ಕಲಬುರಗಿ ಡಿಸಿಗೆ ನಿಂದನೆ ಕೇಸ್; ಈ ಒಂದು ನಿರ್ಧಾರಕ್ಕೆ ಬಂಧನದಿಂದ ರವಿಕುಮಾರ್ ಜಸ್ಟ್‌ ಪಾರು!

Kannadaprabha News   | Kannada Prabha
Published : Aug 26, 2026, 12:01 PM IST
N Ravikumar vs kalaburagi DC case

ಸಾರಾಂಶ

ಕಲಬುರಗಿ ಜಿಲ್ಲಾಧಿಕಾರಿಗೆ ನಿಂದನೆ ಮಾಡಿದ ಆರೋಪ ಎದುರಿಸುತ್ತಿರುವ ಎಂಎಲ್‌ಸಿ ಎನ್. ರವಿಕುಮಾರ್ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ. ವಿಚಾರಣೆಗೆ ಗೈರಾದ ಕಾರಣ ಅವರ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿಯಾಗಿತ್ತು

ಬೆಂಗಳೂರು (ಆ.26): ಕಲಬುರಗಿ ಜಿಲ್ಲಾಧಿಕಾರಿಗೆ ನಿಂದನೆ ಪ್ರಕರಣದ ಆರೋಪಿಯಾಗಿರುವ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್‌.ರವಿಕುಮಾರ್‌ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮಂಗಳವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಈ ಪ್ರಕರಣ ಸಂಬಂಧ ಆರೋಪಿ ರವಿಕುಮಾರ್‌ ಅವರು ನ್ಯಾಯಾಲಯದ ವಿಚಾರಣೆಗೆ ಗೈರು ಹಾಜರಾಗಿದ್ದ ಹಿನ್ನೆಲೆಯಲ್ಲಿ ಸೋಮವಾರ ಜಾಮೀನುರಹಿತ ಬಂಧನ ವಾರಂಟ್‌ ಜಾರಿಗೊಳಿಸಿತ್ತು. ಬಂಧನದ ಭೀತಿಯಲ್ಲಿದ್ದ ರವಿಕುಮಾರ್‌ ಮಂಗಳವಾರ ವಕೀಲರೊಂದಿಗೆ ನ್ಯಾಯಾಲಯಕ್ಕೆ ಶರಣಾದರು.

ಬಂಧನದಿಂದ ಜಸ್ಟ್‌ ಮಿಸ್‌!:

ನ್ಯಾಯಾಲಯವು ಜಾಮೀನು ರಹಿತ ಬಂಧನ ವಾರಂಟ್‌ ಹೊರಡಿಸಿದ್ದ ಹಿನ್ನೆಲೆಯಲ್ಲಿ ಬೆಂಗಳೂರಿನ ಸಿಸಿಬಿ ಪೊಲೀಸರು ರವಿಕುಮಾರ್‌ ಬಂಧನಕ್ಕೆ ತಯಾರಿ ನಡೆಸಿದ್ದರು. ಪೊಲೀಸರ ಒಂದು ತಂಡ ನ್ಯಾಯಾಲಯದ ಬಳಿ ಕಾದು ಕುಳಿತಿತ್ತು. ಈ ನಡುವೆ ರವಿಕುಮಾರ್‌ ವಕೀಲರೊಂದಿಗೆ ನೇರವಾಗಿ ನ್ಯಾಯಾಲಯಕ್ಕೆ ಶರಣಾಗಿ ಜಾಮೀನು ಪಡೆದುಕೊಂಡರು. ಈ ಮೂಲಕ ಪೊಲೀಸರ ಬಂಧನದಿಂದ ಸ್ವಲ್ಪದರಲ್ಲೇ ಪಾರಾದರು.

ಇದೇ ವೇಳೆ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ಕುರಿತ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಒಂದು ಲಕ್ಷ ರು. ಮೊತ್ತದ ವೈಯಕ್ತಿಕ ಬಾಂಡ್‌ ಮತ್ತು 10 ಸಾವಿರ ರು. ನಗದು ಭದ್ರತೆಯೊಂದಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಎನ್‌.ರವಿಕುಮಾರ್‌ ಅವರನ್ನು ಬಿಡುಗಡೆಗೊಳಿಸಿತು.

ಪ್ರಾಸಿಕ್ಯೂಷನ್‌ ಸಾಕ್ಷಿಗೆ ಬೆದರಿಸಬಾರದು, ಅಪಹರಿಸಬಾರದು, ವಿಚಾರಣೆಗೆ ನಿಯಮಿತವಾಗಿ ಹಾಜರಾಗಬೇಕು, ಇದೇ ರೀತಿಯ ಅಪರಾಧ ಮಾಡಬಾರದು, ಕೋಮು ಸಾಮರಸ್ಯ ಮತ್ತು ಶಾಂತಿಗೆ ಭಂಗ ತರುವ ಭಾಷಣಗಳನ್ನು ಮಾಡಬಾರದು ಎಂದು ನ್ಯಾಯಾಲಯವು ಜಾಮೀನು ಷರತ್ತು ವಿಧಿಸಿದೆ. ಅಂತೆಯೇ 500 ರು. ದಂಡ ವಿಧಿಸಿ ಜಾಮೀನುರಹಿತ ಬಂಧನ ವಾರಂಟ್‌ (ಎನ್‌ಬಿಡಬ್ಲ್ಯೂ) ರದ್ದುಗೊಳಿಸಿತು. ವಿಚಾರಣೆಯನ್ನು ಸೆ.15ಕ್ಕೆ ಮುಂದೂಡಿತು.

ಪ್ರಕರಣದ ಹಿನ್ನೆಲೆ:

ಕಲಬುರಗಿಯಲ್ಲಿ 2025ರ ಮೇ ತಿಂಗಳಲ್ಲಿ ನಡೆದ ಕಲಬುರಗಿ ಚಲೋ ಪ್ರತಿಭಟನಾ ಭಾಷಣದ ವೇಳೆ ರವಿಕುಮಾರ್‌ ಕಲಬುರಗಿ ಜಿಲ್ಲಾಧಿಕಾರಿ ಫೌಝಿಯಾ ತರನ್ನಮ್‌ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಹಾಗೂ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಕಲಬುರಗಿ ಸ್ಟೇಷನ್‌ ಬಜಾರ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಬಳಿಕ ಪ್ರಕರಣ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆಯಾಗಿತ್ತು. ನಂತರ ರವಿಕುಮಾರ್‌ ನಿರೀಕ್ಷಣಾ ಜಾಮೀನು ಪಡೆದಿದ್ದರು. ಸದ್ಯ ಈ ಪ್ರಕರಣ ವಿಚಾರಣೆ ಹಂತದಲ್ಲಿದೆ. ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ನ್ಯಾಯಾಲಯವು ಜಾಮೀನು ರಹಿತ ಬಂಧನ ವಾರಂಟ್‌ ಜಾರಿಗೊಳಿಸಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

B Nagendra Resignation: ಬಿ ನಾಗೇಂದ್ರ ರಾಜೀನಾಮೆಗೆ ವೇದಿಕೆ ಸಿದ್ಧ ಮಾಡ್ತಾ ಕಾಂಗ್ರೆಸ್? ಸಂವಿಧಾನಿಕ ಬಿಕ್ಕಟ್ಟು ತಪ್ಪಿಸಲು ಸಚಿವ ತಲೆದಂಡ?
ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ; ಪಡಸಾಲೆಯ ಚರ್ಚೆ ರಿವೀಲ್ ಬೆನ್ನಲ್ಲೇ ಸಿಕ್ತು ಸ್ಪಷ್ಟನೆ!