ಲೋಕಾಯುಕ್ತ ವಿಚಾರಣೆಗೆ ಮಾಡಾಳು ಅಸಹಕಾರ: ಸಮರ್ಪಕ ಉತ್ತರ ನೀಡದ ಶಾಸಕ

By Kannadaprabha News  |  First Published Mar 10, 2023, 2:17 PM IST

ರಾಜ್ಯಾದ್ಯಂತ ತೀವ್ರ ಸಂಚಲನ ಸೃಷ್ಟಿಸಿರುವ ಲಂಚ ಪ್ರಕರಣ ಸಂಬಂಧ ಹೈಕೋರ್ಟ್‌ ಸೂಚನೆ ಮೇರೆಗೆ ಲೋಕಾಯುಕ್ತ ಪೊಲೀಸರ ಮುಂದೆ ಹಾಜರಾದ ಶಾಸಕ ಮಾಡಾಳು ವಿರೂಪಾಕ್ಷಪ್ಪ ಸತತ ಮೂರು ಗಂಟೆಗಳ ಕಾಲ ವಿಚಾರಣೆ ಎದುರಿಸಿದರೂ ತನಿಖಾಧಿಕಾರಿಗೆ ಸಹಕಾರ ನೀಡಿಲ್ಲ. 


ಬೆಂಗಳೂರು (ಮಾ.09): ರಾಜ್ಯಾದ್ಯಂತ ತೀವ್ರ ಸಂಚಲನ ಸೃಷ್ಟಿಸಿರುವ ಲಂಚ ಪ್ರಕರಣ ಸಂಬಂಧ ಹೈಕೋರ್ಟ್‌ ಸೂಚನೆ ಮೇರೆಗೆ ಲೋಕಾಯುಕ್ತ ಪೊಲೀಸರ ಮುಂದೆ ಹಾಜರಾದ ಶಾಸಕ ಮಾಡಾಳು ವಿರೂಪಾಕ್ಷಪ್ಪ ಸತತ ಮೂರು ಗಂಟೆಗಳ ಕಾಲ ವಿಚಾರಣೆ ಎದುರಿಸಿದರೂ ತನಿಖಾಧಿಕಾರಿಗೆ ಸಹಕಾರ ನೀಡಿಲ್ಲ. ಹೀಗಾಗಿ ಶುಕ್ರವಾರವೂ ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ. 40 ಲಕ್ಷ ರು. ಲಂಚ ಪಡೆಯುತ್ತಿದ್ದ ವೇಳೆ ಪುತ್ರ ಪ್ರಶಾಂತ್‌ ಮಾಡಾಳು ಬಂಧನವಾಗುತ್ತಿದ್ದಂತೆ ನಾಪತ್ತೆಯಾಗಿದ್ದ ಮಾಡಾಳು ವಿರೂಪಾಕ್ಷಪ್ಪ ಹೈಕೋರ್ಟ್‌ನಿಂದ ಮಧ್ಯಂತರ ನಿರೀಕ್ಷಣಾ ಜಾಮೀನು ಪಡೆದ ಬಳಿಕ ಕಾಣಿಸಿಕೊಂಡಿದ್ದಾರೆ. 

ಹೈಕೋರ್ಟ್‌ ನಿರ್ದೇಶನದ ಮೇರೆಗೆ ಲೋಕಾಯುಕ್ತ ಡಿವೈಎಸ್‌ಪಿ ಅಂಥೋನಿ ರಾಜ್‌ ಮುಂದೆ ಗುರುವಾರ ಸಂಜೆ 5 ಗಂಟೆಗೆ ವಿಚಾರಣೆಗೆ ಹಾಜರಾದರು. ಸತತ ಮೂರು ತಾಸುಗಳ ವಿಚಾರಣೆ ನಡೆಸಲಾಯಿತು. ಆದರೂ, ಲೋಕಾಯುಕ್ತ ಪೊಲೀಸರ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರ ನೀಡದೆ ಅಸಹಕಾರ ನೀಡಿದ್ದಾರೆ. ಸಮಂಜಸವಾದ ಉತ್ತರ ನೀಡದ ಕಾರಣ ಶುಕ್ರವಾರವೂ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿ ಕಳುಹಿಸಿಕೊಡಲಾಗಿದೆ ಎಂದು ಮೂಲಗಳು ಹೇಳಿವೆ. ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆಎಸ್‌ಡಿಎಲ್‌) ಸಂಸ್ಥೆಗೆ ರಾಸಾಯನಿಕ ಕಚ್ಚಾವಸ್ತು ಪೂರೈಸುವ ಗುತ್ತಿಗೆಯ ಕಾರ್ಯಾದೇಶ ನೀಡುವುದಕ್ಕೆ ಪ್ರತಿಯಾಗಿ ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪದಲ್ಲಿ ವಿರೂಪಾಕ್ಷಪ್ಪ ಮೊದಲ ಆರೋಪಿಯಾಗಿದ್ದಾರೆ. 

Tap to resize

Latest Videos

ಬಿಜೆಪಿ ಶಾಸಕ ಮಾಡಾಳು ಜಾಮೀನು ಹಿಂದೆ ಸರ್ಕಾರ ಕೈವಾಡ: ರಾಮಲಿಂಗಾ ರೆಡ್ಡಿ

ಇದಕ್ಕೆ ಸಂಬಂಧಪಟ್ಟಂತೆಯೇ ಲೋಕಾಯುಕ್ತ ಪೊಲೀಸರು ಸುಮಾರು 45-50 ಪ್ರಶ್ನೆಗಳನ್ನು ಸಿದ್ಧಪಡಿಸಿಕೊಂಡಿದ್ದರು. ಪೊಲೀಸ್‌ ವರಿಷ್ಠಾಧಿಕಾರಿ ಅಶೋಕ್‌ ಮತ್ತು ಡಿವೈಎಸ್‌ಪಿ ಅಂಥೋನಿ ರಾಜ್‌ ತೀವ್ರ ವಿಚಾರಣೆಗೊಳಪಡಿಸಿದರು. ಸಿದ್ಧಪಡಿಸಲಾದ ಪ್ರಶ್ನೆಗಳನ್ನು ನಿರಂತರವಾಗಿ ಅಧಿಕಾರಿಗಳು ಕೇಳಿದರು. ಕೇಳಲಾದ ಪ್ರಶ್ನೆಗಳಿಗೆ ಸಮರ್ಥವಾದ ಉತ್ತರ ನೀಡದೆ ಪೊಲೀಸರನ್ನು ದಾರಿತಪ್ಪಿಸುವ ಪ್ರಯತ್ನವನ್ನು ಮಾಡಾಳು ಮಾಡಿದರು. ಎಷ್ಟೇ ಕೇಳಿದರೂ ಸಮಂಜಸವಾದ ಉತ್ತರ ನೀಡಲಿಲ್ಲ ಎಂದು ತಿಳಿದು ಬಂದಿದೆ.

48 ತಾಸಿನೊಳಗೆ ತನಿಖಾಧಿಕಾರಿಗಳ ಮುಂದೆ ಹಾಜರಾಗುವಂತೆ ನ್ಯಾಯಾಲಯವು ಷರತ್ತು ವಿಧಿಸಿದ ಹಿನ್ನೆಲೆಯಲ್ಲಿ ಮಾಡಾಳು ವಿರೂಪಾಕ್ಷಪ್ಪ ತಮ್ಮ ಚನ್ನಗಿರಿ ನಿವಾಸದಿಂದ ಬೆಂಗಳೂರಿನ ಸಂಜಯನಗರ ನಿವಾಸಕ್ಕೆ ಬುಧವಾರ ರಾತ್ರಿಯೇ ಆಗಮಿಸಿದ್ದರು. ಗುರುವಾರ ಬೆಳಗ್ಗೆ ತಮ್ಮ ಪರ ವಾದ ಮಂಡಿಸಿದ ವಕೀಲ ಸಂದೀಪ್‌ ಪಾಟೀಲ್‌ ಕಚೇರಿಗೆ ತೆರಳಿ ಅವರನ್ನು ಭೇಟಿಯಾದರು. ಲೋಕಾಯುಕ್ತ ವಿಚಾರಣೆ ಸಂಬಂಧ ವಕೀಲರಿಂದ ಕೆಲವು ಕಾನೂನಾತ್ಮಕ ಸಲಹೆಗಳನ್ನು ಪಡೆದುಕೊಂಡರು. ಸಂಜೆ 4.30ರ ಹೊತ್ತಿಗೆ ವಕೀಲರೊಂದಿಗೆ ನೇರವಾಗಿ ಲೋಕಾಯುಕ್ತ ಕಚೇರಿಗೆ ಆಗಮಿಸಿ ನ್ಯಾಯಾಲಯ ವಿಧಿಸಿದ ಷರತ್ತುಗಳನ್ನು ಪೂರೈಸಿದರು. ಸಂಜೆ 5 ಗಂಟೆಗೆ ತನಿಖಾಧಿಕಾರಿ ಮುಂದೆ ಹಾಜರಾದರು.

ಲಂಚ ಪ್ರಕರಣ ಸಂಬಂಧ ಕೆಎಸ್‌ಡಿಎಲ್‌ ಕಚೇರಿಯಲ್ಲಿ ನಡೆದ ಅವ್ಯವಹಾರ, ರಾಸಾಯನಿಕ ಕಚ್ಚಾವಸ್ತುಗಳ ಪೂರೈಸುವ ಗುತ್ತಿಗೆಯ ಕಾರ್ಯಾದೇಶ ನೀಡಲು 81 ಲಕ್ಷ ರು.ಗೆ ಬೇಡಿಕೆ ಮತ್ತು ತಮ್ಮ ಸೂಚನೆಯ ಮೇರೆಗೆ ಪುತ್ರ ಪ್ರಶಾಂತ್‌ ಮಾಡಾಳು 40 ಲಕ್ಷ ರು. ಲಂಚ ಸ್ವೀಕಾರ ಮಾಡಿರುವ ಕುರಿತು ಪ್ರಶ್ನಿಸಲಾಗಿದೆ. ಅಲ್ಲದೇ, ಕಚೇರಿಯಲ್ಲಿ ಪತ್ತೆಯಾದ ಎರಡು ಕೋಟಿ ರು. ಮತ್ತು ನಿವಾಸದಲ್ಲಿ ಸಿಕ್ಕ ಆರು ಕೋಟಿ ರು. ಕುರಿತು ಹಲವು ಮಜಲುಗಳಲ್ಲಿ ಪ್ರಶ್ನಿಸಲಾಗಿದೆ ಎಂದು ಹೇಳಲಾಗಿದೆ.

ಏನಿದು ಪ್ರಕರಣ?: ಕೆಎಸ್‌ಡಿಎಲ್‌ಗೆ ಕಚ್ಚಾವಸ್ತು ಪೂರೈಸುವ ಟೆಂಡರ್‌ ಪ್ರಕ್ರಿಯೆಯಲ್ಲಿ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲು 40 ಲಕ್ಷ ರು. ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಪುತ್ರ ಮತ್ತು ಬೆಂಗಳೂರು ಜಲಮಂಡಳಿ ಮುಖ್ಯ ಲೆಕ್ಕಾಧಿಕಾರಿ ಪ್ರಶಾಂತ್‌ ಮಾಡಾಳು ಅವರನ್ನು ಮಾ.2ರಂದು ಬಂಧಿಸಿದ್ದರು. ದೂರುದಾರ ಶ್ರೇಯಸ್‌ ಕಶ್ಯಪ್‌ ದೂರಿನ ಮೇರೆಗೆ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ನಗರದ ಕ್ರೆಸೆಂಟ್‌ ರಸ್ತೆಯಲ್ಲಿನ ಖಾಸಗಿ ಕಚೇರಿಯಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಐವರನ್ನು ಬಂಧಿಸಲಾಗಿತ್ತು. ಕಚೇರಿಯಲ್ಲಿ ಎರಡು ಕೋಟಿ ರು. ನಗದು ಸಹ ಪತ್ತೆಯಾಗಿತ್ತು.

ಶಾಸಕ ಮಾಡಾಳ್‌ ಮೆರವಣಿಗೆ ಮುಜುಗರ ತಂದಿದೆ: ನಳಿನ್‌ ಕುಮಾರ್‌ ಕಟೀಲ್‌

ಪುತ್ರನ ಬಂಧನವಾಗುತ್ತಿದ್ದಂತೆ ಮಾಡಾಳು ವಿರೂಪಾಕ್ಷಪ್ಪ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡು ತಲೆಮರೆಸಿಕೊಂಡಿದ್ದರು. ತೀವ್ರ ತನಿಖೆ ಕೈಗೊಂಡ ಲೋಕಾಯುಕ್ತ ಪೊಲೀಸರು ಮನೆಯ ಮೇಲೆ ಕಾರ್ಯಾಚರಣೆ ಕೈಗೊಂಡಾಗ ಆರು ಕೋಟಿ ರು. ನಗದು ಪತ್ತೆ ಹಚ್ಚಿದ್ದರು. ಶಾಸಕರ ಬಂಧನಕ್ಕೆ ಶೋಧ ಕಾರ್ಯ ನಡೆಸಿದರೂ ಪತ್ತೆಯಾಗಿರಲಿಲ್ಲ. ಹೈಕೋರ್ಟ್‌ ಮೂಲಕ ಮಧ್ಯಂತರ ನಿರೀಕ್ಷಣಾ ಜಾಮೀನು ಪಡೆದ ಬಳಿಕ ಕಾಣಿಸಿಕೊಂಡ ಮಾಡಾಳು ವಿರೂಪಾಕ್ಷಪ್ಪ ಗುರುವಾರ ಲೋಕಾಯುಕ್ತ ಪೊಲೀಸರ ಎದುರು ವಿಚಾರಣೆಗೆ ಹಾಜರಾದರು.

click me!