ಕಾವೇರಿ ಜಲವಿವಾದದಲ್ಲಿ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯ: ಕೋಟ ಶ್ರೀನಿವಾಸ ಪೂಜಾರಿ

By Kannadaprabha NewsFirst Published Sep 28, 2023, 2:00 AM IST
Highlights

ಕಾವೇರಿ ಜಲವಿವಾದವನ್ನು ನಿರ್ವಹಿಸುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರಾಜ್ಯದಲ್ಲಿ ನೀರಿನ ಸಮಸ್ಯೆಯನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಲು ವಿಫಲವಾದ ಸರ್ಕಾರ, ಜನರ ಹಿತಾಸಕ್ತಿ ಕಾಯುವಲ್ಲಿ ನಿರಾಸಕ್ತಿ ತೋರಿಸಿ, ರಾಜ್ಯಕ್ಕೆ ಅನ್ಯಾಯ ಮಾಡಿದೆ ಎಂದು ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದ್ದಾರೆ.

ಉಡುಪಿ (ಸೆ.28): ಕಾವೇರಿ ಜಲವಿವಾದವನ್ನು ನಿರ್ವಹಿಸುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರಾಜ್ಯದಲ್ಲಿ ನೀರಿನ ಸಮಸ್ಯೆಯನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಲು ವಿಫಲವಾದ ಸರ್ಕಾರ, ಜನರ ಹಿತಾಸಕ್ತಿ ಕಾಯುವಲ್ಲಿ ನಿರಾಸಕ್ತಿ ತೋರಿಸಿ, ರಾಜ್ಯಕ್ಕೆ ಅನ್ಯಾಯ ಮಾಡಿದೆ ಎಂದು ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡಿನಲ್ಲಿ ಕಾವೇರಿ ನದಿ ನೀರನ್ನು ಬಳಸಿ 1 ಲಕ್ಷ ಹೆಕ್ಟೆರ್ ನಷ್ಟು ಮಾತ್ರ ಕೃಷಿ ಮಾಡಲು ಅನುಮತಿ ಇದ್ದರೂ ಅಲ್ಲಿ 4 ಲಕ್ಷ ಹೆಕ್ಟೆರ್ ಕೃಷಿ ಮಾಡಲಾಗುತ್ತಿದೆ. ಇದನ್ನು ಸರ್ಕಾರ ನ್ಯಾಯಾಲಯಕ್ಕೆ ಮನವರಿಕೆ ಮಾಡುವಲ್ಲಿ ವಿಫಲವಾಗಿದೆ. ಕೃಷಿಗೆ ನಂತರ, ಮೊದಲು ಕುಡಿಯುವ ನೀರಿಗೆ ಆದ್ಯತೆ ನೀಡಬೇಕು ಎನ್ನುವುದನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಬೇಕಾಗಿತ್ತು ಎಂದವರು ಹೇಳಿದರು. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸುಪ್ರೀಂ ಕೋರ್ಟ್ ನ ಆದೇಶ ಇದ್ದರೂ ಸರ್ಕಾರ ತಮಿಳುನಾಡಿಗೆ ನೀರು ಬಿಡದೇ ರಾಜ್ಯದ ಜನತೆಯ ಹಿತವನ್ನು ಕಾಪಾಡುವಲ್ಲಿ ಯಶಸ್ವಿಯಾಗಿತ್ತು ಎಂದು ಕೋಟ ಹೇಳಿದರು.

ಸಿಎಂ - ಡಿಸಿಎಂ ಸಮಸ್ಯೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ನೀರಿನ ಸಮಸ್ಯೆ ಜಲಸಂಪನ್ಮೂಲ ಸಚಿವರಿಗೆ ಸಂಬಂಧಿಸಿದ್ದು, ಅವರೇ ನೋಡಿಕೊಳ್ಳಲಿ ಎಂದು ಸುಮ್ಮನಿರುವಂತಿದೆ. ಜಲಸಂಪನ್ಮೂಲ ಸಚಿವರಾಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮೇಲೆ ಸರ್ಕಾರದಲ್ಲಿ ಇನ್ನೂ 3 ಮಂದಿ ಉಪಮುಖ್ಯಮಂತ್ರಿಗಳನ್ನು ನೇಮಿಸಬೇಕು ಎಂಬ ಬಗ್ಗೆ ಒತ್ತಡದಲ್ಲಿದ್ದು, ಅವರು ಕಾವೇರಿ ನೀರಿನ ಬಗ್ಗೆ ಯೋಚಿಸುತ್ತಿಲ್ಲ ಎಂದು ಕೋಟ ಆರೋಪಿಸಿದರು.

ಕೋರ್ಟ್‌ ಹೊರಗೆ ಕಾವೇರಿ ಸಮಸ್ಯೆ ಪರಿಹಾರಕ್ಕೆ ನಾವು ಸಿದ್ಧ: ಸಿಎಂ ಸಿದ್ದರಾಮಯ್ಯ

ವಾರಾಹಿಗೂ ವೇಗ ಸಿಗಬೇಕು: ಉಡುಪಿ ಜಿಲ್ಲೆಯಲ್ಲಿಯೂ ನೀರಿನ ಸಮಸ್ಯೆ ತೀವ್ರವಾಗುತ್ತಿದೆ. ವಾರಾಹಿ ನದಿಯಿಂದ ಉಡುಪಿಗೆ ನೀರು ತರುವ ಯೋಜನೆಯ ಪೈಪ್ ಲೈನ್ ಕಾಮಗಾರಿ ಕುಂಟುತ್ತಾ ಸಾಗಿದೆ. ಇದನ್ನು ತಕ್ಷಣ ವೇಗ ನೀಡಿ, ಯೋಜನೆಯನ್ನು ತಕ್ಷಣ ಪೂರ್ಣಗೊಳಿಸಬೇಕು, ಈ ಬಗ್ಗೆ ಸರ್ಕಾರಕ್ಕೆ ಒತ್ತಾಯ ಮಾಡುವುದಾಗಿ ಕೋಟ ಹೇಳಿದರು.

click me!