ವಿಧಾನ ಪರಿಷತ್ ಸದಸ್ಯರಾಗಿರುವ ಎಚ್.ವಿಶ್ವನಾಥ್ ಅವರು ಐದೂವರೆ ವರ್ಷ ಬಿಟ್ಟು ಮೂರುವರೆ ವರ್ಷದ ಅಧಿಕಾರವಧಿ ಮೇಲೆ ಕಣ್ಣಿಟ್ಟಿದ್ದಾರೆ.
ಬೆಂಗಳೂರು, (ಮಾ.01): ಈಗಾಗಲೇ ಎಚ್.ವಿಶ್ವನಾಥ್ ಅವರು ವಿಧಾನ ಪರಿಷತ್‌ಗೆ ನಾಮನಿರ್ದೇಶನಗೊಂಡಿದ್ದಾರೆ. ಆದ್ರೆ, ಅದು ಅವರಿಗೆ ತೃಪ್ತಿ ಇಲ್ಲ. ಈ ಹಿನ್ನೆಲೆಯಲ್ಲಿ ಹಳ್ಳಿಹಕ್ಕಿ ಐದೂವರೆ ವರ್ಷ ಬಿಟ್ಟು ಮೂರುವರೆ ವರ್ಷ ಅಧಿಕಾರವಧಿಯ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.
ಯಾಕಂದ್ರೆ ಸುಪ್ರೀಂ ಕೋರ್ಟ್ ಅವರನ್ನ ಅನರ್ಹಗೊಳಿಸಿದೆ. ಇದರಿಂದ ನಾಮನಿರ್ದೇಶ ಮೇಲೆ ಸಚಿವರಾಗಲು ಅವಕಾಶ ಇಲ್ಲ ಎಂದು ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಇದರಿಂದ ವಿಶ್ವನಾಥ್ ಅವರು ಧರ್ಮೇಗೌಡ ಅವರ ನಿಧನದಿಂದ ತೆರವಾದ ವಿಧಾನಸಭೆಯಿಂದ ಆಯ್ಕೆಯಾಗುವ ಪರಿಷತ್ ಸ್ಥಾನಕ್ಕಾಗಿ ಲಾಬಿ ನಡೆಸಿದ್ದಾರೆ.
ಹೌದು....ಇನ್ನೂ ಐದುವರೆ ವರ್ಷ ಅಧಿಕಾರವಿರುವ ನಾಮನಿರ್ದೇಶ ಪರಿಷತ್ ಬೇಡ, ಬದಲಿಗೆ ನನಗೆ ಧರ್ಮೇಗೌಡರಿಂದ ತೆರವಾದ ಸ್ಥಾನದ ಮೂಲಕ ಪರಿಷತ್ ಗೆ ಕಳುಹಿಸಲಿ ಎಂದು ವಿಶ್ವನಾಥ್, ಹೈಕಮಾಂಡ್ ಬಳಿ ಮನವಿ ಮಾಡಿಕೊಂಡಿದ್ದಾರೆ.
ಮಾ. 15 ಕ್ಕೆ ಪರಿಷತ್ ಚುನಾವಣೆ; ವಿಶ್ವನಾಥ್‌ಗೆ ಸಿಗುತ್ತಾ ಟಿಕೆಟ್..?
ವಿಧಾನಸಭೆಯಿಂದ ನಡೆಯುವ ಉಪಚುನಾವಣೆಯಲ್ಲಿ ಸ್ಫರ್ಧಿಸುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಹಳ್ಳಿಹಕ್ಕಿ, ನಾನು ದೆಹಲಿ ವರಿಷ್ಠರು, ರಾಜ್ಯದ ವರಿಷ್ಠರು ಮತ್ತು ಸಿಎಂ ಗಮನಕ್ಕೆ ತಂದಿದ್ದೇನೆ. ನನಗೆ ಇನ್ನೂ 5 ವರ್ಷ ಅವಧಿ ಇದೆ. ನನಗೆ ಸುಪ್ರೀಂಕೋರ್ಟ್ ಶಾಪ ವಿಮೋಚನೆ ಆಗಬೇಕಾದರೆ, ನಾನು ಚುನಾವಣೆ ಮೂಲಕವೇ ಬರಬೇಕು. ಧರ್ಮೇಗೌಡರಿಂದ ಖಾಲಿಯಾದ ಸ್ಥಾನದ ಮೂಲಕ ನಾನು ವಿಧಾನಸಭೆಯಿಂದ ವಿಧಾನಪರಿಷತ್ಗೆ ಬಂದರೆ ಶಾಪ ವಿಮೋಚನೆ ಆಗುತ್ತದೆ ಎಂದು ಹೇಳಿದರು.
ಸರ್ಕಾರದಲ್ಲಿ ಕೂಡಾ ಜವಾಬ್ದಾರಿಗಳನ್ನು ಕೊಟ್ಟರೆ ನಾನು ನಿರ್ವಹಿಸಬಲ್ಲೆ. ಈಗಾಗಲೇ ಸಾಕಷ್ಟು ಜವಾಬ್ದಾರಿ ನಿರ್ವಹಿಸಿದ್ದೇನೆ. ನಾನು ಮಂತ್ರಿಯಾಗಿದ್ದಾಗ ಸರ್ಕಾರಿ ಶಾಲೆಗಳಿಗೆ ಏಕಕಾಲಕ್ಕೆ ಕಾಂಪೌಂಡ್, ಶೌಚಾಲಯ, ಸೌಲಭ್ಯ ಕಲ್ಪಿಸಿದ್ದೆ. ಸರ್ಕಾರಿ ಶಾಲೆಗಳಲ್ಲಿ ಶೌಚಾಲಯದ ಕೊರತೆ ಇರುವ ಬಗ್ಗೆ ಪತ್ರಿಕೆಗಳಲ್ಲಿ ನೋಡಿದ್ದೇನೆ. ಹಾಗಾಗಿ ನನಗೆ ಒಂದು ಜವಾಬ್ದಾರಿ ಕೊಡಿ, ಶಾಪ ವಿಮೋಚನೆ ಮಾಡಿ. ನನಗೆ ಬರೀ ಮೂರೂವರೆ ವರ್ಷ ಸಾಕು. ನನಗೆ ಮೂರೂವರೆ ವರ್ಷ ಕೊಟ್ಟು ಐದೂವರೆ ವರ್ಷ ಯಾರಿಗೆ ಬೇಕಾದರೂ ಕೊಡಿ. ಈಗ ಆಗಿರುವ ವ್ಯತ್ಯಾಸಗಳನ್ನು ದಯವಿಟ್ಟು ಸರಿ ಮಾಡಿ ಕೊಡಿ ಅಂತಾ ಕೇಳುತ್ತಿದ್ದೇನೆ. ಸರ್ಕಾರದಲ್ಲಿ ನಾನು ಕೆಲಸ ಮಾಡಬಲ್ಲೆ ಎಂದರು.