ಮುಡಾ ಸ್ವಾಧೀನ ಪಡಿಸಿಕೊಂಡ ಕೆಸರೆ ಗ್ರಾಮದ 3.16 ಎಕರೆ ಭೂಮಿಯನ್ನು 1935ರಲ್ಲಿ ನಿಂಗಾ ಎಂಬುವವರು ಹರಾಜಿನ ಮೂಲಕ ಖರೀದಿಸಿದ್ದು, ಅದು ಕಾಲ ಕಳೆದಂತೆ ತಮ್ಮ ಪತ್ನಿ ಕೈ ಸೇರಿದೆ. ಅದೂ ಕೂಡ ನಿಯಮದಂತೆ ಪಡೆಯಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಬೆಂಗಳೂರು (ಜು.27): ಬಿಜೆಪಿ ಮತ್ತು ಜೆಡಿಎಸ್ ನಾಯಕರು ಅಧಿಕೃತ ದಾಖಲೆಗಳಿಲ್ಲದೆ, ಅರೆ-ಬರೆ ಪತ್ರಗಳನ್ನಿಟ್ಟುಕೊಂಡು ರಾಜ್ಯದ ಜನರ ಮುಂದೆ ನಾಟಕವಾಡುತ್ತಿದ್ದಾರೆ. ಆದರೆ, ಮುಡಾ ಸ್ವಾಧೀನ ಪಡಿಸಿಕೊಂಡ ಕೆಸರೆ ಗ್ರಾಮದ 3.16 ಎಕರೆ ಭೂಮಿಯನ್ನು 1935ರಲ್ಲಿ ನಿಂಗಾ ಎಂಬುವವರು ಹರಾಜಿನ ಮೂಲಕ ಖರೀದಿಸಿದ್ದು, ಅದು ಕಾಲ ಕಳೆದಂತೆ ತಮ್ಮ ಪತ್ನಿ ಕೈ ಸೇರಿದೆ. ಅದೂ ಕೂಡ ನಿಯಮದಂತೆ ಪಡೆಯಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1935ರಲ್ಲಿ ಜವರ ಎಂಬುವವರ ಮಗ ನಿಂಗಾ ಎನ್ನುವವರು ಮೈಸೂರು ತಾಲೂಕು ಕಚೇರಿಗೆ ಜಮೀನು ನೀಡುವಂತೆ ಅರ್ಜಿ ಸಲ್ಲಿಸಿದ್ದರು.
ಆಗಿನ ಅಧಿಕಾರಿಗಳು ನಿಂಗಾ ಅವರು ಕೇಳಿರುವ ಜಮೀನನ್ನು ಹರಾಜಿನ ಮೂಲ ವಿಲೇವಾರಿ ಮಾಡುವಂತೆ ವರದಿ ಸಲ್ಲಿಸಿದ್ದರು. ಅದರಂತೆ 1935ರ ಸೆ. 15ರಂದು ಹರಾಜು ನೋಟಿಸ್ ನೀಡಿ, ನ. 3ರಂದು ಹರಾಜು ಪ್ರಕ್ರಿಯೆ ನಡೆಸಲಾಗಿದೆ. ಆ ಹರಾಜಿನಲ್ಲಿ ನಿಂಗಾ ಅವರು ಕೆಸರೆ ಗ್ರಾಮದ ಸನಂ 464ರಲ್ಲಿನ 3.16 ಎಕರೆ ಭೂಮಿಯನ್ನು 1 ರು.ಗೆ ಪಡೆದುಕೊಂಡರು. ನಂತರ ಆ ಭೂಮಿಯನ್ನು ನಿಂಗಾ ಅವರಿಗೆ ಜಾಗದ ಮಾರಾಟ ದೃಢಪಡಿಸಿ ದಾಖಲೆ ನೀಡಲಾಯಿತು. ಆ ಮೂಲಕ ಆ ಜಾಗವು ನಿಂಗಾ ಅವರ ಸ್ವಯಾರ್ಜಿತ ಆಸ್ತಿಯಾಯಿತು ಎಂದು ತಿಳಿಸಿದರು.
ಮುಡಾ ಅಕ್ರಮ: ಸಿಎಂ ಸಿದ್ಧರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಕೋರಿ ರಾಜ್ಯಪಾಲರಿಗೆ ಅರ್ಜಿ
ಅದಾದ ನಂತರ 1993ರ ಏ. 10ರಂದು ನಿಂಗಾ ಅವರ ಕುಟುಂಬದವರು ವಂಶವೃಕ್ಷ ಮಾಡಿಸಿದ್ದು, ಅದರಲ್ಲಿ ನಿಂಗಾ ಅವರಿಗೆ ಮೂರು ಜನ ಮಕ್ಕಳಿದ್ದು, ಮೊದಲನೇಯ ಮಗ ಮಲ್ಲಯ್ಯ, ಎರಡನೇ ಮಗ ಮೈಲಾರಯ್ಯ ಮತ್ತು ಮೂರನೇ ಮಗ ಜೆ. ದೇವರಾಜು ಎಂದು ಉಲ್ಲೇಖಿಸಲಾಗಿದೆ. ಅಲ್ಲದೆ, ವಂಶವೃಕ್ಷದಲ್ಲಿ ಮಲ್ಲಯ್ಯ ಅವರಿಗೆ ವಾರಸುದಾರರನ್ನು ತೋರಿಸಿಲ್ಲ ಹಾಗೂ ಮೈಲಾರಯ್ಯ ಅವರಿಗೆ ಮಂಜುನಾಥಸ್ವಾಮಿ ಎಂಬುವವರು ಮಗ ಎಂದು ತಿಳಿಸಲಾಗಿದೆ. ಈ ವಂಶವೃಕ್ಷಕ್ಕೆ ಮಲ್ಲಯ್ಯ, ಮೈಲಾರಯ್ಯ ಅವರ ಪತ್ನಿ ಪುಟ್ಟಗೌರಮ್ಮ, ಮಂಜುನಾಥಸ್ವಾಮಿ ಹಾಗೂ ದೇವರಾಜು ಅವರು ಸಹಿ ಮಾಡಿದ್ದಾರೆ ಎಂದು ದಾಖಲೆ ಪ್ರದರ್ಶಿಸಿದರು.
ನಂತರ ಕೆಸರೆ ಗ್ರಾಮದ 3.16 ಎಕರೆ ಭೂಮಿಯನ್ನು ಜೆ. ದೇವರಾಜು ಅವರ ಹೆಸರಿಗೆ ಖಾತೆ ಮಾಡಿಕೊಡಲಾಗಿದ್ದು, ಅದಕ್ಕೆ ಮಲ್ಲಯ್ಯ, ಮೈಲಾರಯ್ಯ ಅವರ ಪತ್ನಿ ಪುಟ್ಟಗೌರಮ್ಮ ಮತ್ತು ಮಗ ಎಂ. ಮಂಜುನಾಥಸ್ವಾಮಿ ಅವರು ಸಹಿ ಮಾಡಿ ಜಮೀನು ಖಾತೆ ಮಾಡಿಕೊಡಲು ತಕರಾರಿಲ್ಲ ಎಂದೂ ಬರೆದುಕೊಟ್ಟಿದ್ದಾರೆ. ಅದರಂತೆ ದೇವರಾಜು ಅವರ ಹೆಸರಿಗೆ ಭೂಮಿ ಖಾತೆಯಾಗಿದೆ ಎಂದರು.
ಈ ಪ್ರಕ್ರಿಯೆಯಿಂದ ದೇವರಾಜು ಅವರು ಕೆಸರೆ ಗ್ರಾಮದ ಸ.ನಂ. 464ರ 3.16 ಎಕರೆ ಭೂಮಿಗೆ ಒಡೆಯರಾಗಿದ್ದರು. ಅದಾದ ನಂತರ 2004ರಲ್ಲಿ ನನ್ನ ಪತ್ನಿ ಪಾರ್ವತಿ ಅವರ ಸಹೋದರ ಮಲ್ಲಿಕಾರ್ಜುನ ಸ್ವಾಮಿ ಅವರು ದೇವರಾಜು ಅವರಿಂದ ಆ ಭೂಮಿಯನ್ನು ಖರೀದಿಸಿದ್ದರು. ನಂತರ 2005ರಲ್ಲಿ ಆ ಭೂಮಿಯ ಭೂ ಪರಿರ್ವನೆ ಮಾಡಿಕೊಂಡಿದ್ದರು. 2010ರ ಅಕ್ಟೋಬರ್ 6ರಂದು ಮಲ್ಲಿಕಾರ್ಜುನ ಸ್ವಾಮಿ ಅವರು ದಾನಪತ್ರದ ಮೂಲಕ ನನ್ನ ಪತ್ನಿ ಪಾರ್ವತಿ ಅವರಿಗೆ ಆ ಭೂಮಿಯನ್ನು ಹಸ್ತಾಂತರಿಸಿದ್ದರು ಎಂದು ವಿವರಿಸಿದರು.
ಈ ಎಲ್ಲ ಪ್ರಕ್ರಿಯೆಯಲ್ಲಿ ಎಲ್ಲಿ ತಪ್ಪಿದೆ ಎಂಬುದನ್ನು ಬಿಜೆಪಿ ಮತ್ತು ಜೆಡಿಎಸ್ ನಾಯಕರು ತಿಳಿಸಬೇಕು. ಅಲ್ಲದೆ, ಯಾವುದೇ ದಾಖಲೆಗಳಿಲ್ಲದೆ, ಕೇವಲ ರಾಜಕೀಯ ದ್ವೇಷಕ್ಕಾಗಿ ಈ ಜಾಗವನ್ನು ದಲಿತರಿಂದ ಪಡೆಯಲಾಗಿದೆ ಹಾಗೂ ಇದು ಪಿಟಿಸಿಎಲ್ ಕಾಯ್ದೆ ಉಲ್ಲಂಘನೆ ಎಂದು ಆರೋಪಿಸುತ್ತಿದ್ದಾರೆ. ಆದರೆ, ಇರುವ ಎಲ್ಲ ದಾಖಲೆಗಳಲ್ಲೂ ಕೆಸರೆ ಗ್ರಾಮದ 3.16 ಎಕರೆ ಭೂಮಿಯು ಸರ್ಕಾರದಿಂದ ಪಡೆದಿರುವುದಲ್ಲ. ಬದಲಿಗೆ ನಿಂಗಾ ಎನ್ನುವವರು ಹರಾಜಿನ ಮೂಲಕ ಖರೀದಿಸಿದ ಸ್ವಯಾರ್ಜಿತ ಆಸ್ತಿ ಎಂಬುದು ಸಾಬೀತಾಗುತ್ತದೆ. ಹೀಗಾಗಿ ಈ ಭೂಮಿ ಖರೀದಿ ಅಥವಾ ಮಾರಾಟಕ್ಕೆ ಪಿಟಿಸಿಎಲ್ ಕಾಯ್ದೆ ಅಡ್ಡಿ ಬರುವುದಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ವಿವರಿಸಿದರು.
ಬಿಜೆಪಿಯವರು ಮನೆಮುರುಕರು: ದೇವರಾಜು ಮತ್ತು ಅವರ ಸಹೋದರ ಮೈಲಾರಯ್ಯ ಅವರ ಮಗ ಮಂಜುನಾಥಸ್ವಾಮಿ ಅವರು ಈವರೆಗೆ ಅನ್ಯೋನ್ಯತೆಯಿಂದ ಇದ್ದರು. ಆದರೆ, ನನ್ನ ಮೇಲಿನ ದ್ವೇಷಕ್ಕಾಗಿ ಮಂಜುನಾಥ ಸ್ವಾಮಿಯನ್ನು ಎತ್ತಿಕಟ್ಟಿ, ಕೆಸರೆ ಗ್ರಾಮದ 3.16 ಎಕರೆ ಭೂಮಿಯಲ್ಲಿ ತಮಗೂ ಪಾಲು ಬರಬೇಕು ಎಂಬ ಹೇಳಿಕೆ ಕೊಡಿಸಿದ್ದಾರೆ. ಇದರಿಂದ ಅನ್ಯೋನ್ಯವಾಗಿದ್ದ ದೇವರಾಜು ಮತ್ತು ಅವರ ಅಣ್ಣನ ಮಗ ಮಂಜುನಾಥಸ್ವಾಮಿ ನಡುವೆ ದ್ವೇಷ ಉಂಟಾಗುವಂತೆ ಮಾಡಲಾಗಿದೆ. ಬಿಜೆಪಿ ಅವರು ಈ ಮನೆ ಮುರುಕುತನದ ಕೆಲಸ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಡಿ-ನೋಟಿಫೈ ಮಾಡಿದ್ದ ಮುಡಾ: ಕೆಸರೆ ಗ್ರಾಮದ ಜಾಗವನ್ನು ಸ್ವಾಧೀನ ಪಡಿಸಿಕೊಳ್ಳುವ ಸಂಬಂದ 1992ರ ಸೆ. 18ರಂದು ಆಗಿನ ನಗರಾಭಿವೃದ್ಧಿ ಪ್ರಾಧಿಕಾರ (ಈಗಿನ ಮುಡಾ) ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ಅದಾದ ನಂತರ ಆ ಬಗ್ಗೆ ಯಾವುದೇ ಪ್ರಕ್ರಿಯೆ ನಡೆಯಲಿಲ್ಲ. 1997ರ ಆ. 20ರಂದು ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಪ್ರಕಟಿಸಲಾಗಿತ್ತು. ಅದಕ್ಕೂ ಮುನ್ನವೇ 1996ರ ಆಗಸ್ಟ್ 13ರಂದು ಜಾಗದ ಮಾಲೀಕರಾದ ದೇವರಾಜು ಅವರು ತಮ್ಮ ಜಮೀನನ್ನು ಭೂಸ್ವಾಧೀನದಿಂದ ಕೈಬಿಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಆಗಿನ ನಗರಾಭಿವೃದ್ಧಿ ಸಚಿವರಾಗಿದ್ದ ಬಿ.ಎನ್. ಬಚ್ಚೇಗೌಡ ಅವರು ದೇವರಾಜು ಅವರ ಮನವಿ ಪರಿಶೀಲಿಸಿದ್ದರು. ನಂತರ 1997ರ ಜು. 24ರಂದು ಮುಡಾ ಭೂಸ್ವಾಧೀನದಿಂದ ಕೈಬಿಡಲು ನಿರ್ಣಯ ತೆಗೆದುಕೊಂಡಿತ್ತು :
.ಆ. 30ರಂದು ಸದರಿ ಜಾಗವನ್ನು ಭೂಸ್ವಾಧೀನದಿಂದ ಕೈಬಿಡಲು ಸರ್ಕಾರದ ಕಾರ್ಯದರ್ಶಿಗಳಿಗೆ ಶಿಫಾರಸು ಮಾಡಲಾಗಿತ್ತು. ಆ ಶಿಫಾರಸ್ಸಿನಂತೆ ಹಾಗೂ ತ್ರಿಸದಸ್ಯ ಸಮಿತಿಯ ನಿರ್ಧಾರದಂತೆ ಕೆಸರೆ ಗ್ರಾಮದ 3.16 ಎಕರೆ ಭೂಮಿಯನ್ನು ಭೂಸ್ವಾಧಿನದಿಂದ ಕೈಬಿಟ್ಟು ಡಿನೋಟಿಫೈ ಮಾಡಲಾಗಿದೆ. ಆ ಭೂಮಿಯಷ್ಟೇ ಅಲ್ಲದೆ ಆ ಸಮಯದಲ್ಲಿ ಇನ್ನೂ 19 ಕಡೆಯ ಭೂಮಿಗೆ ಡಿನೋಟಿಫೈ ಮಾಡಲಾಗಿದೆ ಎಂದು ಸಿದ್ದರಾಮಯ್ಯ ವಿವರಿಸಿದರು. ಮುಡಾ 1984ರಿಂದ ಒಟ್ಟು 13 ಬಡಾವಣೆಗಳಲ್ಲಿ 235.30 ಎಕರೆ ಭೂಮಿಯನ್ನು ಸ್ವಾಧೀನದಿಂದ ಕೈಬಿಟ್ಟಿದೆ. ಅಲ್ಲದೆ, ಆಗಿನ ಕಾಲದ ಖಡಕ್ ಅಧಿಕಾರಿಯಾದ ವಿ. ಬಾಲಸುಬ್ರಮಣ್ಯನ್ ಅವರ ಅಧ್ಯಕ್ಷತೆಯಲ್ಲಿ ರಾಜ್ಯದ 19 ಕಡೆ ಭೂಸ್ವಾಧೀನ ಕೈಬಿಡಲಾಯಿತು ಎಂದರು.
ಮುಡಾದಿಂದ ಅಕ್ರಮ ಸ್ವಾಧೀನ: ಒಮ್ಮೆ ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟ ಕೆಸರೆ ಗ್ರಾಮದ 3.16 ಎಕರೆ ಜಾಗವನ್ನು ಮುಡಾ ಮತ್ತೆ ಅಕ್ರಮವಾಗಿ ಸ್ವಾಧೀನಪಡಿಸಿಕೊಂಡಿದೆ. ಅಲ್ಲದೆ, ಆ ಜಾಗ ಯಾರಿಗೆ ಸೇರಿದ್ದು ಎಂಬುದನ್ನೂ ವಿಚಾರಿಸದೆ ಹಾಗೂ ಭೂಮಾಲೀಕರಿಗೆ ಮಾಹಿತಿ ನೀಡದೆ ಸ್ವಾಧೀನಪಡಿಸಿಕೊಳ್ಳಲಾಗಿದೆ. 2010ರಲ್ಲಿ ನನ್ನ ಪತ್ನಿಗೆ ಭೂಮಿ ಸೇರಿದರೂ, ಅದಾದ ನಂತರ ಮುಡಾ ಸ್ವಾಧೀನ ಮಾಡಿಕೊಂಡಿದೆ ಎಂಬುದು ತಿಳಿದಿರಲಿಲ್ಲ. ಆ ವಿಷಯ ತಿಳಿದ ನಂತರ 2014ರ ಜೂ. 23 ಹಾಗೂ 2021ರ ಅಕ್ಟೋಬರ್ 25ರಂದುರೆರಡು ಬಾರಿ ಪರಿಹಾರಕ್ಕಾಗಿ ನನ್ನ ಪತ್ನಿ ಮುಡಾಕ್ಕೆ ಅರ್ಜಿ ಸಲ್ಲಿಸಿದ್ದರು. ಅದರ ಆಧಾರದಲ್ಲಿ ಮುಡಾ ಪರಿಹಾರ ನೀಡಿದ್ದಾರೆ. ಆದರೆ, ಮುಡಾ ಸ್ವಾಧೀನ ಪಡಿಸಿಕೊಂಡ ಜಾಗದಲ್ಲಿ ಅದಾಗಲೇ ಉದ್ಯಾನ, ನಿವೇಶನಗಳನ್ನು ನಿರ್ಮಿಸಿ ಹಂಚಿಕೆ ಮಾಡಲಾಗಿತ್ತು. ಆದ್ದರಿಂದ ಕೆಸರೆ ಗ್ರಾಮದ ಜಾಗದಲ್ಲಿ ಶೇ. 50:50ರ ಅನುಪಾತದಲ್ಲಿ ಪರಿಹಾರ ಭೂಮಿ ನೀಡಲು ಸಾಧ್ಯವಿರಲಿಲ್ಲ. ಹೀಗಾಗಿ ವಿಜಯನಗರ ಬಡಾವಣೆಯಲ್ಲಿ ನಿವೇಶನ ನೀಡಿದ್ದಾರೆ. ಆದರೆ, ಅಲ್ಲಿಯೇ ನಿವೇಶನ ನೀಡುವಂತೆ ನಾವ್ಯಾರು ಒತ್ತಡ ಹಾಕಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
1.48 ಲಕ್ಷ ಚ ಅಡಿ ವಿಸ್ತೀರ್ಣದ ಭೂಮಿಗೆ 38 ಸಾವಿರ ಚ ಅಡಿ ನಿವೇಶನ: ಕೆಸರೆ ಗ್ರಾಮದ 3.16 ಎಕರೆ ಭೂಮಿಯ ವಿಸ್ತೀರ್ಣ 1.48 ಲಕ್ಷ ಚದರ ಅಡಿಗಳಷ್ಟಾಗಿದೆ. ಆದರೆ, ಮುಡಾ ನಿರ್ಣಯದಂತೆ ವಿಜಯನಗರ ಬಡಾವಣೆಯಲ್ಲಿ 38,284 ಚದರ ಅಡಿಯ ಭೂಮಿಯನ್ನು ಪಡೆಯಲಾಗಿದೆ. ಅದು 50:50ರ ಅನುಪಾತದಲ್ಲಿ ಭೂಮಿ ನೀಡಲಾಗಿದೆ ಎಂದು ಮುಡಾ ಹೇಳಿದ್ದರೂ, ಸ್ವಾಧೀನಪಡಿಸಿಕೊಂಡ ಭೂಮಿ ಹಾಗೂ ಹಂಚಿಕೆ ಮಾಡಲಾದ ಭೂಮಿಯ ವಿಸ್ತೀರ್ಣ ಅಜಗಜಾಂತರವಾಗಿದೆ. ಆದರೂ, ನಾವು ಯಾವುದೇ ವಿವಾದ ಮಾಡದೆ ಸಿಕ್ಕ ಪರಿಹಾರವನ್ನು ಪಡೆದುಕೊಂಡಿದ್ದೇವೆ ಎಂದು ಸಿಎಂ ತಿಳಿಸಿದರು.
ಬಜೆಟ್ ಅನ್ಯಾಯ ಪ್ರಶ್ನಿಸದ ಬಿಜೆಪಿಯಿಂದ ಮುಡಾ ಪ್ರತಿಭಟನೆ: ಸಿಎಂ ಸಿದ್ದರಾಮಯ್ಯ ಕಿಡಿ
ಬಿಜೆಪಿ ಅವಧಿಯಲ್ಲೇ 1328 ನಿವೇಶನಗಳ ಹಂಚಿಕೆ: 50:50ರ ಅನುಪಾತದ ನಿರ್ಣಯ ತೆಗೆದುಕೊಳ್ಳುವ ಸಂಬಂಧ 2020ರಲ್ಲಿ ನ. 20ರ ನಡೆದ ಮುಡಾ ಸಭೆಯಲ್ಲಿ ಬಿಜೆಪಿ ಶಾಸಕರಾದ ರಾಮದಾಸ್, ನಾಗೇಂದ್ರ, ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಅವರೂ ಉಪಸ್ಥಿತರಿದ್ದರು. ಅವರ ಅಭಿಪ್ರಾಯದಂತೆಯೇ ಭೂಮಿ ನೀಡಿದವರಿಗೆ 50:50ರ ಅನುಪಾತದಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲು ಅನುಮೋದಿಸಲಾಗಿದೆ. ಅಲ್ಲದೆ, ಆ ನಿರ್ಣಯದ ನಂತರ ಮುಡಾದಿಂದ 909 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಹಾಗೆಯೇ ಪ್ರೋತ್ಸಾಹ ನಿವೇಶನ ರೂಪದಲ್ಲಿ 310 ಮತ್ತು 109 ಬದಲಿ ನಿವೇಶನಗಳನ್ನು ನೀಡಲಾಗಿದೆ. ಒಟ್ಟಾರೆ ಮುಡಾದ 2020ರ ನ. 20ರ ನಿರ್ಣಯದಂತೆ 1328 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಹೀಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಈ ಎಲ್ಲ ಹಂಚಿಕೆಯಾಗಿದೆ. ಅದರೂ, ನಮ್ಮ ವಿರುದ್ಧ ಆರೋಪಿಸಲಾಗುತ್ತಿದೆ ಎಂದು ಸಿಎಂ ಹೇಳಿದರು.