ಇಂದು, ನಾಳೆ ಕರ್ನಾಟಕದಲ್ಲಿ ಜೆ.ಪಿ.ನಡ್ಡಾ ಸಮಾವೇಶ

By Kannadaprabha News  |  First Published Feb 20, 2023, 6:00 AM IST

ಎರಡು ದಿನಗಳ ಕಾಲ ಉಡುಪಿ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಪಕ್ಷದ ಪರ ಪ್ರಚಾರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ.  


ಉಡುಪಿ/ಚಿಕ್ಕಮಗಳೂರು/ಬೇಲೂರು(ಫೆ.20): ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಭಾನುವಾರ ರಾತ್ರಿ ರಾಜ್ಯಕ್ಕೆ ಆಗಮಿಸಿದ್ದು, ಎರಡು ದಿನಗಳ ಕಾಲ ಉಡುಪಿ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಪಕ್ಷದ ಪರ ಪ್ರಚಾರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಸೋಮವಾರ ಉಡುಪಿ ಹಾಗೂ ಬೈಂದೂರಿನ ಮುಳ್ಳಿಕಟ್ಟೆ ಗ್ರಾಮದಲ್ಲಿ ಬೂತ್‌ ಪ್ರಮುಖರ ಸಭೆ, ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಳ್ಳಲಿರುವ ನಡ್ಡಾ, ಬಳಿಕ, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ಅಡಿಕೆ ಬೆಳೆಗಾರರ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ಬಳಿಕ, ಶೃಂಗೇರಿಗೆ ತೆರಳಿ, ಜಗದ್ಗುರುಗಳ ದರ್ಶನ ಪಡೆದು, ಅಲ್ಲಿಯೇ ವಾಸ್ತವ್ಯ ಮಾಡಲಿದ್ದಾರೆ. ಮಂಗಳವಾರ ಚಿಕ್ಕಮಗಳೂರಿನಲ್ಲಿ ಪ್ರಬುದ್ಧರ ಸಭೆಯಲ್ಲಿ ಪಾಲ್ಗೊಂಡ ಬಳಿಕ, ಹಾಸನ ಜಿಲ್ಲೆಯ ಬೇಲೂರಿನಲ್ಲಿ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ.

Latest Videos

undefined

ಬಿಜೆಪಿ ವಿಕಾಸದ ಸಂಕೇತ, ಕಾಂಗ್ರೆಸ್‌ ಎಂದರೆ ಕಮಿಷನ್‌: ಜೆ.ಪಿ.ನಡ್ಡಾ ವಾಗ್ದಾಳಿ

ಉಡುಪಿ ಕೃಷ್ಣಮಠಕ್ಕೆ ಭೇಟಿ:

ಭಾನುವಾರ ರಾತ್ರಿ ಮಂಗಳೂರಿಗೆ ಆಗಮಿಸಿರುವ ನಡ್ಡಾ, ಸೋಮವಾರ ಬೆಳಗ್ಗೆ 9.30ಕ್ಕೆ ಉಡುಪಿಗೆ ಆಗಮಿಸಿ, ಉಡುಪಿ ಕೃಷ್ಣಮಠಕ್ಕೆ ತೆರಳಲಿದ್ದಾರೆ. ಅಲ್ಲಿ ಕೃಷ್ಣನ ದರ್ಶನ ಪಡೆದು, ಪರ್ಯಾಯ ಕೃಷ್ಣಾಪುರ ಮಠಾಧೀಶರಿಂದ ಆಶೀರ್ವಾದ ಪಡೆಯಲಿದ್ದಾರೆ. ನಂತರ, 10 ಗಂಟೆಗೆ ಎಂಜಿಎಂ ಕಾಲೇಜು ಮೈದಾನದಲ್ಲಿ ಉಡುಪಿ ಜಿಲ್ಲೆಯ ಬಿಜೆಪಿಯ 1,111 ಬೂತ್‌ಗಳ 13,200 ಅಪೇಕ್ಷಿತ ಪ್ರಮುಖರ ಸಭೆಯಲ್ಲಿ ಭಾಗವಹಿಸಿ ಮುಂದಿನ ಚುನಾವಣೆಯನ್ನು ಎದುರಿಸುವ ಬಗ್ಗೆ ಮಾರ್ಗದರ್ಶನ ನೀಡಲಿದ್ದಾರೆ.

2.30ಕ್ಕೆ ಬೈಂದೂರಿಗೆ ತೆರಳಿ, ಮುಳ್ಳಿಕಟ್ಟೆ ಗ್ರಾಮದ ನಗುಸಿಟಿ ಮೈದಾನದಲ್ಲಿ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಲಿದ್ದಾರೆ. ಈ ಸಮಾವೇಶದಲ್ಲಿ 25,000 ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಅಲ್ಲಿಂದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪಕ್ಕೆ ತೆರಳಿ, ನಗರದ ಲಾಲ್‌ ಬಹದ್ದೂರ್‌ ಶಾಸ್ತ್ರೀ ಕ್ರೀಡಾಂಗಣದಲ್ಲಿ ಆಯೋಜನೆ ಮಾಡಲಾಗಿರುವ ಅಡಿಕೆ ಬೆಳೆಗಾರರ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ, ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆಯಲಿರುವ ಚುನಾಯಿತ ಪ್ರತಿನಿಧಿಗಳ ಜೊತೆ ಮುಂಬರುವ ವಿಧಾನಸಭಾ ಚುನಾವಣೆ ಕುರಿತ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಂಜೆ ಶೃಂಗೇರಿ ಮಠಕ್ಕೆ ತೆರಳಿ ಗುರುಗಳ ದರ್ಶನ ಪಡೆದು, ರಾತ್ರಿ ಅಲ್ಲಿಯೇ ವಾಸ್ತವ್ಯ ಮಾಡಲಿದ್ದಾರೆ. ಮಂಗಳವಾರ ಬೆಳಗ್ಗೆ 5.30ಕ್ಕೆ ಶಾರದಾಂಬಾ ದೇಗುಲದಲ್ಲಿ ನಡೆಯಲಿರುವ ಮೊದಲ ಪೂಜೆಯಲ್ಲಿ ಪಾಲ್ಗೊಂಡು, ಅಲ್ಲಿಂದ ಚಿಕ್ಕಮಗಳೂರಿಗೆ ತೆರಳಲಿದ್ದಾರೆ. ನಗರದ ಬಸವನಹಳ್ಳಿಯಲ್ಲಿರುವ ಶಾಸಕ ಸಿ.ಟಿ.ರವಿ ಅವರ ಮನೆಯಿಂದ ಮೆರವಣಿಗೆಯಲ್ಲಿ ಆಗಮಿಸಿ, ನಗರದ ಕುವೆಂಪು ಕಲಾಮಂದಿರದಲ್ಲಿ ಏರ್ಪಡಿಸಲಾಗಿರುವ ಪ್ರಬುದ್ಧರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ, ಹಾಸನ ಜಿಲ್ಲೆಯ ಬೇಲೂರಿಗೆ ತೆರಳಿ, ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

BJP Executive Meeting ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವಧಿ ವಿಸ್ತರಣೆ, 2024ರ ವರೆಗೆ ಅಧಿಕಾರ!

ಅದ್ಧೂರಿ ಸ್ವಾಗತಕ್ಕೆ ಸಿದ್ಧತೆ:

ನಡ್ಡಾಗೆ ಅದ್ದೂರಿ ಸ್ವಾಗತ ಕೋರಲು ಬಿಜೆಪಿ ಕಾರ್ಯಕರ್ತರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಎಲ್ಲೆಡೆ ನಡ್ಡಾ ಅವರನ್ನು ಸ್ವಾಗತಿಸುವ ಫ್ಲೆಕ್ಸ್‌, ಬ್ಯಾನರ್‌, ಬಂಟಿಂಗ್ಸ್‌ಗಳು ರಾರಾಜಿಸುತ್ತಿವೆ. ನಡ್ಡಾ ಭೇಟಿ ಹಿನ್ನೆಲಯಲ್ಲಿ ಎಲ್ಲೆಡೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಕರ್ನಾಟಕ ಉಸ್ತುವಾರಿ ಅರುಣ್‌ ಸಿಂಗ್‌, ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಜಿಲ್ಲಾ ಉಸ್ತುವಾರಿ ಸಚಿವರು ಅವರಿಗೆ ಸಾಥ್‌ ನೀಡಲಿದ್ದಾರೆ.

ಫ್ಲೆಕ್ಸ್‌ ಹಾನಿಗೊಳಿಸಿದ ಕಿಡಿಗೇಡಿಗಳು:

ಈ ಮಧ್ಯೆ, ನಡ್ಡಾ ಅವರಿಗೆ ಸ್ವಾಗತ ಕೋರಿ ಉಡುಪಿಯ ಬನ್ನಂಜೆ ವಾರ್ಡ್‌ನಲ್ಲಿ ಹಾಕಿದ್ದ ಫ್ಲೆಕ್ಸ್‌ಗಳನ್ನು ಶನಿವಾರ ರಾತ್ರಿ ಕೆಲ ಕಿಡಿಗೇಡಿಗಳು ಹರಿದು ಹಾಕಿದ್ದು, ಈ ಸಂಬಂಧ ಉಡುಪಿ ನಗರ ಠಾಣೆಗೆ ದೂರು ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ದುಷ್ಕೃತ್ಯ ಎಸಗಿದವರ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

click me!