'ಮೋದಿ ನಿರ್ಧಾರ ಪ್ರಶ್ನಿಸುವ ಧೈರ್ಯ ಕರ್ನಾಟಕದ ಸಂಸದರಿಗಿಲ್ಲ'

By Suvarna NewsFirst Published Mar 1, 2021, 3:08 PM IST
Highlights

ತಮಿಳುನಾಡು ಕಾವೇರಿ ಯೋಜನೆ ವಿರುದ್ಧ ದನಿ ಎತ್ತುವ ತಾಕತ್ತಿಲ್ಲ ಎಂದು ಮಾಜಿ ಸಚಿವರೊಬ್ಬರು ಕಿಡಿಕಾರಿದ್ದಾರೆ.

ಮಂಡ್ಯ, (ಮಾ.01): ತಮಿಳುನಾಡು ಸರ್ಕಾರ ಕೈಗೆತ್ತಿಕೊಂಡಿರುವ ಕಾವೇರಿ ಯೋಜನೆ ಸಂಬಂಧ ದನಿ ಎತ್ತುವ ಧೈರ್ಯ ರಾಜ್ಯದ ಸಂಸದರಿಗಿಲ್ಲ. ಕೇಂದ್ರಸರ್ಕಾರವೇ ಯೋಜನೆಗೆ ಹಣ ನೀಡಿರುವುದರಿಂದ ಮೋದಿ ನಿರ್ಧಾರದ ವಿರುದ್ಧ ಮಾತನಾಡುವ ತಾಕತ್ತು ಯಾರೊಬ್ಬರಿಗೂ ಇಲ್ಲ ಎಂದು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಟೀಕಿಸಿದರು.

ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಾಗಿರುವ ಅನ್ಯಾಯದ ವಿರುದ್ಧ ಸೊಲ್ಲೆತ್ತದವರು ಕಾನೂನು ಹೋರಾಟ ಮಾಡುತ್ತಾರೆಯೇ. ಸುಪ್ರೀಂಕೋರ್ಟ್‌ಗೆ ಇವರು ಕಾವೇರಿ ಯೋಜನೆ ವಿರುದ್ಧ ಅರ್ಜಿ ಸಲ್ಲಿಸಿದರೆ ಅದು ಮೋದಿ ನಿಲುವನ್ನೇ ಪ್ರಶ್ನಿಸಿದಂತೆ. ಅಂತಹ ಧೈರ್ಯವನ್ನು ಸಿಎಂ ಅಥವಾ ಸಂಸದರು ಮಾಡುವರೆಂಬ ನಂಬಿಕೆ ಇದೆಯೇ ಎಂದು ಪ್ರಶ್ನಿಸಿದರು.

ತಮಿಳುನಾಡಲ್ಲಿ ಮತ್ತೊಂದು 'ಕಾವೇರಿ' ಯೋಜನೆ: ಕರ್ನಾಟಕದ ಯೋಜನೆಗೆ ಅಡ್ಡಿಯಾಗುವ ಆತಂಕ

ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದರೂ ಕಾವೇರಿ ನದಿಯಿಂದ ಹರಿದುಹೋಗುವ ಹೆಚ್ಚುವರಿ ನೀರನ್ನು ತಡೆಹಿಡಿಯಲು ರೂಪಿಸಿದ ಮೇಕೆದಾಟು ಯೋಜನೆಗೆ ಕಾನೂನು ಹೋರಾಟ ನಡೆಸಿ ಜಯಿಸಿಕೊಂಡು ಬರಲಾಗಲಿಲ್ಲ. ತಮಿಳುನಾಡು ಜನಪ್ರತಿನಿಧಿಗಳಿಗೆ ರೈತಾಪಿ ವರ್ಗದ ಜನರ ಸಮಸ್ಯೆಗಳ ಬಗ್ಗೆ ಬದ್ಧತೆ ಇದೆ. ನೀರಿನ ಮೇಲೆ ಹಕ್ಕು ಸಾಧಿಸುವ ಇಚ್ಛಾಶಕ್ತಿ ಇದೆ. ಅದಕ್ಕಾಗಿಯೇ ಕೇಂದ್ರದಿಂದ 14 ಸಾವಿರ ಕೋಟಿ ರು. ಬಿಡುಗಡೆ ಮಾಡಿಸಿಕೊಂಡು ಬಂದು ಯೋಜನೆಗೆ ಚಾಲನೆ ನೀಡಿದ್ದಾರೆ. ಅಂತಹದೊಂದು ಬದ್ಧತೆ, ಇಚ್ಛಾಶಕ್ತಿ ನಮ್ಮ ರಾಜ್ಯಸರ್ಕಾರಕ್ಕೂ ಇಲ್ಲ, ಸಂಸದರಿಗೂ ಇಲ್ಲ ಎಂದು ಛೇಡಿಸಿದರು.

ಪ್ರತಿ ವರ್ಷ ಕಾವೇರಿ ನದಿಯಿಂದ 45 ಟಿಎಂಸಿಯಷ್ಟು ಹೆಚ್ಚುವರಿ ನೀರು ತಮಿಳುನಾಡಿಗೆ ಹರಿದುಹೋಗುತ್ತಿದೆ. ಅದನ್ನು ಸಮರ್ಥವಾಗಿ ನಮ್ಮಲ್ಲೇ ಬಳಸಿಕೊಳ್ಳುವುದಕ್ಕೆ ಯಾವುದೇ ಸರ್ಕಾರಗಳೂ ಯೋಜನೆ ರೂಪಿಸಲಿಲ್ಲ. ಮೇಕೆದಾಟು ಯೋಜನೆಗೆ ಅನುಮತಿ ಪಡೆದುಕೊಂಡು ಶೀಘ್ರ ಕಾಮಗಾರಿಯನ್ನು ಆರಂಭಿಸಲೂ ಇಲ್ಲ. ನಮ್ಮ ರಾಜ್ಯದ ಕಾವೇರಿ ಕಣಿವೆ ರೈತರ ಹಿತವನ್ನು ಸರ್ಕಾರ ಮರೆತಿದ್ದರಿಂದ ಹೆಚ್ಚುವರಿ ನೀರನ್ನು ಸಮರ್ಥವಾಗಿ ಬಳಸಿಕೊಂಡು ತಮಿಳುನಾಡು ಸರ್ಕಾರ ಆ ಭಾಗದ ಕಾವೇರಿ ಕಣಿವೆ ರೈತರ ಹಿತ ಕಾಯುತ್ತಿದೆ. ಕಾವೇರಿ ನದಿ ನೀರು ಹಂಚಿಕೆಯಲ್ಲಾಗಿರುವ ಅನ್ಯಾಯದ ಹೊಣೆಯನ್ನು ನಾವೂ ಹೊರಬೇಕಿದೆ ಎಂದು ತಿಳಿಸಿದರು.

click me!