* ಸಚಿವ ಸ್ಥಾನದ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಪ್ರತಿಕ್ರಿಯೆ
*ವಿಜಯಪುರ ಜಿಲ್ಲೆಗೆ ಸಚಿವ ಸ್ಥಾನ ಸಿಗಬೇಕು ಎಂದು ಆಗ್ರಹ
* ಸಚಿವ ಸ್ಥಾನ ಸಿಗದಿದ್ದರೆ ಮತ್ತೊಮ್ಮೆ ಕ್ರಾಂತಿಯ ಬಾಂಬ್ ಸಿಡಿಸಿದ ಯತ್ನಾಳ್
ವಿಜಯಪುರ, (ಅ.02): ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲು ಬಿಜೆಪಿ ಶಾಸಕರು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಈ ಮಧ್ಯೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಕೂಡ ತಮ್ಮ ಜಿಲ್ಲೆಗೆ ಸಚಿವ ಸ್ಥಾನ ಸಿಗಬೇಕು ಎಂಬ ಆಗ್ರಹ ವ್ಯಕ್ತಪಡಿಸಿದ್ದಾರೆ.
ಇಂದು (ಸೋಮವಾರ) ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಶಿವಾಜಿ ಮಹಾರಾಜ ಶಿಕ್ಷಣ ಪಡೆದ ಪವಿತ್ರ ಭೂಮಿ. ಗೋ ಹತ್ಯೆಯ ವಿರುದ್ಧ ಪ್ರಥಮ ಬಾರಿಗೆ ಇಲ್ಲೇ ಕ್ರಾಂತಿ ಆಗಿತ್ತು. ಶಿವಾಜಿ ಮಹಾರಾಜರು ಕ್ರಾಂತಿ ಮಾಡಿದ್ದು ಗೊತ್ತಿದೆ. ಇಂಥ ಜಿಲ್ಲೆಯನ್ನ ಕಡೆಗಣಿಸಲ್ಲ ಅಂದುಕೊಂಡಿದ್ದೇನೆ. ಜಿಲ್ಲೆಗೆ ಸಚಿವ ಸ್ಥಾನ ಸಿಗದಿದ್ದರೆ ಮತ್ತೊಮ್ಮೆ ಕ್ರಾಂತಿ. ಕ್ರಾಂತಿಯ ಬಗ್ಗೆ ನಾನು ಹೇಳುವುದಕ್ಕೆ ಹೋಗುವುದಿಲ್ಲ ಎಂದು ಗುಡುಗಿದರು..
'ಗಡ್ಡ ಬಿಟ್ಟು ಶಿವಾಜಿಯಾಗಿದ್ದೆ, ಈಗ ಗಡ್ಡ ತೆಗೆಸಿ ಬಸವಣ್ಣ ಆಗಿದ್ದೇನೆ'
ದೆಹಲಿಗೆ ಹೋದರೆ ಸಚಿವ ಸ್ಥಾನ ಸಿಗುತ್ತೆ ಎಂಬುದು ತಪ್ಪು. ನನಗೆ ಸಚಿವ ಸ್ಥಾನದ ಬಗ್ಗೆ ಯಾವುದೇ ಸೂಚನೆ ಬಂದಿಲ್ಲ. ಕ್ಷೇತ್ರದಲ್ಲಿದ್ದು ಒಳ್ಳೆಯ ಕೆಲಸ ಮಾಡಲು ಸೂಚನೆ ಬಂದಿದೆ. ಹೀಗಾಗಿ ಕ್ಷೇತ್ರದಲ್ಲಿದ್ದು ಕೆಲಸ ಮಾಡುತ್ತಿದ್ದೇನೆ ಎಂದು ಎಂದರು.
ಬಿ.ಎಸ್. ಯಡಿಯೂರಪ್ಪ ಸಂಪುಟದಲ್ಲಿ ಸಚಿವನಾಗಲ್ಲ ಎಂದು ಹೇಳಿದ್ದೆ. ನಾನು ಹೇಳಿದಂತೆಯೇ ನಡೆದುಕೊಂಡಿದ್ದೇನೆ. ನಾನು ಎರಡು ಮೂರು ಸಂಕಲ್ಪ ಮಾಡಿದ್ದೆ, ಅದೆಲ್ಲಾ ಈಡೇರಿದೆ ಎಂದು ಹೇಳಿದರು.
ದೆಹಲಿಗೆ ಹೋದಾಗ ನಾನು ಎಂದೂ ನನ್ನ ಬಗ್ಗೆ ಹೇಳಿಲ್ಲ. ಪಕ್ಷದ ಹಿತದೃಷ್ಟಿಯಿಂದ ಮಾತ್ರ ನಾನು ಮಾತಾಡಿದ್ದೇನೆ. ಸಂಪುಟ ರಚನೆಯಲ್ಲಿ ವಿಜಯಪುರ ಜಿಲ್ಲೆಯನ್ನ ಕಡೆಗಣಿಸಲ್ಲ ಎಂಬ ವಿಶ್ವಾಸವಿದೆ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.