ಕಟೀಲ್‌ ವಿರುದ್ಧವೂ ಅರುಣ್‌ ಸಿಂಗ್‌ಗೆ ದೂರು?

By Kannadaprabha NewsFirst Published Jun 18, 2021, 12:10 PM IST
Highlights

* ಸಿಎಂಗೆ ಆಪ್ತರು ಎಂದು ನಮ್ಮನ್ನು ದೂರವಿಟ್ಟಿದ್ದಾರೆ: ಕೆಲ ಶಾಸಕರ ಬೇಸರ
* ತಾರಾ ಸೇರಿ 15ಕ್ಕೂ ಹೆಚ್ಚು ನಿಗಮಾಧ್ಯಕ್ಷರಿಂದ ಸಿಂಗ್‌ ಭೇಟಿ
* ಬದಲಾವಣೆ ಮಾಡಿದಲ್ಲಿ ಪಕ್ಷ ಹಾಗೂ ಸರ್ಕಾರದ ಬಗ್ಗೆ ಜನರ ಬೇಸರ
 

ಬೆಂಗಳೂರು(ಜೂ.18):  ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಪರ-ವಿರೋಧ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಕೆಲ ಶಾಸಕರು ಹಾಗೂ ಮುಖಂಡರು ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರ ವಿರುದ್ಧ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರಿಗೆ ದೂರು ನೀಡಿದ್ದಾರೆ.

ಗುರುವಾರ ಬೆಳಗ್ಗೆ ಕುಮಾರಕೃಪ ಅತಿಥಿ ಗೃಹದಲ್ಲಿ ಅರುಣ್‌ ಸಿಂಗ್‌ ಅವರನ್ನು ಭೇಟಿಯಾದ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರೂ ಆದ ಶಾಸಕರು ಹಾಗೂ ಮುಖಂಡರು, ಪಕ್ಷದ ಸಂಘಟನೆಯಲ್ಲಿ ನಮ್ಮನ್ನು ಕಡೆಗಣಿಸಲಾಗಿದೆ. ಮುಖ್ಯಮಂತ್ರಿಗಳ ಆಪ್ತರು ಎಂಬ ಪಟ್ಟಕಟ್ಟಿ ಸಂಘಟನೆಯಿಂದ ನಮ್ಮನ್ನು ದೂರವಿಟ್ಟು ಪಕ್ಷ ಅಂತರ ಕಾಯ್ದುಕೊಂಡಿದೆ ಎಂದು ಅಲವತ್ತುಕೊಂಡಿದ್ದಾರೆ ಎನ್ನಲಾಗಿದೆ.

ರಾಜ್ಯಾಧ್ಯಕ್ಷರು ಎಲ್ಲ ಕಾರ್ಯಕರ್ತರನ್ನು ಒಟ್ಟಾಗಿ ತೆಗೆದುಕೊಂಡು ಹೋಗುತ್ತಿಲ್ಲ. ಹಿರಿಯ ನಾಯಕರೊಬ್ಬರ ಅಣತಿಯಂತೆ ತಮ್ಮನ್ನೆಲ್ಲ ಪಕ್ಷದಿಂದ ದೂರ ಇಟ್ಟಿದ್ದಾರೆ. ಜವಾಬ್ದಾರಿ ನೀಡದೆ ಮೂಲೆಗುಂಪು ಮಾಡುವ ಪ್ರಯತ್ನ ನಡೆಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪಕ್ಷದಲ್ಲಿ ತಮ್ಮ ಸೇವೆ ಗುರುತಿಸಿ ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಯಡಿಯೂರಪ್ಪ ನೇಮಕ ಮಾಡಿರುವುದರಿಂದ ಇವರೆಲ್ಲ ಅವರ ಆಪ್ತರು ಎಂದು ಪಕ್ಷದ ಸಭೆಗಳಿಗೆ, ಚಟುವಟಿಕೆಗಳಿಗೆ ಕರೆಯುತ್ತಿಲ್ಲ ಎಂದು ದೂರಿದ್ದಾರೆ.

ಅರುಣ್ ಸಿಂಗ್ ನೇತೃತ್ವದಲ್ಲಿ ನಡೆದ ಸಭೆಯ ಪಿನ್ ಟು ಪಿನ್ ಮಾಹಿತಿ

ನಿಗಮ ಮಂಡಳಿಗಳ ಅಧ್ಯಕ್ಷರ ದೂರುಗಳನ್ನು ಆಲಿಸಿದ ಅರುಣ್‌ ಸಿಂಗ್‌ ಅಲ್ಲಿಯೇ ಇದ್ದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್‌ ಟೆಂಗಿನಕಾಯಿ ಅವರಿಗೆ ನೋಡಿ, ಇದೆಲ್ಲ ಸರಿಯಿಲ್ಲ. ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗಿಬೇಕು. ಅಧ್ಯಕ್ಷ ಕಟೀಲ್‌ ಅವರೊಂದಿಗೂ ಮಾತನಾಡುತ್ತೇನೆ ಎಂದು ಹೇಳಿದರು ಎನ್ನಲಾಗಿದೆ.

ಬಳಿಕ ಪಕ್ಷದ ಕಚೇರಿಯಲ್ಲಿ ನಡೆದ ಶಾಸಕರ ಅಹವಾಲು ಆಲಿಕೆ ಸಂದರ್ಭದಲ್ಲಿ ಯಡಿಯೂರಪ್ಪ ಆಪ್ತ ಬಣದ ಕೆಲ ಶಾಸಕರು ಪಕ್ಷದ ಪದಾಧಿಕಾರಿಗಳ ನೇಮಕ ಸಂದರ್ಭದಲ್ಲಿ ತಮ್ಮನ್ನು ಪರಿಗಣಿಸಿಲ್ಲ. ಏಕಪಕ್ಷೀಯ ತೀರ್ಮಾನಗಳನ್ನು ತೆಗೆದುಕೊಂಡಿರುವ ಬಗ್ಗೆಯೂ ದೂರು ನೀಡಿದ್ದಾರೆ.

ಇದೇ ವೇಳೆ ನಾಯಕತ್ವ ಬದಲಾವಣೆ ಮಾಡುವ ಪರಿಸ್ಥಿತಿ ಇಲ್ಲ. ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಬದಲಾವಣೆ ಮಾಡಿದಲ್ಲಿ ಪಕ್ಷ ಹಾಗೂ ಸರ್ಕಾರದ ಬಗ್ಗೆ ಜನರು ಬೇಸರಗೊಳ್ಳುತ್ತಾರೆ. ಯಾವುದೇ ಕಾರಣಕ್ಕೂ ಬದಲಾವಣೆ ಮಾಡಬಾರದು ಎಂಬ ಆಗ್ರಹವನ್ನೂ ಮುಂದಿಟ್ಟರು ಎಂದು ಮೂಲಗಳು ತಿಳಿಸಿವೆ.

ನಿಗಮ ಮಂಡಳಿಗಳ ಅಧ್ಯಕ್ಷರಾದ ನಿರಂಜನ್‌ ಕುಮಾರ್‌, ತಾರಾ ಅನೂರಾಧ, ಪ್ರಭು, ನರೇಶ್‌ ಕುಮಾರ್‌, ಎಂ.ರುದ್ರೇಶ್‌, ಸಚ್ಚಿದಾನಂದ ಮೂರ್ತಿ ಸೇರಿದಂತೆ 15ಕ್ಕೂ ಹೆಚ್ಚು ನಿಗಮ ಮಂಡಳಿಗಳ ಅಧ್ಯಕ್ಷರು ಭೇಟಿಯಾಗಿದ್ದರು.
 

click me!