಯಾಣ ಮಂಟಪ ಸೇರಿದಂತೆ ವಿವಿಧೆಡೆ ವಸತಿ ವ್ಯವಸ್ಥೆ ಮಾಡಲಾಗಿದೆ. ರಾಜ್ಯಮಟ್ಟದ ನಾಯಕರು ಹಾಗೂ ಪ್ರಮುಖ ಮುಖಂಡರಿಗೆ ಕಾರಟಗಿ, ಮರಳಿ, ಶ್ರೀರಾಮನಗರ ಹಾಗೂ ಗಂಗಾವತಿಯ ಹೋಟೆಲ್‌ಗಳಲ್ಲಿ ವಸತಿ ಮಾಡಲಿದ್ದಾರೆ.
ಕುಂಭ ಸ್ವಾಗತ: \Bಚನ್ನಳ್ಳಿ ಕ್ರಾಸಿನಲ್ಲಿ ಕುಂಭದೊಂದಿಗೆ ಸ್ವಾಗತಿಸಲು ಸಿದ್ಧತೆ ಕೈಗೊಳ್ಳಾಗಿದೆ. ಮಹಿಳೆಯರು ಕುಂಭ ಹೊತ್ತು ಬಿಜೆಪಿ ಪಾದಯಾತ್ರಿಕರನ್ನು ಸ್ವಾಗತಿಸುತ್ತಿದ್ದಾರೆ. ಈಗಾಗಲೇ ರಸ್ತೆಗಳು ಬಿಜೆಪಿ ಬಾವುಟಗಳಿಂದ ಅಲಂಕೃತಗೊಂಡಿವೆ.
ಪಾದಯಾತ್ರೆ ಮಾಹಿತಿ: ಸೆ. 4ರಂದು ಮಧ್ಯಾಹ್ನ 4 ಗಂಟೆಗೆ ಸಿಂಧನೂರಿನ ಹಂಚನಾಳ ಕ್ಯಾಂಪಿನಿಂದ ಕೊಪ್ಪಳ ಜಿಲ್ಲೆಯ ಚನ್ನಳ್ಳಿ ಕ್ರಾಸ್‌ಗೆ ಪ್ರವೇಶ, ಚನ್ನಳ್ಳಿ ಕ್ರಾಸಿನಿಂದ ಕಾರಟಗಿಗೆ ಆಗಮನ, ಕಾರಟಗಿಯಲ್ಲಿ ಬಹಿರಂಗ ಪ್ರವೇಶ, ಕಾರಟಗಿಯಲ್ಲಿ ವಸತಿ
ಸೆ. 5ರಂದು ಕಾರಟಗಿಯಿಂದ ಸಿದ್ದಾಪುರ, ಮಧ್ಯಾಹ್ನ ಸಿದ್ದಾಪುರದಿಂದ ಜಂಗಮರ ಕಲ್ಗುಡಿ, ಜಂಗಮರ ಕಲ್ಗೂಡಿಯಲ್ಲಿ ಬಹಿರಂಗ ಸಭೆ ಹಾಗೂ ವಸತಿ
ಸೆ. 6ರಂದು ಜಂಗಮರ ಕಲ್ಗೂಡಿಯಿಂದ ಗಂಗಾವತಿ ಪ್ರವೇಶ, ಮಧ್ಯಾಹ್ನ ಆನಂತರ ಬಳ್ಳಾರಿ ಜಿಲ್ಲೆಯ ಕಂಪ್ಲಿಗೆ ತೆರಳುವರು.
\Bಐತಿಹಾಸಿಕ ಕ್ಷಣ: \Bಪಾದಯಾತ್ರೆ ಸ್ವಾಗತಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸರ್ಕಾರದ ವಿರುದ್ಧ ರೊಚ್ಚಿಗೆದ್ದಿರುವ ಜನರು ಪಾದಯಾತ್ರೆಯಲ್ಲಿ ಸ್ವಯಂಪ್ರೇರಿತವಾಗಿ ಭಾಗವಹಿಸುತ್ತಿದ್ದಾರೆ. ಇದೊಂದು ಭ್ರಷ್ಟ ವ್ಯವಸ್ಥೆಯ ವಿರುದ್ಧ ಹೋರಾಡಿದ ಐತಿಹಾಸಿಕ ಕ್ಷಣ ಆಗುತ್ತಿದೆ ಎಂದು ಕೊಪ್ಪಳ ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ್ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.