ಸಾಂವಿಧಾನಿಕ ಹುದ್ದೆಯಲ್ಲಿ ಇರುವ ವ್ಯಕ್ತಿಯ ಈ ಹೇಳಿಕೆಯನ್ನು ಲಘುವಾಗಿ ಪರಿಗಣಿಸಲು ಆಗದು’ ಎಂದು ರಾಜ್ಯಸಭೆಯಲ್ಲಿ ಹೇಳಿದ್ದ ಕೇಂದ್ರ ಸಚಿವ ಕಿರಣ್ ರಿಜಿಜು ವಿರುದ್ಧ ಕಾಂಗ್ರೆಸ್ ಪಕ್ಷ ಹಕ್ಕುಚ್ಯುತಿ ನಿರ್ಣಯ ಮಂಡಿಸುವುದಾಗಿ ಹೇಳಿದೆ.
ನವದೆಹಲಿ (ಮಾ.25): ‘ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಸ್ಲಿಂ ಮೀಸಲಿಗಾಗಿ ಸಂವಿಧಾನ ಬದಲಿಸಲಾಗುವುದು ಎಂದಿದ್ದಾರೆ. ಇದು ಖಂಡನಾರ್ಹ. ಸಾಂವಿಧಾನಿಕ ಹುದ್ದೆಯಲ್ಲಿ ಇರುವ ವ್ಯಕ್ತಿಯ ಈ ಹೇಳಿಕೆಯನ್ನು ಲಘುವಾಗಿ ಪರಿಗಣಿಸಲು ಆಗದು’ ಎಂದು ರಾಜ್ಯಸಭೆಯಲ್ಲಿ ಹೇಳಿದ್ದ ಕೇಂದ್ರ ಸಚಿವ ಕಿರಣ್ ರಿಜಿಜು ವಿರುದ್ಧ ಕಾಂಗ್ರೆಸ್ ಪಕ್ಷ ಹಕ್ಕುಚ್ಯುತಿ ನಿರ್ಣಯ ಮಂಡಿಸುವುದಾಗಿ ಹೇಳಿದೆ. ‘ಡಿಕೆಶಿ ಹೇಳಿಕೆಯನ್ನು ಬಿಜೆಪಿ ತಿರುಚಿದೆ. ಖುದ್ದು ಶಿವಕುಮಾರ್ ಆ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೂ ರಿಜಿಜು ಅವರು ತಿರುಚಿದ ಹೇಳಿಕೆ ನೀಡಿ ಸದನದ ದಿಕ್ಕು ತಪ್ಪಿಸಿದ್ದಾರೆ. ಹೀಗಾಗಿ ಇದು ಹಕ್ಕುಚ್ಯುತಿಗೆ ಅರ್ಹವಾದ ಪ್ರಕರಣ’ ಎಂದು ಕಾಂಗ್ರೆಸ್ ಸಂಸದ ಜೈರಾಂ ರಮೇಶ್ ಹಕ್ಕುಚ್ಯುತಿ ನೋಟಿಸ್ ನೀಡಿದ್ದಾರೆ.
ಹೇಳಿಕೆಯಿಂದ ಕೋಲಾಹಲ: ‘ಕರ್ನಾಟಕದಲ್ಲಿ ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ಜಾರಿ ಮಾಡುವುದಕ್ಕಾಗಿ ಸಂವಿಧಾನವನ್ನು ಬದಲಿಸಲು ಸಿದ್ಧ ಎಂದು ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿದ್ದಾರೆ ಎನ್ನಲಾದ ಹೇಳಿಕೆ ಸೋಮವಾರ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿದೆ. ಪರಿಣಾಮ ಎರಡೂ ಸದನಗಳು ಕೆಲಕಾಲ ಮುಂದೂಡಲ್ಪಟ್ಟಿವೆ, ‘ಸಂವಿಧಾನದ ಪ್ರತಿ ಜೇಬಿನಲ್ಲಿಟ್ಟುಕೊಂಡು ಕಾಂಗ್ರೆಸ್ ನಾಟಕವಾಡುತ್ತಿದೆ. ಸಂವಿಧಾನಿಕ ಹುದ್ದೆಯಲ್ಲಿರುವ ಡಿಕೆಶಿ ಮುಸ್ಲಿಂ ಮೀಸಲಿಗೆ ಸಂವಿಧಾನ ಬದಲಿಸುವ ಹೇಳಿಕೆ ನೀಡಿದ್ದಾರೆ’ ಎಂದು ಬಿಜೆಪಿ ಸದಸ್ಯರು ಆರೋಪಿಸಿದರು. ಇದಕ್ಕೆ ತಿರುಗೇಟು ನೀಡಿದ ಕಾಂಗ್ರೆಸ್ ಸಂಸದರು, ‘ಇದು ಸುಳ್ಳು, ಡಿಕೆಶಿ ಈ ಹೇಳಿಕೆ ನೀಡಿಲ್ಲ, ಹೇಳಿಕೆ ತಿರುಚಲಾಗಿದೆ. ತನ್ನ ವೈಫಲ್ಯ ಮುಚ್ಚಿಕೊಳ್ಳಲು ಬಿಜೆಪಿ ಈ ವಿಷಯ ಕೆದಕುತ್ತಿದೆ’ ಎಂದು ತಿರುಗೇಟು ನೀಡಿದರು.
ಲೋಕಸಭೆಯಲ್ಲಿ ಭಾರೀ ಗದ್ದಲ: ಲೋಕಸಭೆಯಲ್ಲಿ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಕಿರಣ್ ರಿಜಿಜು ಡಿಕೆಶಿ ಅವರ ಮುಸ್ಲಿಂ ಮೀಸಲಾತಿ ಹೇಳಿಕೆಯನ್ನು ಸದನದಲ್ಲಿ ಪ್ರಸ್ತಾಪಿಸಿದರು. ‘ಟೀವಿ ಸಂದರ್ಶನವೊಂದರಲ್ಲಿ ಕರ್ನಾಟಕ ಕಾಂಗ್ರೆಸ್ ನಾಯಕರೊಬ್ಬರು, (ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್) ಅವರು ಮುಸ್ಲಿಂ ಮೀಸಲಿಗಾಗಿ ಸಂವಿಧಾನ ಬದಲಿಸಲಾಗುವುದು ಎಂದಿದ್ದಾರೆ. ಇದು ಖಂಡನಾರ್ಹ. ಸಾಂವಿಧಾನಿಕ ಹುದ್ದೆಯಲ್ಲಿ ಇರುವ ವ್ಯಕ್ತಿಯ ಈ ಹೇಳಿಕೆಯನ್ನು ಲಘುವಾಗಿ ಪರಿಗಣಿಸಲು ಆಗದು’ ಎಂದು ರಿಜಿಜು ಹೇಳಿದರು.
2 ವರ್ಷದಿಂದ ನನ್ನ, ಎಚ್.ಡಿ.ಕುಮಾರಸ್ವಾಮಿ ಫೋನ್ ಕದ್ದಾಲಿಕೆ: ಆರ್.ಅಶೋಕ್ ಗಂಭೀರ ಆರೋಪ
‘ಸದನವು ಮೌನವಾಗಿ ಇದನ್ನು ಹೇಗೆ ನೋಡಲು ಸಾಧ್ಯ? ಕಾಂಗ್ರೆಸ್ ಇದಕ್ಕೆ ಸ್ಪಷ್ಟನೆ ನೀಡಬೇಕು. ಆ ವ್ಯಕ್ತಿಯನ್ನು ಕಾಂಗ್ರೆಸ್ ವಜಾ ಮಾಡಬೇಕು. ನೀವು ಮುಸ್ಲಿಮರಿಗೆ ಮೀಸಲಾತಿ ನೀಡುವುದಾಗಿ ಹೇಳಿಕೊಂಡು ಜೇಬಿನಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಸಂವಿಧಾನದ ಪ್ರತಿಯನ್ನಿಟ್ಟುಕೊಂಡು ಓಡಾಡಿ ನಾಟಕ ಮಾಡುತ್ತಿದ್ದೀರಿ’ ಎಂದು ಕಿಡಿ ಕಾರಿದರು. ಈ ವೇಳೆ ಕೆಲ ಕಾಂಗ್ರೆಸ್ ಸಂಸದರು ಎದ್ದು ನಿಂತು ರಿಜಿಜುಗೆ ಉತ್ತರ ನೀಡಲು ಮುಂದಾದಾಗ ಗದ್ದಲ ಉಂಟಾಯಿತು. ಆಗ ಸ್ಪೀಕರ್ ಸ್ಥಾನದಲ್ಲಿದ್ದ ಜಗದಾಂಬಿಕಾ ಪಾಲ್ ಕಲಾಪವನ್ನು ಮುಂದೂಡಿದರು.