ಜನಕಲ್ಯಾಣಕ್ಕೆ ಪೂರಕ, ಅಭಿವೃದ್ಧಿಪರ ಬಜೆಟ್‌: ಬಿಜೆಪಿ ಮುಖಂಡರ ಪ್ರತಿಕ್ರಿಯೆ

By Kannadaprabha NewsFirst Published Feb 2, 2023, 8:30 PM IST
Highlights

ಬಡವರ ಕಲ್ಯಾಣದ ಧ್ಯೇಯ ಸಾಕಾರಗೊಳಿಸುವ ನಿಟ್ಟಿನಲ್ಲಿ ಈ ಬಜೆಟ್‌ ಪೂರಕವಾಗಲಿದೆ. ಉದ್ಯೋಗ ಸೃಷ್ಟಿಗೆ 10 ಲಕ್ಷ ಕೋಟಿ ಮೀಸಲಿಸಿರುವುದು ನಿರುದ್ಯೋಗ ಸಮಸ್ಯೆ ನಿವಾರಣೆಗೆ ದಿಟ್ಟ ಹೆಜ್ಜೆಯಾಗಿದೆ. 

ವಿಜಯಪುರ(ಫೆ.02):  ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಲೋಕಸಭೆಯಲ್ಲಿ ಮಂಡಿಸಿರುವ ಬಜೆಟ್‌ ಜನಪರ ಹಾಗೂ ಅಭಿವೃದ್ಧಿ ಪರವಾಗಿದೆ ಎಂದು ಬಿಜೆಪಿ ಪಕ್ಷದ ವಿವಿಧ ಮುಖಂಡರು ಪ್ರತಿಕ್ರಿಯಿಸಿದ್ದಾರೆ. ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಕೇಂದ್ರ ಸರ್ಕಾರ ರೂಪಿಸಿರುವ ಬಜೆಟ್‌ ಪ್ರಗತಿಯ ಮಂತ್ರವಾಗಿದೆ, ಕೃಷಿ ಸಾಲಕ್ಕೆ .20 ಲಕ್ಷ ಕೋಟಿ ಮೀಸಲಿರಿಸುವ ಮೂಲಕ ಅನ್ನದಾತನಿಗೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಚಂದ್ರಶೇಖರ ಕವಟಗಿ ಅವರು, ಬಡವರ ಕಲ್ಯಾಣದ ಧ್ಯೇಯ ಸಾಕಾರಗೊಳಿಸುವ ನಿಟ್ಟಿನಲ್ಲಿ ಈ ಬಜೆಟ್‌ ಪೂರಕವಾಗಲಿದೆ. ಉದ್ಯೋಗ ಸೃಷ್ಟಿಗೆ 10 ಲಕ್ಷ ಕೋಟಿ ಮೀಸಲಿಸಿರುವುದು ನಿರುದ್ಯೋಗ ಸಮಸ್ಯೆ ನಿವಾರಣೆಗೆ ದಿಟ್ಟ ಹೆಜ್ಜೆಯಾಗಿದೆ ಎಂದು ಅವರು ಹೇಳಿದ್ದಾರೆ.

ವೈದ್ಯಕೀಯ ಕ್ಷೇತ್ರಕ್ಕೆ 89155 ಕೋಟಿ ರು. ಅನುದಾನ : 2047ರೊಳಗೆ ಅನಿಮಿಯಾ ರೋಗ ನಿರ್ಮೂಲನೆ ಗುರಿ

ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ, ರೈಲ್ವೇ ವಲಯದ ಪ್ರಗತಿಗೆ ದೊಡ್ಡ ಕೊಡುಗೆಯನ್ನು ಈ ಬಜೆಟ್‌ನಲ್ಲಿ ಇರಿಸಲಾಗಿದೆ, .2.40 ಲಕ್ಷ ಕೋಟಿ ಹಣವನ್ನು ರೈಲ್ವೇಗೆ ಮೀಸಲಿರಿಸುವ ಮೂಲಕ ಸಂಪರ್ಕ, ಸಾರಿಗೆ ಕ್ಷೇತ್ರ ಬಲವರ್ಧನೆಗೆ ಪೂರಕವಾಗಿದೆ, ಜನಸಾಮಾನ್ಯರಿಗೆ ಉಪಯುಕ್ತ ಬಜೆಟ್‌ ಇದಾಗಿದೆ ಎಂದು ಹೇಳಿದ್ದಾರೆ.

ಬಿಜೆಪಿ ಜಿಲ್ಲಾಧ್ಯಕ್ಷ ಆರ್‌.ಎಸ್‌. ಪಾಟೀಲ ಕೂಚಬಾಳ, ದೇಶದ ಬೆನ್ನಲುಬಾಗಿರುವ ರೈತನ ಕೈ ಬಲಪಡಿಸುವ ಬಜೆಟ್‌ ಇದಾಗಿದೆ, ಕೃಷಿ ಸಾಲಕ್ಕೆ .20 ಲಕ್ಷ ಕೋಟಿ ಮೀಸಲು, ಸಿರಿಧಾನ್ಯ ಕೃಷಿ ಮಾರುಕಟ್ಟೆಗೆ ಆದ್ಯತೆ, ಕೃಷಿ ವೇಗವರ್ಧಕ ನಿಧಿ ಸ್ಥಾಪನೆ ಹೀಗೆ ಕೃಷಿಕರಿಗೆ ಅತ್ಯಂತ ಅನುಕೂಲಕರ ಯೋಜನೆಯನ್ನು ಪ್ರಕಟಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಬಿಜೆಪಿ ರಾಜ್ಯ ಹಿಂದುಳಿದ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಡಬ್ಬಿ, ಸರ್ವೇ ಜನ ಸುಖಿನೋ ಭವಂತು ಎಂಬ ಆಶಯ ಬಜೆಟ್‌ನಲ್ಲಿ ಸಾಕಾರಗೊಂಡಿದೆ. ರೈತರು, ಯುವಜನತೆ, ಕುಶಲಕರ್ಮಿಗಳು, ಕಾರ್ಮಿಕರು ಹೀಗೆ ಎಲ್ಲರ ಹಿತವನ್ನು ಬಜೆಟ್‌ನಲ್ಲಿ ಗಣನೆಗೆ ತಗೆದುಕೊಳ್ಳಲಾಗಿದೆ, ಇದು ಜನರ ಹಾಗು ಜನಪರ ಬಜೆಟ್‌ ಆಗಿದೆ ಎಂದು ಹೇಳಿದ್ದಾರೆ.

ವಿಧಾನ ಪರಿಷತ್‌ ಸದಸ್ಯ ಅರುಣ ಶಹಾಪೂರ, ಬಡವರ ಕಲ್ಯಾಣದ ದೃಷ್ಟಿಯ ಬಜೆಟ್‌ ಇದಾಗಿದೆ, ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಯೋಜನೆಯ ವಿಸ್ತರಣೆಯ ಜೊತೆಗೆ .2 ಲಕ್ಷ ಕೋಟಿ ಅನುದಾನವನ್ನು ಮೀಸಲಿರಿಸಿರುವುದು ಬಡವರ ಕಲ್ಯಾಣಕ್ಕೆ ಹಿಡಿದ ನಿದರ್ಶನವಾಗಿದೆ ಎಂದು ಅವರು ಹೇಳಿದ್ದಾರೆ.

ಕರ್ನಾಟಕ ಸಾವಯವ ಬೀಜ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಕೃಷಿಕರಿಗೆ ಇದು ವರದಾನವಾಗಲಿದೆ. ಜೋಳ, ರಾಗಿ, ಸಿರಿಧಾನ್ಯ ಕೃಷಿಗೆ ಪೋ›ತ್ಸಾಹ, ಕೃಷಿಗೆ ಪೂರಕ ಉದ್ಯಮಗಳಿಗೆ ವಿಶೇಷ ಪೋ›ತ್ಸಾಹ ನೀಡುವ ಮೂಲಕ ರೈತನ ಪ್ರಗತಿಗೆ ಈ ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ, ಇದು ರೈತಪರ ಬಜೆಟ್‌ ಎಂದು ಅವರು ಹೇಳಿದ್ದಾರೆ.

ಡಾ.ಗೋಪಾಲ ಕಾರಜೋಳ ಅವರು, ಇದು ಒಂದು ಉತ್ತಮ ಬಜೆಟ್‌, ಜನಪರವಾದ ಹಲವಾರು ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ಉದ್ಯೋಗ ಸೃಜನೆಗೆ .10 ಕೋಟಿ, ಕುಶಲಕರ್ಮಿಗಳಿಗೆ ನೆರವು ನೀಡುವ ಯೋಜನೆ ಹೀಗೆ ಎಲ್ಲ ವರ್ಗಗಳ ಕಲ್ಯಾಣವನ್ನು ಉದ್ದೇಶವಾಗಿ ಇರಿಸಿಕೊಂಡು ಮಂಡನೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಕೇಂದ್ರ ಬಜೆಟ್‌ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ: ವಿಪಕ್ಷಗಳಿಗೆ ತಿರುಗೇಟು

ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ ವಿಜಯ ಜೋಶಿ, ಉದಯೋನ್ಮುಖ ಉದ್ಯಮಿಗಳಿಗೆ ನೆರವು ನೀಡುವ ಮೂಲಕ ಮೂಲ ಉದ್ಯೋಗ ಸೃಷ್ಟಿಗೆ ಒತ್ತು ನೀಡಿರುವುದು, ಸ್ಟಾರ್ಚ್‌ಆಪ್‌ಗಳ ನಷ್ಟದ ಪರಿಹಾರವನ್ನು 10 ವರ್ಷಗಳ ಕಾಲ ಮುಂದುವರಿಸುವ ನಿರ್ಧಾರ ಯುವಜನತೆಯನ್ನು ಉದ್ಯಮಿಗಳಾಗಿಸುವುದಕ್ಕೆ ಪೋ›ತ್ಸಾಹವಾಗಿದೆ, ಇದು ಒಂದು ಉತ್ತಮ ಬಜೆಟ್‌ ಆಗಿದೆ ಎಂದು ಅವರು ಹೇಳಿದ್ದಾರೆ.

ಬಿಜೆಪಿ ಜಿಲ್ಲಾ ವಕ್ತಾರ ಡಾ.ಸುರೇಶ ಬಿರಾದಾರ, ಕೇಂದ್ರ ಬಜೆಟ್‌ ಎಲ್ಲರ ವಿಕಾಸವನ್ನು ಗಮನದಲ್ಲಿರಿಸಿಕೊಂಡು ರೂಪಿತವಾಗಿದೆ, ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ಎನ್ನುವ ಧ್ಯೇಯಕ್ಕೆ ಪೂರಕವಾಗಿದೆ. ಕೃಷಿ, ಶ್ರಮಿಕ ವರ್ಗ, ಯುವಜನತೆ, ವಿದ್ಯಾರ್ಥಿ ಕಲ್ಯಾಣದ ದೃಷ್ಟಿಯಿಂದ ಈ ಬಜೆಟ್‌ ರೂಪಿತವಾಗಿದೆ ಎಂದು ಅವರು ಹೇಳಿದ್ದಾರೆ.

click me!