ಬಿಜೆಪಿ ಮುಡಾ ಅಕ್ರಮ ಪಟ್ಟಿ ಶೀಘ್ರ ಬಿಡುಗಡೆ, ಹಗರಣ ಬಯಲು ಭೀತಿಯಿಂದ ಬಿಜೆಪಿಗರ ಗದ್ದಲ: ಡಿಕೆಶಿ

By Kannadaprabha News  |  First Published Jul 27, 2024, 8:53 AM IST

ಬಿಜೆಪಿ ಅಧಿಕಾರದಲ್ಲಿದ್ದಾಗ ಎರಡು ವರ್ಷಗಳ ಹಿಂದೆಯೇ ಮುಡಾ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಈ ಬಗ್ಗೆ ಮಾಧ್ಯಮಗಳಲ್ಲೂ ವರದಿಯಾಗಿದೆ. ಅಲ್ಲದೆ, ಮುಡಾ ಅಕ್ರಮದಲ್ಲಿ ಬಿಜೆಪಿ ಪಾತ್ರವಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಆರೋಪಿಸಿದ್ದಾರೆ.


ಬೆಂಗಳೂರು (ಜು.27): ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಮುಡಾ ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದ್ದು, ಅದರ ಪಟ್ಟಿಯನ್ನು ಶೀಘ್ರದಲ್ಲಿ ಬಿಡುಗಡೆ ಮಾಡುತ್ತೇವೆ. ಅವರ ಹಗರಣಗಳು ಹೊರಗೆ ಬರುತ್ತವೆ ಎಂಬ ಭಯದಿಂದಲೇ ಕಲಾಪ ನಡೆಯದಂತೆ ಬಿಜೆಪಿಗರು ಗದ್ದಲ ಎಬ್ಬಿಸಿದರು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಆರೋಪಿಸಿದ್ದಾರೆ.

ವಿಧಾನಸೌಧದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಧಿಕಾರದಲ್ಲಿದ್ದಾಗ ಎರಡು ವರ್ಷಗಳ ಹಿಂದೆಯೇ ಮುಡಾ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಈ ಬಗ್ಗೆ ಮಾಧ್ಯಮಗಳಲ್ಲೂ ವರದಿಯಾಗಿದೆ. ಅಲ್ಲದೆ, ಮುಡಾ ಅಕ್ರಮದಲ್ಲಿ ಬಿಜೆಪಿ ಪಾತ್ರವಿದ್ದು, ಅದು ಬಹಿರಂಗವಾಗುತ್ತದೆ ಎಂಬ ಭೀತಿಯಿಂದಲೇ ಕಲಾಪ ನಡೆಯದಂತೆ ಗದ್ದಲ ಎಬ್ಬಿಸಿದ್ದಾರೆ. ಅವರಿಗೆ ನಿಜವಾಗಲೂ ಮುಡಾ ನಿವೇಶನ ಹಂಚಿಕೆ ಬಗ್ಗೆ ಚರ್ಚಿಸಬೇಕೆಂದಿದ್ದರೆ ಅಧಿವೇಶನದ ಆರಂಭದಲ್ಲೇ ಆ ವಿಚಾರ ಪ್ರಸ್ತಾಪ ಮಾಡಬಹುದಿತ್ತಲ್ಲವೇ ಎಂದು ಪ್ರಶ್ನಿಸಿದರು.

Latest Videos

undefined

ನಿಗಮ-ಮಂಡಳಿಗಳಲ್ಲಿ ಆಗಿರುವ ಅಕ್ರಮಗಳ ಬಗ್ಗೆ ಕಲಾಪದಲ್ಲಿ ಚರ್ಚೆ ಮಾಡಲು ಅವಕಾಶ ನೀಡಲಾಗಿತ್ತು. ಆದರೆ, ಬಿಜೆಪಿಯವರು ತಮಗೆ ಏನೇನು ಬೇಕೋ ಅದನ್ನು ಹೇಳಿದರು. ನಂತರ ಮುಖ್ಯಮಂತ್ರಿಗಳ ಉತ್ತರ ನೀಡಲು ಅವಕಾಶವನ್ನೇ ನೀಡಲಿಲ್ಲ. ಮುಖ್ಯಮಂತ್ರಿಗಳು ಲಿಖಿತ ರೂಪದಲ್ಲಿ ಬಿಜೆಪಿ ಕಾಲದ ನಿಗಮಗಳಲ್ಲಿನ ಅಕ್ರಮಗಳನ್ನು ಬಿಚ್ಚಿಟ್ಟರು. ಬಿಜೆಪಿಯವರು ತಮ್ಮ ಕಾಲದ ಹಗರಣ ಬಹಿರಂಗವಾಗಬಾರದು ಎಂಬ ಕಾರಣಕ್ಕಾಗಿಯೇ ಮುಖ್ಯಮಂತ್ರಿಗಳ ಉತ್ತರಕ್ಕೆ ಅವಕಾಶ ನೀಡಲಿಲ್ಲ. ಆ ಅಕ್ರಮಗಳ ಬಗ್ಗೆ ಸರ್ಕಾರ ತನಿಖೆ ನಡೆಸುತ್ತಿದೆ ಎಂದರು.

ಬಜೆಟ್‌ ಅನ್ಯಾಯ ಪ್ರಶ್ನಿಸದ ಬಿಜೆಪಿಯಿಂದ ಮುಡಾ ಪ್ರತಿಭಟನೆ: ಸಿಎಂ ಸಿದ್ದರಾಮಯ್ಯ ಕಿಡಿ

ಮುಡಾ ನಿವೇಶನ ಹಂಚಿಕೆ ಬಗ್ಗೆ ಮಾತನಾಡಿದರೆ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರ ಹಗರಣಗಳು ಹೊರಗೆ ಬರಲಿವೆ. ಹಗರಣಗಳ ಬಗ್ಗೆ ತನಿಖೆ ನಡೆಯುತ್ತಿದೆ. ಬಿಜೆಪಿಯೇ ಎಲ್ಲ ಹಗರಣಗಳ ಪಿತಾಮಹ. ಅವರ ಹಗರಣಗಳ ಕುರಿತು ಸಿಎಂ ಸಿದ್ದರಾಮಯ್ಯ ವಿವರವಾಗಿ ಸದನದಲ್ಲಿ ಮಾಹಿತಿ ನೀಡಿದ್ದಾರೆ. ಅವರ ಹಗರಣಗಳು ಬಯಲಾಗುತ್ತವೆ ಎನ್ನುವ ಭಯದಿಂದಲೇ ಗದ್ದಲ ಎಬ್ಬಿಸಿ ತಡೆಯುವ ಕೆಲಸ ಮಾಡಲಾಗುತ್ತಿದೆ. ಅವರ ಎಲ್ಲ ಅಕ್ರಮಗಳನ್ನು ತೆಗೆಯುತ್ತೇವೆ ಎಂದು ಹೇಳಿದರು. ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಮಾಡಲು ಬಿಜೆಪಿ ಮುಂದಾಗಿರುವ ಬಗ್ಗೆ ಪ್ರತಿಕ್ರಿಯಿಸಿ, ದೆಹಲಿವರೆಗೂ ಪಾದಯಾತ್ರೆ ಮಾಡಲಿ. ಆಮೇಲೆ ನಾವು ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು.

click me!