ಸಂಪುಟ ಕಸರತ್ತು ಹೋರಾಗಿದ್ದು ನಡೆದಿದ್ದು, ಸಂಪುಟ ವಿಸ್ತರಣೆಯೋ ಅಥವಾ ಪುನಾರಚನೆಯೋ ಎನ್ನುವುದು ಮಾತ್ರ ಇನ್ನೂ ನಿಗೂಢವಾಗಿ ಉಳಿದಿದೆ. ಇದರ ಮಧ್ಯೆ ಬಿಜೆಪಿಯಲ್ಲಿ ಸೋತವರು ವರ್ಸಸ್ ಗೆದ್ದವರ ನಡುವೆ ವಾಕ್ಸಮರ ಶುರುವಾಗಿದೆ.
ಬೆಂಗಳೂರು, (ನ.29): ಇತ್ತೀಚೆಗೆ ಸಚಿವ ರಮೇಶ್ ಜಾರಕಿಹೊಳಿ ಅವರ ನಡೆ ರಾಜ್ಯ ಬಿಜೆಪಿಯಲ್ಲಿ ಸಂಚಲವನ್ನು ಮೂಡಿಸಿದ್ದು, ಇದು ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ.
ತಮ್ಮ ಜೊತೆ ಬಂದ ಬೆಂಬಲಿಗರಿಗೆ ಸಚಿವ ಸ್ಥಾನ ಹಾಗೂ ತಮಗೆ ಉಪಮುಖ್ಯಮಂತ್ರಿ ಕೊಡಬೇಕೆಂದು ದೆಹಲಿ ಮಟ್ಟದಲ್ಲಿ ಭರ್ಜರಿ ಲಾಬಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೇ ಸಿ.ಪಿ. ಯೋಗೇಶ್ವರ್‌ಗೆ ಅವರಿಗೆ ಸಚಿವ ಸ್ಥಾನಕ್ಕಾಗಿ ನಾನು ಹೋರಾಟ ಮಾಡುತ್ತೇನೆಂದು ಸಚಿವ ರಮೇಶ್ ಜಾರಕಿಹೊಳಿ ಅವರು ಬಹಿರಂಗವಾಗ ಹೇಳಿದ್ದರು. ಇದೀಗ ಇದಕ್ಕೆ ರೇಣುಕಾಚಾರ್ಯ ಪರೋಕ್ಷವಾಗಿ ತಿರುಗೇಟು ಕೊಟ್ಟಿದ್ದಾರೆ.
ಅವರಿಗೆ ಸಚಿವ ಸ್ಥಾನ ನೀಡುವವರೆಗೂ ಹೋರಾಟ: ರಮೇಶ್ ಜಾರಕಿಹೊಳಿ ಬಹಿರಂಗ ಹೇಳಿಕೆ
ಹೊನ್ನಾಳಿಯಲ್ಲಿ ಇಂದು (ಭಾನುವಾರ)ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯಲ್ಲಿ ಸೋತವರಿಗೆ ಮಂತ್ರಿಸ್ಥಾನ ಕೊಡಿಸಲು ಪ್ರಯತ್ನಿಸುವವರು ಸಾಧ್ಯವಾದರೆ ತಮ್ಮ ಸ್ಥಾನವನ್ನೇ ತ್ಯಾಗ ಮಾಡಿ ಮಂತ್ರಿ ಮಾಡಿಸಲಿ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅವರು ಪರೋಕ್ಷವಾಗಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ತಿರುಗೇಟು ನೀಡಿದ್ದಾರೆ.
ಚುನಾವಣೆಯಲ್ಲಿ ಪರಾಭವಗೊಂಡವರನ್ನು ಮಂತ್ರಿ ಮಾಡುವುದಾದರೆ ಜನರಿಂದ ಆಯ್ಕೆ ಆದವರು ಏನು ಮಾಡಬೇಕು? ಗೆದ್ದವರನ್ನು ಸಂಪುಟಕ್ಕೆ ತೆಗೆದುಕೊಳ್ಳುವುದು ಸರಿ. ಸೋತವರನ್ನು ಮಂತ್ರಿ ಮಾಡಲು ಹೊರಟವರು ಮೊದಲು ತಮ್ಮ ಸ್ಥಾನವನ್ನು ತ್ಯಾಗ ಮಾಡಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲಿ ಎಂದು ರಮೇಶ್ ಜಾರಕಿಹೊಳಿ ಹೆಸರು ಹೇಳದೆ ಟಾಂಗ್ ಕೊಟ್ಟರು.
ಮತ್ತೆ ದಿಲ್ಲಿಗೆ ರಮೇಶ್ ಜಾರಕಿಹೊಳಿ: ಕಾರಣ ಹೇಳಿ ಹೋದ ಸಾಹುಕಾರನ ನಡೆ ಕುತೂಹಲ
ಸೋತವರನ್ನೇ ಮಂತ್ರಿ ಮಾಡುತ್ತೇನೆ ಎಂದು ಹೇಳಿದರೆ ಜನರಿಂದ ಆಯ್ಕೆಯಾದವರು ಸುಮ್ಮನೆ ಇರಬೇಕಾ? ಹಾಗೊಂದು ವೇಳೆ ಪರಾಭವಗೊಂಡವರೇ ಮಂತ್ರಿಗಳಾಗುವುದಾದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತವರನ್ನು ಕರೆತಂದು ಮಂತ್ರಿ ಮಾಡಲಿ, ನಮ್ಮದೇನೂ ಅಭ್ಯಂತರವಿಲ್ಲ ಎಂದರು.
ಸೋತವರಿಗೆ ಮಂತ್ರಿಸ್ಥಾನ ಕೊಡಬಾರದು ಎಂದು ನಾವು ದೆಹಲಿ ನಾಯಕರು, ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟಿಲ್ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೂ ತಿಳಿಸಿದ್ದೇವೆ. ಇದು ಕೇವಲ ನನ್ನೊಬ್ಬನ ಅಭಿಪ್ರಾಯವಲ್ಲ. ಬಹುತೇಕ ಶಾಸಕರ ಒಮ್ಮತದ ಅಭಿಪ್ರಾಯವೂ ಇದೇ ಆಗಿದೆ ಎಂದು ಹೇಳಿದರು.
ನಾವು ಕಾಂಗ್ರೆಸ್-ಜೆಡಿಎಸ್‍ನಿಂದ ಬಂದಿರುವವರಿಗೆ ಮಂತ್ರಿಸ್ಥಾನ ಕೊಡಬಾರದು ಎಂದು ಎಲ್ಲೂ ಹೇಳಿಲ್ಲ. ನಮ್ಮ 105 ಶಾಸಕರು, ಜೊತೆಗೆ 17 ಶಾಸಕರು ರಾಜೀನಾಮೆ ಕೊಟ್ಟು ಬಂದಿದ್ದರಿಂದ ಬಿಜೆಪಿ ಅಕಾರಕ್ಕೆ ಬರಲು ಸಾಧ್ಯವಾಯಿತು. ಸಂಪುಟ ವಿಸ್ತರಣೆ ಯಾವಾಗ ಮಾಡಬೇಕು ಎಂಬುದನ್ನು ಕೇಂದ್ರ ವರಿಷ್ಠರು ಹಾಗೂ ಸಿಎಂ ಯಡಿಯೂರಪ್ಪ ನಿರ್ಧರಿಸುತ್ತಾರೆ ಎಂದು ತಿಳಿಸಿದರು.